SUDDIKSHANA KANNADA NEWS/ DAVANAGERE/DATE:22_08_2025
ದಾವಣಗೆರೆ: ಕಾನೂನು ಬಾಹಿರವಾಗಿ ಆಟೊರಿಕ್ಷಾಗಳಲ್ಲಿ ಹೆಚ್ಚುವರಿಯಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ 2 ಆಟೋಗಳನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ತಡೆದು ಜಿಲ್ಲಾ ಪೊಲೀಸ್ ಕಚೇರಿ ಬಳಿ ಕರೆಯಿಸಿ ಪರಿಶೀಲಿಸಿದರು.
READ ALSO THIS STORY: ರಸ್ತೆ ರಿಪೇರಿಗೆ ದಾವಣಗೆರೆಯ ಆಲೂರಿನಲ್ಲಿ ವಿದ್ಯಾರ್ಥಿನಿ ಏಕಾಂಗಿ ಧರಣಿ: ಇದು ಕಾಂಗ್ರೆಸ್ ಆಡಳಿತಕ್ಕೆ ಹಿಡಿದ ಕೈಗನ್ನಡಿ!
ಒಂದು ಆಟೋದಲ್ಲಿ 14 ಶಾಲಾ ಮಕ್ಕಳು ಇನ್ನೊಂದು ಆಟೋದಲ್ಲಿ 11 ಶಾಲಾ ಮಕ್ಕಳು ಇದ್ದು, ಆಟೋ ಚಾಲಕರುಗಳಿಗೆ ಕಾನೂನು ಬಾಹಿರವಾಗಿ ಹೆಚ್ಚುವರಿಯಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದು ಸಂಚಾರ ನಿಯಮಗಳ ಉಲ್ಲಂಘನೆ ಆಗಿದೆ. ಅಲ್ಲದೇ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೂಡ ಗಂಭೀರ ವಿಷಯವಾಗಿರುತ್ತದೆ. ಇನ್ನು ಮುಂದೆ ಆಟೋಗಳಲ್ಲಿ ಹೆಚ್ಚುವರಿಯಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಎಚ್ಚರಿಕೆ ನೀಡಿದರು.
ಉತ್ತರ ಸಂಚಾರ ಠಾಣೆಯ ಪೊಲೀಸರು ಸದರಿ 2 ಆಟೋ ಗಳನ್ನು ವಶಕ್ಕೆ ಪಡೆದಿದ್ದು, ಆಟೋ ಚಾಲಕರ ವಿರುದ್ಧ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ನಂತರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಆಟೋಗಳಲ್ಲಿದ್ದ ಶಾಲಾ ಮಕ್ಕಳನ್ನು ಕಛೇರಿಯಲ್ಲಿ ಕೂರಿಸಿಕೊಂಡು ಉಪಚರಿಸಿದ್ದು, ಮಕ್ಕಳ ಪೋಷಕರನ್ನು ಕರೆಯಿಸಿ ಶಾಲಾ ಮಕ್ಕಳನ್ನು ನಿರ್ಲಕ್ಷ್ಯ ವಹಿಸಿ ಆಟೋಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚುವರಿಯಾಗಿ ಮಕ್ಕಳನ್ನು ಆಟೋಗಳಲ್ಲಿ ಕಳುಹಿಸಬಾರದು ಹಾಗೂ ಅದು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ ಜವಾಬ್ದಾರಿಯುತ ನಾಗರಿಕರಾಗಿ ಹಾಗೂ ಪೋಷಕರಾಗಿ ವರ್ತಿಸಬೇಕು ಎಂದು ತಿಳಿ ಹೇಳಿದರು.
ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದರು. ನಂತರ ಮಕ್ಕಳನ್ನು ಅವರ ಪೋಷಕರುಗಳೊಂದಿಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಸಂಚಾರ ಸಿಪಿಐ ನಲವಾಗಲು ಮಂಜುನಾಥ, ಉತ್ತರ ಸಂಚಾರ ಠಾಣೆಯ ಪಿಎಸ್ ಐ ಶ್ರೀ ಮಹಾದೇವ ಭತ್ತೆ ರವರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಟೋ ಚಾಲಕರು ಸೇರಿದಂತೆ ಎಲ್ಲಾ ಶಾಲಾ ವಾಹನಗಳ ಚಾಲಕರುಗಳಿಗೆ ಪೊಲೀಸ್ ಇಲಾಖೆಯು ಸೂಚನೆ ನೀಡಿದೆ. ನಿಗದಿತ ಸಂಖ್ಯೆಗಿಂತ ಹೆಚ್ಚುವರಿಯಾಗಿ ಶಾಲಾ ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕರೆದುಕೊಂಡು ಹೋಗುವಂತಿಲ್ಲ. ಎಲ್ಲಾ ಶಾಲಾ ವಾಹನಗಳ ಚಾಲಕರುಗಳು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಶಾಲಾ ಮಕ್ಕಳ ಪೋಷಕರುಗಳು ತಮ್ಮ ತಮ್ಮ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಪರಮೇಶ್ವರ ಹೆಗಡೆ ಕಟ್ಟುನಿಟ್ಟಿನ ಸೂಚನೆ ಕೊಟ್ಟರು.