SUDDIKSHANA KANNADA NEWS/ DAVANAGERE/ DATE:23-05-2023
ದಾವಣಗೆರೆ: ಸಾರ್ ಇಲ್ನೋಡಿ ಸರ್. ಕಾಳು ಎಷ್ಟು ಚೆನ್ನಾಗಿ ಬಂದಿತ್ತು. ಮಳೆ ಸುರಿದ ಕಾರಣ ನೀರು ಪಾಲಾಗಿ ಹೋಯ್ತು. 200ರಿಂದ 250 ಕಾಳು ಉದುರಿ ಹೋಗಿವೆ. ಇರೋದು ಕೇವಲ ಹತ್ತರಿಂದ ಹದಿನೈದು ಕಾಳು ಮಾತ್ರ. ಕಟಾವು ಮಾಡಲು ಯಂತ್ರಕ್ಕೆ ನೀಡುವ ಹಣ ಕೂಡ ನಮಗೆ ಸಿಗುವುದಿಲ್ಲ.
ಇದು ಕೈಗೆ ಬಂದಿದ್ದ ಫಸಲು ಹೇಗೆ ನೀರು ಪಾಲಾಗಿದೆ ಎಂಬುದನ್ನು ರೈತರೊಬ್ಬರು ಜಿಲ್ಲಾಧಿಕಾರಿ ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿದ ತಂಡಕ್ಕೆ ರೈತರೊಬ್ಬರು ವಿವರಿಸಿದ ಪರಿ. ಭತ್ತದ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಸಾವಿರಾರು ರೂಪಾಯಿ
ಖರ್ಚು ಮಾಡಿದ್ದೇವೆ. ಒಂದೆಡೆ ಬಿಸಿಲಿನ ಶಾಖ, ಮತ್ತೊಂದೆಡೆ ಭಾರೀ ಗಾಳಿ, ಮಳೆಯಿಂದ ಆದ ಅನಾಹುತದಿಂದ ನಷ್ಟ ಅನುಭವಿಸಿದ್ದೇವೆ ಎಂದು ಅಳಲು ತೋಡಿಕೊಂಡರು.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮತ್ತು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಅವರು ದಾವಣಗೆರೆ ತಾಲೂಕಿನ ಚಿಕ್ಕತೊಗಲೇರಿ ಮತ್ತು ಹಿರೇತೊಗಲೇರಿ ಗ್ರಾಮಕ್ಕೆ ಭೇಟಿ ನೀಡಿ, ಮಳೆಯಿಂದ ಹಾನಿಯಾದ ಭತ್ತದ ಬೆಳೆಯನ್ನು
ವೀಕ್ಷಿಸಿ ರೈತರ ಅಳಲು ಆಲಿಸಿದರು. ಈ ವೇಳೆ ತಹಶೀಲ್ದಾರ್ ಅಶ್ವಥ್, ಕೃಷಿ ಸಹಾಯಕ ನಿರ್ದೇಶಕ ಶ್ರೀಧರ್ ಮೂರ್ತಿ ಅವರು ಇದ್ದರು.
ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಭತ್ತ ಫಸಲಿಗೆ ಬಂದಿತ್ತು. ಈ ಬಾರಿ ಬೆಳೆಯೂ ಸಮೃದ್ಧವಾಗಿತ್ತು. ಇನ್ನೇನೂ ಕೊಯ್ಲು ಮಾಡಬೇಕು ಎನ್ನುವಷ್ಟರಲ್ಲಿ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಭತ್ತ ಧರಶಾಯಿಯಾಗಿದೆ. ಮಾತ್ರವಲ್ಲ,
ಕೆಲವೆಡೆ ಹಾಸುಹೊದ್ದು ಮಲಗಿದಂತೆ ಕಾಣುತ್ತದೆ.
ಭತ್ತ ಬೆಳೆಯಲು ರೈತರು ಸಾಕಷ್ಟು ಬೆವರು ಸುರಿಸಿದ್ದರು. ಬಿತ್ತನೆ ಬೀಜ, ಗೊಬ್ಬರ, ಕೂಲಿ ಕಾರ್ಮಿಕರಿಗೆ ಹಣ ಸೇರಿದಂತೆ ನಾನಾ ಬಗೆಯಲ್ಲಿ ಖರ್ಚು ಮಾಡಿದ್ದರು. ಇನ್ನೇನೂ ಫಸಲು ಚೆನ್ನಾಗಿ ಬಂದಿದೆ. ಈ ಬಾರಿಯಾದರೂ ಸಾಲ ತೀರಿಸಬಹುದು ಎಂಬ ಬಯಕೆ ಹೊಂದಿದ್ದರು. ಆದ್ರೆ, ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿಯಲ್ಲಿ ಅನ್ನದಾತರು ಗೋಳಾಡುವಂತಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಕೊರೊನಾದಿಂದ ತುಂಬಾನೇ ನಷ್ಟ ಅನುಭವಿಸಿದ್ದೇವೆ. ಕಳೆದ ಬಾರಿಯೂ ಭಾರೀ ಮಳೆ ಸುರಿದು, ಜಮೀನಿನಲ್ಲಿ ನೀರು ನಿಂತು ಭತ್ತ ಸಂಪೂರ್ಣ ನಾಶವಾಗಿ ಹೋಯ್ತು. ಆಗಲೂ ತುಂಬಾನೇ ನಷ್ಟ ಅನುಭವಿಸಿದ್ದೆವು. ಈ ಬಾರಿಯೂ ಅಂಥದ್ದೇ ಪರಿಸ್ಥಿತಿ ಎದುರಾಗಿದೆ. ಪ್ರತಿವರ್ಷವೂ ಇಂಥ ಸ್ಥಿತಿ ನಿರ್ಮಾಣವಾದರೆ ನಮ್ಮ ಬದುಕು ಹೇಗೆ ಸಾಗುತ್ತದೆ. ಸರ್ಕಾರವೂ ಪರಿಹಾರ ಹೆಚ್ಚಿಸಬೇಕು. ಆದ ನಷ್ಟಕ್ಕೆ ಪರಿಹಾರ ನೀಡಬೇಕು. ಸರ್ವೆ ಮಾಡುತ್ತೇವೆ, ವರದಿ ತರಿಸಿಕೊಳ್ಳುತ್ತೇವೆ ಎಂಬ ಭರವಸೆ ಬಿಟ್ಟು ಆದಷ್ಟು ಬೇಗ ನಮಗೆ ನೆರವಾಗಬೇಕು ಎಂದು ರೈತರು ಒತ್ತಾಯಿಸತೊಡಗಿದ್ದಾರೆ.
ಹರಿಹರ ತಾಲೂಕಿನಲ್ಲಿಯೇ ಸುಮಾರು 40 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಬಿರುಗಾಳಿ, ಮಳೆಗೆ 295 ಎಕರೆಯಲ್ಲಿ ಬೆಳೆದಿದ್ದ ಭತ್ತ ನಾಶವಾಗಿದ್ದರೆ, ಎರಡು ಮನೆಗಳಿಗೆ ಹಾನಿಯುಂಟಾಗಿದೆ. ದೇವರಬೆಳಕರೆಯಲ್ಲಿ 30 ಎಕರೆ, ಕಡ್ಲೆಗೊಂದಿ 50 ಎಕರೆ, ಗಂಗನರಸಿ 70 ಎಕರೆ, ಕೊಂಡಜ್ಜಿ 20 ಎಕರೆ, ಕುಣಿಬೆಳಕೆರೆ 40 ಎಕರೆ, ಸಾಲಕಟ್ಟೆ 45 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಷ್ಟ ಉಂಟಾಗಿದೆ.
ಹೊತ್ತಿ ಉರಿದ ತೆಂಗಿನಮರ:
ಇನ್ನು ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮಕ್ಕೆ ಸಮೀಪದ ಕೊಂಡದಹಳ್ಳಿ ಗ್ರಾಮದ ತೋಟದಲ್ಲಿನ ಎರಡು ತೆಂಗಿನ ಮರಗಳಿಗೆ ಸಿಡಿಲು ಬಡಿದಿದ್ದು, ಬೆಂಕಿ ಹೊತ್ತಿ ಉರಿದ ಘಟನೆಯೂ ನಡೆದಿದೆ. ಸಿಡಿಲಿನ ಹೊಡೆತದ ರಭಸಕ್ಕೆ ತೆಂಗಿನ ಮರದ ಸುತ್ತಲಿನ 20 ಅಡಿಕೆ ಮರಗಳಿಗೆ ಪೆಟ್ಟು ಬಿದ್ದಿದೆ. ಕೆಲ ದಿನಗಳ ಬಳಿಕ ಈ ಮರಗಳು ಉಳಿಯುತ್ತವೆಯೋ ಅಥವಾ ಇಲ್ಲವೋ ಎಂಬುದು ಗೊತ್ತಾಗಲಿದೆ ಎಂದು ತೋಟದ ಮಾಲೀಕ ಶ್ರೀನಿವಾಸ್ ಹೇಳಿದ್ದಾರೆ.
ಮಿಂಚು, ಗುಡುಗು, ಸಿಡಿಲಿನ ರಣ ಮಳೆಯು ಭತ್ತ, ಅಡಿಕೆ, ತೆಂಗು, ಬಾಳೆಗೆ ಹಾನಿಯುಂಟು ಮಾಡಿದೆ. ಮುಂಗಾರು ಪೂರ್ವ ಮಳೆಯ ಖುಷಿಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸದ ಬದಲು ಕಾರ್ಮೋಡ ಕವಿಯುವಂತೆ ಮಾಡಿದೆ. ಹೋದ ವರ್ಷ ಅಧಿಕ ಮಳೆಯಿಂದ ಸಾವಿರಾರು ಎಕರೆ ಬೆಳೆ ಹಾನಿಯಾಗಿತ್ತು. ಮರು ಬಿತ್ತನೆಗೂ ಅವಕಾಶ ಸಿಕ್ಕಿರಲಿಲ್ಲ. ಆದ್ರೆ, ಈ ಬಾರಿ ಹೋಬಳಿ ವ್ಯಾಪ್ತಿಯಲ್ಲಿ 6400 ಎಕರೆ ಮಳೆಯಾಧಾರಿತ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಪಾಪ್ ಕಾರ್ನ್ ತಳಿ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ವರುಣನ ಕೃಪೆ ಇದ್ದರೆ ಬಿತ್ತನೆಗೆ ಪೂರಕವಾದ ಬಿತ್ತನೆ ಬೀಜ, ಗೊಬ್ಬರ ಲಭ್ಯವೂ ಇದೆ.
ಜಗಳೂರಲ್ಲಿ ಎತ್ತು ಸಾವು:
ಜಗಳೂರು ತಾಲೂಕಿನಲ್ಲಿಯೂ ಉತ್ತಮ ಮಳೆಯಾಗಿದೆ. ಸಿಡಿಲು ಬಡಿದು ಒಂದು ಎತ್ತು ಸಾವನ್ನಪ್ಪಿದ್ದರೆ, ಬಾಳೆ ತೋಟಗಳಿಗೂ ಹಾನಿಯಾಗಿದೆ. ಕಸಬಾ ಹೋಬಳಿಯಲ್ಲಿ ಎರಡು ಹೆಕ್ಟೇರ್ ಬಾಳೆ, 1 ಹೆಕ್ಟೇರ್ ಪಪ್ಪಾಯಿ, 2 ಮನೆಗಳು, ಸೊಕ್ಕೆ ಹೋಬಳಿಯಲ್ಲಿ 2 ಹೆಕ್ಟೇರ್ ಅಡಿಕೆ, 5 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಹಾನಿ ಸಂಭವಿಸಿದೆ.