ದಾವಣಗೆರೆ: ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ವೇಳೆ ಸಮಸ್ಯೆಯಾದ್ರೆ ಆಯೋಜಕರೇ ಹೊಣೆಗಾರರು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಆಯೋಜಿಸಲಾದ ನಾಗರಿಕ ಸೌಹಾರ್ದತಾ ಸಭೆಯಲ್ಲಿ ಅವರು ಈ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
READ ALSO THIS STORY: ಬಾಪೂಜಿ ಸಂಸ್ಥೆ ಕಟ್ಟಿದ ಎಸ್ಕೆ ಕೊಟ್ರಬಸಪ್ಪರ ಪ್ರತಿಮೆ ನಿಮ್ಮ ಮನೆ ಮುಂದೆ ಪ್ರತಿಷ್ಠಾಪಿಸಿ: ಎಸ್ಎಸ್ಎಂಗೆ ಯಶವಂತರಾವ್ ಜಾಧವ್ ಸವಾಲ್!
ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ, ತಾಲ್ಲೂಕು ಬೀಟ್ ಮತ್ತು ಸರ್ಕಲ್ ಮಟ್ಟದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕಳೆದ ಬಾರಿ ಜಿಲ್ಲೆಯಲ್ಲಿ 606 ಗಣೇಶ ಮೂರ್ತಿ ಸ್ಥಾಪಿಸಿದ್ದು, ಈ ಬಾರಿ ಅವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. . ಗಣೇಶ ಪ್ರತಿಷ್ಠಾಪನೆ, ಪೆಂಡಾಲ್ ಹಾಕಲು, ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಸಲು ಅನುಮತಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಸೂಚಿಸಿದರು..
ವಿಗ್ರಹ ಸ್ಥಾಪನೆ ವೇಳೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಪೆಂಡಾಲ್‍ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು, ಪ್ರತಿಷ್ಠಾಪನೆ ಆದಾಗಿನಿಂದ ವಿಸರ್ಜನೆವರೆಗೂ ಏನೇ ಸಮಸ್ಯೆಗಳು ಉಂಟಾದಲ್ಲಿ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು. ಮೆರವಣಿಗೆ ವೇಳೆ ಸಮಸ್ಯೆಗಳಾದಂತೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ 10ಸಾವಿರಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿದೆ. ಹಬ್ಬದ ಸಂಭ್ರಮಾಚರಣೆ ವೇಳೆ ಶಾಂತಿ ಕದಡುವ ದೃಶ್ಯಗಳು ಕಂಡು ಬಂದಲ್ಲಿ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮವಹಿಸಲಾಗುವುದು ಎಂದು ಸೂಚಿಸಿದರು.
ಎಲ್ಲೋ ಆಗಿರುವ ಘಟನೆಗಳ ಬಗ್ಗೆ ಪ್ರಚೋದನೆ ನೀಡುವ ಭಾಷಣ ಮಾಡುವಂತಿಲ್ಲ. ಪರಿಸರ ಸ್ನೇಹಿ ಗಣೇಶ ಪ್ರತಿಷ್ಫಾಪನೆ ಮಾಡಿ ಪ್ರಕೃತಿಗೆ ಉಳಿವಿಗೆ ಸಹಕರಿಸಬೇಕು. ವಿಸರ್ಜನೆಗೆ ಪ್ರತ್ಯಕೇವಾಗಿ ಸೂಚಿಸಿದ ಸ್ಥಳಗಳಲ್ಲಿಯೇ
ವಿಸರ್ಜನೆ ಮಾಡಬೇಕು. ವಿಸರ್ಜನೆ ವೇಳೆ ಬಹಳಷ್ಟು ಜಾಗ್ರತೆ ವಹಿಸಬೇಕು. ವಿಸರ್ಜನೆ ವೇಳೆ ಜಿಲ್ಲಾಡಳಿತ ನೀಡಿದ ಮಾರ್ಗಗಳಲ್ಲಿಯೇ ಅನುಸರಿಸಿ ವಿಸರ್ಜನೆಗೆ ಕ್ರಮವಹಿಸಬೇಕು. ವಿಸರ್ಜನೆ ಹಾಗೂ ಆಚರಣೆ ವೇಳೆ ಕೆಲವರು ಕೋಮು ಗಲಭೆ, ಕಲಹ, ಶಾಂತಿ ಕದಡುವಂಥ ಕೆಲಸ ಮಾಡುತ್ತಿದ್ದಾರೆ. ಇಂತಹ ಆಸ್ಪದಗಳಿಗೆ ಅವಕಾಶ ನೀಡದೇ ಸಂತೋಷ ಸಡಗರದಿಂದ ಎಲ್ಲರೂ ಸೌಹಾರ್ದತೆಯಿಂದ ಆಚರಿಸಬೇಕು. ಹಬ್ಬಗಳು ಸಡಗರ ಸಭ್ರಮದಿಂದ ಆಚರಣೆ ಮಾಡಲು ಇರುವುದು. ಈ ಸಂಭ್ರಮ ಸಡಗರ ಆಚರಣೆ ಶೋಕಾಚರಣೆಗಳಾಗಿ ಬದಲಾಗಬಾರದು. ಆದ್ದರಿಂದ ಆಯೋಜಕರು ಅತ್ಯಂತ ಜಾಗ್ರತೆ ವಹಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಸಿಇಓ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಸಾರ್ವಜನಿಕರು ಈ ಎರಡು ಹಬ್ಬಗಳನ್ನು ಶಾಂತಿಯುತವಾಗಿ ಸರಿಯಾದ ರೀತಿಯಲ್ಲಿ ಆಚರಣೆ ಮಾಡಬೇಕು. ಪಂಚಾಯಿತಿ ಮಟ್ಟದಲ್ಲಿ ಆಯೋಜಿಸುವ, ಆಚರಣೆ ಮಾಡುವ ಪ್ರತಿಯೊಬ್ಬರೂ ಕಾಲಾವಧಿಗೂ ಮುಂಚಿತವಾಗಿ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಅನುಮತಿ ಪಡೆಯಲು ಸೂಚನೆ ನೀಡಿದರು. ಮುಂಬೈ, ಪುಣೆ ಮಾದರಿಯಲ್ಲಿ ಶಾಂತಿ ಮತ್ತು ಶಿಸ್ತಿನೊಂದಿಗೆ ಆಚರಣೆ ಅಗತ್ಯ. ಕಾನೂನಾತ್ಮಕ ಸೂಚನೆಗಳ ಕಡ್ಡಾಯ ಪಾಲನೆ ಮಾಡಬೇಕು. ಶಾಲೆ, ಅಂಗನವಾಡಿ, ಇನ್ನಿತರೆ ಸೂಕ್ಷ್ಮ ಪ್ರದೇಶಗಳಲ್ಲಿ ಆಚರಣೆ ಮಾಡಬಾರದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 60 ರಿಂದ 70ಸಾವಿರ ಜನಸಂಖ್ಯೆಯಲ್ಲಿ ಆಜಾದ್ ನಗರದಿಂದ ಆರಂಭವಾದ ಮೆರವಣಿಗೆ ಮಿಲಾದ್ ಮೈದಾನದಲ್ಲಿ ಅಂತ್ಯವಾಗಲಿದೆ. ಮಿಲಾದ್ ಮತ್ತು ತಂಜಿಮ್ ಈ 2 ಕೇಂದ್ರ ಸಮಿತಿಗಳ ಸಹಯೋಗದಲ್ಲಿ ಸೌಹಾರಾದ್ಯುತವಾಗಿ ಆಚರಣೆಗೆ ಸಹಕರಿಸುತ್ತೇವೆ ಎಂದು ಅಮಾನುಲ್ಲಾ ಖಾನ್ ಹೇಳಿದರು,
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಚನ್ನಗಿರಿ ಹೆಚ್ಚುವರಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸ್ಯಾಮ್ ವರ್ಗೀಸ್, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ಪಾಲಿಕೆ ಆಯುಕ್ತೆ ರೇಣುಕಾ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ಗ್ರಾಮೀಣ ವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ಸ್ವಾಗತಿಸಿದರು. ನಗರ ವಿಭಾಗದ ಡಿವೈಎಸ್ಪಿ ಬಸವರಾಜ ವಂದಿಸಿದರು. ಡಿಎಆರ್ ವಿಭಾಗದ ಡಿಎಸ್‍ಪಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.