ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದ್ದು, ಮಾರ್ಚ್ 15 ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯಾದ ಜಿ.ಎಂ. ಗಂಗಾಧರಸ್ವಾಮಿ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಿದರು.
ಚುನಾವಣಾ ವೇಳಾಪಟ್ಟಿ;
ನಾಮಪತ್ರ ಸಲ್ಲಿಕೆಯು ಮಾರ್ಚ್ 16 ರಿಂದ ಪ್ರಾರಂಭವಾಗಿದ್ದು, ನಾಮಪತ್ರ ಸಲ್ಲಿಕೆಗೆ ಮಾರ್ಚ್ 23 ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆಯು ಮಾರ್ಚ್ 24 ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ಕೊನೆಯ ಮಾರ್ಚ್ 26 ಕೊನೆಯ ದಿನವಾಗಿದೆ. ಮತದಾನವು ಏಪ್ರಿಲ್ 9 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. ಚುನಾವಣಾಧಿಕಾರಿಗಳ ಕಚೇರಿಯು ಪಾಲಿಕೆ ಮುಖ್ಯ ಕಚೇರಿಯಲ್ಲಿದ್ದು ಇಲ್ಲಿಯೇ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ ಎಂದರು.
ಮಾದರಿ ನೀತಿ ಸಂಹಿತೆ ಮತ್ತು ನಿರ್ಬಂಧಗಳು:
ಚುನಾವಣಾ ಘೋಷಣೆಯಾದ ಮಾರ್ಚ್ 15 ರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು ಮೇ 6 ರ ವರೆಗೆ ಜಾರಿಯಲ್ಲಿರುತ್ತದೆ. ದಾವಣಗೆರೆ ಮಹಾನಗರ ಪಾಲಿಕೆ ಮತ್ತು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಮಾತ್ರ ನೀತಿ ಸಂಹಿತೆ ಸೀಮಿತವಾಗಿದೆ ಎಂದರು.
ಚುನಾವಣಾ ಕರಪತ್ರ, ಪೋಸ್ಟರ್ ಪ್ರಕಟಣೆ ಕುರಿತು ಪ್ರಿಂಟಿಂಗ್ ಪ್ರೆಸ್ ಮಾಲೀಕರು ಯಾವುದೇ ಪ್ರಚಾರ ಸಾಮಗ್ರಿ ಮುದ್ರಿಸುವ ಮೊದಲು ರಿಟನಿರ್ಂಗ್ ಆಫೀಸರ್ ಅಥವಾ ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ, ನಗರದಲ್ಲಿರುವ ರಾಜಕೀಯ ವ್ಯಕ್ತಿಗಳ ಫ್ಲೆಕ್ಸ್, ಬ್ಯಾನರ್ ಹಾಗೂ ಸರ್ಕಾರಿ ಜಾಹೀರಾತುಗಳನ್ನು 24 ಗಂಟೆಯೊಳಗೆ ತೆರವುಗೊಳಿಸಲು ಈಗಾಗಲೇ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಒಬ್ಬ ವ್ಯಕ್ತಿ ರೂ. 50 ಸಾವಿರದವರೆಗೆ ನಗದು ಸಾಗಣೆ ಮಾಡಬಹುದು, ಅದಕ್ಕಿಂತಲೂ ಹೆಚ್ಚಿನ ನಗದು ಸಾಗಣೆ ಮಾಡಬೇಕಾದಲ್ಲಿ ಅಗತ್ಯ ದಾಖಲೆಗಳು ಇರಬೇಕು, ಇಲ್ಲವಾದಲ್ಲಿ ಚುನಾವಣಾ ಸ್ಕ್ವಾಡ್‍ಗಳು ವಶಪಡಿಸಿಕೊಳ್ಳಲಿವೆ. ದಾಖಲೆಗಳಿಲ್ಲದೆ ನಗದು ಸಾಗಣೆ ಮಾಡಿದಲ್ಲಿ ವಶಪಡಿಸಿಕೊಳ್ಳಲಾಗುತ್ತದೆ. ಕ್ಯಾಶ್ ಸೀಜರ್ ಸಮಿತಿ ಎದುರು ಹಾಜರಾಗಿ ದಾಖಲೆಗಳನ್ನು ಒದಗಿಸಿ ಪಡೆಯಬಹುದು ಎಂದು ಹೇಳಿದರು.





Leave a comment