ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಜಿಲ್ಲೆಯ ಯಾವ ಕ್ಷೇತ್ರಗಳಲ್ಲಿ ಯಾರು ಗೆದ್ದರು…. ಆ ಬಳಿಕ ಏನು ಹೇಳಿದರು…?

On: May 13, 2023 12:39 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:13-05-2023

ದಾವಣಗೆರೆ (DAVANAGERE): ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದೆ. ದಾವಣಗೆರೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಯಾವೆಲ್ಲಾ ಅಭ್ಯರ್ಥಿಗಳು ಎಷ್ಟು ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದರು ಮತ್ತು
ಗೆದ್ದ ಬಳಿಕ ಏನು ಹೇಳಿದರು ಎಂಬ ಕುರಿತ ಡೀಟೈಲ್ಸ್ ಸ್ಟೋರಿ.

ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನಲ್ಲಿ ಕಾಂಗ್ರೆಸ್ ನ ಡಿ. ಜಿ. ಶಾಂತನಗೌಡ ಅವರು 17,560 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.

ಬಿಜೆಪಿಯಿಂದ ಕಣಕ್ಕಿಳಿದಿದ್ದ ಎಂ. ಪಿ. ರೇಣುಕಾಚಾರ್ಯ 74,832 ಮತಗಳನ್ನು ಪಡೆದರೆ, ಶಾಂತನಗೌಡರು 92,392 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಈ ಮೂಲಕ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಶಾಂತನಗೌಡರು ಗೆಲುವಿಗೆ ಖುಷಿ ವ್ಯಕ್ತಪಡಿಸಿದರು.

ದಾವಣಗೆರೆ ತಾಲೂಕಿನ ತೋಳಹುಣಸೆಯಲ್ಲಿನ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಅವರು, ಹೊನ್ನಾಳಿಯಲ್ಲಿ ರೇಣುಕಾಚಾರ್ಯರ ದೌರ್ಜನ್ಯ ಮತ್ತು ದಬ್ಬಾಳಿಕೆ, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರಕ್ಕೆ ಬೇಸತ್ತು ನನಗೆ ಮತ ನೀಡಿ ಗೆಲ್ಲಿಸಿದ್ದಾರೆ. ರಾಜ್ಯದಲ್ಲಿ ಮೂರುವರೆ ವರ್ಷದಲ್ಲಿ ಅಧಿಕಾರ ನಡೆಸಿದ ಬಿಜೆಪಿಯು ಭ್ರಷ್ಟಾಚಾರದಲ್ಲಿ ತೊಡಗಿತ್ತು. ಎಲ್ಲಾ ಮತದಾರ ಬಂಧುಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಜಗಳೂರಲ್ಲಿ 874 ಮತಗಳಿಂದ ಕೈ ಜಯಭೇರಿ:

ಜಗಳೂರು ವಿಧಾನಸಭಾ ಚುನಾವಣೆ ಕಣ ನಿಜಕ್ಕೂ ರಂಗೇರಿತ್ತು. ಕ್ಷಣಕ್ಷಣಕ್ಕೂ ಕುತೂಹಲ, ಟೆನ್ಶನ್ ಮೂಡಿಸುತಿತ್ತು. ಮತ ಎಣಿಕೆ ಮುಗಿದಾಕ್ಷಣ ಒಮ್ಮೆ ಕಾಂಗ್ರೆಸ್ ಮುನ್ನಡೆ, ಮತ್ತೊಮ್ಮೆ ಬಿಜೆಪಿ ಮುನ್ನಡೆ. ಕೊನೆ ಕ್ಷಣದವರೆಗೂ ವಿಜಯಮಾಲೆ ಆಚೀಚೆ ಹೋಗಿ ಬರುತಿತ್ತು. ಅಂತಿಮವಾಗಿ ಕಾಂಗ್ರೆಸ್ ನ ದೇವೇಂದ್ರಪ್ಪ ರೋಚಕ ಹಣಾಹಣಿಯಲ್ಲಿ 874 ಮತಗಳಿಂದ ಗೆದ್ದು ಬೀಗಿದ್ದಾರೆ.

ಮತ ಎಣಿಕೆ ಆರಂಭವಾದಾಗ ಬಿಜೆಪಿಯ ಎಸ್. ವಿ. ರಾಮಚಂದ್ರಪ್ಪ ಮುನ್ನಡೆಯಲ್ಲಿದ್ದರು. ಬರಬರುತ್ತಾ ಕಾಂಗ್ರೆಸ್ ನ ದೇವೇಂದ್ರಪ್ಪ ಹಾಗೂ ಪಕ್ಷೇತರ ಅಭ್ಯರ್ಥಿ ಹೆಚ್. ಪಿ. ರಾಜೇಶ್ ಭಾರೀ ಪೈಪೋಟಿ ನೀಡಿದರು. ಅಂತಿಮವಾಗಿ ಜಯ
ದೇವೇಂದ್ರಪ್ಪರಿಗೆ ಒಲಿದು ಬಂತು. ದೇವೇಂದ್ರಪ್ಪ 50, 765 ಮತಗಳನ್ನು ಪಡೆದರು. ತೀವ್ರ ಪೈಪೋಟಿ ನೀಡಿದ ಎಸ್. ವಿ. ರಾಮಚಂದ್ರಪ್ಪ 49,891 ಹಾಗೂ ಪಕ್ಷೇತರ ಅಭ್ಯರ್ಥಿ ರಾಜೇಶ್ ಸಹ 49, 891 ಮತ ಪಡೆದರು.

ದಾವಣಗೆರೆ ದಕ್ಷಿಣದಲ್ಲಿ ಎಸ್. ಎಸ್. ಗೆ 27,888 ಮತಗಳ ಜಯ:

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 93 ವರ್ಷ ವಯಸ್ಸಿನ ಕಾಂಗ್ರೆಸ್ ಅಭ್ಯರ್ಥಿ ಡಾ. ಶಾಮನೂರು ಶಿವಶಂಕರಪ್ಪ ಅವರು 27,888 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದಾರೆ.

ಬಿಜೆಪಿಯ ಬಿ. ಜಿ. ಅಜಯ್ ಕುಮಾರ್ ಮತ ಎಣಿಕೆ ಆರಂಭದಲ್ಲಿ ಮುನ್ನಡೆ ಸಾಧಿಸಿದರು. ಮೂರು ರೌಂಡ್ ಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮುನ್ನಡೆ ಸಾಧಿಸಿದರು. ಆ ಬಳಿಕ ಶಾಮನೂರು ಶಿವಶಂಕರಪ್ಪ ಅವರದ್ದೇ ಮುನ್ನಡೆ. ಹಿರಿಯ ವಯಸ್ಸಿನ ಶಾಸಕರಾಗಿ ಆಯ್ಕೆಯಾಗುವ ಮೂಲಕ ಶಾಮನೂರು ಶಿವಶಂಕರಪ್ಪ ಇತಿಹಾಸ ಬರೆದರು. ಶಾಮನೂರು ಶಿವಶಂಕರಪ್ಪ ಅವರು 84, 298 ಮತಗಳನ್ನು ಪಡೆದರೆ, 56,410 ಮತಗಳನ್ನಷ್ಟೇ ಪಡೆದರು.

ಲಿಂಗಾಯತ ಸಿಎಂ ಹೈಕಮಾಂಡ್ ನಿರ್ಧಾರ: ಎಸ್ ಎಸ್

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದೆ. ಯಾರು ಸಿಎಂ ಆಗಬೇಕೆಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಹೇಳಿದರು.

ತಾಲೂಕಿನ ತೋಳಹುಣಸೆಯ ದಾವಣಗೆರೆ ವಿವಿಯ ಮತ ಎಣಿಕೆ ಕೇಂದ್ರದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗಲೇ ಈ ಬಗ್ಗೆ ಏನನ್ನೂ ಮಾತನಾಡಲ್ಲ. ರಾಜ್ಯ ಮತ್ತು ಕೇಂದ್ರ ನಾಯಕರು ನಿರ್ಧರಿಸುತ್ತಾರೆ ಎಂದು ತಿಳಿಸಿದರು.

ಭರ್ಜರಿ ಜಯಭೇರಿ ಬಾರಿಸಿದ ಬಳಿಕ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು. ಈ ವೇಳೆ ಅವರ ಪುತ್ರ ಎಸ್. ಎಸ್.
ಗಣೇಶ್, ಅಥಣಿ ವೀರಣ್ಣ ಮತ್ತಿತರರು ಅಭಿನಂದನೆ ಸಲ್ಲಿಸಿದರು. ದಾವಣಗೆರೆ ದಕ್ಷಿಣ ಚುನಾವಣಾಧಿಕಾರಿ ರೇಣುಕಾ ಅವರು ಶಾಮನೂರು ಶಿವಶಂಕರಪ್ಪ ಅವರಿಗೆ ಶಾಸಕತ್ವದ ಪ್ರಮಾಣ ಪತ್ರ ವಿತರಿಸಿದರು.

ಎಸ್ ಎಸ್ ಎಂಗೆ 24,472 ಮತಗಳ ವಿಜಯಮಾಲೆ:

ದಾವಣಗೆರೆ ಉತ್ತರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಎಸ್. ಎಸ್. ಮಲ್ಲಿಕಾರ್ಜುನ್ ಅವರು 24,472 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಬಿಜೆಪಿಯ ಲೋಕಿಕೆರೆ ನಾಗರಾಜ್ ಅವರು, ತೀವ್ರ ಪೈಪೋಟಿ ನೀಡಿದ್ದು, 69,547 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು. ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಬರೋಬ್ಬರಿ 94019 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಈ ಮೂಲಕ ಕಳೆದ ಬಾರಿಯ ಚುನಾವಣೆಯಲ್ಲಿ ಸೋತಿದ್ದ ಸೇಡು ತೀರಿಸಿಕೊಂಡರು. ಗೆದ್ದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಬಾರಿ ಜನರ ಆಶೀರ್ವಾದ, ಕಾರ್ಯಕರ್ತರ ಪರಿಶ್ರಮದಿಂದ ಗೆದ್ದಿದ್ದೇನೆ. ದಾವಣಗೆರೆ ಮಾತ್ರವಲ್ಲ, ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಬಸವಂತಪ್ಪರಿಗೆ 32,870 ಮತಗಳಿಂದ ಜಯ:

ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಅಲಿಯಾಸ್ ಬಸವರಾಜ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಜಿಲ್ಲೆಯ ಎಲ್ಲಾ ಅಭ್ಯರ್ಥಿಗಳಿಂತ ಅತಿ ಹೆಚ್ಚು ಮತಗಳನ್ನು ಪಡೆದು ಗೆದ್ದ ಕೀರ್ತಿ ಪಡೆದುಕೊಂಡಿದ್ದಾರೆ.

ಬಸವಂತಪ್ಪ ಅವರು 80,204 ಮತಗಳನ್ನು ಪಡೆದರು. ಪಕ್ಷೇತರ ಅಭ್ಯರ್ಥಿ ಪುಷ್ಪಾ ವಾಗೀಶ್ ಸ್ವಾಮಿ ಅವರು ಎರಡನೇ ಸ್ಥಾನ ಪಡೆದರೆ, 32 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದರು. ಅದೇ ರೀತಿಯಲ್ಲಿ ಬಿಜೆಪಿಯ ಬಸವರಾಜ್ ನಾಯ್ಕ್
ಸಹ 32 ಸಾವಿರ ಹತ್ತಿರ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಬಿಜೆಪಿ ಭದ್ರಕೋಟೆಯಾಗಿದ್ದ ಮಾಯಕೊಂಡದಲ್ಲಿ ಮತ್ತೆ ಕಾಂಗ್ರೆಸ್ ಗೆದ್ದಿದೆ. 2013ರಲ್ಲಿ ಶಿವಮೂರ್ತಿ ನಾಯ್ಕ್ ಅವರು ಆಯ್ಕೆಯಾಗಿದ್ದರೆ, ಕಳೆದ ಬಾರಿ ಪ್ರೊ. ಲಿಂಗಣ್ಣ ಬಿಜೆಯಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್ ನ ಕೆ. ಎಸ್. ಬಸವಂತಪ್ಪ 70204, ಪಕ್ಷೇತರ ಪುಷ್ಪಾ ವಾಗೀಶ್ ಸ್ವಾಮಿ 37334, ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ 34144 ಮತಗಳನ್ನು ಪಡೆದರು.

ಚುನಾವಣೆಯಲ್ಲಿ ಗೆದ್ದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕ್ಷೇತ್ರದ ಜನರು ಪ್ರೀತಿ ತೋರಿಸಿ ಆರಿಸಿ ಕಳುಹಿಸಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಕ್ಷೇತ್ರದಲ್ಲಿನ ಸಮಸ್ಯೆಗಳ ನಿವಾರಣೆಗೆ ಶ್ರಮಿಸುತ್ತೇನೆ ಎಂದು ಹೇಳಿದರು.

4304 ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ:

ಹರಿಹರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ. 2018ರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೂ ಈ ಬಾರಿ ಮುಗ್ಗರಿಸಿದೆ. ಬಿಜೆಪಿಯ ಬಿ. ಪಿ. ಹರೀಶ್ ರೋಚಕ ಹಣಾಹಣಿಯಲ್ಲಿ ಗೆದ್ದು ಬೀಗಿದ್ದಾರೆ.
ಕೇವಲ 4304 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಜೆಡಿಎಸ್ ನ ಹೆಚ್. ಎಸ್. ಶಿವಶಂಕರ್ ಪೈಪೋಟಿ ನೀಡುವಲ್ಲಿ ವಿಫಲರಾಗಿದ್ದಾರೆ. ಬಿ. ಪಿ. ಹರೀಶ್ ಅವರು 63,924, ಕಾಂಗ್ರೆಸ್ ನ ನಂದಿಗಾವಿ ಶ್ರೀನಿವಾಸ್ ಅವರು
59,620 ಮತಗಳನ್ನು ಪಡೆದರೆ, ಜೆಡಿಎಸ್ ನ ಹೆಚ್. ಎಸ್. ಶಿವಶಂಕರ್ 40,580 ಮತಗಳನ್ನಷ್ಟೇ ಪಡೆಯಲು ಸಫಲರಾಗಿದ್ದಾರೆ.

ಹರಿಹರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶಾಸಕರಾಗಿದ್ದ ಎಸ್. ರಾಮಪ್ಪರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಇತ್ತು. ಆದ್ರೆ, ಕೊನೆ ಗಳಿಗೆಯಲ್ಲಿ ನಂದಿಗಾವಿ ಶ್ರೀನಿವಾಸ್ ಅವರು ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು. ಎಸ್. ರಾಮಪ್ಪ ಅವರು ಮುನಿಸಿಕೊಂಡಿದ್ದರೂ ಮತದಾನಕ್ಕೆ ಕೆಲವೇ ಕೆಲವು ದಿನಗಳ ಇರುವಾಗ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿ ಪ್ರಚಾರ ನಡೆಸುವುದಾಗಿ ಘೋಷಿಸಿ, ಪ್ರಚಾರಕ್ಕೂ ಬಂದರು. ಆದ್ರೆ, ಕೆಲ ನಾಯಕರ ಮುನಿಸು ನಂದಿಗಾವಿ ಶ್ರೀನಿವಾಸ್ ಅವರ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಜೊತೆಗೆ ರಾಮಪ್ಪ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಗೆಲ್ಲುತ್ತಾರೆ ಎಂಬ ವಿಶ್ವಾಸ ಇತ್ತು. ಈಗ ಅದು ಸುಳ್ಳಾಗಿದೆ ಎಂದು ನಂದಿಗಾವಿ ಶ್ರೀನಿವಾಸ್ ಬೆಂಬಲಿಗರು ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ರಾಮಪ್ಪರ ಬೆಂಬಲಿಗರಿಗೆ ಯುವಕರು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯ ಇದೆ. ಒಟ್ಟಿನಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದ್ದರೂ ಒಳಬೇಗುದಿಯಲ್ಲಿ ಸೋಲು ಕಂಡಿರುವುದು ಸತ್ಯ.

ಚನ್ನಗಿರಿಯಲ್ಲಿ ಕಾಂಗ್ರೆಸ್ ಗೆ 16,154 ಮತಗಳಿಂದ ಜಯ:

ಅಡಿಕೆ ನಾಡು ಚನ್ನಗಿರಿಯಲ್ಲಿ ಕಾಂಗ್ರೆಸ್ ಕಿಲಕಿಲ ಅಂದರೆ ಕಮಲ ಮುದುಡಿದೆ. ಕಾಂಗ್ರೆಸ್ ಪಕ್ಷದ ಶಿವಗಂಗಾ ವಿ. ಬಸವರಾಜ್ ಅವರು, 16,154 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಮಾಡಾಳ್ ಮಲ್ಲಿಕಾರ್ಜುನ್ ಕಣಕ್ಕಿಳಿದಿದ್ದರಿಂದ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅದೇ ರೀತಿಯಲ್ಲಿ ಬಿಜೆಪಿಯು ಶಿವಕುಮಾರ್ ಅವರಿಗೆ ಟಿಕೆಟ್ ನೀಡಿತ್ತು. ಆದ್ರೆ, ಇಲ್ಲಿ ಪೈಪೋಟಿ ನಡೆದದ್ದು ಮಾತ್ರ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ಮಾತ್ರ. ಕಾಂಗ್ರೆಸ್ ನ ಶಿವಗಂಗಾ ಬಸವರಾಜ್ 77,414 ಮತಗಳನ್ನು ಪಡೆದರೆ, ಮಾಡಾಳ್ ಮಲ್ಲಿಕಾರ್ಜುನ್ 61,260, ಬಿಜೆಪಿಯ ಹೆಚ್. ಎಸ್. ಶಿವಕುಮಾರ್ 21,299 ಹಾಗೂ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ತೇಜಸ್ವಿ ಪಟೇಲ್ ಅವರು ಕೇವಲ 1204 ಮತಗಳನ್ನಷ್ಟೇ ಪಡೆದಿದ್ದಾರೆ.

ಅರ್ಧಕ್ಕೆ ಹೊರಟ ಶಿವಕುಮಾರ್:

ಸೋಲಿನ ಸುಳಿವು ಗೊತ್ತಾಗುತ್ತಿದ್ದಂತೆ ಶಿವಕುಮಾರ್ ಅರ್ಧಕ್ಕೆ ಹೋದ ಘಟನೆ ನಡೆಯಿತು. ಮತ ಎಣಿಕೆ ಕೇಂದ್ರದಲ್ಲಿಯೇ ಇದ್ದ ಶಿವಕುಮಾರ್ ಅವರು, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಪೈಪೋಟಿ ಹೆಚ್ಚಾದ ಕಾರಣ ಅರ್ಧಕ್ಕೆ ಎದ್ದು ಹೊರಟರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment