Home ಕ್ರೈಂ ನ್ಯೂಸ್ ದಾವಣಗೆರೆ ವಿದ್ಯಾನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ; ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 5 ಆರೋಪಿಗಳ ಬಂಧನ, 6.50 ಲಕ್ಷ ರೂ. ಮೌಲ್ಯದ ಸ್ವತ್ತು ವಶ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ ವಿದ್ಯಾನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ; ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 5 ಆರೋಪಿಗಳ ಬಂಧನ, 6.50 ಲಕ್ಷ ರೂ. ಮೌಲ್ಯದ ಸ್ವತ್ತು ವಶ!

Share
ದಾವಣಗೆರೆ
Share

ದಾವಣಗೆರೆ: ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ, ಮನೆಗೆ ನುಗ್ಗಿ ಚಿನ್ನದ ಸರ ಸುಲಿಗೆ ಹಾಗೂ ಕಲ್ಯಾಣ ಮಂಟಪದಲ್ಲಿ ಬೆಳ್ಳಿ ತಟ್ಟೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿ, ಒಟ್ಟು 6.50 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ ., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ ಹೆಗಡೆ ಹಾಗೂ ನಗರ ಉಪವಿಭಾಗದ ಡಿವೈಎಸ್ಪಿ ಶರಣ ಬಸವೇಶ್ವರ ಬಿ ಅವರ ಮಾರ್ಗದರ್ಶನದಲ್ಲಿ, ವಿದ್ಯಾನಗರ ಠಾಣೆಯ ಇನ್ಸ್ಪೆಕ್ಟರ್ ಶಿಲ್ಪಾ ವೈ.ಎಸ್, ಪಿಎಸ್ಐಗಳಾದ ಸಚಿನ್ ಬಿರಾದಾರ, ನಾಗರಾಜ ಜಿ ಹಾಗೂ ಸಿಬ್ಬಂದಿಗಳ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

1. ನಾಲ್ಕು ಬೈಕ್‌ಗಳ ಕಳ್ಳತನ: ಶಿವಮೊಗ್ಗದ ಇಬ್ಬರು ಖದೀಮರ ಬಂಧನ

ಮಾರ್ಚ್ 3ರಂದು ಹದಡಿ ರಸ್ತೆಯ ಹೋಟೆಲ್ ಮುಂಭಾಗ ನಿಲ್ಲಿಸಿದ್ದ ಟಿವಿಎಸ್ ಎಂಟಾರ್ಕ್ ಸ್ಕೂಟರ್ ಕಳ್ಳತನವಾಗಿರುವ ಬಗ್ಗೆ ಬೀರೇಶ್ ಎಂಬುವವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಶಿವಮೊಗ್ಗ ಮೂಲದ ಸಾದಿಕ್ ಉಲ್ಲಾ ಖಾನ್ @ ಪೈರೋಜ್ ಸನಾವುಲ್ಲಾ ಖಾನ್ (32) ಮತ್ತು ಸೈಯ್ಯದ್ ಹುಸೇನ್ (29) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ 4 ಲಕ್ಷ ರೂ. ಮೌಲ್ಯದ 4 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಂದ ವಿದ್ಯಾನಗರ, ದಾವಣಗೆರೆ ರೈಲ್ವೆ ನಿಲ್ದಾಣ ಹಾಗೂ ಬೆಳಗಾವಿಯ ಮಾರಿಹಾಳ ಠಾಣಾ ವ್ಯಾಪ್ತಿಯ ತಲಾ ಎರಡು ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

2. ಮನೆಗೆ ನುಗ್ಗಿ ಚಿನ್ನದ ಸರ ಸುಲಿಗೆ: ಮಹಿಳೆ ಸೇರಿ ಇಬ್ಬರು ಅರೆಸ್ಟ್

ಏಪ್ರಿಲ್ 18ರಂದು ಲೀಲಾವತಿ ಎಂಬ ಮಹಿಳೆ ಮನೆಯಲ್ಲಿ ಮಲಗಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಸುಲಿಗೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ದಾವಣಗೆರೆಯ ಶ್ರೀಮತಿ ರಂಜಿತಾ ಎಮ್ (30) ಹಾಗೂ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಅಭಿಷೇಕ್ ಎಮ್ @ ಅಭಿ (28) ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ 80 ಸಾವಿರ ರೂ. ಮೌಲ್ಯದ 08.010 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

3. ಕಲ್ಯಾಣ ಮಂಟಪದಲ್ಲಿ ಬೆಳ್ಳಿ ಆರತಿ ತಟ್ಟೆ ಕದ್ದ ಕಿಲಾಡಿ ಮಹಿಳೆ ಬಂಧನ

ಮೇ 10ರಂದು ಬಾಪೂಜಿ ಸಮುದಾಯ ಭವನದಲ್ಲಿ ನಡೆದಿದ್ದ ಹನುಮಂತಪ್ಪ ಎಂಬುವವರ ಮಗನ ಮದುವೆಯಲ್ಲಿ ಸುಮಾರು 300 ಗ್ರಾಂ ತೂಕದ ಬೆಳ್ಳಿ ಆರತಿ ತಟ್ಟೆ ಕಳ್ಳತನವಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು, ಶಿವಮೊಗ್ಗ ಮೂಲದ ರೇವತಿ ಆರ್.ಪಿ (46) ಎಂಬಾಕೆಯನ್ನು ಬಂಧಿಸಿ, ಆಕೆಯಿಂದ 50,000 ರೂ. ಮೌಲ್ಯದ 324 ಗ್ರಾಂ ತೂಕದ ಬೆಳ್ಳಿಯ ಆರತಿ ತಟ್ಟೆಯನ್ನು ರಿಕವರಿ ಮಾಡಿದ್ದಾರೆ.

ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಹೆಡೆಮುರಿ ಕಟ್ಟಿದ ವಿದ್ಯಾನಗರ ಪೊಲೀಸ್ ನಿರೀಕ್ಷಕಿ ಶಿಲ್ಪಾ ವೈ.ಎಸ್. ಮತ್ತು ಇಡೀ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles