ದಾವಣಗೆರೆ: ಮುಸ್ಲಿಂ ವ್ಯಕ್ತಿಯೊಬ್ಬರು ಹರಕೆ ಫಲಿಸಿದ್ದಕ್ಕಾಗಿ ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷ ಅಯ್ಯಪ್ಪ ಮಾಲೆ ಹಾಕಿ, ಶಬರಿಮಲೆಗೆ ತೆರಳಿ ಸ್ವಾಮಿಯ ದರ್ಶನ ಪಡೆಯುತ್ತಾರೆ.
ಕಟ್ಟಿಕೊಂಡ ಹರಕೆ ಈಡೇರಿದ್ದಕ್ಕಾಗಿ ದಾವಣಗೆರೆಯ ಮುಸ್ಲಿಂ ವ್ಯಕ್ತಿಯೊಬ್ಬರು ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಾಲೆ ಧರಿಸುತ್ತಿರುವ ಅವರು ಪ್ರತಿ ವರ್ಷ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಜಾತ್ಯತೀತ, ಧರ್ಮತೀತ ಮನೋಭಾವದಿಂದ ಅಯ್ಯಪ್ಪ ಸ್ವಾಮಿಯ ಮಾಲೆಯನ್ನು ಧರಿಸುವ ಅವರು ಸ್ವಾಮಿಯನ್ನು ಭಕ್ತಿಯಿಂದ ಆರಾಧಿಸುತ್ತಾ ಭಾವೈಕ್ಯತೆ ಸಾರುತ್ತಿದ್ದಾರೆ.
ಹೌದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಮದ ನಿವಾಸಿ ಶಫೀವುಲ್ಲಾ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದಾರೆ. ಶಫೀವುಲ್ಲಾ ಅವರು ಬೆಳ್ಳಿಗನೂಡು ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸತತ 18 ವರ್ಷಗಳಿಂದ ಕೆಲಸ ಮಾಡುತ್ತಿರುವ ಶಫೀವುಲ್ಲಾ ಅವರು ಅಯ್ಯಪ್ಪಸ್ವಾಮಿ ದೇವರ ಪರಮಭಕ್ತರಾಗಿ ಗುರುತಿಸಿಕೊಂಡಿದ್ದಾರೆ. ಮುಸ್ಲಿಂ ಆಗಿದ್ದರೂ ಅಯ್ಯಪ್ಪ ಸ್ವಾಮಿ ಮೇಲೆ ಅಪಾರವಾದ ಭಕ್ತಿಯನ್ನು ಇಟ್ಟುಕೊಂಡಿದ್ದಾರೆ.
ಸದಾ ಅಯ್ಯಪ್ಪ ಸ್ವಾಮಿಯನ್ನು ಆರಾಧಿಸುವ ಇವರು ಅಂದುಕೊಂಡಿದ್ದು, ನೆರವೇರಿದ್ದಕ್ಕಾಗಿ ಮಾಲೆ ಧರಿಸುತ್ತಿದ್ದಾರೆ. ಜೀವನದಲ್ಲಿ ಉತ್ತಮವಾದ ಬೆಳವಣಿಗೆಗಳಾದ ಪರಿಣಾಮ ತಮ್ಮ ಸ್ನೇಹಿತರೊಂದಿಗೆ ಮಾಲೆ ಧರಿಸಿ ಶಬರಿಮಲೆಗೆ ತೆರಳಿ ದರ್ಶನ ಪಡೆಯುತ್ತಾರೆ. ಅಲ್ಲದೇ ಕನಸಿನಲ್ಲಿ ಅಯ್ಯಪ್ಪ ಸ್ವಾಮಿ ದೇವರು ಆಗಮಿಸಿ ಶಬರಿಮಲೆಗೆ ಬರುವಂತೆ ಶಫೀವುಲ್ಲಾ ಅವರಿಗೆ ಒತ್ತಾಯಸಿದ್ದರಂತೆ, ಆರ್ಥಿಕವಾಗಿ ಕುಗ್ಗಿದ್ದ ಶಫೀವುಲ್ಲಾ ಅವರನ್ನು ಸ್ನೇಹಿತರು ಹಣ ಹಾಕಿ ಶಬರಿಮಲೆಗೆ ಕರೆದುಕೊಂಡು ಹೋದಾಗಿನಿಂದ ಸ್ವಾಮಿಯ ಭಕ್ತನಾಗಿದ್ದೇನೆ ಎನ್ನುತ್ತಾರೆ ಶಫೀವುಲ್ಲಾ.
ಗ್ರಂಥಾಲಯ ಮೇಲ್ವಿಚಾರಕ ಆಗಿದ್ದ ನನಗೆ ಸಿಗುತ್ತಿದ್ದದ್ದು ಕೇವಲ ಏಳು ಸಾವಿರ ರೂಪಾಯಿ ಗೌರವಧನ. ಸ್ವಾಮಿಯ ದರ್ಶನ ಪಡೆಯುವ ವೇಳೆ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿಯಾಗುವಂತೆ ಕಳೆದ ಬಾರಿ ಹರಕೆ ಮಾಡಿಕೊಂಡಿದ್ದೆ. ಹರಕೆ ಮಾಡಿಕೊಂಡ ಕೇವಲ ಮೂರೇ ತಿಂಗಳಲ್ಲಿ ರಾಜ್ಯಾದ್ಯಂತ ಕನಿಷ್ಠ ವೇತನ ಜಾರಿಯಾಯಿತು. ಹಿಂದೂ ಮುಸ್ಲಿಂ ಎಂಬ ಜಾತಿ ಧರ್ಮ ಬಿಟ್ಟು ದೇವರು ಒಬ್ಬನೇ ಎಂದು ಅರಿತು ನಡೆಯಬೇಕು” ಎಂದು ಶಫೀವುಲ್ಲಾ ತಿಳಿಸಿದರು.
ಶಫೀವುಲ್ಲಾ ಅವರು ಸತತ ಮೂರು ವರುಷಗಳಿಂದ ಅಯ್ಯಪ್ಪಸ್ವಾಮಿ ಭಕ್ತರಾಗಿ ಮಾಲೆ ಧರಿಸಿ ಶಬರಿಮಲೆಗೆ ತೆರಳಿ ಸ್ನೇಹಿತರೊಂದಿಗೆ ಪಾದಯಾತ್ರೆ ನಡೆಸುತ್ತಾರೆ. ಅಲ್ಲದೇ ಜಾತಿ ಧರ್ಮ ಮರೆತು ಸರತಿ ಸಾಲಿನಲ್ಲಿ ನಿಂತು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಭಕ್ತಿ ಸಮರ್ಪಿಸುತ್ತಿದ್ದಾರೆ. ಅಯ್ಯಪ್ಪ ಸ್ವಾಮಿ ಮೇಲೆ ಶಫೀವುಲ್ಲಾ ಅವರು ಇಟ್ಟಿರುವ ಭಕ್ತಿ ಭಾವಕ್ಯತೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಹಿಂದೂ – ಮುಸ್ಲಿಂ ಎಂದು ಹೊಡೆದಾಡುವ ಜನರ ಮಧ್ಯೆ ಶಫೀವುಲ್ಲಾ ಅವರು ಭಾವೈಕ್ಯತೆ ಸಾರುತ್ತಾ ಪ್ರೀತಿ ಹಂಚುತ್ತಿದ್ದಾರೆ.