Home ಕ್ರೈಂ ನ್ಯೂಸ್ ದಾವಣಗೆರೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ: ಕಾಂಗ್ರೆಸ್ ಮುಖಂಡನ ಪುತ್ರರ ದರ್ಪಕ್ಕೆ ಮಹಿಳಾ ಆಯೋಗ ಕೆಂಡಾಮಂಡಲ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ: ಕಾಂಗ್ರೆಸ್ ಮುಖಂಡನ ಪುತ್ರರ ದರ್ಪಕ್ಕೆ ಮಹಿಳಾ ಆಯೋಗ ಕೆಂಡಾಮಂಡಲ!

Share
ದಾವಣಗೆರೆ
Share

ದಾವಣಗೆರೆ: ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೋದ ಪೊಲೀಸರ ಮೇಲೆಯೇ ಕಾಂಗ್ರೆಸ್ ಮುಖಂಡನ ಪುತ್ರರು ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿತ್ತು. ಈ ಪ್ರಕರಣವನ್ನು ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಮಾತ್ರವಲ್ಲ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಕರ್ನಾಟರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದಾರೆ.

ಘಟನೆ ಹಿನ್ನೆಲೆ ಏನು?

ದಾವಣಗೆರೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಯುಬ್ ಪೈಲ್ವಾನ್ ಅವರ ಪುತ್ರರು ಕರ್ತವ್ಯನಿರತ ಮಹಿಳಾ ಸಿಪಿಐ ಗಾಯತ್ರಿ ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಉದ್ಧಟತನ ಪ್ರದರ್ಶಿಸಿದ್ದರು.

ಜನವರಿ 31ರಂದು ಜಿಲ್ಲಾಸ್ಪತ್ರೆ ಸಮೀಪ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯನ್ನು ಬಿಡಿಸಲು ಹೋದ ಬಡಾವಣೆ ಠಾಣೆಯ ಪೇದೆಗಳಾದ ಕೆಂಚಪ್ಪ ಹಾಗೂ ಹರೀಶ್ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸಿಪಿಐ ಗಾಯತ್ರಿ ಅವರ ಮೊಬೈಲ್ ಕಿತ್ತುಕೊಂಡು, ಅವರೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆಗೆ ಯತ್ನಿಸಲಾಗಿದೆ.

ಆರೋಪಿಗಳ ಬಂಧನ:

ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಬ್ ಪೈಲ್ವಾನ್ ಅವರ ಪುತ್ರರಾದ ಹಸೇನ್, ಹುಸೇನ್ ಮತ್ತು ಹಮ್ಮಾ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈಗಾಗಲೇ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಘಟನೆಯನ್ನು ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದೆ.

ಎಸ್ಪಿಗೆ ನಾಗಲಕ್ಷ್ಮೀ ಚೌಧರಿ ಬರೆದಿರೋ ಪತ್ರದಲ್ಲೇನಿದೆ?

ದಿನಾಂಕ 31 ಜನವರಿ 2026 ರಂದು ದಾವಣಗೆರೆ ಜಿಲ್ಲಾಸ್ಪತ್ರೆ ಸಮೀಪ ನಡೆದ ಗಲಾಟೆಯ ಸಂದರ್ಭದಲ್ಲಿ, ಆರೋಪಿಗಳನ್ನು ಬಂಧಿಸಲು ಹೋದ ಬಡಾವಣೆ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಕೆಂಚಪ್ಪ ಮತ್ತು ಹರೀಶ್ ಅವರ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ. ಇದಲ್ಲದೆ, ಘಟನಾ ಸ್ಥಳದಲ್ಲಿದ್ದ ಸಿಪಿಐ ಗಾಯತ್ರಿ ಅವರು ಗಲಾಟೆಯನ್ನು ಬಿಡಿಸಲು ಮುಂದಾದಾಗ, ಅವರೊಂದಿಗೆ ಅತ್ಯಂತ ಅನುಚಿತವಾಗಿ ವರ್ತಿಸಿ, ಮಹಿಳಾ ಅಧಿಕಾರಿಯ ಮೇಲೆಯೇ ಹಲ್ಲೆಗೆ ಯತ್ನಿಸಿರುವುದು ಅತ್ಯಂತ ಖಂಡನೀಯವಾಗಿದೆ.

ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಯುಬ್ ಪೈಲ್ವಾನ್ ಅವರ ಪುತ್ರರಾದ ಹುಸೇನ್, ಹಸೇನ್ ಮತ್ತು ಹಮ್ಮಾ ಎಂಬುವವರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂಬುದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ಅಲ್ಲದೆ, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಆಯುಬ್ ಪೈಲ್ವಾನ್ ಅವರು ರಕ್ಷಣೆ ನೀಡುತ್ತಿದ್ದಾರೆ ಎಂಬ ಸಾರ್ವಜನಿಕರ ಆಕ್ರೋಶದ ಬಗ್ಗೆಯೂ ಆಯೋಗವು ಗಮನಹರಿಸಿದೆ.

ಒಬ್ಬ ಮಹಿಳಾ ಅಧಿಕಾರಿಯ ಮೇಲೆ ಕರ್ತವ್ಯದ ಅವಧಿಯಲ್ಲಿ ನಡೆದ ಈ ದೌರ್ಜನ್ಯವನ್ನು ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ, ಈ ಪ್ರಕರಣದ ಬಗ್ಗೆ ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಘಟನೆಯ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಸಮಗ್ರ ವರದಿಯನ್ನು ಆದಷ್ಟು ಬೇಗ ಆಯೋಗಕ್ಕೆ ಸಲ್ಲಿಸಬೇಕೆಂದು ಈ ಮೂಲಕ ಸೂಚಿಸಲಾಗಿದೆ ಎಂದು ನಾಗಲಕ್ಷ್ಮೀ ಚೌಧರಿ ಅವರು ಪತ್ರದಲ್ಲಿ ಸೂಚಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *