SUDDIKSHANA KANNADA NEWS/ DAVANAGERE/ DATE:06-02-2025
ದಾವಣಗೆರೆ: ಜಿಲ್ಲೆಯಲ್ಲಿನ ವಿವಿಧ ಶಾಲೆಗಳಿಗೆ ಕರೆದುಕೊಂಡು ಹೋಗುವ ಶಾಲಾ ವಾಹನಗಳು ಮಕ್ಕಳ ರಕ್ಷಣೆ ದೃಷ್ಟಿಯಿಂದ ಸುರಕ್ಷತಾ ಕ್ರಮ ಅನುಸರಿಸುವುದು ಅನಿವಾರ್ಯವಾಗಿದ್ದು ಪಾಲನೆ ಮಾಡದ ಶಾಲಾ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ.ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿ, ಶಿಕ್ಷಣ ಇಲಾಖೆ, ಸಾರಿಗೆ, ಮಕ್ಕಳ ರಕ್ಷಣಾ ಘಟಕ ಮತ್ತು ಸ್ಮಾರ್ಟ್‍ಸಿಟಿ ಯೋಜನೆ ಅಧಿಕಾರಿಗಳೊಂದಿಗೆ ಜಂಟಿ ಸಮಾಲೋಚನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 500 ಕ್ಕಿಂತ ಹೆಚ್ಚು ಖಾಸಗಿ ಶಾಲೆಗಳಿಂದ 1030 ಕ್ಕೂ ಹೆಚ್ಚು ಶಾಲಾ ಬಸ್‍ಗಳನ್ನು ಹೊಂದಲಾಗಿದೆ. ಆದರೆ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ರಕ್ಷಣಾ ಕ್ರಮಗಳನ್ನು ಎಲ್ಲಾ ಶಾಲೆಯವರು ಅನುಸರಿಸುವುದು ಕಡ್ಡಾಯವಾಗಿದೆ. ಜಿಪಿಎಸ್, ಸಿಸಿ ಕ್ಯಾಮೆರಾ ಕಡ್ಡಾಯ; ಎಲ್ಲಾ ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿರಬೇಕು. ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಿಕೊಂಡು ವಾಹನ ಸಂಚರಿಸುವ ಸ್ಥಳಗಳ ಬಗ್ಗೆ ಮೇಲ್ವಿಚಾರಣೆಯನ್ನು ಸಂಸ್ಥೆಯವರು ಮಾಡಿಕೊಳ್ಳಬೇಕು. ವಾಹನಕ್ಕೆ ವೇಗ ನಿಯಂತ್ರಕದ ಜೊತೆಗೆ 40 ಕಿ.ಮೀ ಮಿತಿಯಲ್ಲಿಯೇ ವಾಹನಗಳನ್ನು ಚಲಾಯಿಸಬೇಕು. ಬಾಲಕಿಯರು ಇರುವುದರಿಂದ ವಾಹನದಲ್ಲಿ ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ಇರಲೇಬೇಕು. ವಾಹನ ಚಾಲಕರು ಚಾಲನಾ ಪರವಾನಗಿ ಹೊಂದಿ ಕನಿಷ್ಠ 6 ವರ್ಷಗಳ ಅನುಭವ ಹೊಂದಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಮಕ್ಕಳ ಮೇಲೆ ಯಾವುದೇ ರೀತಿಯ ಅಹಿತಕರ ದೌರ್ಜನ್ಯವಾದರೆ, ಅದನ್ನು ಪೋಕ್ಸೊ ಎಂದು ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೋಷಕರೊಂದಿಗೆ ಸಭೆ; ಮಕ್ಕಳನ್ನು ಕರೆದುಕೊಂಡು ಹೋಗುವಾಗ ಸಮಯವಾಗಿದೆ ಎಂದು ವಾಹನವನ್ನು ವೇಗವಾಗಿ ಚಲಾಯಿಸುವ ಬದಲಾಗಿ, ಪೋಷಕರೊಂದಿಗೆ ಸಭೆ ನಡೆಸಿ ಮಕ್ಕಳನ್ನು ನಿಗಧಿತ ಸ್ಥಳಕ್ಕೆ ಮೊದಲೇ ಕರೆ ತರಲು ಮನವರಿಕೆ ಮಾಡಿಕೊಡಬೇಕು, ಸಮಯವಾಗಿದೆ ಎಂದು ವಿವಿಧ ಕಡೆ ಅಳವಡಿಸಿರುವ ಸಿಗ್ನಲ್‍ಗಳನ್ನು ಜಂಪ್ ಮಾಡಿ ಸಂಚರಿಸುವಂತಿಲ್ಲ. ಸಿಗ್ನಲ್ ಜಂಪ್ ಮಾಡಿರುವುದು ಕಂಡು ಬಂದಲ್ಲಿ, ಅಂತಹ ವಾಹನ ನೊಂದಣಿ ಮತ್ತು ಚಾಲಕರ ಪರವಾನಗಿಯನ್ನು ರದ್ದು ಮಾಡಲು ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಶಾಲಾ ವಾಹನಗಳ ಎಫ್‍ಸಿ ನವೀಕರಣಕ್ಕೆ ಸೂಚನೆ; ಜಿಲ್ಲೆಯಲ್ಲಿ 1030 ಶಾಲಾ ವಾಹನಗಳಿದ್ದು ಇದರಲ್ಲಿ 350 ಕ್ಕೂ ಹೆಚ್ಚು ವಾಹನಗಳಿಗೆ ಎಫ್‍ಸಿ ನವೀಕರಣವಾಗಿರುವುದಿಲ್ಲ. ಈ ವಾಹನಗಳನ್ನು ಇದೇ ಫೆಬ್ರವರಿ 25 ರೊಳಗಾಗಿ ನವೀಕರಿಸಿಕೊಳ್ಳಬೇಕು, ಇಲ್ಲವಾದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಯಾವುದೇ ವಾಹನ ರಸ್ತೆಯಲ್ಲಿ ಸಂಚರಿಸುತ್ತಿದೆ ಎಂದಲ್ಲಿ ಅದಕ್ಕೆ ಎಫ್‍ಸಿ, ವಿಮೆ, ಚಾಲಕರಿಗೆ ಪರವಾನಗಿ, ಸ್ಪೀಡ್ ಗೌರ್ನರ್ ಇರಲೇಬೇಕೆಂದು ತಿಳಿಸಿದರು.
ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಸಂಚಾರಿ ನಿಯಮಗಳ ಪಾಲನೇ ಮಾಡದೇ ಮತ್ತು ಚಾಲಕರ ಅಜಾಗರೂಕತೆಯಿಂದ ಪ್ರತಿನಿತ್ಯ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಎಲ್ಲಾ ಶಾಲಾ ವಾಹನಗಳು ಮೋಟಾರು ವಾಹನ ಕಾಯಿದೆ ಮತ್ತು ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದರೊಂದಿಗೆ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್ ಮಾತನಾಡಿ ಜಿಲ್ಲೆಯಲ್ಲಿರುವ ಶಾಲಾ ವಾಹನಗಳಲ್ಲಿ 112 ವಾಹನಗಳಿಗೆ 15 ವರ್ಷ ದಾಟಿದೆ. 330 ವಾಹನಗಳ ಚಾಲ್ತಿ ದಾಖಲೆಗಳಿಲ್ಲ, ಅಂತಹ ವಾಹನಗಳಿಗೆ ನೋಟೀಸ್ ನೀಡಲಾಗಿದೆ. ಈಗಾಗಲೇ 22 ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದು 3 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವಾಹನಗಳನ್ನು ಆಗಿಂದಾಗ್ಗೆ ತಪಾಸಣೆ ಮಾಡಲು ಸಾರಿಗೆ ಇನ್ಸ್‍ಪೆಕ್ಟರ್‍ಗಳಿಗೆ ನಿರ್ದೇಶನ ನೀಡಲಾಗಿದ್ದು ಶಾಲಾ ಮಕ್ಕಳ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸಾರಿಗೆ ನಿಯಮಗಳನ್ನು ಪಾಲನೆ ಮಾಡದ ವಾಹನಗಳ ಮೇಲೆ ನಿರ್ಧಾಕ್ಷೀಣ ಕ್ರಮ ಅನಿವಾರ್ಯವಾಗಿದೆ ಎಂದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್, ಸ್ಮಾರ್ಟ್ ಸಿಟಿ ಎಚಿಡಿ ವೀರೇಶ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕವಿತಾ ಉಪಸ್ಥಿತರಿದ್ದರು.