SUDDIKSHANA KANNADA NEWS/ DAVANAGERE/ DATE:11-10-2023
ದಾವಣಗೆರೆ (Davanagere): ದಾವಣಗೆರೆ (Davanagere) ಜಿಲ್ಲೆಯಲ್ಲಿ ಒಂದಿಬ್ಬರು ನಾಯಕರು ಅಂತಾ ಇರೋದಿಲ್ಲ. ಸಚಿವರು, ಶಾಸಕರು ಮಾತ್ರ ನಾಯಕರಲ್ಲ, ಗ್ರಾಮ ಪಂಚಾಯಿತಿ ಸದಸ್ಯ, ಸಮಾಜದ ಮುಖಂಡರು ನಾಯಕರೇ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ. ಬಿ. ವಿನಯ್ ಕುಮಾರ್ ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
Read Also This Story:

Bhadra Dam: ಭದ್ರಾ ಡ್ಯಾಂನಲ್ಲಿ ನೀರಿನ ಸಂಗ್ರಹ ಎಷ್ಟಿದೆ ಗೊತ್ತಾ…? ಬಲದಂಡೆ ನಾಲೆಯಲ್ಲಿ ಎಷ್ಟು ಕ್ಯೂಸೆಕ್ ಹೊರಹರಿವಿದೆ…?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ಸಾವಿರ ಪಟ್ಟಷ್ಟಿದೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಯಾರಿಗೆ ನೀಡಿದರೂ ಗೆಲುವಿಗೆ ಶ್ರಮಿಸುತ್ತೇನೆ. ಅದೇ ರೀತಿಯಲ್ಲಿ ನನಗೆ ಟಿಕೆಟ್ ಸಿಕ್ಕರೆ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. ನನಗೆ ಟಿಕೆಟ್ ಸಿಕ್ಕ ಬಳಿಕ ಗೆಲ್ಲಿಸಲು ಶ್ರಮಿಸದಿದ್ದರೆ ಪಕ್ಷ ವಿರೋಧಿ ಚಟುವಟಿಕೆ ಆದಂತೆ ಆಗುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವನು ನಾನು. ಪ್ರಜೆಗಳೇ ಪ್ರಭುತ್ವ. ಅವರ ಸಹಕಾರ, ಆಶೀರ್ವಾದ, ಪ್ರೀತಿ, ವಿಶ್ವಾಸದಿಂದಲೇ ನಾಯಕರಾಗಿರುವುದು. ಜನರ ಪ್ರಭುಗಳು. ಪ್ರಜಾತಂತ್ರ ವ್ಯವಸ್ಥೆಯಡಿ ನಾನು ಟಿಕೆಟ್ ಕೇಳುತ್ತಿದ್ದೇನೆ.
ಅದರಲ್ಲಿ ತಪ್ಪೇನಿದೆ? ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಹೋದ ಕಡೆಗಳಲ್ಲಿ ಜನರ ಪ್ರೀತಿ, ವಿಶ್ವಾಸ ಸಿಗುತ್ತಿದೆ. ದುಡ್ಡು ಕೊಟ್ಟರೆ ಇದು ಸಿಗುವುದಿಲ್ಲ. ನನಗಿಂತ ಹೆಚ್ಚು ಹಣ ಹೊಂದಿರುವ ಶ್ರೀಮಂತರು ಜಿಲ್ಲೆಯಲ್ಲಿದ್ದಾರೆ. ಜನರ ಪ್ರೀತಿ, ವಿಶ್ವಾಸ ಗಳಿಸಬೇಕು. ಯಾರೇ ಆಗಲಿ, ಜನರ ಬಾಯಲ್ಲಿ ಹೆಸರು ಕೇಳುವಂತಿರಬೇಕು. ಎಲ್ಲೆಡೆ ಓಡಾಡುತ್ತಿದ್ದೇನೆ. ಪಕ್ಷ ಸಂಘಟನೆಗೆ ನನ್ನಿಂದ ಎಲ್ಲಿಯೂ ನಷ್ಟ ಆಗಿಲ್ಲ. ಲಾಭ ಆಗುತ್ತಿದೆ ಎಂದು ತಿಳಿಸಿದರು.
ಸಚಿವರು, ಶಾಸಕರನ್ನೇ ಕೇಳಿ…!
ಕಳೆದ ಎರಡು ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಆಗ ಜಿಲ್ಲೆಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಈ ವೇಳೆ ಹಾಜರಿದ್ದರು. ದಾವಣಗೆರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಯಾರಿಗೆ ಟಿಕೆಟ್ ನೀಡಬೇಕೆಂಬ ವಿಚಾರ ಬಂದಾಗ ಮೊದಲು ಹೆಸರು ಪ್ರಸ್ತಾಪ ಆಗಿದ್ದೇ ನನ್ನದು. ಸಿಎಂ ಸಿದ್ದರಾಮಯ್ಯರ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಓಡಾಡುತ್ತಿದ್ದೇನೆ. ಪಕ್ಷದ ಮುಖಂಡರು, ಕಾರ್ಯಕರ್ತರ ಭೇಟಿ ಮಾಡುತ್ತಿದ್ದೇನೆ. ಅವರೊಟ್ಟಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ರಾಜ್ಯ ವರಿಷ್ಟರ ಸೂಚನೆ ಮೇರೆಗೆ ಪ್ರವಾಸ ಮಾಡುತ್ತಿದ್ದು, ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ಇದೆ. ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬೇರೆ ಪಕ್ಷಕ್ಕೆ ಹೋಗುವ ಆಲೋಚನೆ ಇಲ್ಲ. ನಾನು ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ ಎಂದರು.
ನನಗೆ ಟಿಕೆಟ್ ಸಿಗುವ ವಿಶ್ವಾಸ ಸಾವಿರ ಪಟ್ಟು ಇದೆ. ಬೇರೆಯವರಿಗೆ ಟಿಕೆಟ್ ಕೊಟ್ಟರೆ ಗೆಲುವಿಗೆ ಶ್ರಮಿಸುತ್ತೇನೆ. ನಾನೇನೂ ಹೆಚ್ ಬಿ ಮಂಜಪ್ಪ ವಿರೋಧಿ ಅಲ್ಲ. ಅವರ ಬಳಿಯೂ ಮಾತನಾಡಿದ್ದೇನೆ. ಬೆಂಬಲಿಸುವುದಾಗಿ ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ತಾಯಿ ಇದ್ದ ಹಾಗೆ. ಕಾರ್ಯಕರ್ತರು, ಮುಖಂಡರು ಇದ್ದಾರೆ. ನನಗೆ ಟಿಕೆಟ್ ಸಿಕ್ಕ ಬಳಿಕ ವಿರೋಧವಾಗಿ ಕೆಲಸ ಮಾಡಿದರೆ ಪಕ್ಷದ್ರೋಹ ಮಾಡಿದಂತೆ. ಜಿಲ್ಲೆಗೆ ಇಬ್ಬರು ನಾಯಕರು ಮಾತ್ರ ಇರೋದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯ, ಮುಖಂಡರು, ಸಮಾಜದ ಮುಖಂಡರೂ ನಾಯಕರೇ ಎಂದು ತಿಳಿಸಿದರು.
ಎಸ್. ಎಸ್., ಎಸ್ ಎಸ್ ಎಂ ಭೇಟಿಯಾಗ್ತೇನೆ:
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಫೋನ್ ಮಾಡಿದ್ದೆ. ಟಿಕೆಟ್ ವಿಚಾರ ಸಂಬಂಧ ಮಾತನಾಡಿದ್ದೆ. ಆಗ ಅವರು ಕ್ಷೇತ್ರದಲ್ಲಿ ಕೆಲಸ ಮಾಡಿ, ಓಡಾಡಿ
ಎಂದಿದ್ದರು. ಆ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದ ಸಂಚರಿಸುತ್ತಿದ್ದೇನೆ. ಇನ್ನೊಂದು ವಾರದೊಳಗೆ ಸಚಿವ ಮಲ್ಲಿಕಾರ್ಜುನ್ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಮಂಜಪ್ಪರಿಗೆ ಟಾಂಗ್:
ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪರ ಪ್ರೀತಿ ವಿಶ್ವಾಸ ಗಳಿಸಿ ಅವರ ಆಶೀರ್ವಾದ ಪಡೆಯುತ್ತೇನೆ. ಅವರೂ ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ. ಚನ್ನಯ್ಯ ಒಡೆಯರ್ ರ ಪುತ್ರ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ.
ಮಂಜಪ್ಪರು ಟಿಕೆಟ್ ಆಕಾಂಕ್ಷಿಗಳು ಎಂದಿದ್ದಾರೆ. ನಾನು ಬಹಿರಂಗವಾಗಿ ಮಾತನಾಡುತ್ತಿದ್ದೇನೆ. ಅವರು ಹೇಳಿಲ್ಲ. ಟಿಕೆಟ್ ಆಕಾಂಕ್ಷಿಯಾಗಿರುವ ಕಾರಣ ಮಂಜಪ್ಪ ಯಾರ್ಯಾರೋ ಬಂದು ಆಕಾಂಕ್ಷಿ ಎಂದು ಓಡಾಡುತ್ತಿದ್ದಾರೆ ಎಂಬ ಹೇಳಿಕೆ
ನೀಡಿರುವುದು ಗಮನಿಸಿದ್ದೇನೆ. ನಾನೇನೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಮಂಜಪ್ಪರ ಭೇಟಿಯಾಗಿ ಮಾತನಾಡಿದ್ದೇನೆ. ಬೆಳಗಾವಿಯಲ್ಲಿಯೂ ವೈಯಕ್ತಿಕವಾಗಿ ಭೇಟಿಯಾಗಿದ್ದೆ. ಅವರೇನೂ ರಾಜಕೀಯ ವಿರೋಧಿ ಅಲ್ಲ. ನಾನು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಹೊಂದಿದ್ದೇನೆ. ನನ್ನ ಮೊಬೈಲ್ ನಂಬರ್ ಪರಿಶೀಲಿಸಿದರೆ ಗೊತ್ತಾಗುತ್ತದೆ ಎಂದು ಹೆಚ್. ಬಿ. ಮಂಜಪ್ಪರಿಗೆ ಟಾಂಗ್ ನೀಡಿದರು.
ರಾಜಕಾರಣದಲ್ಲಿರುವವರ ಸಮಾಜ ಸೇವೆ ಏನು…?
ರಾಜಕಾರಣಕ್ಕೆ ಸಮಾಜ, ಸಮಾಜಸೇವೆ, ರಾಜಕೀಯ ಸೇವೆ ಮೂರು ಮುಖ್ಯ. ಐಎಎಸ್ ತರಬೇತಿ ಸಂಸ್ಥೆ ನಡೆಸುವ ಮೂಲಕ ಸಾವಿರಾರು ಅಧಿಕಾರಿಗಳನ್ನು ಕೊಟ್ಟಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲಿ ನನ್ನ ಕೈಯಲ್ಲಾದಷ್ಟು ಸಮಾಜಸೇವೆ. ಮಾಡಿದ್ದೇನೆ. ರಾಜಕಾರಣದಲ್ಲಿ ಬೆಳೆದವರ ಸಮಾಜ ಸೇವೆ ಏನು…? ಎಂಬುದು ಚರ್ಚೆಯಾಗಬೇಕು. ಮಣಿಪುರದ ನೂರು ವಿದ್ಯಾರ್ಥಿಗಳಿಗೆ ಒಂದು ಕಾಲು ಕೋಟಿ ರೂಪಾಯಿ ಖರ್ಚು ಮಾಡಿ ವಿದ್ಯಾಭ್ಯಾಸ ನೀಡಿದ್ದೇನೆ. ಎಸ್ಸಿ, ಎಸ್ಟಿ ನೂರು ವಿದ್ಯಾರ್ಥಿಗಳಿಗೆ ಸಂಸ್ಥೆ ಮೂಲಕ ತರಬೇತಿ ನೀಡಿದ್ದೇವೆ. ದೇಶದಲ್ಲಿ ಐಎಎಸ್ ನಲ್ಲಿ ಕರ್ನಾಟಕ ಹಬ್ ಆಗುವಂತೆ ಮಾಡಿರುವುದು ನಮ್ಮ ಸಂಸ್ಥೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ಯಾರೂ ಬೇಕಾದರೂ ಆಕಾಂಕ್ಷಿಗಳಾಗಬಹುದು. ದುಡ್ಡು ಖರ್ಚು ಮಾಡಿ ಪ್ರೀತಿ ಗಳಿಸಿಲ್ಲ. ಕೆಲಸ, ಸಾಧನೆ ಮಾಡಿದರೆ ಮಾತ್ರ ಪ್ರೀತಿ ವಿಶ್ವಾಸ ಗಳಿಸುತ್ತೇವೆ. ಈ ಕೆಲಸ ನಾನು ಮಾಡುತ್ತಿದ್ದೇನೆ. ಎರಡು ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯರು ನನಗೆ ವೈಯಕ್ತಿಕವಾಗಿ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಕ್ಷೇತ್ರಾದ್ಯಂತ ಸಂಚರಿಸಿ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದೇನೆ. ಸಿದ್ದರಾಮಯ್ಯರು ರಾಜಕಾರಣ ಪ್ರವೇಶಿಸಿದಾಗಲೂ ಏನೂ ಇರಲಿಲ್ಲ. ಅವರು ಹೋರಾಟದಿಂದಲೇ ಈ ಮಟ್ಟಕ್ಕೆ ಬೆಳೆದಿದ್ದಾರೆ. ನನಗೆ ಗೊತ್ತಿರುವ ಪ್ರಕಾರ ಶಾಮನೂರು ಶಿವಶಂಕರಪ್ಪರು 63 ನೇ ವರ್ಷಕ್ಕೆ ರಾಜಕಾರಣಕ್ಕೆ ಬಂದವರು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಇಲ್ಲ. ಆರೋಗ್ಯಕರ ಸ್ಪರ್ಧೆ ಇರುತ್ತದೆ. ನಾನು ಯಾರ ವಿರುದ್ಧವೂ ಹೋರಾಡುತ್ತಿಲ್ಲ. ನಾನು ಟಿಕೆಟ್ ನೀಡಿ ಎಂದು ಕೇಳುತ್ತಿದ್ದೇನೆ. ಒಬ್ಬರೇ ಆಕಾಂಕ್ಷಿ ಇರಬೇಕೆಂದೇನಿಲ್ಲ. ಚುನಾವಣೆ ರೇಸ್ ಎಲ್ಲರಿಗೂ ಓಪನ್ ಆಗಿರುತ್ತದೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ಗೆದ್ದೇ ಗೆಲ್ಲುತ್ತಾರೆ. ಅವರಿಗೆ ಟಿಕೆಟ್ ಕೊಟ್ಟರೆ ಸಂತೋಷ. ಇಲ್ಲದಿದ್ದರೆ ನಾನು ಸಹ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದು ವಿನಯ್ ಕುಮಾರ್ ಹೇಳಿದರು.
ಟಿಕೆಟ್ ಆಕಾಂಕ್ಷಿಯಾಗುವವರು ಓಡಾಡಲಿ. ಎಲ್ಲಾ ಮುಖಂಡರ ಭೇಟಿ ಮಾಡಲಿ. ಜನರು ಯಾರ ಪರ ಹೆಚ್ಚು ಒಲವು ತೋರುತ್ತಾರೋ ಅವರಿಗೆ ಟಿಕೆಟ್ ಸಿಗಲಿ. ಬೇರೆಯವರ ಹೆಸರು ಜನರ ಬಾಯಿಂದ ಬಂದರೆ ನಿಮ್ಮ ಪರ ನಾನು ಕೆಲಸ ಮಾಡುತ್ತೇನೆ. ನನಗೆ ಟಿಕೆಟ್ ಸಿಕ್ಕರೆ ನೀವು ನನ್ನ ಪರ ಕೆಲಸ ಮಾಡಿ ಎಂದು ಮನವಿ ಮಾಡಿದರು.