ದಾವಣಗೆರೆ: ಮಧ್ಯ ಕರ್ನಾಟಕದ ಹಾಗೂ ಏಷ್ಯಾ ಖಂಡದ ಅತಿ ದೊಡ್ಡ ಕೆರೆಯಾದ ಚನ್ನಗಿರಿ ತಾಲೂಕಿನ ಸೂಳೆಕೆರೆ ಒತ್ತುವರಿ ತೆರವು, ಕೆರೆಯ ಗಡಿ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳ ನಡುವೆ ಪರಿಣಾಮಕಾರಿ ಸಮನ್ವಯ ಮಾಡಿಕೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂದು ಖಡ್ಗ ಸಂಘ ಒತ್ತಾಯಿಸಿದೆ.
ಚನ್ನಗಿರಿ, ದಾವಣಗೆರೆ ಜಿಲ್ಲೆ ಸೂಳಕೆರೆ (ಶಾಂತಿಸಾಗರ) ಸಂರಕ್ಷಣೆ ಮತ್ತು ಕೆರೆಯ ಅಸ್ತಿತ್ವವನ್ನು ರಕ್ಷಿಸುವ ಉದ್ದೇಶದಿಂದ ಖಡ್ಗ ಸಂಘವು ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ “ಕೆರೆಯ ಜಾಗ ಕೆರೆಗೆ ರೈತರ ಜಾಗ ರೈತರಿಗೆ” ಎಂಬ ಆಶಯದೊಂದಿಗೆ ಹೋರಾಟ ಹಾಗೂ ಜಾಗೃತಿ ಅಭಿಯಾನವನ್ನು ನಡೆಸಿಕೊಂಡು ಬರುತ್ತಿದೆ. ಹೋರಾಟದ ಉದ್ದೇಶ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಗುರಿಯಾಗಿಸುವುದಲ್ಲ. ಸಾರ್ವಜನಿಕ ಆಸ್ತಿಯಾಗಿರುವ ಕೆರೆಯ ಜಾಗವನ್ನು ಕಾನೂನುಬದ್ದವಾಗಿ ಸಂರಕ್ಷಿಸುವುದು, ನಿಜವಾದ ರೈತರ ಜಮೀನಿನ ಹಕ್ಕುಗಳನ್ನು ರಕ್ಷಿಸುವುದು ಮತ್ತು ಸೂಳೆಕೆರೆಯ ಸಮಗ್ರ ಅಭಿವೃದ್ಧಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ನಮ್ಮ ಪ್ರಮುಖ ಉದ್ದೇಶ ಎಂದು ಸೂಳೆಕೆರೆ ಸಂರಕ್ಷಣಾ ಮಂಡಳಿ ಹಾಗೂ ಖಡ್ಗ ಸಂಘಟನೆಯ ಪ್ರಮುಖರೂ ಆದ ಶ್ರೀ ಗುರುಬಸವ ಸ್ವಾಮೀಜಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಘ ಹೇಳುವುದೇನು?
- 2019ರ ಜಂಟಿ ಸರ್ವೆಯ ಸಂಪೂರ್ಣ ವರದಿ ಮತ್ತು ಗಡಿ ಗುರುತಿಸುವಿಕೆಯ ದಾಖಲೆಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು.
- ಸೂಳೆಕರೆಯ ಮೂಲ ಅಧಿಕೃತ ಗಡಿ ಮತ್ತು ಪ್ರಸ್ತುತ ಭೌತಿಕ ಗಡಿಯನ್ನು ಆಧುನಿಕ ತಂತ್ರಜ್ಞಾನ/GPS ಆಧಾರಿತ ನಕ್ಷೆಯೊಂದಿಗೆ ಸ್ಪಷ್ಟವಾಗಿ ಗುರುತಿಸಬೇಕು.
- 2025-2026ರಲ್ಲಿ ತೆರವುಗೊಳಿಸಲಾಗಿದೆ ಎಂದು ತಿಳಿಸಿರುವ ಸುಮಾರು 172 ಎಕರೆ ಪ್ರದೇಶದ ಸಂಪೂರ್ಣ ದಾಖಲೆಗಳನ್ನು ಬಹಿರಂಗಪಡಿಸಬೇಕು.
- ಇನ್ನೂ ಯಾವುದೇ ಒತ್ತುವರಿ ಉಳಿದಿದ್ದರೆ, ಕಾನೂನುಬದ್ಧ ಪ್ರಕ್ರಿಯೆ ಅನುಸರಿಸಿ ಕಾಲಮಿತಿಯಲ್ಲಿ ತೆರವುಗೊಳಿಸಬೇಕು.
- ತೆರವುಗೊಳಿಸಿದ ಕೆರೆಯ ಜಾಗವನ್ನು ಮರುಒತ್ತುವರಿಯಾಗದಂತೆ ಶಾಶ್ವತ ಗಡಿ ಗುರುತು, ಕಂಬಗಳು/ಫೆನ್ಸಿಂಗ್ ಹಾಗೂ ಅಗತ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು.
- ನಿಜವಾದ ರೈತರ ಜಮೀನು ಕೆರೆಯ ಜಾಗವೆಂದು ತಪ್ಪಾಗಿ ಗುರುತಿಸಲ್ಪಟ್ಟಿದ್ದರೆ, ದಾಖಲೆಗಳ ಪರಿಶೀಲನೆಯ ಮೂಲಕ “ಕೆರೆಯ ಜಾಗ ಕೆರೆಗೆ-ರೈತರ ಜಾಗ ರೈತರಿಗೆ” ಎಂಬ ನ್ಯಾಯಯುತ ತತ್ವವನ್ನು ಅನುಸರಿಸಬೇಕು.
- ಜಿಲ್ಲಾಡಳಿತದ ನೇತೃತ್ವದಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮನ್ವಯ ಸಮಿತಿಯನ್ನು ರಚಿಸಿ, ಕಾಲಮಿತಿಯ ಕಾರ್ಯಯೋಜನೆ ರೂಪಿಸಬೇಕು.
- ಸೂಳೆಕೆರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಪ್ರಗತಿ ವರದಿಯನ್ನು ಕಾಲಕಾಲಕ್ಕೆ ಸಾರ್ವಜನಿಕರಿಗೆ ಪ್ರಕಟಿಸಬೇಕು.
2019ರ ಜಂಟಿ ಸರ್ವೆಯ ನಂತರವೂ ಸ್ಪಷ್ಟ ಕ್ರಮ ಏಕೆ ಇಲ್ಲ?
2019ರಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಕರ್ನಾಟಕ ನೀರಾವರಿ ನಿಗಮದ ಸಂಬಂಧಪಟ್ಟ ಅಧಿಕಾರಿಗಳ ಜಂಟಿ ಸಹಯೋಗದಲ್ಲಿ ಸೂಳೆಕೆರೆಯ ಜಾಗ ಮತ್ತು ಗಡಿಗೆ ಸಂಬಂಧಿಸಿದಂತೆ ಸರ್ವೆ ಕಾರ್ಯ ನಡೆಸಲಾಗಿದೆ. ಸರ್ವೆ ಕಾರ್ಯದ ನಂತರ ಕೆರೆಯ ಗಡಿಯನ್ನು ಗುರುತಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ತಿಳಿಸಲಾಗಿದೆ. ಆದರೆ, ಸರ್ವೆ ಹಾಗೂ ಗಡಿ ಗುರುತಿಸುವಿಕೆಯ ನಂತರ ಒತ್ತುವರಿ ಕಂಡುಬಂದಿದ್ದರೆ ಅದನ್ನು ತೆರವುಗೊಳಿಸುವುದು, ಕೆರೆಯ ಗಡಿಯನ್ನು ಶಾಶ್ವತವಾಗಿ ಸಂರಕ್ಷಿಸುವುದು ಹಾಗೂ ಮುಂದಿನ ಒತ್ತುವರಿಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ನಿರೀಕ್ಷಿತ ಮಟ್ಟದ ಪರಿಣಾಮಕಾರಿ ಕ್ರಮಗಳು ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆ ಇಂದಿಗೂ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಕರ್ನಾಟಕ ನೀರಾವರಿ ನಿಗಮದಿಂದ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟವಾದ, ದಾಖಲೆ ಆಧಾರಿತ ಮಾಹಿತಿ ಮತ್ತು ಸಮಗ್ರ ಕಾರ್ಯಯೋಜನೆ ಹೊರಬರಬೇಕಾಗಿದೆ
ಎಂದು ತಿಳಿಸಿದರು.
ಲೋಕಾಯುಕ್ತ ಸಂಸ್ಥೆಯ ಮೊರೆ ಹೋದ ಖಡ್ಗ ಸಂಘ:
2019ರ ಸರ್ವೆಯ ನಂತರವೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕದ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಕೋರಿ ಖಡ್ಗ ಸಂಘವು ಲೋಕಾಯುಕ್ತ ಸಂಸ್ಥೆಯ ಮುಂದೆ ದೂರು ದಾಖಲಿಸಿದೆ. ಈ ಕುರಿತು ವಿಚಾರಣೆ ಪ್ರಗತಿಯಲ್ಲಿರುವ ಸಂದರ್ಭದಲ್ಲಿ, 2025ರಲ್ಲಿ ಲೋಕಾಯುಕ್ತ ಸಂಸ್ಥೆಯು ಸೂಳೆಕೆರೆ ಒತ್ತುವರಿ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿರುವುದು
ವಿಷಯದ ಗಂಭೀರತೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.
172 ಎಕರೆ ಒತ್ತುವರಿ ತೆರವು – ಸಂಪೂರ್ಣ ವಿವರ ಬಹಿರಂಗಪಡಿಸಬೇಕು:
2025 ಮತ್ತು 2026ರ ಅವಧಿಯಲ್ಲಿ ಜಿಲ್ಲಾಡಳಿತವು ಸೂಳೆಕೆರೆಯ ಸುಮಾರು 172 ಎಕರೆ ಪ್ರದೇಶಕ್ಕೆ ಸಂಬಂಧಿಸಿದ ಒತ್ತುವರಿ ತೆರವು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿರುವುದಾಗಿ ಖಡ್ಗ ಸಂಘದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಮಾಹಿತಿಯನ್ನು ಪಾರದರ್ಶಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಖಡ್ಗ ಸಂಘವು ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ದ್ವೇಷದಿಂದ ಅಥವಾ ರಾಜಕೀಯ ಉದ್ದೇಶದಿಂದ ಈ ಹೋರಾಟ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಬೇಡಿಕೆಗಳೇನು?
ಸೂಳೆಕೆರೆ ಉಳಿಯಬೇಕು.
ಸಾರ್ವಜನಿಕ ಆಸ್ತಿ ಸಂರಕ್ಷಿಸಲ್ಪಡಬೇಕು.
ರೈತರ ನಿಜವಾದ ಹಕ್ಕುಗಳು ರಕ್ಷಿಸಲ್ಪಡಬೇಕು.
ಅಕ್ರಮ ಒತ್ತುವರಿ ಇದ್ದರೆ ಕಾನೂನುಬದ್ದವಾಗಿ ತೆರವುಗೊಳ್ಳಬೇಕು.
ಸೂಳೆಕೆರೆಯ ಅಭಿವೃದ್ಧಿಗೆ ಶಾಶ್ವತ ಪರಿಹಾರ ದೊರಕಬೇಕು.
ಇದೇ ಖಡ್ಗ ಸಂಘದ ಹತ್ತು ವರ್ಷಗಳ ಹೋರಾಟದ ಮೂಲ ಉದ್ದೇಶ.
ಆದ್ದರಿಂದ ಜಿಲ್ಲಾಡಳಿತ, ತಾಲೂಕು ಆಡಳಿತ, ಕರ್ನಾಟಕ ನೀರಾವರಿ ನಿಗಮ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಇನ್ನಾದರೂ ಪರಸ್ಪರ ಸಮನ್ವಯದಿಂದ, ದಾಖಲೆ ಮತ್ತು ಕಾನೂನಿನ ಆಧಾರದ ಮೇಲೆ, ಕಾಲಮಿತಿಯಲ್ಲಿ ಕಾರ್ಯನಿರ್ವಹಿಸಿ ಸೂಳೆಕೆರೆಯ ಗಡಿ, ಒತ್ತುವರಿ ಮತ್ತು ಸಂರಕ್ಷಣೆಯ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಖಡ್ಗ ಸಂಘವು ಒತ್ತಾಯಿಸಿದೆ.
ಸಾರ್ವಜನಿಕರ ಮುಂದಿರುವ ಮೂಲ ಪ್ರಶ್ನೆ:
- “ಇಷ್ಟೆಲ್ಲಾ ವರ್ಷಗಳ ನಂತರವೂ ಸೂಳೆಕೆರೆಯ ಸಂಪೂರ್ಣ ಗಡಿ, ಒತ್ತುವರಿ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಶಾಶ್ವತ ಹಾಗೂ ಅಂತಿಮ ಪರಿಹಾರ ಏಕೆ ದೊರಕಿಲ್ಲ?”
- ಜಿಲ್ಲಾಡಳಿತ, ತಾಲೂಕು ಆಡಳಿತ, ಕರ್ನಾಟಕ ನೀರಾವರಿ ನಿಗಮ ಹಾಗೂ ಲೋಕಾಯುಕ್ತ ಸಂಸ್ಥೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ವ್ಯವಸ್ಥೆಗಳು ತಮ್ಮದೇ ಆದ ಕಾನೂನುಬದ್ಧ ಅಧಿಕಾರ ಮತ್ತು ಕರ್ತವ್ಯಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
- ಆದರೆ ಸೂಳೆಕೆರೆಯಂತಹ ಮಹತ್ವದ ಸಾರ್ವಜನಿಕ ಸಂಪತ್ತಿನ ಸಂರಕ್ಷಣೆಯಲ್ಲಿ ಇಲಾಖೆಗಳ ನಡುವೆ ಸಮನ್ವಯ, ಸ್ಪಷ್ಟ ಹೊಣೆಗಾರಿಕೆ ಮತ್ತು ಕಾಲಮಿತಿಯ ಕಾರ್ಯಯೋಜನೆ ಅತ್ಯಗತ್ಯವಾಗಿದೆ.
- ಒಂದು ಇಲಾಖೆ ಸರ್ವೆ ಮಾಡುವುದು, ಮತ್ತೊಂದು ಇಲಾಖೆ ವರದಿ ನೀಡುವುದು, ಮತ್ತೊಂದು ಇಲಾಖೆ ತೆರವು ಕ್ರಮ ಕೈಗೊಳ್ಳುವುದು ಮತ್ತು ನಂತರ ಮತ್ತೆ ಪರಿಶೀಲನೆ ನಡೆಯುವುದು ಮಾತ್ರದಿಂದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವುದಿಲ್ಲ.
ಖಡ್ಗ ಸಂಘಟನೆಯ ಬಿ. ಆರ್. ರಘು, ಷಣ್ಮುಖಯ್ಯ, ಕುಬೇಂದ್ರ ಸ್ವಾಮಿ, ಹೆಚ್. ಜಿ. ಶಶಿಕುಮಾರ್ ಮತ್ತಿತರರು ಹಾಜರಿದ್ದರು.






Leave a comment