SUDDIKSHANA KANNADA NEWS/ DAVANAGERE/ DATE:09-09-2023
ದಾವಣಗೆರೆ (Davanagere): ನಾನೊಂದು ತೀರ ನೀನೊಂದು ತೀರ. ಮನಸು ಮನಸು ದೂರ… ಪ್ರೀತಿ ಹೃದಯ ಭಾರ. ಇದು ಜನಪ್ರಿಯ ವಿರಹ ಗೀತೆ. ಇಂದಿಗೂ ಜನಪ್ರಿಯತೆಯ ಹಾಡು. ಆದ್ರೆ, ಪತಿ, ಪತ್ನಿ ಬೇರೆ ಬೇರೆಯಾದಾಗಲೂ ಇದೇ ಹಾಡು ಗುನುಗುವುದು ಸಹಜ. ಆದ್ರೆ, ಒಂದಾಗೋಣ ಬಾ ಸಿನಿಮಾವೂ ಸಹ ಸೂಪರ್ ಹಿಟ್ ಆಗಿತ್ತು. ಒಂದಾಗಿದ್ದರೆ ಎಲ್ಲಾ ಚಿಂತೆಗೆ ಜಾಗ ಇಲ್ಲ ಹಾಡು ಕೂಡ ಸೂಪರ್ ಹಿಟ್. ಒಂದಾಗೋಣ ಬಾ ಸಿನಿಮಾದ ಈ ಹಾಡು ಸೂಪರ್ ಹಿಟ್. ಈ ಎರಡೂ ಹಾಡು ವಿಚ್ಚೇದನಕ್ಕೆ ಮುಂದಾಗಿ ಒಂದಾದವರಿಗೆ ಸರಿಯಾಗಿ ಒಪ್ಪುತ್ತೆ.
ಒಂದಾಗಿದ್ದರೆ ಎಲ್ಲಾ ಚಿಂತೆಗೆ ಜಾಗ ಇಲ್ಲ. ಕಷ್ಟ ನಷ್ಟ ಎಲ್ಲಾ ಹಾಲು ಸಕ್ಕರೆ ಬೆಲ್ಲ. ಏನೇ ಬರಲಿ ದಿನ ನಗು ನಗು. ನೀನಾಗಿ ಬಿಡು ಪುಟ್ಟ ಮಗು. ಹೌದು. ಮಕ್ಕಳ ಮನಸ್ಸು ಮುಗ್ಧ. ಏನೂ ಅರಿಯದ ಕಂದಮ್ಮಗಳು ತಂದೆ ತಾಯಿ ಪ್ರೀತಿ ಸಿಗದಿದ್ದರೆ ಅನಾಥ ಪ್ರಜ್ಞೆ ಕಾಡುತ್ತದೆ. ನೋವಿನಲ್ಲಿ ಮುಳುಗಿ ಬಿಡುವ ಮಕ್ಕಳು ತಂದೆ ಇದ್ದರೆ ತಾಯಿ ಇರೋಲ್ಲ. ತಾಯಿ ಇದ್ದರೆ ತಂದೆ ಇರೋಲ್ಲ. ಈ ಪರಿಸ್ಥಿತಿಯಲ್ಲಿ ಮಕ್ಕಳ ಮನಸ್ಸಿನಲ್ಲಿ ಅಲ್ಲೋಲ ಕಲ್ಲೋಲ ಸಹಜ. ಇಂಥ ಕಠಿಣ ಪರಿಸ್ಥಿತಿಯನ್ನು ಬದಲಿಸುವ ಶಕ್ತಿ ಮಕ್ಕಳಲ್ಲಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಈ ಸುದ್ದಿಯನ್ನೂ ಓದಿ:
ಸದಾ ನಿಮ್ಮ ಪರ ನಿಲ್ಲುತ್ತೇವೆ… ಬಂಜಾರ (Banjara) ಸಮುದಾಯದ ಉಡುಗೆ ತೊಟ್ಟು ಮಹಿಳೆಯರ ಜೊತೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೃತ್ಯ
ಹೌದು. ದಾವಣಗೆರೆಯಲ್ಲಿ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದ 13 ದಂಪತಿ ಪೈಕಿ ಬಹುತೇಕ ಪತಿ, ಪತ್ನಿ ಮನಸ್ತಾಪ ಬದಿಗೊತ್ತಿ ಮತ್ತೊಮ್ಮೆ ಒಂದಾಗುವ ಮೂಲಕ ಖುಷಿಪಟ್ಟರು. ತಂದೆ ತಾಯಿ ಒಂದಾಗಿಸಿದ ಮಕ್ಕಳೂ ಸಿಹಿ ನಗೆ ಬೀರಿದರು.
13 ಪ್ರಕರಣಗಳು ಮಾತ್ರ ತುಂಬಾನೇ ಸ್ಪೆಷಲ್:
ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜಿ ಸಂಧಾನದಡಿ ಪ್ರಕರಣಗಳು ಮುಕ್ತಾಯಗೊಳಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯ, ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಸಾವಿರಾರು ಪ್ರಕರಣಗಳು ಮುಕ್ತಾಯಗೊಂಡರೂ, ಈ ಪೈಕಿ 13 ಪ್ರಕರಣಗಳು ಮಾತ್ರ ತುಂಬಾನೇ ಸ್ಪೆಷಲ್.
ಇತ್ಯರ್ಥವಾದ ಪ್ರಕರಣಗಳಲ್ಲಿ ಪ್ರಮುಖವಾಗಿ ಕೌಟುಂಬಿಕ ಕಲಹದಿಂದಾಗಿ ಬೇರೆಯಾಗಿದ್ದ 13ದಂಪತಿ ಒಂದಾಗಿದ್ದು ವಿಶೇಷವಾಗಿತ್ತು. ಮದುವೆಯಾಗಿದ್ದವರು ಆರಂಭದಲ್ಲಿ ಚೆನ್ನಾಗಿದ್ದರೂ ಬರಬರುತ್ತಾ ಸಂಸಾರ ಹಳಸಿತ್ತು. ಮನಸ್ತಾಪ ಹೆಚ್ಚಾಗಿ ವಿಚ್ಚೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದರು. ಕೆಲವರು ಮಕ್ಕಳಿದ್ದರೂ ಬೇರೆ ಬೇರೆಯಾಗಲೂ ತೀರ್ಮಾನ ತೆಗೆದುಕೊಂಡಿದ್ದರು. ಆ ಕಠೋರ ನಿರ್ಧಾರ ತೆಗೆದುಕೊಂಡಾಗಿನಿಂದಲೂ ಪತಿ, ಪತ್ನಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ.
ಕೋಪಕ್ಕೆ ಗುರಿಯಾಗಬೇಡಿ:
ಇನ್ನು ಬಹುತೇಕ ಪ್ರಕರಣಗಳು ಪ್ರತಿಷ್ಠೆ, ಕೋಪ, ಮನಸ್ತಾಪ, ಜಗಳ, ಗಲಾಟೆ, ಸಾಂಸಾರಿಕ ವಿಚಾರಕ್ಕೆ ಸಂಬಂಧಿಸಿದಂತೆ ಆಗಿದ್ದವು. ಯಾಕೆಂದರೆ ಮದುವೆಯಾದ ಆರಂಭದಲ್ಲಿ ಚೆನ್ನಾಗಿದ್ದರೂ ಬರಬರುತ್ತಾ ಯಾವುದೋ ಕಾರಣಕ್ಕೋ, ಇನ್ನಾರದ್ದೋ ಚಿತಾವಣೆಗೋ, ಆರ್ಥಿಕ ಸಂಕಷ್ಟಕ್ಕೋ ಸಮಸ್ಯೆ ಬರುವುದು ಸಹಜ. ಶಾಂತಿಯುತವಾಗಿ ಪತಿ, ಪತ್ನಿ ಕುಳಿತು ಚರ್ಚೆ ನಡೆಸಿದರೆ, ಯಾರಾದರೂ ಒಬ್ಬರೂ ಶಾಂತವಾದರೆ ಎಲ್ಲವೂ ಸರಿ ಹೋಗುತ್ತದೆ. ಕೆಲವೊಮ್ಮೆ ಪರಿಸ್ಥಿತಿ ಕೈ ಮೀರಿ ಹೋದಾಗ ಯಾರೂ ಏನೂ ಮಾಡದ ಪರಿಸ್ಥಿತಿ ಬಂದು ಬಿಡುತ್ತೆ.
ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ಮಧ್ಯ ಪ್ರವೇಶಿಸಿ ವಿಚ್ಚೇದನ ಪಡೆಯಲು ನಿರ್ಧರಿಸಿದ್ದ ಸತಿ, ಪತಿಗೆ ಬುದ್ಧಿವಾದ ಹೇಳಿ, ಮಕ್ಕಳ ಭವಿಷ್ಯ, ಮನಸ್ಸು ಅರ್ಥಮಾಡಿಕೊಳ್ಳಿ ಎಂಬ ಸಲಹೆ ನೀಡಿ ಒಂದಾಗಿಸುವಲ್ಲಿ ಯಶಸ್ವಿಯಾಗಿದೆ.
ದಾವಣಗೆರೆ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅವರ ಸಮ್ಮುಖದಲ್ಲಿ 13 ಜೋಡಿಗಳು ಮನಸ್ತಾಪ ಮರೆತು ಮತ್ತೆ ಒಂದಾದವು. ಕೆಲ ದಂಪತಿ ಮೂರ್ನಾಲ್ಕು ವರ್ಷಗಳಿಂದಲೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು. ಡೈವೋರ್ಸ್ ಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಇನ್ನು ಎರಡು ಮಕ್ಕಳಾದ ಬಳಿಕ ಪತ್ನಿ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದರು. ಕಳೆದೊಂದು ವರ್ಷದಿಂದ ದೂರ ದೂರ ಇದ್ದರು. ಇವರ ಮನವೊಲಿಸಿ ಮತ್ತೆ ಒಂದಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಹಿ ವಿತರಿಸಿ ಸಂಭ್ರಮ:
ಇನ್ನು 13 ಜೋಡಿಗಳಿಗೆ ಪರಸ್ಪರ ಹಾರ ಬದಲಾಯಿಸಿಕೊಂಡು ಸಿಹಿ ತಿನ್ನಿಸುವ ಮೂಲಕ ಮತ್ತೆ ಸಂಸಾರ ಆರಂಭಿಸಲು ಸಜ್ಜಾದರು. ಕಹಿ ಘಟನೆ, ನೆನಪು ಮರೆತು ಮತ್ತೆ ಒಂದಾಗಿ ಬಾಳುವ ನಿರ್ಧಾರಕ್ಕೆ 13 ಜೋಡಿ ಬಂದಿದ್ದು ಸಹಜವಾಗಿಯೇ
ಹಬ್ಬದ ವಾತಾವರಣ ನಿರ್ಮಾಣ ಆಗುವಂತೆ ಮಾಡಿತು.
ಕಿಲ ಕಿಲ ನಗುವಿನಲಿ… ಖುಷಿಯಲಿ ತೇಲಾಡುತಾ…!
ಇನ್ನು ಅಪ್ಪ ಅಮ್ಮ ಒಂದಾಗುತ್ತಿದ್ದಂತೆ ಮಕ್ಕಳು ಕಿಲ ಕಿಲ ನಗುವಿನಲಿ, ಖುಷಿಯಲಿ ಮಕ್ಕಳು ತೇಲಾಡಿದರು. ತಂದೆ ತಾಯಿ ಅಪ್ಪಿಕೊಂಡು ಸಂತಸ ಪಟ್ಟರು. ಕೆಲವರು ಯಾರದ್ದೋ ಮಾತು ಕೇಳುತ್ತಾ ಸುಮ್ಮನೆ ನಿಂದಿಸುತ್ತಾರೆ, ಬೈಯ್ಯುತ್ತಾರೆ. ಆದ್ರೆ, ಇಂದಿನ ದಿನಗಳಲ್ಲಿ ಹಿರಿಯರನ್ನು ಗೌರವಿಸಬೇಕು. ಅದು ಗಂಡನ ಮನೆಯವರಾಗಲೀ, ಹೆಂಡತಿ ಮನೆಯವರಾಗಲೀ ಎಲ್ಲರಿಗೂ ಗೌರವ ನೀಡಬೇಕು. ಆತ್ಮೀಯತೆಯಿಂದ ಮಾತನಾಡಿಸಬೇಕು. ಅವರ ಅಭಿರುಚಿ ತಿಳಿದುಕೊಳ್ಳಬೇಕು. ಮನಸ್ಸು ಅರ್ಥಮಾಡಿಕೊಳ್ಳಬೇಕು. ಪ್ರತಿಷ್ಠೆ, ಜಗಳ ಮಾಡುತ್ತಾ ಹೋದರೆ ಸಂಸಾರ ಹಾಳಾಗುವುದು ನಮ್ಮದೇ ಎಂದು ಹೇಳಿದರು.
ಮತ್ತೆ ಒಂದಾಗಿದ್ದು ಸಂತೋಷ ತಂದಿದೆ:
ಇನ್ನು ಹರ್ಷಿತಾ ಎಂಬುವವರು ಹರೀಶ್ ಎಂಬುವವರನ್ನು ವಿವಾಹ ಆಗಿದ್ದರು. ಸಣ್ಣಪುಟ್ಟ ಕಾರಣಗಳಿಂದಾಗಿ ಬೇರೆ ಬೇರೆ ವಾಸ ಮಾಡ್ತಿದ್ದರು. ಇಬ್ಬರಿಗೂ ಮಗನೆಂದರೆ ತುಂಬಾನೇ ಇಷ್ಟ. ಆತನಿಗೋಸ್ಕರ, ಭವಿಷ್ಯಕ್ಕೋಸ್ಕರ ಮತ್ತೆ ಒಂದಾಗಿದ್ದೇವೆ. ನ್ಯಾಯಾಧೀಶರ ಹಿತವಚನಗಳು ಖುಷಿಕೊಟ್ಟವು. ಅವರು ಹೇಳಿದ್ದರಲ್ಲಿಯೂ ಅರ್ಥವಿದೆ, ಇದನ್ನು ಪಾಲಿಸಬೇಕು. ಮುಂದೆಂದೂ ಇಂಥ ನಿರ್ಧಾರ ತೆಗೆದುಕೊಳ್ಳೋಲ್ಲ. ಇಬ್ಬರೂ ಚೆನ್ನಾಗಿ ಬಾಳುತ್ತೇವೆ. ಮಗನ ಭವಿಷ್ಯ ರೂಪಿಸುತ್ತೇವೆ ಎಂದು ಹರ್ಷಿತಾ ಹೇಳಿದರು.
ಮತ್ತೆ ಪತಿ ಜೊತೆ ಸೇರಿದ್ದು ಸಂತೋಷ ತಂದಿದೆ. ಇಷ್ಟು ದಿನಗಳ ಕಾಲ ಅನುಭವಿಸಿದ ನೋವು ಮಾಯವಾಗುತ್ತಿದೆ. ಎಂಥ ಕಹಿ ಘಟನೆಗಳು ಬಂದರೂ, ಕಷ್ಟ ಎದುರಾದರೂ ಒಂದಾಗಿ ಬಾಳುತ್ತೇವೆ ಎಂದು ಹರ್ಷಿತಾ ಹೇಳಿದರು.
ಕೆಲವರು ಸಂಸಾರದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ಅಂಥವರ ಬಗ್ಗೆ ಎಚ್ಚರ ವಹಿಸಬೇಕು. ಅಂಥ ಮಾತುಗಳಿಗೆ ಬೆಲೆ ಕೊಡಬಾರದು. ನಿರ್ಲಕ್ಷ್ಯ ವಹಿಸಬೇಕು. ಅತ್ತೆ, ಮಾವ ಬೈದರೆ, ಅಪ್ಪ, ಅಮ್ಮ ಬೈದರೆ ಅದನ್ನೇ ದೊಡ್ಡದು ಮಾಡುವ ಬದಲು ಅವರು ಯಾಕೆ ಈ ಮಾತು ಹೇಳಿದರು ಎಂಬುದನ್ನು ಆಲೋಚಿಸಿದರೆ ಸಮಸ್ಯೆ ಎದುರಾಗದು. ಮನೆ ಮುರಿಯುವವರ ಬಗ್ಗೆ ಎಚ್ಚರಿಕೆಯಿಂದ ಇದ್ದರೆ ಒಳಿತು ಎಂಬುದು ಹೆಸರು ಹೇಳಲು ಇಚ್ಚಿಸದ ಮಹಿಳೆಯೊಬ್ಬರ ಮಾತು.
ಒಟ್ಟಿನಲ್ಲಿ ನ್ಯಾಯಾಲಯದ ಮೂಲಕ ಮತ್ತೆ ಒಂದಾದ ಜೋಡಿಗಳ ಮೊಗದಲ್ಲಿ ಖುಷಿ ಇತ್ತು. ಪತಿ, ಪತ್ನಿಯ ಪೋಷಕರು, ಸಂಬಂಧಿಕರು, ವಕೀಲರು, ನ್ಯಾಯಾಧೀಶರು, ಮಕ್ಕಳು ಸಂತಸಪಟ್ಟರು. ಇಂಥದ್ದೊಂದು ಸಾರ್ಥಕ ಕಾರ್ಯಕ್ರಮಕ್ಕೆ ನ್ಯಾಯಾಲಯವು ಸಾಕ್ಷಿಯಾಯ್ತು.
STORY SUMMARY: