SUDDIKSHANA KANNADA NEWS/ DAVANAGERE/ DATE:03-02-2025
ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ್ದ ಹರಿಹರ ನಗರಸಭೆ ಪೌರಾಯುಕ್ತರು, ಎಇಇ, ಎಇ, ಗುತ್ತಿಗೆದಾರರು ಹಾಗೂ ಥರ್ಡ್ ಪಾರ್ಟಿ ಇನ್ ಸ್ಪೆಕ್ಷನ್ ವರದಿ ತಜ್ಞರು ಹಾಗೂ ಸಂಬಂಧಿತರ ವಿರುದ್ಧ ಈಗ ಇರುವ ಪೌರಾಯುಕ್ತರು ಕೂಡಲೇ ಎಫ್ ಐ ಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ನಗರಸಭೆ ಗುತ್ತಿಗೆದಾರ ಮೊಹ್ಮದ್ ಮಹಜರ್ ಆಗ್ರಹಿಸಿದ್ದಾರೆ.
ಹರಿಹರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯ ಅಂದಾಜು 1 ಕೋಟಿ ರೂಪಾಯಿ ಅನುದಾನವನ್ನು ಲೂಟಿ ಮಾಡಿರುವುದು ದೃಢಪಟ್ಟಿದೆ. ಆದ್ದರಿಂದ ಆರೋಪಿಗಳ ವಿರುದ್ದ ಕೂಡಲೇ ಎಫ್ ಐ ಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಹರಿಹರ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ 20 ಕಾಮಗಾರಿಗಳ ಸ್ಥಳ ಪರಿಶೀಲನೆಯನ್ನು ತನಿಖಾ ತಂಡ ನಡೆಸಿದೆ. ಜೆ. ಸಿ. ಬಡಾವಣೆಯ ನರ್ತಕಿ ಬಾರ್ ಹಿಂದಿನ ಕನ್ಸರ್ ವೆಲ್ಸಿಯ ಸಿ. ಸಿ. ಚರಂಡಿಯನ್ನು 95ಮೀಟರ್ ಬದಲು ಕೇವಲ 5.9 ಮೀಟರ್ ಮಾತ್ರ ನಿರ್ಮಾಣ ಮಾಡಲಾಗಿದೆ. ಇದೇ ಕಾಮಗಾರಿಗೆ ಮತ್ತೆ 5 ಲಕ್ಷ ರೂಪಾಯಿ ಬಿಲ್ ಅನ್ನು ಪಡೆಯಲಾಗಿದೆ. ಉಳಿದ 19 ಕಡೆ ಕಾಮಗಾರಿ ನಡೆಸದೇ ಬಿಲ್ ಪಾವತಿಸಿರುವುದು ತನಿಖಾ ತಂಡದಿಂದ ಬಟಾಬಯಲಾಗಿದೆ ಎಂದು ತಿಳಿಸಿದರು.
202122 ನೇ ಸಾಲಿನಲ್ಲಿ ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೌರಾಯುಕ್ತರು, ಎಇಇ, ಎಇ, ಗುತ್ತಿಗೆದಾರರು ಹಾಗೂ ಥರ್ಡ್ ಪಾರ್ಟಿ ಇನ್ ಸ್ಪೆಕ್ಷನ್ ನೀಡಿದ್ದ ತಜ್ಞರು ಹಾಗೂ ಸಂಬಂಧಿತರ ವಿರುದ್ಧ ಈಗಿನ ಪೌರಾಯುಕ್ತರು ಇದುವರೆಗೆ ಎಫ್ ಐ ಆರ್ ದಾಖಲಿಸಿಲ್ಲ. ಸರ್ಕಾರದ ಹಣವನ್ನು ಕಾಮಗಾರಿ ನಡೆಸದೇ ಲೂಟಿ ಮಾಡಿರುವ ಭ್ರಷ್ಟರ ವಿರುದ್ಧ ಇದುವರೆಗೆ ಕ್ರಮ ಜರುಗಿಸದಿರುವುದು ಆತಂಕ ತಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
20ರಲ್ಲಿ 19 ಕಾಮಗಾರಿಗಳು ಕಿರು ನೀರು ಸರಬರಾಜು ಟ್ಯಾಂಕ್ ನಿರ್ಮಾಣ ಹಾಗೂ ಪೈಪ್ ಲೈನ್ ಅಳವಡಿಸುವ ಕಾಮಗಾರಿಗಳಾಗಿವೆ. ಎಫ್ ಐ ಆರ್ ದಾಖಲಿಸಲು ಜನವರಿ 24ರಂದು ಜಿಲ್ಲಾಧಿಕಾರಿ ಅವರು ನೀಡಿದ್ದ ಸೂಚನೆಯನ್ನು ಪಾಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಕರವೇ (ಹೆಚ್. ಶಿವರಾಮೇಗೌಡ ಬಣ) ತಾಲೂಕು ಘಟಕದ ಅಧ್ಯಕ್ಷ ಎಂ. ಇಲಿಯಾಸ್ ಅಹ್ಮದ್, ಜಹೀರ್ ಅಹ್ಮದ್, ನೂರ್ ಅಹ್ಮದ್ ಮತ್ತಿತರರು ಹಾಜರಿದ್ದರು.