SUDDIKSHANA KANNADA NEWS/ DAVANAGERE/ DATE:07-12-2023
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತ ಪ್ರಮುಖ ಬೆಳೆಯಾದರೂ ಅಡಿಕೆ ಬೆಳೆಗಾರರು ಸಾಕಷ್ಟಿದ್ದಾರೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವೆಡೆಯೂ ಅಡಿಕೆ ಬೆಳೆಯಲಾಗುತ್ತಿದೆ. ಈ ಬಾರಿ ಮಳೆಯೂ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಕುಂಠಿತಗೊಂಡಿದೆ. ಅಡಿಕೆ ಧಾರಣೆಯೂ ಹಾವು ಏಣಿ ಆಟ ಆಗುತ್ತಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.
ಚನ್ನಗಿರಿ ಅಡಿಕೆ ನಾಡು ಅಂತಾನೇ ಫೇಮಸ್. ಈ ಬಾರಿ ಮಳೆ ಕಡಿಮೆಯಾಗಿದೆ. ಈ ಕಾರಣಕ್ಕಾಗಿ ಅಡಿಕೆ ಬೆಳೆಗಾರರು ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಳುವರಿ ತುಂಬಾನೇ ಕಡಿಮೆಯಾಗಿದೆ. ಬಹುತೇಕ ಅರ್ಧಕ್ಕರ್ಧ ಬೆಳೆ ಬಂದಿಲ್ಲ. ಅಡಿಕೆ ಧಾರಣೆಯೂ 50 ಸಾವಿರ ರೂಪಾಯಿ ಗಡಿ ದಾಟುತ್ತಿಲ್ಲ. ಒಂದು ವಾರ ಕಡಿಮೆಯಾದರೆ, ಮತ್ತೊಂದು ವಾರ ಸ್ವಲ್ಪ ಪ್ರಮಾಣದಲ್ಲಿ ಧಾರಣೆ ಏರುತ್ತಿದೆ. ಅಡಿಕೆ ಈ ಬಾರಿ ಚೆನ್ನಾಗಿ ಬರುತ್ತದೆ ಎಂದುಕೊಂಡಿದ್ದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ.
ನೀರಿನದ್ದೇ ಸಮಸ್ಯೆ:
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕುಂಠಿತವಾಗಿದ್ದು, ಭದ್ರಾ ಡ್ಯಾಂ ನೀರಿನ ಮಟ್ಟ 151 ಅಡಿ ಇದೆ. ದಿನೇ ದಿನೇ ಜಲಾಶಯದ ನೀರಿನ ಮಟ್ಟವೂ ಕಡಿಮೆಯಾಗುತ್ತಿದೆ. ಈ ವರ್ಷ 167 ಅಡಿ ಮುಟ್ಟಿದ್ದ ಭದ್ರಾ ಜಲಾಶಯದಿಂದ
ಎಡನಾಲೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ಹರಿಸಿದ ಪರಿಣಾಮ 151 ಅಡಿಗೆ ಕುಸಿದಿದೆ. ಮಳೆಯು ಜುಲೈ ತಿಂಗಳಿನಲ್ಲಿ ಚೆನ್ನಾಗಿ ಬಂದದ್ದು ಬಿಟ್ಟರೆ ಉಳಿದ ತಿಂಗಳು ಸುರಿದದ್ದು ಅಷ್ಟಕ್ಕಷ್ಟೇ. ಕೆಲವೆಡೆ ತೋಟಗಳು ಒಣಗಿವೆ.
ಅಕ್ರಮ ಪಂಪ್ ಸೆಟ್ ತೆರವು:
ಇನ್ನು ಭದ್ರಾ ಕಾಲುವೆಯಲ್ಲಿ ನೀರು ಹರಿಸಿದರೂ ಸತತವಾಗಿ ನೂರು ದಿನಗಳ ಕಾಲ ಹರಿಸಲಾಗಲಿಲ್ಲ. ಈ ಕಾರಣದಿಂದಾಗಿ ಕೆಲವೆಡೆ ಪಂಪ್ ಸೆಟ್ ಗಳನ್ನು ಇಟ್ಟು ನೀರು ಹಾಯಿಸಲಾಗುತ್ತಿತ್ತು. ಈಗ ಜಿಲ್ಲಾಡಳಿತವು ಪಂಪ್ ಸೆಟ್ ಗಳ ತೆರವು ಕಾರ್ಯಾಚರಣೆ ಕೈಗೊಂಡ ಕಾರಣದಿಂದಾಗಿ ನೀರು ತೋಟಕ್ಕೆ ಹಾಯಿಸುವುದು ತುಂಬಾನೇ ಕಷ್ಟವಾಗಿದೆ. ಮತ್ತೊಂದೆಡೆ ನಿರೀಕ್ಷಿಸಿದಂತೆ ಮಳೆಯೂ ಸುರಿದಿಲ್ಲ. ಅಡಿಕೆ ಗಿಡಗಳು ಒಣಗಲು ಶುರುವಾಗಿದೆ. ಮತ್ತೊಂದೆಡೆ ಸರ್ಕಾರವು ತ್ರೀಫೇಸ್ ವಿದ್ಯುತ್ ಅನ್ನು ನಿರಂತರವಾಗಿ ಏಳು ಗಂಟೆ ನೀಡುತ್ತಿಲ್ಲ. ಇದೂ ಸಹ ರೈತರಿಗೆ ಸಮಸ್ಯೆಯಾಗಿದೆ.
ಒಂದು ಎಕರೆಗೆ ಒಂದೂವರೆ ಲಕ್ಷ ರೂ. ನಷ್ಟ:
ಒಂದು ಎಕರೆಗೆ ಸುಮಾರು ಮೂರು ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದ ಅಡಿಕೆ ಬೆಳೆಗಾರರು ಈ ವರ್ಷ ಒಂದೂವರೆ ಲಕ್ಷ ರೂಪಾಯಿಯಷ್ಟು ಮಾತ್ರ ಅಡಿಕೆ ಫಸಲು ಬಂದಿದೆ. ತೋಟಕ್ಕೆ ಗೊಬ್ಬರ, ಕಾರ್ಮಿಕರು, ತೋಟ ಸ್ವಚ್ಛತೆ ಸೇರಿದಂತೆ
ಸುಮಾರು 60 ಸಾವಿರ ರೂಪಾಯಿಯಷ್ಟು ಖರ್ಚು ಬರುತ್ತದೆ. ಈ ಬಾರಿ ಲಾಭವೂ ಕಡಿಮೆ. ಮಳೆ ಉತ್ತಮವಾಗಿ ಸುರಿದರೆ ಫಸಲು ಚೆನ್ನಾಗಿಯೇ ಬರುತ್ತದೆ. ನೀರು ಬೇಕಾದಾಗ ಗಿಡಗಳಿಗೆ ನೀರು ಉಣಿಸಲು ಆಗಲಿಲ್ಲ. ಇದರಿಂದಾಗಿ ಹರಳುಗಳು
ಉದುರಿವೆ. ಫಸಲು ಕಡಿಮೆಯಾಗಿದೆ ಎನ್ನುತ್ತಾರೆ ರೈತರು.
ಧಾರಣೆ ಏರಿಳಿತ: ರೈತರಿಗೆ ಆತಂಕ
ದಾವಣಗೆರೆ ಜಿಲ್ಲೆ ಪ್ರಮುಖ ಬೆಳೆಗಳಲ್ಲಿ ಅಡಿಕೆಯೂ ಒಂದು. ರಾಶಿ ಅಡಿಕೆಯು ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಗರಿಷ್ಠ 47,589 ರೂಪಾಯಿ ಇದ್ದರೆ, ಕನಿಷ್ಠ ಬೆಲೆ 45,599 ರೂಪಾಯಿ ಆಗಿದೆ. ಕಳೆದ ಸೋಮವಾರದ ಮಾರುಕಟ್ಟೆಗೆ ಹೋಲಿಸಿದರೆ
ಕೇವಲ 200 ರೂಪಾಯಿ ಇಳಿಕೆ ಆಗಿದೆ.
ಏಪ್ರಿಲ್ ತಿಂಗಳಿನಲ್ಲಿ ಪ್ರತಿ ಕ್ವಿಂಟಾಲ್ ಗೆ 48 ಸಾವಿರ ರೂಪಾಯಿ ಇದ್ದ ಧಾರಣೆಯು ಮೇ ತಿಂಗಳಿನಲ್ಲಿ 49 ಸಾವಿರ ರೂಪಾಯಿ ಗಡಿ ದಾಟಿತ್ತು. ಜುಲೈ ತಿಂಗಳಿನಲ್ಲಿ ಗರಿಷ್ಠ ಎಂದರೆ 57 ಸಾವಿರ ರೂಪಾಯಿ ತಲುಪಿತ್ತು. ಆದ್ರೆ, ಕೇವಲ ಒಂದೇ ತಿಂಗಳಿನಲ್ಲಿ 48 ಸಾವಿರ ರೂಪಾಯಿಗೆ ಇಳಿಕೆಯಾಗಿತ್ತು. ಕೇವಲ ಒಂದೇ ತಿಂಗಳಿಗೆ 9 ಸಾವಿರ ರೂಪಾಯಿ ರೇಟ್ ಕಡಿಮೆಯಾಗಿದ್ದು, ಮತ್ತೆ ಏರಿಕೆ ಆಗಲೇ ಇಲ್ಲ.
ಸೆಪ್ಟಂಬರ್ ತಿಂಗಳ ಮೊದಲ 15 ದಿನಗಳವರೆಗೆ 46 ಸಾವಿರ ರೂಪಾಯಿಗೆ ಅಡಿಕೆ ದರ ಕುಸಿತ ಕಂಡಿತ್ತು. ನವೆಂಬರ್ ತಿಂಗಳಿನಲ್ಲಿ ಮತ್ತೆ 47 ಸಾವಿರ ರೂಪಾಯಿಗೆ ಏರಿಕೆ ಕಂಡಿತ್ತು. ಡಿಸೆಂಬರ್ ಮೊದಲ ವಾರದಲ್ಲಿ ಕೇವಲ 100 ರೂಪಾಯಿಯಿಂದ 200 ರೂಪಾಯಿಯವರೆಗೆ ಏರಿಳಿತ ಕಂಡರೂ 47 ಸಾವಿರ ರೂಪಾಯಿ ಸ್ಥಿರ ಧಾರಣೆ ಕಾಯ್ದುಕೊಂಡಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆಯು ಕನಿಷ್ಠ ಬೆಲೆ 45,599 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 47,599 ರೂಪಾಯಿ ಆಗಿದೆ. ಸರಾಸರಿ ಬೆಲೆಯು 46,937 ರೂಪಾಯಿ ಆಗಿದ್ದರೆ, ಬೆಟ್ಟೆ ಅಡಿಕೆ ಗರಿಷ್ಠ 39,099 ರೂಪಾಯಿಗೆ ವಹಿವಾಟು ನಡೆಸಿದೆ.
ಒಟ್ಟಿನಲ್ಲಿ ಭತ್ತ, ಮೆಕ್ಕೆಜೋಳ ಬೆಳೆದ ರೈತರ ಪಾಡು ಒಂದು ರೀತಿಯಾದ್ದರೆ ಅಡಿಕೆ ಬೆಳೆಗಾರರದ್ದು ಮತ್ತೊಂದು ರೀತಿಯ ಸಮಸ್ಯೆ. ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ನೀರಿಗೆ ಹೆಚ್ಚು ಹಣ ವ್ಯಯಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ನೀರಿಗೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ. ಮುಂದಿನ ವರ್ಷ ಮಳೆ ಉತ್ತಮವಾಗಿ ಸುರಿದರೆ ಅಡಿಕೆ ಗಿಡಗಳು ಉಳಿಯುತ್ತವೆ. ಇಲ್ಲದಿದ್ದರೆ, ಬಂದ ಆದಾಯವನ್ನೆಲ್ಲಾ ಗಿಡಗಳಿಗೆ ನೀರುಣಿಸಲು ವ್ಯಯಿಸಬೇಕಾದ ಅನಿವಾರ್ಯತೆ ರೈತರಿಗೆ ಎದುರಾಗಲಿದೆ. ವರುಣನ ಕೃಪೆ ಮೇಲೆ ಅಡಿಕೆ ಬೆಳೆಗಾರರ ಭವಿಷ್ಯ ನಿಂತಿದ್ದು, ರೈತರು ಮಳೆರಾಯನತ್ತ ಮುಖ ನೋಡುತ್ತಾ ಪ್ರಾರ್ಥಿಸುತ್ತಿದ್ದಾರೆ. ಅಡಿಕೆ ಧಾರಣೆ ಕುಸಿತ ಕಂಡಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಬೆಳೆಯೂ ಕಡಿಮೆಯಾಗಿದ್ದರಿಂದ ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ.