SUDDIKSHANA KANNADA NEWS/ DAVANAGERE/ DATE:21-07-2023
ದಾವಣಗೆರೆ (Davanagere): ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಖಾಸಗಿ ವಾಹಿನಿಯ ಜಾತ್ರೆ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು. ಪುಟ್ಟಕ್ಕನ ಮಕ್ಕಳು, ಅಮೃತಧಾರೆ, ಶ್ರೀರಸ್ತು ಶುಭಮಸ್ತು ಧಾರಾವಾಹಿಗಳಲ್ಲಿನ ಪಾತ್ರಧಾರಿಗಳ ತಂಡ ದಾವಣಗೆರೆ ನಗರಕ್ಕೆ ಆಗಮಿಸಿತ್ತು. ಈ ವೇಳೆ ದಾವಣಗೆರೆಗೆ ಬಂದಾಗ ಅಭಿಮಾನಿಗಳಿಂದ ಸಿಕ್ಕ ಪ್ರೋತ್ಸಾಹ, ಪ್ರೀತಿ ಕುರಿತಂತೆ ಹಂಚಿಕೊಂಡಿತು.
ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಧನುಷ್, ಸಂಜನಾ ಬುರ್ಲಿ, ಅಕ್ಷರ, ಪವನ್ ಕುಮಾರ್ ಸೇರಿದಂತೆ ಇತರೆ ಕಲಾವಿದರು ಆಗಮಿಸಿದ್ದರು. ಶ್ರೀ ರಸ್ತು ಶುಭಮಸ್ತು ಧಾರವಾಹಿಯ ಅಜಿತ್ ಹಂಧೆ, ಸುಧಾರಾಣಿ, ಅರ್ಫಾ ಷರೀಫ್, ಶಶಿಧರ್, ಲಾವಣ್ಯ, ಶಶಿಧರ್, ನಕುಲ್, ದರ್ಶಿತ್, ಸದಾನಂದ್, ಸುಷ್ಮಿತಾ, ಗಜೇಂದ್ರ, ಅಮೃತಧಾರೆ ಧಾರವಾಹಿಯ ರಾಜೇಶ್, ಛಾಯಾಸಿಂಗ್, ಶಶಿ ಹೆಗ್ಡೆ, ಸಾರಾ ಅಣ್ಣಯ್ಯ ಸೇರಿದಂತೆ ಇತರೆ ಕಲಾವಿದರು ಆಗಮಿಸಿದ್ದರು. ಈ ವೇಳೆ ತಾವು ಧಾರವಾಹಿಯಲ್ಲಿ ನಟಿಸಿದಾಗ ಆದಾಗಿನ ಅನುಭವ ಹಂಚಿಕೊಂಡರು.
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ನಟಿಸುತ್ತಿರುವ ಸುಧಾರಾಣಿ ಮಾತನಾಡಿ, ಈ ಸೀರಿಯಲ್ ನಲ್ಲಿ ತುಳಸಿ ಪಾತ್ರ ಒಪ್ಪಿಕೊಳ್ಳುವಾಗ ಅಳುಕಿತ್ತು. ಸಮಾಜ ಏನೆಂದುಕೊಳ್ಳುತ್ತೋ, ಯಾವ ರೀತಿ ಸಮಾಜದಲ್ಲಿ ಪ್ರಭಾವ ಬೀರುತ್ತೆ ಎಂಬ ಅಂಜಿಕೆ ಇತ್ತು. ಯಾಕೆಂದರೆ ನನ್ನ ನಿಜ ಜೀವನದಲ್ಲಿ ನಡೆದ ಕೆಲ ಘಟನೆಗಳು ಈ ಕಥೆಯಲ್ಲಿ ಸೇರಿದೆ. ಹಾಗಾಗಿ, ವೈಯಕ್ತಿಕವಾಗಿಯೂ ಭಯವಿತ್ತು. ಬರುವ ಕಥೆಯಲ್ಲಿ ಕೆಲ ಸೂಕ್ಷ್ಮ ವಿಚಾರಗಳಿವೆ. ಆದ್ರೆ, ಈಗ ಈ ಭಯ ಇಲ್ಲ ಎಂದು ತಿಳಿಸಿದರು.
ತುಳಸಿ ಪಾತ್ರವು ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಆದ್ರೆ, ಇಂದಿನ ದಿನಗಳಲ್ಲಿ ಮಕ್ಕಳು ಪೋಷಕರನ್ನು ಬಿಟ್ಟು ಅಬ್ರಾಡ್ ಸೇರಿದಂತೆ ವಿದೇಶಗಳಲ್ಲಿ ಇರುತ್ತಾರೆ. ಇಲ್ಲಿರುವ ತಂದೆ ತಾಯಿಗಳ ಪರಿಸ್ಥಿತಿ ಏನು? ತುಳಸಿ ಪಾತ್ರ ತುಂಬಾನೇ ಖುಷಿ ಕೊಟ್ಟಿದೆ. ದಿನ ದಿನಕ್ಕೂ ಕಥೆಯನ್ನು ವೀಕ್ಷಕರು ಮೆಚ್ಚುತ್ತಿದ್ದಾರೆ. ಇಡೀ ತಂಡ ನನಗೆ ತುಂಬಾನೇ ಬೆಂಬಲ ನೀಡಿದೆ. ಇವರೆಲ್ಲರ ಸಹಕಾರದಿಂದ ಈ ಪಾತ್ರ ಇಷ್ಟು ಜನಪ್ರಿಯವಾಗಲು ಸಾಧ್ಯವಾಗಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:
Davanagere: ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ. ಆರ್. ಉಜ್ಜಿನಪ್ಪ ವಿಧಿವಶ: ಸಾಹಿತ್ಯ ಲೋಕದ ದಿಗ್ಬ್ರಮೆ, ದಿಗ್ಗಜರ ಸಂತಾಪಗಳ ಮಹಾಪೂರ
ಇನ್ನು ನಟಿ ಛಾಯಾ ಸಿಂಗ್ ಮಾತನಾಡಿ ಸಿನಿಮಾ ಹಾಗೂ ಧಾರವಾಹಿಯಲ್ಲಿ ನಟಿಸುವುದು ಬೇರೆ ಬೇರೆ ಎನಿಸುತ್ತಿಲ್ಲ. ಯಾಕೆಂದರೆ ಧಾರವಾಹಿಯ ಶೂಟಿಂಗ್ ನ ಒಂದೊಂದು ದಿನವೂ ನಮಗೆ ಒಂದು ಸಿನಿಮಾ ಇದ್ದಂತೆ. ಸಿನಿಮಾ ಹಾಗೂ
ಧಾರವಾಹಿಯ ನಡುವೆ ಸಮಯ ಮಾತ್ರ ವ್ಯತ್ಯಾಸ ಇರುತ್ತದೆ. ಎರಡೂವರೆ ಗಂಟೆಯಲ್ಲಿ ಸಿನಿಮಾ ಮುಗಿಯುತ್ತದೆ. ಆದ್ರೆ. ಸೀರಿಯಲ್ ನಲ್ಲಿ ಹಾಗಲ್ಲ. ಈಗ ಧಾರವಾಹಿಗಳು ಬರುತ್ತಿರುವುದನ್ನು ನೋಡಿದರೆ ಯಾವ ಸಿನಿಮಾಗಿಂತ ಕಡಿಮೆ ಏನಿಲ್ಲ. ಸೆಟ್ ದೊಡ್ಡದಿರುತ್ತದೆ. ತಾರಾಗಣವೂ ದೊಡ್ಡಿದಿದೆ. ಒಟ್ಟಿನಲ್ಲಿ ಅಮೃತಧಾರೆ ಧಾರವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಇದು ಖುಷಿ ಕೊಟ್ಟಿದೆ ಎಂದರು.
ರಾಜೇಶ್ ಮಾತನಾಡಿ, ಅಮೃತಧಾರೆ ಸೀರಿಯಲ್ ನಲ್ಲಿ ನಾನು ಮದುವೆಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ. ನಿಮ್ಮ ಅಪೇಕ್ಷೆಯಿದ್ದರೆ ಆಗುತ್ತೇನೆ ಬಿಡಿ. ಪುಟ್ಟಕ್ಕನ ಮಕ್ಕಳು, ಶ್ರೀರಸ್ತು ಶುಭಮಸ್ತು, ಅಮೃತಧಾರೆ ಧಾರವಾಹಿಯ ತಂಡಗಳು
ಒಂದೆಡೆ ಸೇರಿದ್ದು ಖುಷಿ ಕೊಟ್ಟಿದೆ. ಮಾತ್ರವಲ್ಲ, ಕಾಕತಾಳೀಯ ಎಂಬಂತೆ ಜಾತ್ರೆ ಕಲ್ಯಾಣೋತ್ಸವ ಎಂಬ ಹೆಸರಿಡಲಾಗಿದೆ. ಇಲ್ಲಿಗೆ ಭೇಟಿ ನೀಡಿದ್ದು, ಕಲಾವಿದರು ಸಿಕ್ಕಿದ್ದು ತುಂಬಾನೇ ಖುಷಿ ಕೊಟ್ಟಿದೆ ಎಂದರು.
ಧನುಷ್, ಸಂಜನಾ ಬುರ್ಲಿ, ಅಕ್ಷರ, ಪವನ್ ಕುಮಾರ್, ಸದಾನಂದ, ಸುಶ್ಮಿತಾ ಸೇರಿದಂತೆ ಹಲವರು ಮಾತನಾಡಿ, ನಮಗೆ ಧಾರವಾಹಿಯಲ್ಲಿ ನಟಿಸುತ್ತಿರುವುದರಿಂದ ಜನರು ಗುರುತಿಸುತ್ತಿದ್ದಾರೆ. ಹಸ್ತಲಾಘವ ಪಡೆಯುತ್ತಾರೆ, ಸೆಲ್ಫಿ ಫೋಟೋ ತೆಗೆಸಿಕೊಳ್ಳುತ್ತಾರೆ. ನಮಗೆ ಇಂಥದ್ದೊಂದು ಉತ್ತಮ ಅವಕಾಶವನ್ನು ಜಿ ಕನ್ನಡ ನೀಡಿದೆ. ಈ ಸಂಸ್ಥೆಗೆ ಋಣಿಯಾಗಿರುತ್ತೇವೆ ಎಂದರು.
ದಾವಣಗೆರೆ ಎಂದರೆ ಬೆಣ್ಣೆದೋಸೆ ಫೇಮಸ್. ದಾವಣಗೆರೆಗೆ ಹೋಗುತ್ತೇವೆ ಎಂದರೆ ಸಾಕು ಎಲ್ಲರೂ ಕೇಳುವುದು ಒಂದೇ. ಅಲ್ಲಿಗೆ ಹೋದರೆ ದಾವಣಗೆರೆ ಬೆಣ್ಣೆ ದೋಸೆ ತಿನ್ನದೇ ಹಾಗೆ ವಾಪಸ್ ಬರಬೇಡಿ ಎಂದು. ನಾವು ಇಲ್ಲಿಗೆ ಬಂದಿದ್ದೇವೆ. ಬೆಣ್ಣೆ ನಗರಿಯ ಬೆಣ್ಣೆ ಮನಸ್ಸುಗಳಿಗೆ ನಾವೆಲ್ಲರೂ ಇಷ್ಟವಾಗಿದ್ದೇವೆ. ಅವರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡುವ ಜೊತೆಗೆ ನಮ್ಮ ನಟನೆ ಸೇರಿದಂತೆ ಬೇರೆ ಏನಾದರೂ ಅಂಶಗಳನ್ನು ಒಳಗೊಳ್ಳಿಸಬೇಕಾ ಎಂಬ ಕುರಿತಂತೆ ಚರ್ಚಿಸಲು ಬಂದಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಲಾವಣ್ಯ, ಸಾರಾ ಅಣ್ಣಯ್ಯ, ಅಜಿತ್ ಹಂಧೆ, ನಕುಲ್, ಶಶಿಧರ್, ದರ್ಶಿತ್, ರಾಜೇಶ್, ಛಾಯಾಸಿಂಗ್ ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದರು.