SUDDIKSHANA KANNADA NEWS/ DAVANAGERE/ DATE:20-06-2023
ದಾವಣಗೆರೆ: ಅಪ್ಪ ಎಂದರೆ ಸುಮ್ಮನೇ ಅಲ್ಲ, ಇಡಿ ಕುಟುಂಬದ ಭಾರ ಹೊರುವ ದೇವತಾಮನುಷ್ಯ. ಎಷ್ಟು ಹೇಳಿದರೂ ಸಾಲದು. ತಾಯಿ ಎಷ್ಟು ಮುಖ್ಯವೋ ಅಷ್ಟೇ ತಂದೆಯೂ ಮುಖ್ಯ. ತಂದೆಯ ಅಕ್ಕರೆ, ಪ್ರೀತಿ, ಜವಾಬ್ದಾರಿ, ಮಾಡಿದ್ದನ್ನು ಹೇಳಿಕೊಳ್ಳದೇ, ನೋವಿದ್ದರೂ ನುಂಗಿಕೊಂಡು, ಕುಟುಂಬದ ಸದಸ್ಯರ ದಡ ಸೇರಿಸಲು ಪಡುವ ಪಾಡು ಅಷ್ಟಿಷ್ಟಲ್ಲ. ತಂದೆಗೊಂದು ನಮನ ಸಲ್ಲಿಸುವ ಕವನ ಇದು. ಓದಿ.
ಚಿಲ್ಲರೆಯಿಲ್ಲದ ಸಿರಿವಂತ
ಖಾಲಿ ಕಿಸೆಗೆ ಕೈ ಹಾಕಿ
ಅಯ್ಯೋ.. ಚಿಲ್ಲರೆಯಿಲ್ಲ
ಮಗಳೇ ನಾಳೆ ಕೊಡ್ತೀನಿ
ನಿನಗೆ ಬೇಕಾದ್ದು ತಗೋ ಎನ್ನುವ
ಕುಬೇರ ನನ್ನಪ್ಪ,
ತುಂಬಾ.. ಶ್ರೀಮಂತ
ಈ ಸುದ್ದಿಯನ್ನೂ ಓದಿ:
Siddaramaiah: ಮತಾಂಧರು, ಅನೈತಿಕ ಪೊಲೀಸ್ ಗಿರಿ, ಕಾನೂನು ಕೈಗೆತ್ತಿಕೊಂಡ್ರೆ ಹುಷಾರ್: ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್
ಕಾಸಿಗೆ ಕಮ್ಮಿ,
ಸ್ವಾಭಿಮಾನವೆ ಹೆಚ್ಚು
ಭರವಸೆ ಸಾಂತ್ವಾನದ
ಸರದಾರ ಅಪ್ಪ ..
ನಿಜವಾಗಿಯೂ
ತುಂಬಾ…ಶ್ರೀಮಂತ
ಬಳಸಿದಷ್ಟು
ಬೆಳೆಯುವ ಸಿರಿಯನ್ನೇ
ಕೊಟ್ಟ ಅಪ್ಪ ಇನ್ನೂ ಜೀವಂತ
ಆಳೆತ್ತರಕ್ಕೆ ಬೆಳೆದ
ಹಸಿ ಸೊಪ್ಪೆಯನ್ನು ಹೊತ್ತು
ಮನೆ ಬೀದಿಯ ತಿರುವಿನಲ್ಲಿ
ನಡೆದು ಬರುತ್ತಿದ್ದರೆ
ಭೀಮನಿರಬೇಕು ಎನ್ನುವ
ನನ್ನ ಕುತೂಹಲಕ್ಕೆ
ಎತ್ತಿನ ಕೊರಳ ಗಂಟೆ
ನುಡಿಯಿತು,
ಇವ ಧರ್ಮರಾಯನೆಂದು
ಊರಮುಂದಿನ
ಪಂಚಾಯಿತಿಯಲ್ಲಿ ಪಟ್ಟು ಹಿಡಿದು
ಸತ್ಯಕ್ಕೆ ಸಾವಿಲ್ಲವೆಂದುದ್ಗರಿಸಿ
ನಿಲ್ಲುತ್ತಿದ್ದ ಅಪ್ಪನ ಎದುರು
ಸುಳ್ಳು ಸದ್ದಿಲ್ಲದೆ ಸರಿದುಬಿಡುತ್ತಿತ್ತು
ಹಳ್ಳಿ ಪಂಚಾಯಿತಿ
ನ್ಯಾಯ ದೇಗುಲವಾಗಿತ್ತು
ಸವೆದ ಚಪ್ಪಲಿಯ ಕೆಳಭಾಗಕ್ಕೆ
ಕಟ್ಟಿಸಿರುವ ಅಟ್ಟೆ
ಬೆವರ ಹನಿಗಳ ಜಾರುವಿಕೆಯಲ್ಲಿ
ತುಂಬಿದ ಎದೆ ಅಳತೆಯ ಹೊಟ್ಟೆ
ಇವುಗಳಿಗೆ ಚೆನ್ನಾಗಿ ಗೊತ್ತಿತ್ತು
ಅಪ್ಪ ಯಾರೆಂದು
ಅಯ್ಯೋ ಮರೆತಿದ್ದೆ ಕಣ್ರೀ…
ಬೆಳಗಿನಿಂದ ಬೈಗಿನವರೆಗೂ
ಹೊಲದ ಮಣ್ಣ ಹುಡಿಯನ್ನೇ
ಭಂಡಾರವಾಗಿಸಿಕೊಂಡ
ಅಮ್ಮನ ಅಡುಗೆಯಲ್ಲೂ
ಅಪ್ಪನ ಕೈ ರುಚಿಯಿತ್ತು
ಕಂಚಿನ ತಾಟಿಗೆ ಹಾಕಿ ತಿಕ್ಕಿದ ಚಟ್ನಿ
ನಾಲಿಗೆಗೆ ತಾಗುವ ಮೊದಲೇ
ಬಾಯಲ್ಲಿ ನೀರೂರಿಸುತ್ತಿತ್ತು
ಖಡಕ್ ಮಾತಿನ
ಗಡಸು ಧನಿಯ ಅಪ್ಪನ
ಬಾಯಲ್ಲಿ ಪ್ರತಿ ರಾತ್ರಿ
ರಾಮಾಯಣ, ಮಹಾಭಾರತದ ವೈಭವ
ಇಂದಿಗೂ ರಿಂಗಣಿಸುತ್ತಿದೆ ಆ ನಿತ್ಯೋತ್ಸವ
ಅಪ್ಪನು ನೀಡಿದ ಸಂಸ್ಕಾರ ಸಹಕಾರಗೊಂಡು ಪುತ್ಥಳಿಯಾಗಿದೆ
ಇಂದು ನಿಜವಾಗಿಯೂ ಅಪ್ಪ ಶ್ರೀಮಂತ
ಲೇಖಕಿ ಗೀತಾ ಮಂಜು, ಶಿಕ್ಷಕಿ, ಸ. ಹಿ. ಪ್ರಾ. ಶಾಲೆ ಬೆಣ್ಣೆಹಳ್ಳಿ, ಜಗಳೂರು (ತಾ), ದಾವಣಗೆರೆ (ಜಿಲ್ಲೆ) ಬರೆದಿರುವ ಕವನ.
Davanagere Lates News, Davanagere Suddi, Davanagere, Davanagere Writers