SUDDIKSHANA KANNADA NEWS/ DAVANAGERE/ DATE:24-10-2024
ದಾವಣಗೆರೆ: ಶ್ರೀ ವಾಲ್ಮೀಕಿ ಪ್ರತಿಷ್ಠಾನ ಹಾಗೂ ಸಾರ್ವಜನಿಕ ವಾಲ್ಮೀಕಿ ಜಯಂತ್ಯೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 3 ನೇ ವರ್ಷದ ಸಾರ್ವಜನಿಕ ವಾಲ್ಮೀಕಿ ಜಯಂತ್ಯೋತ್ಸವದ ಅಂಗವಾಗಿ ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪುರುಷರ ಕೋಲಾಟ ಸ್ಪರ್ಧೆಯಲ್ಲಿ ದಾವಣಗೆರೆ ತಾಲ್ಲೂಕಿನ ನರಗನಹಳ್ಳಿ ತಂಡ ಪ್ರಥಮ ಸ್ಥಾನ ಪಡೆದಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 21 ತಂಡಗಳ ತೀವ್ರ ಪೈಪೋಟಿಯ ನಡುವೆ 6 ತಂಡಗಳು ಅಂತಿಮ ಸುತ್ತು ತಲುಪಿದವು. ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ನರಗನಹಳ್ಳಿ ತಂಡ ಪ್ರಥಮ ಸ್ಥಾನದೊಂದಿಗೆ ನಗದು ಮತ್ತು ಆಕರ್ಷಕ ಟ್ರೋಫಿ ಪಡೆಯಿತು.
ಎರಡನೇ ಬಹುಮಾನವನ್ನು ಜಗಳೂರು ತಾಲ್ಲೂಕಿನ ಹುಚ್ಚಂಗಿಪುರ, ಮೂರನೇ ಬಹುಮಾನವನ್ನು ದಾವಣಗೆರೆ ತಾಲ್ಲೂಕಿನ ಕೋಲ್ಕುಂಟೆಯ ತಂಡ ಪಡೆಯಿತು. ಕಾರ್ಯಕ್ರಮವನ್ನು ರೈತ ಮುಖಂಡ ತೇಜಸ್ವಿ ಪಟೇಲ್ ಉದ್ಘಾಟಿಸಿದರು.
ಸಾರ್ವಜನಿಕ ವಾಲ್ಮೀಕಿ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.
ಮಂಗೇನಹಳ್ಳಿ ಲೋಹಿತ್ ಕುಮಾರ್, ಆದಿತ್ಯ ಅಲ್ಯುಮಿನಿಯಂನ ಮಂಜುನಾಥ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆದ್ನೆ ರಾಜೇಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಗದಗ, ಚಿತ್ರದುರ್ಗ, ವಿಜಯನಗರ, ದಾವಣಗೆರೆ, ಹಾವೇರಿ ಜಿಲ್ಲೆಗಳ 21 ಕೋಲಾಟ ತಂಡಗಳು ಭಾಗವಹಿಸಿದ್ದವು.
ಕೋಲ್ಕುಂಟೆ, ಚಿಕ್ಕಮಲ್ಲನಹೊಳೆ, ನರಗನಹಳ್ಳಿ, ಮತ್ತಿಹಳ್ಳಿ, ಹುಚ್ಚಂಗಿಪುರ ಸೇರಿದಂತೆ 6 ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಅಂತಿಮವಾಗಿ ನರಗನಹಳ್ಳಿ ತಂಡ ಮೊದಲ ಸ್ಥಾನ ಪಡೆಯಿತು. ಕೋಲಾಟ ತಜ್ಞರಾದ ಜಯರಾಜ್ ನಾಯ್ಕ್, ಶಂಭುಲಿAಗನಗೌಡ, ಶಶಿಧರ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.