SUDDIKSHANA KANNADA NEWS/ DAVANAGERE/ DATE:15-08-2023
ದಾವಣಗೆರೆ (Davanagere): ಜಿಲ್ಲೆಯ ಕಾಂಗ್ರೆಸ್ ಶಾಸಕರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಅವರ ವರ್ಗಾವಣೆಗೆ ಒತ್ತಡ ಹೇರಿಲ್ಲ. ನಾನು ಯಾರ ಒತ್ತಡಕ್ಕೆ ಮಣಿದು ನಿರ್ಧಾರ ತೆಗೆದುಕೊಳ್ಳಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಅಕ್ರಮ ಮದ್ಯ, ಅಕ್ರಮ ಮರಳುಗಾರಿಕೆ ಸೇರಿದಂತೆ ಹಲವು ಅಕ್ರಮಗಳಿಗೆ ಕಡಿವಾಣ ಹಾಕಿದ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿಯೇನೂ ವರ್ಗಾವಣೆ ಆಗಿಲ್ಲ. ಪ್ರಾಮಾಣಿಕ
ಅಧಿಕಾರಿಗಳು ಬೇಕು. ಹೊನ್ನಾಳಿ ಶಾಸಕ ಶಾಂತನಗೌಡರು ಸೇರಿದಂತೆ ಯಾರೂ ಒತ್ತಡ ಹೇರಿಲ್ಲ. ಎಸ್ಪಿ ಅವರನ್ನು ಟ್ರಾನ್ಸಫರ್ ಮಾಡುವಂತೆ ಕೇಳಿಕೊಂಡಿಲ್ಲ, ಒತ್ತಡವನ್ನೂ ಹೇರಿಲ್ಲ. ಎಸ್ಪಿ ಅವರ ವರ್ಗಾವಣೆಗೂ ಅಕ್ರಮ ಮರಳು, ಮದ್ಯ
ಮಾರಾಟಕ್ಕೆ ಬ್ರೇಕ್ ಹಾಕಿದ್ದಕ್ಕೂ ಸಂಬಂಧ ಇಲ್ಲ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Davanagere: ದಾವಣಗೆರೆ ಪಾಲಿಕೆ ವ್ಯಾಪ್ತಿಯ ಜನರೇ ಗಮನಿಸಿ… ಇಂದಿನಿಂದ ಮೂರು ದಿನ ಬರೋದಿಲ್ಲ ಕುಡಿಯುವ ನೀರು…!
ದಾವಣಗೆರೆ ಜಿಲ್ಲೆಯು ಅಭಿವೃದ್ಧಿ ಪಥದತ್ತ ಸಾಗಬೇಕು ಎಂಬುದು ನನ್ನ ಗುರಿ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಪ್ರಗತಿಯಲ್ಲಿವೆ. ಹೆಚ್ಚಾಗಿ ನೀರಾವರಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯ ಆಗಬೇಕಿದೆ. ಈ ದಿಸೆಯಲ್ಲಿ ಶ್ರಮ ವಹಿಸಲಾಗುವುದು. ರಾಜ್ಯ ಸರ್ಕಾರವು ಐದು ಗ್ಯಾರಂಟಿಗಳನ್ನು ಘೋಷಿಸಿ ಜಾರಿ ಮಾಡುತ್ತಿದೆ. ಪ್ರತಿಯೊಬ್ಬ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಯಾವುದೇ ಸಮುದಾಯದ ವಿರುದ್ಧ ಮಾತನಾಡಿಲ್ಲ:
ನಟ ಉಪೇಂದ್ರ ಅವರು ಗಾದೆ ಮಾತು ಆಡಿ ಸಮುದಾಯಕ್ಕೆ ಅವಮಾನ ಮಾಡಿದ ಆರೋಪ ಎದುರಿಸುತ್ತಿರುವಂತೆ ನೀವು ಸಹ ವಿಡಿಯೋವೊಂದರಲ್ಲಿ ಈ ರೀತಿ ಮಾತನಾಡಿದ್ದೀರಾ ಎಂದು ಬಿಜೆಪಿ ವಿಡಿಯೋ ವೈರಲ್ ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆ ರೀತಿ ಮಾತನಾಡಿಲ್ಲ. ಯಾವುದೇ ಸಮುದಾಯಕ್ಕೆ ಅಪಮಾನ ಎಸಗುವಂತೆ ಮಾತನಾಡಿಲ್ಲ. ಆದರೆ, ನನ್ನ ವಿಡಿಯೋ ತಿರುಚಿ ವೈರಲ್ ಮಾಡಲಾಗುತ್ತಿದೆ. ನಾನು ಹೊಲಸು ಹೋಗಬೇಕು ಎಂದಷ್ಟೇ ಹೇಳಿದ್ದೆ. ಅದೆಲ್ಲಾ ಸುಳ್ಳು ಆರೋಪ. ಯಾವ ವಿಡಿಯೋ ಎಂಬುದು ನನಗೆ ಗೊತ್ತಿಲ್ಲ. ಹಾಗೇನೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.