SUDDIKSHANA KANNADA NEWS/ DAVANAGERE/DATE:19_09_2025
ದಾವಣಗೆರೆ: ದಾವಣಗೆರೆ ಉತ್ತರ ವಲಯ ವ್ಯಾಪ್ತಿಯಲ್ಲಿನ ಹೊಸಚಿಕ್ಕನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಹುಟ್ಟುಹಬ್ಬದ ಅಂಗವಾಗಿ ಡೆಸ್ಕ್ ಗಳನ್ನು ವಿತರಿಸಲಾಯಿತು.
ಮಹಾನಗರ ಪಾಲಿಕೆಯ ಎಂಸಿಸಿ ಬಿ ಬ್ಲಾಕ್ ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡ ಗಡಿಗುಡಾಳ್ ಮಂಜುನಾಥ್ ನೇತೃತ್ವದಲ್ಲಿ ಮಕ್ಕಳು ಕುಳಿತುಕೊಳ್ಳಲು ಅನುಕೂಲವಾಗಲೆಂದು ಡೆಸ್ಕ್ ಗಳನ್ನು ನೀಡಲಾಯಿತು.
ಈ ವೇಳೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್ ಅವರು, ಎಸ್. ಎಸ್. ಮಲ್ಲಿಕಾರ್ಜುನ್ ಅವರ 58ನೇ ಜನುಮದಿನದ ಪ್ರಯುಕ್ತ ಈ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದರೆ ಅವರ ಭವಿಷ್ಯವೂ ಉಜ್ವಲವಾಗುತ್ತದೆ. ಮಕ್ಕಳು ಕುಳಿತುಕೊಳ್ಳಲು ಡೆಸ್ಕ್ ಇಲ್ಲ ಎಂಬ ಮಾಹಿತಿ ಸಿಕ್ಕಿತ್ತು. ದಾವಣಗೆರೆ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇಂಥ ಕಾರ್ಯಕ್ರಮಗಳನ್ನೇ ಹಮ್ಮಿಕೊಳ್ಳುವಂತೆ ಸಲಹೆ ನೀಡಿದ್ದರು.
ಅದರಂತೆಯೇ ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದೇವೆ. ಇದು ನಮಗೆ ಸಂತಸ ತಂದಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: ಪಡಿತರ ಚೀಟಿದಾರರು, ಬಿ.ಪಿ.ಎಲ್, ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅನರ್ಹರು: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ದಾವಣಗೆರೆ ಜಿಲ್ಲೆಯು ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದೇ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರು ಮತ್ತು ಎಸ್. ಎಸ್. ಮಲ್ಲಿಕಾರ್ಜುನ್ ಅವರು. ಮಲ್ಲಣ್ಣ ಅವರ ಜನುಮದಿನ ಬಂತೆಂದರೆ ಜಿಲ್ಲೆಯ ಜನರಿಗೆ ಹಬ್ಬವಿದ್ದಂತೆ. ಆದರೆ ಈ ಬಾರಿ ಅನಾವಶ್ಯಕವಾಗಿ ಹಣ ಖರ್ಚು ಮಾಡದೇ ಸಮಾಜಮುಖಿ ಕಾರ್ಯ ಮಾಡುವಂತೆ ಸಚಿವರು ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರು ಸೂಚನೆ ನೀಡಿದ್ದರಿಂದ ಡೆಸ್ಕ್ ವಿತರಣೆ ಸೇರಿದಂತೆ ಜನೋಪಯೋಗಿ ಕಾರ್ಯಗಳು ಮುಂದುವರಿದಿವೆ. ಮಕ್ಕಳ ಖುಷಿ ನೋಡಿದಾಗ ನಮಗೂ ಸಂತೃಪ್ತ ಭಾವನೆ ಬಂದಿತು ಎಂದು ತಿಳಿಸಿದರು.
ಶೈಕ್ಷಣಿಕ ಕ್ಷೇತ್ರಕ್ಕೂ ಮಲ್ಲಿಕಾರ್ಜುನ್ ಅವರು ಸಾಕಷ್ಟು ಅನುದಾನ ತಂದಿದ್ದಾರೆ. ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದ್ದಾರೆ. ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿದ್ದಾಗ ಮಲ್ಲಿಕಾರ್ಜುನ್ ಅವರು ಕ್ರಾಂತಿಕಾರಕ ಬದಲಾವಣೆ
ತಂದಿದ್ದರು. ರಾಜ್ಯದ ಕ್ರೀಡಾಪಟುಗಳಿಗೆ ಹೆಚ್ಚಿನ ಅನುದಾನ, ಸೌಲಭ್ಯ ನೀಡುವ ಕೆಲಸ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದರು. ಸ್ವತಃ ಕ್ರೀಡಾಪಟುಗಳೂ ಆಗಿರುವ ಮಲ್ಲಿಕಾರ್ಜುನ್ ಅವರು ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದ ಬಗ್ಗೆ ಹೆಚ್ಚು
ಆಸಕ್ತಿ ವಹಿಸಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ದಾವಣಗೆರೆಯು ಇಂದು ಶಿಕ್ಷಣ ಕಾಶಿ ಎಂದೇ ಕರೆಯಲಾಗುತ್ತದೆ. ಇದಕ್ಕೆ ಕಾರಣವೇ ಮಲ್ಲಿಕಾರ್ಜುನ್ ಅವರು ಎಂದರೆ ಉತ್ಪ್ರೇಕ್ಷೆಯಲ್ಲ. ರಾಜ್ಯ ಮಾತ್ರವಲ್ಲ, ಬೇರೆ ಬೇರೆ ರಾಜ್ಯದ ಹಾಗೂ ವಿದೇಶಿ ವಿದ್ಯಾರ್ಥಿಗಳು ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶೈಕ್ಷಣಿಕವಾಗಿ ಹಬ್ ಆಗಿರುವ ದಾವಣಗೆರೆಯು ಮುಂಬರುವ ದಿನಗಳಲ್ಲಿ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಮಲ್ಲಿಕಾರ್ಜುನ್ ಅವರ ವಿಶೇಷ ಆಸಕ್ತಿಯಿಂದ ಐಟಿ-ಬಿಟಿ ಹಬ್ ಆಗುವುದರಲ್ಲಿ ಸಂದೇಹವಿಲ್ಲ. ಸ್ಥಳೀಯರಿಗೆ ಉದ್ಯೋಗವೂ ದೊರಕುತ್ತದೆ. ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗವೂ ದೊರೆಯುತ್ತದೆ. ಎಲ್ಲಾ ರೀತಿಯ ಸೌಲಭ್ಯಗಳು ಸಿಗುವ ಜೊತೆಗೆ ಬೆಣ್ಣೆನಗರಿ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಖ್ಯಾತಿ ಗಳಿಸಲಿದೆ ಎಂದು ಗಡಿಗುಡಾಳ್ ಮಂಜುನಾಥ್ ಅವರು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಮಕ್ಕಳು ಡೆಸ್ಕ್ ವಿತರಿಸಿದ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಜನುಮದಿನಕ್ಕೆ ನಮ್ಮ ಶಾಲೆಗೆ ಡೆಸ್ಕ್ ಕೊಡುಗೆ ನೀಡುವ ಮೂಲಕ ಅರ್ಥಪೂರ್ಣ ಕಾರ್ಯ ಮಾಡಿದ್ದಾರೆ. ನಿಮಗೆ ಎಂದೆಂದಿಗೂ ಚಿರಋಣಿಯಾಗಿರುತ್ತೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಗೋಪಿನಾಯ್ಕ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಬಾಯಿ, ಎಂಸಿಸಿ ಬಿ ಬ್ಲಾಕ್ ವಾರ್ಡ್ ಅಧ್ಯಕ್ಷ ಮುರುಗೇಶ್, ಆರ್ ಟಿಒ ರಾಜು, ಭರತ್, ಪ್ರಮೋದ್, ಶ್ರೀಕಂಠು, ನಿಖಿಲ್, ಮಂಜುನಾಥ್, ಯಶೋದಾ, ಸರೋಜಾ, ಎಂಸಿಸಿ ಬಿ ಬ್ಲಾಕ್ ನಾಗರಿಕರು, ಮಹಿಳಾ ಕಾಂಗ್ರೆಸ್ ಘಟಕದ ಸದಸ್ಯೆಯರು ಉಪಸ್ಥಿತರಿದ್ದರು.