SUDDIKSHANA KANNADA NEWS/ DAVANAGERE/ DATE:07-08-2023
ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ (Police) ವರಿಷ್ಠಾಧಿಕಾರಿ ಕೆ. ಅರುಣ್ ಅವರನ್ನು ವರ್ಗಾವಣೆ ಮಾಡಲಾಗಿದೆ. ನಿನ್ನೆಯಷ್ಟೇ ಎಸ್ಪಿ ವರ್ಗಾವಣೆ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹೇಳಿದ್ದರು. ಆದ್ರೆ, ಸಚಿವರು ಹೇಳಿದ ಮಾರನೇ ದಿನವೇ ಟ್ರಾನ್ಸಫರ್ ಮಾಡಲಾಗಿದೆ. ಇದು ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಇಲಾಖೆಗಳಲ್ಲಿಯೂ ಮೇಜರ್ ಸರ್ಜರಿ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಪೊಲೀಸ್ (Police) ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಮುಗಿದಿದೆ. ಕಳೆದ ಐದು ತಿಂಗಳ ಹಿಂದೆಯಷ್ಟೇ ದಾವಣಗೆರೆಗೆ ಕೆ. ಅರುಣ್ ಅವರು ಬಂದಿದ್ದರು. ವಿಧಾನಸಭೆ ಚುನಾವಣೆಯ ಕಾರಣಕ್ಕೆ ಜಿಲ್ಲಾ ಪೊಲೀಸ್ (Police) ವರಿಷ್ಠಾಧಿಕಾರಿಯಾಗಿದ್ದ ಸಿ. ಬಿ. ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ಜಾಗಕ್ಕೆ ಕೆ. ಅರುಣ್ ಅವರು ಬಂದಿದ್ದರು. ಕಲ್ಬುರ್ಗಿಯಲ್ಲಿಯೂ ರಫ್ ಅಂಡ್ ಟಫ್ ಖ್ಯಾತಿ ಹೊಂದಿದ್ದರು. ಈಗ ಕಲ್ಬುರ್ಗಿಯ ಪೊಲೀಸ್ (Police) ತರಬೇತಿ ಕೇಂದ್ರದ ಸೂಪರ್ ರಿಂಟೆಂಡೆಟ್ ಹಾಗೂ ಪ್ರಿನ್ಸಿಪಾಲ್ ಆಗಿ ನಿಯೋಜನೆ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ:
Police: ದಾವಣಗೆರೆ ಎಸ್ಪಿ ವರ್ಗಾವಣೆ ಬಗ್ಗೆ ಎಸ್ಎಸ್ ಮಲ್ಲಿಕಾರ್ಜುನ್ ಏನಂದ್ರು…?
ಹೊನ್ನಾಳಿ ಶಾಸಕರ ಬೇಡಿಕೆ..!
ಕಳೆದ ಕೆಲ ದಿನಗಳ ಹಿಂದೆಯಿಂದಲೂ ವರ್ಗಾವಣೆ ಆಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಹೊನ್ನಾಳಿ ಶಾಸಕ ಶಾಂತನಗೌಡ ಅವರು ವೇದಿಕೆ ಕಾರ್ಯಕ್ರಮದಲ್ಲಿಯೇ ಎಸ್ಪಿ ಅವರ ವರ್ಗಾವಣೆ ಆಗಬೇಕು. ಕೆ. ಅರುಣ್ ಅವರು ಬಂದ ಮೇಲೆ ಮರಳು ಸಿಗದಂತಾಗಿದೆ. ತಾಲೂಕಿನ ಜನತೆಗೆ ಏನು ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಜನರ ಕಾಟ ಜಾಸ್ತಿಯಾಗಿದೆ. ಈ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಕೆ. ಅರುಣ್ ಅವರನ್ನು ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ್ದರು.
ಚನ್ನಗಿರಿ ಕೇಸ್:
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ಚನ್ನಗಿರಿ ಪೊಲೀಸ್ (Police) ಠಾಣೆಯ ಎದುರು ಪ್ರತಿಭಟಿಸಿದ್ದರು. ಸಿಪಿಐ, ಸರ್ಕಲ್ ಇನ್ ಸ್ಪೆಕ್ಟರ್ ವಿರುದ್ಧ ಮುನಿಸಿಕೊಂಡಿದ್ದರು. ಮಾತ್ರವಲ್ಲ, ಪಿಐ ಹಾಗೂ ಪಿಎಸ್ ಐ ವರ್ಗಾವಣೆ ಆಗಲೇಬೇಕು ಎಂಬ ಪಟ್ಟು ಹಿಡಿದಿದ್ದರು. ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ಕೊಡಲಾಗುತ್ತಿದ್ದು, ತಕ್ಷಣವೇ ರಜೆ ಮೇಲೆ ತೆರಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಸ್ಥಳಕ್ಕೆ ಬಂದಿದ್ದ ಎಸ್ಪಿ ಅವರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದರು.
ಶಕ್ತಿ ಯೋಜನೆ ಚಾಲನೆಗೆ ಗೈರು:
ದಾವಣಗೆರೆಯಲ್ಲಿ ಶಕ್ತಿ ಯೋಜನೆಗೆ ಚಾಲನೆ ಕೊಡಲು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ವೇದಿಕೆಯಲ್ಲಿ ಮಾತನಾಡುವಾಗ ಜಿಲ್ಲೆಯ
ಹಿರಿಯ ಅಧಿಕಾರಿಗಳು ಯಾಕೆ ಬಂದಿಲ್ಲ. ರಜೆ ಇದೆ ಅಂತಾ ಅಧಿಕಾರಿಗಳು ಫ್ಯಾಮಿಲಿ ಟೂರ್ ಹೋಗಿದ್ದಾರೆಯೇ? ನಾವು ಅಧಿಕಾರಕ್ಕೆ ಬಂದಿದ್ದೇವೆ. ಯಾಕೆ ಬಂದಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಮುಂದೆ ನೋಡೋಣ ಎಂದು ಹೇಳಿದ್ದರು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು.
ನಿನ್ನೆಯೂ ಬಂದಿರಲಿಲ್ಲ ಎಸ್ಪಿ:
ಸಚಿವರ ಕೆಂಗಣ್ಣಿಗೆ ಗುರಿಯಾಗಿದ್ದ ಡಿಸಿ ಹಾಗೂ ಎಸ್ಪಿ ಅವರು ಕೆಲಸ ನಿರ್ವಹಿಸುತ್ತಿದ್ದರು. ಆದ್ರೆ, ಕಳೆದ ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾಧಿಕಾರಿಯಾಗಿದ್ದ ಶಿವಾನಂದ ಕಾಪಶಿ ವರ್ಗಾವಣೆ ಆಗಿದ್ದರು. ಈ ಜಾಗಕ್ಕೆ ವೆಂಕಟೇಶ್ ಅವರು
ಬಂದರು. ಭಾನುವಾರ ಹದಡಿ ರಸ್ತೆಯಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಭಾಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೂ ಎಸ್ಪಿ ಕೆ. ಅರುಣ್ ಅವರು ಬಂದಿರಲಿಲ್ಲ. ಡಿಸಿ, ಸಿಇಒ ಸೇರಿದಂತೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಬಂದಿದ್ದರು. ಪೊಲೀಸ್ ಇಲಾಖೆಯ ಪರ ಎಎಸ್ಪಿ ಅವರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ವರ್ಗಾವಣೆ ಇಲ್ಲ ಅಂದ್ರು ಸಚಿವರು: ಮಾರನೇ ದಿನ ಟ್ರಾನ್ಸಫರ್
ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದ ಸಚಿವ ಮಲ್ಲಿಕಾರ್ಜುನ್ ಅವರು ಎಸ್ಪಿ ವರ್ಗಾವಣೆ ಸದ್ಯಕ್ಕೆ ಇಲ್ಲ. ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಂಥ ಅಧಿಕಾರಿಗಳು ಬೇಕು. ಒಳ್ಳೆಯ ರಾಜಕಾರಣಿಗಳಿಗೆ ಒಳ್ಳೆಯ ಅಧಿಕಾರಿಗಳು ಬೇಕು ಎಂದಾಗಿ ಮಲ್ಲಿಕಾರ್ಜುನ್ ಅವರೇ ಹೇಳಿದ್ದರು. ಆದ್ರೂ ವರ್ಗಾವಣೆ ಆಗಿರುವುದು ಕುತೂಹಲ ಕೆರಳಿಸಿದೆ.
ಮರಳು ಮಾಫಿಯಾಕ್ಕೆ ಬ್ರೇಕ್:
ಇನ್ನು ಅರುಣ್ ಅವರು ಬಂದ ಬಳಿಕ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಿದ್ದರು. ಮರಳು ಲೂಟಿಕೋರರಿಗೆ ಬಿಸಿ ಮುಟ್ಟಿಸಿದ್ದರು. ಅಕ್ರಮ ನಡೆಯದಂತೆ ತಡೆದಿದ್ದರು. ಹೊನ್ನಾಳಿ, ಹರಿಹರದಲ್ಲಿ ಮರಳು ಅಕ್ರಮಕೋರರು ತಣ್ಣಗಾಗಿದ್ದರು.
ಅಷ್ಟರ ಮಟ್ಟಿಗೆ ದಿಟ್ಟ ಕ್ರಮ ಕೈಗೊಂಡಿದ್ದರು. ದಾವಣಗೆರೆ ಜಿಲ್ಲೆಯಲ್ಲಿ ಮಟ್ಕಾ, ಜೂಜು, ಕಳ್ಳತನ, ಲೂಟಿ, ದರೋಡೆ ಸೇರಿದಂತೆ ಯಾವುದೇ ಅಪರಾಧ ಪ್ರಕರಣಗಳು ನಡೆದರೂ ಆರೋಪಿಗಳ ಬಂಧನಕ್ಕೆ ಬಲೆ ಬೀಸುತ್ತಿದ್ದರು. ಆದಷ್ಟು ಬೇಗ
ಆರೋಪಿಗಳ ಬಂಧನವೂ ಆಗುತಿತ್ತು.
ಡೈನಾಮಿಕ್ ಎಸ್ಪಿ:
ಎಲ್ಲಾ ಅಕ್ರಮಗಳಿಗೆ ಹೆಚ್ಚು ಕಡಿಮೆ ಕಡಿವಾಣ ಹಾಕಿದ್ದ ಕೆ. ಅರುಣ್ ಅವರು ಡೈನಾಮಿಕ್ ಎಸ್ಪಿ ಅಂತಾನೇ ಎಲ್ಲರಿಂದಲೂ ಕರೆಯಿಸಿಕೊಳ್ಳುತ್ತಿದ್ದರು. ಅವರ ಕಾರ್ಯವೈಖರಿಗೆ ಪ್ರಾಮಾಣಿಕ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ,
ಕೆ. ಅರುಣ್ ಅವರ ವರ್ಗಾವಣೆ ಹಿಂದೆ ಕಾರಣಗಳು ಸಾಕಷ್ಟಿವೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕೇವಲ ಐದು ತಿಂಗಳು ಮಾತ್ರ ದಾವಣಗೆರೆಯಲ್ಲಿ ಕೆಲಸ ಮಾಡಿದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದದ್ದು ಎಲ್ಲರ ಮೆಚ್ಚುಗೆಗೆ ಪಾತ್ರ ಆಗಿತ್ತು.
ರೌಡಿ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಿತ್ತು. ಒಟ್ಟಿನಲ್ಲಿ ಒಳ್ಳೆಯ ಅಧಿಕಾರಿ ವರ್ಗಾವಣೆ ಆಗಿ ಹೋದರಲ್ಲಾ ಎಂಬ ಕೊರಗು ಮಾತ್ರ ದಾವಣಗೆರೆ ಜಿಲ್ಲೆಯ ಜನರದ್ದು.