SUDDIKSHANA KANNADA NEWS/ DAVANAGERE/ DATE:30-12-2024
ದಾವಣಗೆರೆ: 2024 ವರ್ಷವನ್ನು ಮುಗಿಸಿ 2025 ನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ದಾವಣಗೆರೆ ಜಿಲ್ಲೆಯ ಸಮಸ್ತ ಜನತೆಗೆ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಹೊಸ ವರ್ಷ 2025 ರ ಹಾರ್ದಿಕ ಶುಭಾಶಯ ಕೋರಿದ್ದು, ಸೂಚನೆಗಳನ್ನು ಪಾಲನೆ ಮಾಡುವಂತೆ ಸೂಚಿಸಿದೆ.
ಹೊಸ ವರ್ಷ ದಾವಣಗೆರೆ ಜನತೆಯಲ್ಲಿ ಹೊಸ ಹುರುಪು, ಉಲ್ಲಾಸ, ಸಂತೋಷ, ಬದುಕಿನಲ್ಲಿ ಹೊಸ ಗುರಿ ಆಲೋಚನೆಗಳು ಈಡೇರಲಿ, ಭರವಸೆಯ ಬದುಕಿಗೆ ನಾಂದಿ ಹಾಡಲಿ ಎಂದು ಆಶಿಸಿದೆ. ಡಿಸೆಂಬರ್ 31ರ ರಾತ್ರಿ 2025 ನೇ ಸಾಲಿನ ಈ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಪೋಲಿಸ್ ವತಿಯಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಹೊಸ ವರ್ಷಾಚರಣೆ ಆಯೋಜಿಸಲಾಗುವ ಕಾರ್ಯಕ್ರಮಗಳಲ್ಲಿ ಆಯೋಜಕರು, ಸಂಘಟನೆಗಳು ಮತ್ತು ಸಾರ್ವಜನಿಕರು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಪಾಲಿಸಬೇಕಾದ ಸೂಚನೆಗಳು:
– ಹೊಸ ವರ್ಷಾಚರಣೆಯನ್ನು ಕಾರ್ಯಕ್ರಮದ ಆಯೋಜಕರು ಹಾಗೂ ಸಾರ್ವಜನಿಕರು ನಿಗದಿತ ಸಮಯಕ್ಕೆ ಮುಗಿಸಬೇಕು.
– ಹೊಸ ವರ್ಷಾಚರಣೆ ಸಂಭ್ರಮಾಚರಣೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿ, ಕುಡಿದು ವಾಹನ ಚಾಲನೆ ಮಾಡುವುದು, ವಾಹನಗಳಲ್ಲಿ ಹೆಚ್ಚಿನ ಜನರು ಸವಾರಿ ಮಾಡಬಾರದು. ವ್ಹೀಲಿಂಗ್ ಮಾಡಬಾರದು.
ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಹೊಸ ವರ್ಷ ಆಚರಣೆ ಸಮಯದಲ್ಲಿ ಅಕ್ಕಪಕ್ಕದ ಜನರಿಗೆ ತೊಂದರೆ ಆಗದಂತೆ ವಿಶೇಷವಾಗಿ ಆಸ್ಪತ್ರೆಗಳು, ಅಪಾರ್ಟ್ ಮೆಂಟ್ ಗಳ ಸುತ್ತಮುತ್ತ ಮತ್ತು ಹಿರಿಯ ನಾಗರಿಕರಿಗೆ, ಮಹಿಳೆಯರು, ಹೆಣ್ಣು ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು. ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಖಚಿತ.
– ಹೊಸ ವರ್ಷಾಚರಣೆಯಲ್ಲಿ ಯುವಕರು ಅಶ್ಲೀಲವಾಗಿ, ಅಸಭ್ಯವಾಗಿ ವರ್ತನೆ ಮಾಡಿದರೆ ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು, ದಾಂಧಲೆ ನಡೆಸುವುದು, ಮಹಿಳೆಯರಿಗೆ ತೊಂದರೆ ಉಂಟುಮಾಡುವುದು ಕಂಡು ಬಂದರೆ ಅಂತವರ ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಮಲು ಅಥವಾ ಮಧ್ಯ ನಶೆಯಲ್ಲಿ ಆಚರಣೆ ಮಾಡಿ ಸಾರ್ವಜನಿಕರಿಗೆ ಶಾಂತಿಗೆ ತೊಂದರೆ ನೀಡಬಾರದು.
– ಹೊಸ ವರ್ಷಾಚರಣೆ ಆಚರಣೆ ಕಾರ್ಯಕ್ರಮಗಳ ಆಯೋಜಕರುಗಳು ಕಡ್ಡಾಯವಾಗಿ ಸಿಸಿಟಿವಿಗಳನ್ನು ಅಳವಡಿಸಬೇಕು
– ಸಾರ್ವಜನಿಕರು ಮುಖ್ಯವಾಗಿ ಯುವಕರು ಬೇರೆಯವರಿಗೆ ತೊಂದೆರೆಯಾಗದ ರೀತಿಯಲ್ಲಿ ಹೊಸ ವರ್ಷಾಚರಣೆ ಮಾಡಬೇಕು.
– ವಾಹನಗಳನ್ನು ಅತೀ ವೇಗವಾಗಿ ಚಾಲನೆ ಮಾಡುತ್ತಾ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಜೋರಾಗಿ ಕೂಗುವುದು, ಕಿರಿಚುವುದನ್ನು ನಿಷೇಧಿಸಲಾಗಿದೆ.
– ಸಾರ್ವಜನಿಕ, ಜನ ಸಂದಣಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು ಹಾಗೂ ಯಾವುದೇ ಅಗ್ನಿ ಅವಘಡಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.
– ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಆಚರಬೇಕು. ಅಹಿತಕರ ಘಟನೆ ಕಂಡು ಬಂದರೆ ತುರ್ತು ಸಹಾಯವಣಿ 112 ಗೆ ಕರೆ
ಮಾಡಿ. ಸ್ಥಳೀಯ ಪೊಲೀಸ್ ಠಾಣೆ/ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಮಾಹಿತಿ ನೀಡಿ.
– ಸಾಮಾಜಿಕ ಜಾಲತಾಣಗಳಲ್ಲಿ ಕೋಮುಪ್ರಚೋದಕ ಹಾಗೂ ಧಾರ್ಮಿಕ ನಿಂದನೆ, ಸುಳ್ಳುಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪೋಸ್ಟ್ ಗಳನ್ನು ಹಾಕುವುದಾಗಲೀ ಹಾಗೂ ಶೇರ್ ಮಾಡುವುದಾಗಲೀ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಹೊಸ ವರ್ಷಾಚರಣೆ ಸಂಧರ್ಭದಲ್ಲಿ ಕರ್ಕಶವಾದ ಶಬ್ಧವನ್ನುಂಟು ಮಾಡುವ ಸೌಂಡ್ ಸಿಸ್ಟಂ ಮತ್ತು ಡಿಜೆಗಳನ್ನು ಉಪಯೋಗಿಸಬಾರದು, ಲೌಡ್ ಸ್ಪೀಕರ್ ಗಳನ್ನು ಸರ್ವೋಚ್ಚ ನ್ಯಾಯಾಲಯ ಮತ್ತು ಸರ್ಕಾರದ ಆದೇಶಗಳನ್ನು ಉಲ್ಲಂಘನೆ ಆಗದಂತೆ, ಶಬ್ದ ಮಾಲಿನ್ಯ ಆಗದಂತೆ ಧ್ವನಿವರ್ಧಕಗಳನ್ನು ಬಳಸಬೇಕು.
– ನೈತಿಕ ಪೊಲೀಸ್ ಗಿರಿ ಮತ್ತು ಅನುಚಿತ ವರ್ತನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ.
– ಹೊಸ ವರ್ಷದ ಆಚರಣೆ ನಡೆಸುವ ಆಯೋಜಕರು ವಾಹನಗಳ ಪಾರ್ಕಿಂಗ್ ಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.