SUDDIKSHANA KANNADA NEWS/ DAVANAGERE/ DATE:02-09-2023
ದಾವಣಗೆರೆ (Davanagere): ಮನುಷ್ಯನ ಜೀವನದಲ್ಲಿ ಮೌಲ್ಯಗಳು ಮುಖ್ಯವಾಗಿವೆ. ಆದರ್ಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ, ಅದು ಮೌಲ್ಯವಾಗುತ್ತದೆ. ಮಕ್ಕಳ ಭವಿಷ್ಯ ರೂಪಿಸಲು ಅಳಿಸಲಾಗದ ಮೌಲ್ಯಗಳನ್ನು ಶಾಲಾ ಹಂತದಿಂದಲೇ ಮಕ್ಕಳಲ್ಲಿ ಬೆಳೆಸುವ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪುಷ್ಪಲತಾ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ಜ್ಞಾನಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆಯ ಸಹಯೋಗದಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಯ ಶಿಕ್ಷಕರಿಗೆ ಆಯೋಜಿಸಿದ್ದ ಮೌಲ್ಯ ಶಿಕ್ಷಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸುದ್ದಿಯನ್ನೂ ಓದಿ:
Explosive Detection Expertise: ಬೆರಗಾಗುವಂಥ ಟ್ರ್ಯಾಕ್ ರೆಕಾರ್ಡ್: ಸ್ಫೋಟಕ ಪತ್ತೆ, ವಿಧ್ವಂಸಕ ಕೃತ್ಯ ತಡೆ, ಪ್ರಧಾನಿ ಭೇಟಿ ಸ್ಥಳ ತಪಾಸಣೆ ನಿಪುಣೆ ಸೌಮ್ಯ ಈಗ ನೆನಪಷ್ಟೇ……!
ಬಾಲ್ಯದಲ್ಲಿ ಕಟ್ಟಿಕೊಡುವ ಮೌಲ್ಯಗಳು ಮುಂದಿನ ಭವಿಷ್ಯಕ್ಕೆ ಬುನಾದಿಯಾಗುತ್ತವೆ. ಸಂಬಳದ ವ್ಯಾಪ್ತಿಯನ್ನು ಮೀರಿ ತಮ್ಮ ಜ್ಞಾನವನ್ನು ಮಕ್ಕಳಿಗೆ ಆ ಮೂಲಕ ಸಮಾಜಕ್ಕೆ ಕೊಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಇದು ಶಿಕ್ಷಕರ ಆದರ್ಶ ಮೌಲ್ಯವಾಗಿದೆ ಎಂದು ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಕ್ಷಕರಿಗೆ ಸಲಹೆ ನೀಡಿದರು.
ಶಿಕ್ಷಕರು ಶಾಲೆಗಳಲ್ಲಿ ಸಣ್ಣ, ಸಣ್ಣ ಆದರ್ಶಗಳನ್ನು ಹೇಳುವುದರ ಮೂಲಕ ಮೌಲ್ಯಗಳನ್ನು ಪಾಠಗಳ ಸಮನ್ವಯತೆಯನ್ನು ರೂಪಿಸಬಹುದು ಎಂದು ಹೇಳಿದರು.
ಈಶ್ವರಮ್ಮ ಶಾಲೆಯ ಪ್ರಾಂಶುಪಾಲ ಕೆ.ಎಸ್. ಪ್ರಭುಕುಮಾರ್ ಮಾತನಾಡಿ, ಮೌಲ್ಯಗಳನ್ನು ನಶಿಸುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಅಂಕಗಳಿಕೆಗಿಂತ ಮೌಲ್ಯ ಗಳಿಕೆಯ ಬಗ್ಗೆ ಶಿಕ್ಷಣ ಚಿಂತಕರು ಹಾಗೂ ಶಿಕ್ಷಣ ಸಂಸ್ಥೆಗಳು, ಚಿಂತಿಸಬೇಕಾಗಿದೆ. ಪ್ರಯುಕ್ತ ಮೌಲ್ಯ ಶಿಕ್ಷಣ ಕುರಿತ ಕಾರ್ಯಾಗಾರಗಳನ್ನು ಹೆಚ್ಚು ಹೆಚ್ಚಾಗಿ ಶಿಕ್ಷಕರಿಗೆ ತಲುಪಿಸುವ ವ್ಯವಸ್ಥೆಯಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಈಶ್ವರಮ್ಮ ಶಾಲಾಡಳಿದ ಮಂಡಳಿಯ ಅಧ್ಯಕ್ಷೆ ಕೆ.ಆರ್.ಸುಜಾತಕೃಷ್ಣ, ಈಶ್ವರಮ್ಮ ಶಾಲೆಯು ಸುಮಾರು ೪೦ ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುವುದರಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈಶ್ವರಮ್ಮ ಶಾಲೆಯ ಸಂಸ್ಥಾಪಕರಾದ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತ ರಾದ ಬಿ.ಆರ್.ಶಾಂತಕುಮಾರಿಯವರ ಸ್ಮರಣಾರ್ಥವಾಗಿ ಈ ಮೌಲ್ಯ ಶಿಕ್ಷಣ ಕಾರ್ಯಾಗಾರವನ್ನು ಪ್ರತಿ ವರ್ಷವೂ ನೂರಾರು ಶಿಕ್ಷಕರಿಗೆ ಆಯೋಜಿಸಲಾಗುತ್ತಿದೆ. ಮಕ್ಕಳ ಮುಗ್ಧ ಮನಸ್ಸಿನಲ್ಲಿ ನಶಿಸಿಹೋಗದಂತಹ ಮೌಲ್ಯಗಳನ್ನು ಬಿತ್ತಿ, ಮಕ್ಕಳ ಭವಿಷ್ಯಕ್ಕೆ ಚೆಲ್ಲಿ ಸುಂದರ ನಾಡು ಕಟ್ಟುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪುಷ್ಪಲತಾ, ನಿವೃತ್ತ ಪ್ರಾಧ್ಯಾಪಕಿ ಮಲ್ಲಮ್ಮ ನಾಗರಾಜ್ ಅವರನ್ನು ಸನ್ಮಾನಿಸಲಾತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎ.ಪಿ.ಸುಜಾತ, ಕೆ.ವಿ.ಸುಜಾತಾ, ಕೆ.ಎಂ. ಗಿರಿಜಾ, ಬಿ.ಶ್ರೀದೇವಿ, ಎಸ್.ಎಸ್.ಸಂಗೀತಾ, ಜ್ಞಾನಜ್ಯೋತಿ ವನಿತಾ ಶಿಕ್ಷಕಿಯ ವೇದಿಕೆ ಅಧ್ಯಕ್ಷೆ ಜಿ.ಎಸ್.ಶಶರೇಖಾ, ಈಶ್ವರಮ್ಮ ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಎ.ಆರ್.ಉಷಾ ರಂಗನಾಥ್, ಈಶ್ವರಮ್ಮ ಟ್ರಸ್ ಕಾರ್ಯದರ್ಶಿ ಜಿ.ಆರ್.ವಿಜಯಾನಂದ ಇನ್ನಿತರರಿದ್ದರು. ಕಾರ್ಯಾಗಾರದಲ್ಲಿ ವಿವಿಧ ಶಾಲೆಗಳ 120 ಶಿಕ್ಷಕರು, ಶಿಕ್ಷಕಿಯರು ಭಾಗವಹಿಸಿದ್ದರು.