SUDDIKSHANA KANNADA NEWS/ DAVANAGERE/ DATE:12-12-2024
ದಾವಣಗೆರೆ: ಹಳ್ಳಿಗಳಲ್ಲಿ ತೂಗಿಸುವ ಖರೀದಿ ವಹಿವಾಟಿಗೂ ಇ-ಟೆಂಡರ್ ಪದ್ಧತಿ ಜಾರಿ ಮಾಡಬೇಕು. ನಿತ್ಯ ಬೆಳಿಗ್ಗೆ 9 ಗಂಟೆಯೊಳಗೆ ರೈತರು ಎಪಿಎಂಸಿಗೆ ಸ್ಯಾಂಪಲ್ ತರಬೇಕು. ಸ್ಯಾಂಪಲ್ ನಲ್ಲಿ ರೈತರ ಹೆಸರು, ಊರು ಮತ್ತು ಎಷ್ಟು ಚೀಲ ಅಂತ ಚೀಟಿಯಲ್ಲಿ ಬರೆದು ಹಾಕಿ, ಲಾಟ್ ನಂಬರ್ ನೀಡಬೇಕು ಎಂದು ಜಿಲ್ಲಾ ರೈತರ ಒಕ್ಕೂಟ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರಾದ ಬೆಳವನೂರು ನಾಗೇಶ್ವರರಾವ್, ಕೊಳೇನಹಳ್ಳಿ ಸತೀಶ್ ಅವರು, ದಾವಣಗೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಇ-ಟೆಂಡರ್ ಪದ್ಧತಿ ಪ್ರಾರಂಭವಾದ ನಂತರ ರೈತರ ಉತ್ಪನ್ನಗಳ ಧಾರಣೆಯಲ್ಲಿ ಏರಿಕೆ ಕಂಡು ಬಂದಿದೆ. ಒಂದರ್ಥದಲ್ಲಿ ಅನ್ನದಾತರ ಪಾಲಿಗೆ ಇ-ಟೆಂಡರ್ ವರವಾಗಿದೆ. ಆದ್ದರಿಂದ ಹಳ್ಳಿಗಳಲ್ಲಿ ತೂಗಿಸುವ ಖರೀದಿ ವಹಿವಾಟಿಗೂ ಇ-ಟೆಂಡರ್ ಪದ್ಧತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಹಳ್ಳಿಗಳಲ್ಲಿ ರೈತರಿಂದ ಖರೀದಿಸಿ ಹಣ ಪಾವತಿಸದಿರುವುದು ಅಥವಾ ವಿಳಂಬವಾಗಿ ಪಾವತಿಸುವುದು. ಹಣ ಪಾವತಿಸುವಾಗ ಇಂತಿಷ್ಟು ಪರ್ಸೆಂಟ್ ಡಿಸ್ಕೌಂಟ್ ಮಾಡುವುದು. ಪ್ರತಿ ಚೀಲಕ್ಕೆ 2 ಕೆ.ಜಿ ಶೂಟ್ ಕಡಿತಗೊಳಿಸುವುದು. ಹಮಾಲರು ಸ್ಯಾಂಪಲ್/ತಳಗಾಳು ಪಡೆಯುವುದು ಸೇರಿದಂತೆ ನಾನಾ ರೀತಿಯಲ್ಲಿ ರೈತರ ಶೋಷಣೆ ಮಾಡುವುದನ್ನು ತಪ್ಪಿಸಿದಂತಾಗುತ್ತದೆ. ಹಳ್ಳಿಗಳಲ್ಲಿ ತೂಗಿಸುವ ಖರೀದಿ ವಹಿವಾಟಿಗೂ ಇ-ಟೆಂಡರ್ ವಿಸ್ತರಣೆ ಅಂದ್ರೆ ಏನು ಹೇಗೆ?
ಖರೀದಿದಾರರು ಸ್ಯಾಂಪಲ್ ತೇವಾಂಶ/ಗುಣಮಟ್ಟ ಪರಿಶೀಲನೆ ಮಾಡಿ, ರಾಶಿಯನ್ನು ಹೋಗಿ ನೋಡಿಕೊಂಡು ಬಂದು, ಮಧ್ಯಾಹ್ನ 12 ಗಂಟೆಯೊಳಗೆ ಟೆಂಡರ್ ಹಾಕಬೇಕು ಎಂದು ಒತ್ತಾಯಿಸಿದರು.
ಮಧ್ಯಾಹ್ನ 1 ಗಂಟೆಗೆ ಟೆಂಡರ್ ತೆರೆಯಬೇಕು. ಯಶಸ್ವಿ ಟೆಂಡರ್ ದಾರರು ಸಂಜೆ 6 ಗಂಟೆಯೊಳಗೆ ಚೀಲ ತುಂಬಿಸಿ, ಲೋಡ್ ಮಾಡಿಕೊಂಡು, ವೇಮೆಂಟ್ ಮಾಡಿಸಬೇಕು. ವೇಮೆಂಟ್ ಸ್ಲಿಪ್ ನಲ್ಲಿ ಖರೀದಿದಾರರ ಹೆಸರು, ರೈತನ ಹೆಸರು ಅಂಡ್ ಖರೀದಿಸಿದ ರೇಟ್ ಎಂಟ್ರಿ ಮಾಡಬೇಕು. ಇದರಿಂದ ವಂಚಿಸಲು ಸಾಧ್ಯವಾಗುವುದಿಲ್ಲ. ವೇಮೆಂಟ್-ಪೇಮೆಂಟ್ ಕಂಡಿಷನ್ ನಂತೆ ರೈತನ ಬ್ಯಾಂಕ್ ಖಾತೆಗೆ ಅನ್ ಲೈನ್ ನಲ್ಲಿ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.
ದಲಾಲರ/ಮಧ್ಯವರ್ತಿಗಳ ಮಧ್ಯಸ್ಥಿಕೆ ಇಲ್ಲದೆ ರೈತರಿಂದ ಖರೀದಿದಾರರಿಗೆ ನೇರವಾಗಿ ವ್ಯಾಪಾರ-ವಹಿವಾಟು ಆಗುತ್ತದೆ. ರೈತರ ಶೋಷಣೆ ಮತ್ತು ವಂಚನೆಗೆ ಆಸ್ಪದವಿರುವುದಿಲ್ಲ. ವೇಮೆಂಟ್ ತೂಕವಾಗುವುದರಿಂದ ತೂಕದಲ್ಲಿ ಮತ್ತು ಪೇಮೆಂಟ್ ನಲ್ಲಿ ವಂಚನೆ ಸಾಧ್ಯವಿಲ್ಲ. ಮಾರುಕಟ್ಟೆಗೆ ತರುವ ಸಾಗಾಣಿಕೆ ವೆಚ್ಚ ಮತ್ತು ಮಾರುಕಟ್ಟೆಯಲ್ಲಿ ಸುರಿದು ಚೀಲಕ್ಕೆ ತುಂಬಿ, ತೂಕ ಮಾಡಿ, ಲೋಡ್ ಮಾಡುವ ಮಾನವ ಶ್ರಮ ತಪ್ಪುತ್ತದೆ. ವೇಮೆಂಟ್-ಪೇಮೆಂಟ್ ಕಂಡೀಷನ್ ಜಾರಿ ಮಾಡಲು ಸುಲಭವಾಗುತ್ತದೆ. ಶೂಟ್ ಪಡೆಯುವ ಮತ್ತು ಡಿಸ್ಕೌಂಟ್ ಮಾಡುವ ಪದ್ಧತಿ ಸಂಪೂರ್ಣ ರದ್ದಾಗುತ್ತದೆ. ಕೃಷಿ ಉತ್ಪನ್ನ ವ್ಯಾಪಾರ ವಹಿವಾಟು ಸಂಪೂರ್ಣ ಕ್ರಮಬದ್ಧವಾಗುತ್ತದೆ. ಇದರಿಂದ ಮಾರುಕಟ್ಟೆ ಶುಲ್ಕ ಕ್ರಮಬದ್ಧವಾಗಿ ಸಂಗ್ರಹವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಕ್ಕರೆ ಕಾರ್ಖಾನೆಗಳವರು ಕಬ್ಬಿನ ತೂಕದಲ್ಲಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ರಾಜ್ಯ ಸರ್ಕಾರ 11 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆಗಳ ಬಳಿ ವೇಬ್ರಿಡ್ಜ್ ಗಳನ್ನು ಪ್ರಾರಂಭಿಸಿ, ಸರ್ಕಾರವೇ ನಿರ್ವಹಿಸುವ ಮಹತ್ವದ ತೀರ್ಮಾನ ಮಾಡಿದೆ. ರಾಜ್ಯ ಸರ್ಕಾರದ ಈ ತೀರ್ಮಾನವನ್ನು ಜಿಲ್ಲಾ ರೈತರ ಒಕ್ಕೂಟ ಸ್ವಾಗತಿಸುತ್ತದೆ. ಅದೇ ರೀತಿ ಎಲ್ಲಾ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ವೇಬ್ರಿಡ್ಜ್ ಗಳನ್ನು ಸ್ಥಾಪನೆ ಮಾಡಿ, ತೂಕದಲ್ಲಿ ರೈತರಿಗಾಗುವ ವಂಚನೆಯನ್ನು ನಿರ್ಮೂಲನೆ ಮಾಡಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ ಕಾರ್ಯದರ್ಶಿ ಹೆಚ್.ಸಿ.ಎಂ ರಾಣಿಯವರು ನೀಡಿದ ಆಶ್ವಾಸನೆಯಂತೆ ಹಳ್ಳಿಗಳಲ್ಲಿ ತೂಗಿಸುವ ಖರೀದಿ ವಹಿವಾಟಿಗೂ ಇ-ಟೆಂಡರ್ ಪದ್ಧತಿ ಜಾರಿ ಮಾಡಲು ಎಪಿಎಂಸಿ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ರೈತರ-ವರ್ತಕರ ಸಭೆ ಶೀಘ್ರದಲ್ಲಿ ಆಗಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಒಕ್ಕೂಟದ ಕುಂದುವಾಡದ ಮಹೇಶಪ್ಪ, ಜಿಮ್ಮಿ ಹನುಮಂತಪ್ಪ, ಎ. ಪ್ರಕಾಶ, ಆರನೇ ಕಲ್ಲು ವಿಜಯಕುಮಾರ್ ಮತ್ತಿತರರು ಹಾಜರಿದ್ದರು.