ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere:ರುದ್ರವ್ವನ ಸಾವಿಲ್ಲದ ಬದುಕು! ಕುತೂಹಲಕಾರಿ ಸ್ಟೋರಿ ನೀವು ಓದ್ಲೇಬೇಕು

On: June 12, 2023 8:43 AM
Follow Us:
Davanagere
---Advertisement---

SUDDIKSHANA KANNADA NEWS/ DAVANAGERE/ DATE:12-06-2023

ದಾವಣಗೆರೆ (Davanagere) .

ಅದು ಇನ್ನು ಭಾರತ ದೇಶ ಸ್ವಾತಂತ್ರ್ಯ ಕಾಣದ ಸುಮಾರು 1934-35 ರ ಕಾಲಘಟ್ಟ!

ರುದ್ರಿ ಮೈನೆರೆಯುವ ಮೊದಲೇ ಹೆತ್ತವ್ವನ ಕಳೆದುಕೊಂಡಿದ್ದಳು. ಅವಳಿಗೆ ಆಗ ಹತ್ತು ವರ್ಷವೂ ತುಂಬಿರದ ಎಳೆ ವಯಸ್ಸು. ಬುಸ್ಸೇನಹಳ್ಳಿಯ ಗಿರಿಯಪ್ಪ ಮತ್ತು ಚನ್ನಬಸವ್ವನಿಗೆ ರುದ್ರಿ ಒಬ್ಬಳೇ ಮಗಳು. ಅವಳ ನಂತರ ಏಳು-ಎಂಟು ವರ್ಷಗಳ  ಅಂತರದಲ್ಲಿ ಹುಟ್ಟಿದ ಇಬ್ಬರು ಗಂಡು ಮಕ್ಕಳು ರುದ್ರಿಯ ತಮ್ಮಂದಿರು. ಅದರಲ್ಲಿ ಒಬ್ಬ ತಮ್ಮನಿಗೆ ಒಂದು ಕಣ್ಣು ಇರಲಿಲ್ಲ. ತಾಯಿ ಸತ್ತ ಮೇಲೆ ಎಳೆ ವಯಸ್ಸಿಗೇ ರುದ್ರಿ, ತನ್ನ ಇಬ್ಬರು ತಮ್ಮಂದಿರಿಗೂ ಅವ್ವ ಆದಳು. ದವಸ ಧಾನ್ಯ ಕೇರಿ ತೂರಿ ಶುದ್ಧಗೊಂಡ ದವಸವನ್ನು ಬೀಸುಕಲ್ಲಿಗೆ ಹಾಕಿ, ಬೀಸಿ ಸಾಣಿಸಿ ಹಿಟ್ಟು ಮಾಡಿ ಬಾಲೆ ರುದ್ರಿಯು ತಮ್ಮಂದಿರಿಗೆ ಅಪ್ಪನಿಗೆ ಉಣಿಸಿ ತಾನೂ ಉಣ್ಣುತಿದ್ದಳು!

ಆಗ ಹೆಣ್ಣು ಒಬ್ಬಳೇ ಇದ್ದರೂ, ಹುಣ್ಣು ಎಂದು ಭಾವಿಸುತಿದ್ದ ಕಾಲ. ಬಾಲ್ಯ ವಿವಾಹ ಪದ್ಧತಿ ಬೇರೆ ಬಹಳವಾಗಿ ಸಮಾಜದಲ್ಲಿ ಇತ್ತು. ಅಂದಿನ ಸಾಮಾಜಿಕ ಪರಿಸ್ಥಿತಿಗೆ ಸರಿಯಾಗಿ ಗಿರಿಯಪ್ಪ ತನ್ನ ಮಗಳು, ರುದ್ರಿಯನ್ನು ತನ್ನ ಹೆಂಡತಿಯ ತಮ್ಮಂದಿರಲ್ಲಿ ಎರಡನೆಯವನಾದ ಬಸಪ್ಪನಿಗೆ ಲಗ್ನ ಮಾಡಿಕೊಟ್ಟಿದ್ದನು. ತವರಿನ ತಮ್ಮಂದಿರನ್ನು ನೋಡಿಕೊಳ್ಳಬೇಕು, ಏನೇ ತನಗೆ ಅಜ್ಜಿಯ ಮನೆಯಾದರೂ ತಾಯಿ ಸತ್ತ ಮೇಲೆ ಆ ಬಾಂಧವ್ಯದ ಮಮತೆಯ ಗಾಢತೆ ಅಷ್ಟು ಸ್ಪರ್ಶಿತ ಇರದು ಎನ್ನುವಂತೆ ರುದ್ರಿ, ಚನ್ನಗಿರಿ ತಾಲ್ಲೂಕಿನ ಮಾಚನಾಯಕನಹಳ್ಳಿಯ ತನ್ನ ಪತಿ ಮನೆಗೆ (ತನ್ನ ಅಜ್ಜಿಯ ಮನೆಗೆ) ಮೊಮ್ಮಗಳೇ ಸೊಸೆಯಾಗಿ ಬಂದರೂ, ತನ್ನೆಲ್ಲಾ ಆನಂದವನ್ನು ತನ್ನ ನಿತ್ಯ ದುಡಿಮೆಯ ಗೈಮೆಯಲ್ಲೇ ಕಾಣುವ ಅಪ್ಪಟ ಗರತಿಯೇ ಆದಳು. ಮನೆ ಬೆಳಗುವ ಹಣತೆಯಾದಳು.

ಈ ಸುದ್ದಿಯನ್ನೂ ಓದಿ: 

Davanagere: ದಾವಣಗೆರೆಯ ಹಳ್ಳಿ ಬೆಡಗಿ ಮಿಸ್ಸೆಸ್ ಯೂನಿವರ್ಸ್ ಇಂಡಿಯಾ ಆದದ್ದೇ ರೋಚಕ…! ಹೆಣ್ಣುಮಕ್ಕಳಿಗೆ ಸ್ಫೂರ್ತಿ ತುಂಬುವ ಸ್ಪೆಷಲ್ ಸ್ಟೋರಿ

ರುದ್ರಿಗೆ ತನ್ನ ಪತಿ, ಉಳಿದಿಬ್ಬರು ಪತಿಯ ಸಹೋದರರು ತನಗೆ ಸೋದರಮಾವಂದಿರೇ ಆಗಿದ್ದರು. ಆದರೂ ರುದ್ರಿ ಅವರೆಲ್ಲರೂ ಸದಾ ಜೊತೆಗೂಡಿ ಇರಬೇಕೆಂಬ ಮಹದಾಸೆಯಿಂದ, ಇದ್ದ ಅವಿಭಕ್ತ ಕುಟುಂಬವನ್ನು ಸ್ವಲ್ಪವೂ ಒಡಕಾಗದಂತೆ ತನ್ನ ಹೃತ್ಪೂರ್ವಕ ಸೇವೆ ಬರೀ ಸಮರ್ಪಣೆಯಿಂದ ಬೆಸೆದಳು. ಆದರೆ ತನ್ನ ಇಡೀ ಮನೆತನಕ್ಕೆ ವಂಶದ ಕುಡಿಗಳು ಉಳಿದ ಇಬ್ಬರು ಸೋದರ ಮಾವಂದಿರಿಂದ ಹುಟ್ಟಲಿಲ್ಲದ್ದಕ್ಕೆ ತನ್ನ ಓರೆಗಿತ್ತಿಯರನ್ನು ಹೀಯಾಳಿಸದೆ, ಒಂದಿಷ್ಟೂ ಅವರನ್ನು ನೋಯಿಸದೆ ಅವರಿಗೇ ತಗ್ಗಿ ಬಗ್ಗಿ ನಡೆಯುತ್ತಾ, ತನ್ನ ಹೊಟ್ಟೆಯಲ್ಲಿ ಹುಟ್ಟಿದ 12 ಮಕ್ಕಳಲ್ಲಿ ಜೀವಂತ ಉಳಿದ ಮೂರು ಗಂಡು, ಐದು ಹೆಣ್ಣು ಮಕ್ಕಳಿಗೆ ತಾಯಾದರೂ ತಾಯ್ಮಮತೆಯ ಸವಿ ತನ್ನ ಓರೆಗಿತ್ತಿಯರು ಅನುಭವಿಸಲೆಂದು ತನ್ನೆಲ್ಲ ಮಕ್ಕಳನ್ನೂ ಅವರ ಮಡಿಲಿಗೆ ತುಂಬಿ ಮೂರು ಜನರನ್ನೂ ಸಮಾನವಾಗಿ ಅವ್ವ,,,ಅವ್ವ,,,ಅವ್ವ ಎಂದು ತನ್ನ ಮಕ್ಕಳು ಪ್ರೀತಿಯಿಂದ ಕರೆಯುವಂತೆ ಮಾಡಿ,,,, ತಾನು ಬರೀ ಆ ಮನೆಗೆ ಸೇವೆಗೈವ ಬರೀ ತಾಯಾದಳು.

ರುದ್ರಿ ತುಂಬು ಪ್ರಾಯಕ್ಕೆ ಬರುವುದರೊಳಗೆ ಎಲ್ಲರಿಗೂ ಸೇವೆಗೆ ಒದಗುವ ಬರೀ ಮಮತೆಯಾದಳು. ರುದ್ರತೆಯ ಗುಣವೇ ಇರದ ವಿಪರ್ಯಾಸದ ಹೆಸರಲ್ಲಿದ್ದ ರುದ್ರವ್ವ ಶಾಂತಿ ಪ್ರೀತಿ ಕರುಣೆಯ ಖನಿಯಾದಳು. ವರವಾದಳು. ಬರೀ ಅವ್ವ ಅನ್ನಿಸಿದಳು. ನಿಜದ ಹೆಣ್ಣಾಗಿ, ಇಡೀ ಮನೆಗೆ ಮಿಡಿಯುವ ಕರುಳು ಅನ್ನಿಸಿದಳು. ರುದ್ರವ್ವನ ಮಕ್ಕಳು ತಮ್ಮ ಹಡೆದವ್ವ ಯಾರೆಂಬುದನ್ನೇ ಅರಿಯದಷ್ಟು ಆಲದ ಮರದ ಭಾವದಲ್ಲಿ ಇಡೀ ಮನೆಗೇ ಮಕ್ಕಳಾದರು.

Davanagere

ದೊಡ್ಡಪ್ಪ ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ, ಅಜ್ಜ ಅಜ್ಜಿ, ಸೋದರಮಾವಂದಿರು, ಅತ್ತೆಯಂದಿರು ಹೀಗೆ ಎಲ್ಲರಿಗೂ ಮಲತಾಯಿ, ಮಲತಂದೆ , ಮಲಮಕ್ಕಳು ಎಂಬ ಭೇದಭಾವವೇ ಬರದಂತೆ ಇಡೀ ಮನೆಯ ಪ್ರೀತಿಯ ಮಕ್ಕಳೆನ್ನಿಸಿದರು. ಆ ಮನೆ ಎಂದೂ ಇಟ್ಟಿಗೆ ಮಣ್ಣಿನ ಕಟ್ಟಡ ಅನ್ನಿಸದೆ ಎಲ್ಲರಿಗೂ ಜೀವ ಪ್ರೀತಿ ಮಿಡಿಸುವ ಮಮತೆಯ ಒಡಲೇ ಅನ್ನಿಸಿತ್ತು!  ಇಡೀ ಮನೆಯ ಜೀವನಾಡಿಯೇ ತಾನಾದಂತೆ ಎಲ್ಲರ ಬಯಕೆ ಅರಿತು,, ಇತರರ ತಣಿಸುವುದೇ ತನ್ನ ಬಯಕೆ ಎಂಬಂತೆ ರುದ್ರವ್ವ ದುಡಿದಳು. ತನ್ನ ಹೊಟ್ಟೆ ಬಟ್ಟೆ ತಲೆ ಕೂಡ ಮರೆತಳು.

ಕಾಲಾಂತರದಲ್ಲಿ ಮಕ್ಕಳು ಮದುವೆಯಾಗಿ ನಾಲ್ಕು ಕಡೆ ಚದುರಿ ಹೋದರು. ಮಕ್ಕಳಿಗೆ ಅವಶ್ಯವಿದ್ದಾಗೆಲ್ಲಾ, ಬಿದ್ದಾಗಲೆಲ್ಲಾ ರುದ್ರವ್ವ ಬಂದು ಬಂದು ನೋಡಿದಳು; ಬೇಕಾದ ಆರೈಕೆ ಮಾಡಿದಳು. ಹೋಗಿ ನಿಲ್ಲಲಾರದ ಮಕ್ಕಳ ನೆಲೆಯಿಂದ ಬಿದ್ದ ಮಕ್ಕಳನ್ನೇ ತನ್ನ ಮನೆಗೇ ಕರೆತಂದು ಆರೈದು ಪೋಷಿಸಿದಳು. ಇದು ಎಂದಿಗೂ ತಪ್ಪದ ರುದ್ರವ್ವನಿಗೆ ದೇವರು ಬರೆದ ಕರ್ಮ ಆಗಿದ್ದರೂ ಅದನ್ನೇ ತನ್ನ ಪ್ರೀತಿ ಧರ್ಮ ಎಂಬಂತೆ ಮಾಡಿದಳು.

ಕಾಲ ಕ್ರಮೇಣ ಮನೆಯ ಹಿರಿಯ ತಲೆಗಳೆಲ್ಲಾ ನೆಲದ ರಿಣದಿಂದಲೇ ಮುಕ್ತವಾದವು. ಉಳಿದದ್ದು ಸೋ ಅನ್ನದೆ ಬಾಲಕಿಯಾಗಿದ್ದಾಗಿಂದ ಮರಿಮೊಮ್ಮಕ್ಕಳ ಬಾಣಂತನ ಆರೈಕೆ ತನಕವೂ ಮಿಡಿದು ಮಾಡಿದ ರುದ್ರವ್ವ ಮಾತ್ರ! ಹಣ್ಣಾದರೂ ಹೊಕ್ಕಳಲ್ಲಿ ಸದಾ ಗುಂಟು ಕಲ್ಲು ಹಾರೆ ಮುಂಡಿ ಇರಿಸಿ, ಬೀಳುತಿದ್ದ ಭಟ್ಟಿಗೆ ತನಗಾದ ರೀತಿಯಲ್ಲಿ ತಾನೇ ಸಾಂತ್ವನ ಕಂಡು ಕೊಳ್ಳುತ್ತಾ ಮನೆ ಮಂದಿಗೆಲ್ಲಾ ಶೀತ ಕೆಮ್ಮು ನೆಗಡಿಗೂ ಒದಗಿ, ಕಿವಿ ಮೂಗು ಕೂಡ ನೋಯದಂತೆ, ಸೋರದಂತೆ ಸಿಡಿಯುವ ತನ್ನ ತಲೆಗೆ ಬಟ್ಟೆ ಪಟ್ಟಿ ಕಟ್ಟಿಕೊಂಡೇ ಉಪಚರಿಸುತಿದ್ದ ಸದಾ ಇತರರ ಜೀವ ಜೀವನದ ತಣಿವಿಗಾಗೇ ನಡೆಯಾಗಿದ್ದ ರುದ್ರವ್ವನ ಹೊಟ್ಟೆಯ ಕರುಳೆಲ್ಲ ಸುಟ್ಟು ತೂತು ಬಿದ್ದು ಶ್ವಾಸಕೋಶ ಚೀಲಗಳೆರಡು ಹಿಗ್ಗಿ ಸಮತೋಲನ ಕಳೆದು. ಇಡೀ ಮೈ ಉಬ್ಬರಿಸಿ ಸೇದುವಾಗಲೂ ತನ್ನ ಲೆಕ್ಕಿಸದ ರುದ್ರವ್ವನನ್ನು ಮಕ್ಕಳು ಮೊಮ್ಮಕ್ಕಳು ಬಲವಂತಕ್ಕೆ ಕರೆದೊಯ್ದು ದಾವಣಗೆರೆ (Davanagere) ಆಸ್ಪತ್ರೆಗೆ ಸೇರಿಸಿದರು! ವೈದ್ಯರು ಏನೂ ಮಾಡಲಾಗದೆಂದು ಮೌನವಾದರು!

ಆದರೂ ಮಾಗಿದ ಜೀವ ರುದ್ರವ್ವನ ಮೈಮನದ ತುಂಬ ಮನೆ ಮಕ್ಕಳು ಕರ್ತವ್ಯ ಚಿಂತೆ! ದಾವಣಗೆರೆ ಆಸ್ಪತ್ರೆಯಿಂದ ,ಅಲ್ಲಿಯೇ ಇದ್ದ ತನ್ನ ಹಿರಿಯ ಮಗಳ ಮನೆಗೆ ಬಂದು ತುಸು ಗಂಟೆ ಕೂಡ ಕೂರದೆ ಮಲಗದೆ,,, ತನಗೆ ಆರೈಕೆ ಬೇಕೆಂಬುದನ್ನೇ ಮರೆತ; ಎಲ್ಲರ ಕಾಳಜಿಗೆ ತನ್ನನ್ನೇ ಸಮರ್ಪಿಸಿಕೊಂಡ ಮಮತೆ ಜೀವವದು! ಸುತ್ತಲೂ ತನ್ನ ಸ್ಥಿತಿ ತಿಳಿದು ಮಕ್ಕಳು, ಮೊಮ್ಮಕ್ಕಳು ಕರುಣೆಯೇ ಕಡಲಾದಂತೆ ನೋಡುತ್ತಾ ಮರುಗುವಾಗ.. ರುದ್ರವ್ವ ಚಟಕ್ಕನೇ ಎದ್ದು! ಏ ತಾಯಿ ನಾನು ಬೆಣ್ಣೆ ಕೊಟ್ ಕಳಿಸಿದ್ನಲ್ಲ ನನ್ನ ಮನೆಯ ಸ್ಟೀಲ್ ಡಬ್ಬಿ ಕೊಡು ಮತ್ ಬೆಣ್ಣೆ ಕಳಿಸಲು ಬೇಕು ಎಂದು!.. ತಾನೇ ಒಳ ಹೋಗಿ ಪಡೆದು! ” ಬಾರ ತಮ್ಮ ಹೋಗೋಣ ಕರ ಬಿಟ್ಕ ಬೇಕು ತಡವಾಗತ್ತೆ!” ಎಂದು ತನ್ನ ಮಗನನ್ನು ಕರೆದು, ಕಾರಿನ ಹಿಂದಿನ ಮೂರು ಸೀಟಲ್ಲಿ ಮಲಗಿದಾಗ ಎಲ್ಲರೂ ಅಂತಹ ನೋವಲ್ಲೂ ಆಕೆಯ ಜೀವನ ಪ್ರೀತಿ, ಕರ್ತವ್ಯ ಪ್ರಜ್ಞೆ, ವಿವೇಕ ಕಂಡು ಮೂಕವಾದರು!

ಮಗನ ಕಾರು ಹಳ್ಳಿ ತಲುಪಿದಾಗ ರಾತ್ರಿಯಾಗಿತ್ತು! ತಾನೇ ಮನೆಯ ಬಾಗಿಲಿಗೆ ಅಗುಳಿ ಹಾಕಿ ಬಂದು ಮಲಗಿದ್ದ ರುದ್ರವ್ವ, ಬೆಳಿಗ್ಗೆ ಎದ್ದು, ತನ್ನಂತೆ ಮನೆಗೆ ಸೊಸೆಯಾಗಿ ಬಂದಿದ್ದ ತನ್ನ ಮೊಮ್ಮಗಳಿಗೆ ಕಾಫಿ ಕೊಡು ಎಂದು ಕೇಳಿ, ಸೊಸೆ ಕಾಫಿ ತರುವುದರಲ್ಲಿ ತನಗೆ ಆ ಸೇವಾ ರಿಣವೂ ಬೇಡವೇನೋ ಎನ್ನುವಂತೆ ಶಾಶ್ವತವಾಗಿ ಯಾರಿಗೂ ಕ್ಷಣ ಮಾತ್ರದ ತೊಂದರೆ ಕೊಡದಂತೆ ಕಣ್ಮುಚ್ಚಿದ್ದಳು!

ಮೈಮೇಲೆ ಬಿದ್ದು ಗೋಳಾಡುವ ಮನೆ ಮಕ್ಕಳು ಮೊಮ್ಮಕ್ಕಳಿಗೆಲ್ಲಾ ರುದ್ರವ್ವನ ಹೊಕ್ಕಳು ಭಾಗದಲ್ಲಿರಿಸಿದ ಭಟ್ಟಿ ಸಾಂತ್ವನದ ಗುಂಟುಕಲ್ಲು ಒತ್ತುತಿತ್ತು! ರುದ್ರವ್ವನ ಮುಖಾರವಿಂದ ನಗುತಿತ್ತು! ಶಿವೆಯಲ್ಲಿ ಪುಷ್ಪವಾಗಿ ಜೀವ ಸೇರಿತೇನೋ ಎನ್ನುವಂತೆ!!

ರುದ್ರವ್ವನ ಮಮತೆಯ ಪ್ರೀತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಉಂಡ ಇಡೀ ಮಾಚನಾಯಕನಹಳ್ಳಿಯ ಗ್ರಾಮವೇ ಸಂಸ್ಕಾರಕ್ಕೆ ನೆರೆದಿತ್ತು! ನಿತ್ಯ ಬದುಕಿನ ವಕ್ತಾನದಲ್ಲಿ ಕೆಲಸದ ಆಯಾಸ ಮರೆಯಲು ಸೋಬಾನೆಯ ಹಾಡುಗಳಿಂದ  ಜೀವನ ಪ್ರೀತಿಯ ಆನಂದವನ್ನು, ರುದ್ರವ್ವ ಹಾಡುವಾಗೆಲ್ಲಾ, ,ಜೊತೆಗೂಡಿ ಕೆಲಸ ಮಾಡುತ್ತಾ,,,ಹಾಡುತ್ತಾ,,,ಪಡೆಯುತಿದ್ದ, ಹಳ್ಳಿಯ ಕೂಲಿ ಹೆಣ್ಮಕ್ಕಳು ರುದ್ರವ್ವನ ನೆಲದ ಬಾಳಿನ ಅಂತಿಮ ದಿನದ ಯಾತ್ರೆಯಲ್ಲಿ ಕಂಬನಿ ಮಿಡಿಯುತ್ತಾ, ರುದ್ರವ್ವನ ಮಮತೆ ನೆನೆ ನೆನೆದು ಪಾಡಿದರು.

ಯಾರು ಆದಾರೂ ಹೆತ್ತ ತಾಯಂತೆ ಆದಾರೋ ಸಾವಿರ ಸೌದೆ ಒಲೆಯಲ್ಲಿ// ಉರಿದಾರೂ ದೀವಿಗೆಯಂತ ಬೆಳಕುಂಟೆ//

ಬ್ಯಾಸಗೀ ದಿವಸಾಕ ಬೇವಿನ ಮರ ತಂಪ// ಭೀಮರತಿಯೆಂಬ ಹೊಳಿ ತಂಪ //ಹಡೆದವ್ವ ನೀ ತಂಪ ನನ್ನ ತವರಿಗೆ//

ತಾಯಿಯಿಲ್ಲದ ತವರಿಗೆ ಹೋಗದಿರು ಮನವೇ// ನೀರಿಲ್ಲದ ಕೆರೆಗೆ ಕರುಬಂದು// ತಿರುವಾಗ ನೋಡದರ ದುಃಖ ಬಹಳವ್ವಾ//

 

Davanagere Spl Artical, Davanagere District Story, Davanagere Artical, ದಾವಣಗೆರೆಯ ಕುತೂಹಲಕಾರಿ ಸ್ಟೋರಿ, ದಾವಣಗೆರೆ ಬರಹಗಾರರು ಬರೆಯುವ ವಿಶೇಷ ಲೇಖನ

ಲೇಖಕಿ ಎ. ಸಿ. ಶಶಿಕಲಾ ಶಂಕರಮೂರ್ತಿ ಅವರು ಬರೆದಿರುವ ವಿಶೇಷ ಲೇಖನ:

Davanagere
ಲೇಖಕಿ: ಶ್ರೀಮತಿ// ಎ. ಸಿ. ಶಶಿಕಲಾ ಶಂಕರಮೂರ್ತಿ(ನಮ್ರತಾ) ಶಿಕ್ಷಕಿ, ಸಾಹಿತಿ, ದಾವಣಗೆರೆ (Davanagere) 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment