SUDDIKSHANA KANNADA NEWS/ DAVANAGERE/ DATE:12-02-2024
ದಾವಣಗೆರೆ: ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಾದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜನೆ ಮಾಡುವ ಮೂಲಕ ಪಲಾನುಭವಿಗಳ ಕುಂದುಕೊರತೆ ನಿವಾರಣೆಗೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಸಂವಿಧಾನ ಜಾಗೃತಿ ಜಾಥಾ ಅಭಿಯಾನ ನಡೆಯುತ್ತಿದ್ದು ಜಾಥಾ ಸಂಚರಿಸುವ ಗ್ರಾಮ ಪಂಚಾಯಿತಿಗಳಲ್ಲಿಯು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಕುರಿತು ಮಾಹಿತಿ ನೀಡಿ ಅವರ ಕುಂದುಕೊರತೆಗಳಿದ್ದಲ್ಲಿ ನಿವಾರಣೆಗೆ ಕ್ರಮವಹಿಸಬೇಕೆಂದರು.
ಯುವನಿಧಿಗೆ 4300 ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ಉತ್ತೀರ್ಣರಾದವರು ನೊಂದಾಯಿಸಿದ್ದು ಇದಕ್ಕೆ ಇನ್ನಷ್ಟು ವೇಗ ಹೆಚ್ಚಿಸಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೊಂದಣಿಗೆ ಕ್ರಮ ವಹಿಸಲು ಸೂಚನೆ ನೀಡಿ ತಾಲ್ಲೂಕಿನ
ಶಿಶು ಅಭಿವೃದ್ದಿ ಯೋಜನಾಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗ್ಯಾರಂಟಿ ಸಮಾವೇಶ ಮತ್ತು ಕುಂದುಕೊರತೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಈಗಾಗಲೇ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.