SUDDIKSHANA KANNADA NEWS/ DAVANAGERE/ DATE:20-08-2023
ದಾವಣಗೆರೆ: ಅಮೆರಿಕಾದಲ್ಲಿ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಸಾವಿನ ಪ್ರಕರಣ ಕುರಿತಂತೆ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ, ಮೃತದೇಹ ತರುವ ಪ್ರಕ್ರಿಯೆ ತಡವಾಗುತ್ತಿದೆ. ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಅಸ್ವಾಭಾವಿಕ ಸಾವು ಎಂಬುದಾಗಿ ಬಾಲ್ಟಿಮೋರ್ ಕೌಂಟಿ ಪೊಲೀಸರು ತಿಳಿಸಿದ್ದಾರೆ. ತನಿಖೆ ಆಗುತ್ತಿರುವುದರಿಂದ ಇದುವರೆಗೆ ಸ್ಪಷ್ಟ ಮಾಹಿತಿ ಕೊಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದರು.
ವಿದ್ಯಾನಗರದಲ್ಲಿರುವ ಯೋಗೇಶ್ ಅವರ ಕುಟುಂಬ ವಾಸವಿರುವ ಮನೆಗೆ ಭೇಟಿ (Visit) ನೀಡಿ ಕುಟುಂಬಸ್ಥರಿಗೆ ಸ್ವಾಂತ್ವನ ಹೇಳಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪತ್ನಿ ಹಾಗೂ ಮಗುವಿಗೆ ಶೂಟ್ ಮಾಡಿ ಆ ಬಳಿಕ ಯೋಗೇಶ್ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಈ ಪ್ರಕರಣ ಸಂಬಂಧ ಸಂಪೂರ್ಣ ತನಿಖೆ ನಡೆಸಿ ನೀಡುವುದಾಗಿ ಅಮೆರಿಕಾ ಪೊಲೀಸರಿಂದ ಮಾಹಿತಿ ಸಿಕ್ಕಿದೆ. ಕಾನೂನಿನ ಪ್ರಕಾರ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:
SUSPECT DEATH BIG EXCLUSIVE STORY: ಸಾವಿನ ಸುತ್ತ ಅನುಮಾನದ ಹುತ್ತ: ಅಮೆರಿಕಾದಲ್ಲಿ ಮೂವರು ಸಾವಿನ ಸುತ್ತ ಗಿರಕಿ ಹೊಡೆಯುತ್ತಿರುವ ಮೂರು ಕಾರಣಗಳು…!
ನ್ಯೂಯಾರ್ಕ್ ನ ಅಧಿಕಾರಿ ಮಂಜುನಾಥ್ ರ ಸಂಪರ್ಕದಲ್ಲಿದ್ದೇವೆ. ಮಾಧ್ಯಮದವರು ಹಾಗೂ ಕುಟುಂಬಸ್ಥರಿಗೆ ಸಾವಿಗೆ ನಿಖರ ಕಾರಣವೇನು ಎಂಬುದು ಗೊತ್ತಾದ ಕೂಡಲೇ ತಿಳಿಸುತ್ತೇವೆ. ತನಿಖೆ ಎಷ್ಟು ದಿನಗಳಲ್ಲಿ ಮುಗಿಯುತ್ತದೆ ಎಂಬ ಆಧಾರದ ಮೇಲೆ ಮೃತದೇಹಗಳನ್ನು ದಾವಣಗೆರೆಗೆ ತರಿಸಿಕೊಳ್ಳುವ ಕುರಿತಂತೆ ಗೊತ್ತಾಗಲಿದೆ. ಈಗಲೇ ಏನನ್ನೂ ಹೇಳಲು ಆಗದು. ಅಮೆರಿಕಾ ಪೊಲೀಸರು ಪ್ರಕರಣ ಸಂಬಂಧ ಚಾರ್ಜ್ ಶೀಟ್ ತಯಾರಿಸಬೇಕಾಗುತ್ತದೆ. ಅಲ್ಲಿನ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆದಷ್ಟು ಬೇಗ ಮೃತದೇಹಗಳನ್ನು ತರಿಸಲು ಜಿಲ್ಲಾಡಳಿತ ಕ್ರಮ ವಹಿಸಲಿದೆ. ಅವರ ಕುಟುಂಬದವರ ಜೊತೆ ನಾವು ಇರುತ್ತೇವೆ. ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡುವುದಾಗಿ ತಿಳಿಸಿದರು.
ದಾವಣಗೆರೆ ಮೂಲದ ಯೋಗೀಶ್, ಪ್ರತಿಭಾ, ಯಶ್ ಅಮೆರಿಕಾದ ನ್ಯೂಯಾರ್ಕ್ ನ ಬಾಲ್ತಿಮೇರ್ ಪ್ರದೇಶದಲ್ಲಿ ಅಸ್ವಾಭಾವಿಕವಾಗಿ ಸಾವಿಗೀಡಾಗಿದ್ದು, ಕುಟುಂಬದ ಕೋರಿಕೆ ಮೇರೆಗೆ ಈಗಾಗಲೇ ಅಮೇರಿಕಾದಲ್ಲಿನ ಕನ್ಸಲ್ ಜನರಲ್ ಮಂಜುನಾಥ್ ಮತ್ತು ವರುಣ್ ಅವರ ಜೊತೆ ಆನ್ ಲೈನ್ ಮೂಲಕ ಸಂಪರ್ಕ ಮಾಡಲಾಗಿದೆ. ಸಂಬಂಧಪಟ್ಟವರಿಗೂ ಮಾಹಿತಿ ರವಾನಿಸಿದ್ದೇವೆ. ಮೃತದೇಹಗಳನ್ನು ದಾವಣಗೆರೆಗೆ ತರಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಸ್ಥಳೀಯ ಪೊಲೀಸರು ಅಸ್ವಾಭಾವಿಕ ಸಾವಿನ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ತನಿಖೆಗೆ ಸಮಯಾವಕಾಶ ಬೇಕು ಎಂದಿದ್ದಾರೆ. ಮೃತದೇಹ ಸ್ಥಳಾಂತರಿಸುವ ಪ್ರಕ್ರಿಯೆ ಮುಗಿಸಬೇಕಾಗುತ್ತದೆ ಎಂದರು.
ಮೃತರ ಮೂಲ ಸ್ಥಳಕ್ಕೆ ಮೃತದೇಹಗಳನ್ನು ವರ್ಗಾವಣೆ ಮಾಡುವ ಕುರಿತಂತೆ ಯಾವುದೇ ಸ್ಪಷ್ಟ ನಿರ್ಧಾರವಾಗಿಲ್ಲ. ಮೃತದೇಹಗಳನ್ನು ಅಲ್ಲಿಯೇ ದಫನ್ ಮಾಡಬೇಕಾ ಅಥವಾ ದಾವಣಗೆರೆಗೆ ತರಬೇಕಾ ಎಂಬ ಬಗ್ಗೆ ಕುಟುಂಬಸ್ಥರು, ಸಂಬಂಧಿಕರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಜಿಲ್ಲಾಡಳಿತವು ಅಮೆರಿಕಾದಲ್ಲಿನ ಅಧಿಕಾರಿಗಳನ್ನು ಪ್ರತಿ ಎರಡು ಗಂಟೆಗೊಮ್ಮೆ ಸಂಪರ್ಕ ಮಾಡುತ್ತಿದೆ. ಕುಟುಂಬಸ್ಥರ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು. ತನಿಖೆ ಮುಗಿದ ಬಳಿಕವಷ್ಟೇ ಸಂಪೂರ್ಣ ಮಾಹಿತಿ ಲಭಿಸಲಿದೆ ಎಂದು ವಿವರಿಸಿದರು.