ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರಸ್ವಾಮಿ ಅವರು ಮತದಾರರ ಪಟ್ಟಿಯ ಸುಧಾರಣೆ ಮತ್ತು ಪಾರದರ್ಶಕತೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಮತದಾರರ ಪಟ್ಟಿಯ ಮುಖ್ಯಾಂಶಗಳ:
ಮತದಾರರ ಪಟ್ಟಿಯ ಪ್ರಮುಖ ಅಂಕಿ-ಅಂಶಗಳು:
ಒಟ್ಟು ಮತದಾರರು: 2,32,564
ಪುರುಷರು: 1,14,165
ಮಹಿಳೆಯರು: 1,18,355
ಇತರೆ: 44
ಮತಗಟ್ಟೆಗಳು: ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳಿದ್ದು, ಇದರಲ್ಲಿ 67 ಹೊಸ ಕೇಂದ್ರಗಳನ್ನು ತೆರೆಯಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪ್ರಸ್ತುತ ಒಟ್ಟು 2,32,564 ಮತದಾರರಿದ್ದಾರೆ. ಇವರಲ್ಲಿ ಪುರುಷ ಮತದಾರರು 1,14,165, ಮಹಿಳಾ ಮತದಾರರು 1,18,355 ಹಾಗೂ ಇತರೆ 44 ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆ ಕೇಂದ್ರಗಳನ್ನು ಗುರುತಿಸಲಾಗಿದೆ. ಮತದಾನದ ಪ್ರಕ್ರಿಯೆಯನ್ನು ಸುಲಭಗೊಳಿಸಲು ಜಿಲ್ಲಾಡಳಿತವು 67 ಹೊಸ ಮತಗಟ್ಟೆ ಕೇಂದ್ರಗಳನ್ನು ತೆರೆದಿದೆ. ಮತ್ತು 24 ಮತಗಟ್ಟೆಗಳನ್ನು ಹಳೆಯ ಸ್ಥಳದಿಂದ ಹೊಸ ಜಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದರು.
ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಅವಕಾಶ:
ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ನಾಮಪತ್ರ ಸಲ್ಲಿಕೆಯ ಅಂತಿಮ ದಿನಾಂಕದವರೆಗೂ ಹೆಸರು ಸೇರಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಹೆಸರು ಬಿಟ್ಟು ಹೋಗಿದ್ದರೆ ಅಥವಾ ತಿದ್ದುಪಡಿಗಳಿದ್ದರೆ ಸಾರ್ವಜನಿಕರು ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕ ಸಲ್ಲಿಸಬಹುದು. ಮತದಾರರು ತಮ್ಮ ಹೆಸರನ್ನು ಪರಿಶೀಲಿಸಲು ಚುನಾವಣಾ ಆಯೋಗದ ವೆಬ್‍ಸೈಟ್ ಅಥವಾ ಮೊಬೈಲ್ ಆಪ್ ಬಳಸಬಹುದು. ಪ್ರತಿ ಮತಗಟ್ಟೆಯ ಬಿ.ಎಲ್.ಒ ಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಅವರನ್ನು ನೇರವಾಗಿ ಸಂಪರ್ಕಿಸಬಹುದು ಎಂದರು.
‘ಪ್ರಿ-ಎಸ್‍ಐಆರ್’ ಚಟುವಟಿಕೆ ಮತ್ತು ಗೊಂದಲಗಳಿಗೆ ಸ್ಪಷ್ಟನೆ:
ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಲು ಪ್ರಸ್ತುತ ಎಸ್.ಐ.ಆರ್.ಪೂರ್ವ ಚಟುವಟಿಕೆ ನಡೆಯುತ್ತಿದೆ. ಇದರ ಅಡಿಯಲ್ಲಿ ಕುಟುಂಬ ಮ್ಯಾಪಿಂಗ್ ಮಾಡಲಾಗುತ್ತಿದೆ. 2002 ಮತ್ತು 2025ರ ಪಟ್ಟಿಗಳನ್ನು ಹೋಲಿಸಿ ಮ್ಯಾಪಿಂಗ್ ಮಾಡಲಾಗುತ್ತಿದೆ ಎಂದ ಅವರು ಮತದಾರರ ಹೆಸರು ಬಿಟ್ಟು ಹೋಗಿದ್ದಲ್ಲಿ ದಾಖಲೆಗಳನ್ನು ಸಲ್ಲಿಸಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಇರುತ್ತದೆ ಎಂದು ತಿಳಿಸಿದರು.
ಮೃತ ಮತದಾರರ ಹೆಸರನ್ನು ಕೈಬಿಡುವುದು:
ಆಸ್ಪತ್ರೆ ಮತ್ತು ಪಾಲಿಕೆಯಲ್ಲಿನ ದಾಖಲೆಗಳ ಆಧಾರದ ಮೇಲೆ ಮೃತಪಟ್ಟವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ದ್ವಿಗುಣ ಮತದಾರರ ಪತ್ತೆ ಡಿಮೋಗ್ರಾಫಿಕ್ ಸಿಮಿಲಿಯಾರಿಟಿ ಎಂಟ್ರಿ, ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 57820 ಕ್ಕೂ ಹೆಚ್ಚು ಮತದಾರರ ದ್ವಿಗುಣ ಹೆಸರುಗಳು ಕಂಡುಬಂದಿದ್ದು, ಅವುಗಳನ್ನು ಪರಿಶೀಲಿಸಲು ಸಂಬಂಧಿಸಿದ ಮತದಾರರ ವಿಳಾಸಕ್ಕೆ ನೋಟಿಸ್ ನೀಡಲಾಗುತ್ತಿದೆ. ಈ ಮತದಾರರು ಕ್ಷೇತ್ರದ ವ್ಯಾಪ್ತಿಯ ಇತರೆ ಮತಗಟ್ಟೆ, ಜಿಲ್ಲೆಯ ಬೇರೆ ಕ್ಷೇತ್ರ, ರಾಜ್ಯದ ಇತರೆ ಕ್ಷೇತ್ರ ಮತ್ತು ಹೊರ ರಾಜ್ಯಗಳಲ್ಲಿ ಮತದಾರರಾಗಿರುವ ಬಗ್ಗೆ ಪಟ್ಟಿಯನ್ನು ತಯಾರಿಸಲಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಎಚ್ಚರಿಕೆ:
“ಯಾವುದೇ ಮತದಾರರ ಹೆಸರನ್ನು ಏಕಾಏಕಿ ಪಟ್ಟಿಯಿಂದ ಕೈಬಿಡುವುದಿಲ್ಲ. ಹೆಸರು ಡಿಲೀಟ್ ಆಗುತ್ತದೆ ಎಂಬ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಗೊಂದಲವಿದ್ದರೆ ದಾಖಲೆಗಳನ್ನು ನೀಡಿ ಹೆಸರನ್ನು ಉಳಿಸಿಕೊಳ್ಳಲು ಅವಕಾಶವಿದೆ,” ಎಂದ ಅವರು ಚುನಾವಣಾ ಪ್ರಕ್ರಿಯೆ ಘೋಷಣೆಯಾದ ನಂತರ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗದ ಕಾರಣ, ಈಗಲೇ ಮತದಾರರು ಜಾಗೃತರಾಗಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ ಎಂದು ಹೇಳಿದರು.
ಈ ವೇಳೆ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.





Leave a comment