SUDDIKSHANA KANNADA NEWS/ DAVANAGERE/ DATE:24-04-2023
ದಾವಣಗೆರೆ (DAVANAGERE): ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(SP)ಯಾಗಿ ಡಾ. ಅರುಣ್ (Dr. ARUN)ಅಧಿಕಾರ ಸ್ವೀಕರಿಸಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿ. ಬಿ.ರಿಷ್ಯಂತ್ (C. B. RISHYANTH) ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇಂದು ಅರುಣ್ ಅವರು ಅಧಿಕಾರ ತೆಗೆದುಕೊಂಡಿದ್ದಾರೆ.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪೊಲೀಸರು ಜನಸಾಮಾನ್ಯರೊಂದಿಗೆ ಸ್ನೇಹಿತರಂತೆ ಇರಬೇಕು. ಅನೋನ್ಯತೆ ಬೆಳೆಸಿಕೊಳ್ಳಬೇಕು. ಇಂದು ಅಧಿಕಾರ ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ನೀವೇ ನೋಡುತ್ತೀರಾ ಎಂದು ತಿಳಿಸಿದರು.
2014 ನೇ ಬ್ಯಾಚಿನ ಐಪಿಎಸ್ ಅಧಿಕಾರಿ. ಈಗಾಗಲೇ ಎರಡು ಜಿಲ್ಲೆಗಳಲ್ಲಿ ಎಸ್ಪಿ (SP)ಆಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಚಿತ್ರದುರ್ಗ ಹಾಗೂ ವಿಜಯನಗರ (VIJAYANAGARA)ಜಿಲ್ಲೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದು, ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಲಾಗುವುದು. ಏನೇ ಅಕ್ರಮಗಳು ನಡೆಯುತ್ತಿದ್ದರೂ ನಮ್ಮ ಗಮನಕ್ಕೆ ತನ್ನಿ. ಪೊಲೀಸರ ಮೇಲೆ ನಂಬಿಕೆ ಇಡಿ. ಕಾನೂನು ವಿರೋಧಿ ಚಟುವಟಿಕೆ ನಡೆಯುತ್ತಿದ್ದರೆ ಖಂಡಿತವಾಗಿಯೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಚುನಾವಣೆಗಾಗಿ ದಾವಣಗೆರೆಗೆ ವರ್ಗಾವಣೆ (TRANSFER) ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ಬಗ್ಗೆ ಹೆಚ್ಚು ಆದ್ಯತೆ ನೀಡಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾನೂನು ಪ್ರಕಾರ ಚುನಾವಣೆ ನಡೆಯಬೇಕು. ಕಾನೂನು ವಿರೋಧಿ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ. ನಾವು ಯಾರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ. ಕಾನೂನು ಬಾಹಿರ ಚಟುವಟಿಕೆಗೆ ಆಸ್ಪದ ಇಲ್ಲ. ಕೇವಲ ಒಂದು ತಾಲೂಕಿನಲ್ಲಿ ಮಾತ್ರ ಅಕ್ರಮ, ಕಾನೂನು ವಿರೋಧಿ ಚಟುವಟಿಕೆಗಳು ನಡೆಯುವುದಲ್ಲ, ಎಲ್ಲಾ ಕಡೆಗಳಲ್ಲಿಯೂ ಇರುತ್ತದೆ. ಈ ಬಗ್ಗೆಯೂ ತೀವ್ರ ನಿಗಾ ವಹಿಸಲಾಗುವುದು ಎಂದು ಹೇಳಿದರು.