SUDDIKSHANA KANNADA NEWS/ DAVANAGERE/ DATE:03-10-2023
ದಾವಣಗೆರೆ (Davanagere): ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ನಾವೆಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕು. ಮೀಸಲಾತಿ ಹೋರಾಟ ಮುಂದುವರಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಮಟ್ಟದ ಹೋರಾಟವನ್ನು ಶುರು ಮಾಡಿದ್ದೇವೆ ಎಂದು ಕೂಡಲಸಂಗಮ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
Read Also This Story:
Davanagere: ನಾನೇನೂ ಮಂತ್ರಿಗಿರಿ ಕೇಳಿಲ್ಲ,ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದೇನೆ, ಸಿಎಂ ಸಿದ್ದರಾಮಯ್ಯ ಕರೆದಾಗ ಹೋಗಿ ಮಾತನಾಡುತ್ತೇನೆ: ಶಾಮನೂರು ಶಿವಶಂಕರಪ್ಪ
ನಗರದ ಸದ್ಯೊಜಾತ ಮಠದಲ್ಲಿ ಕರೆಯಲಾಗಿದ್ದ ಜಿಲ್ಲೆಯ ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಬಗ್ಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2024ರ ಲೋಕಸಭೆ ಚುನಾವಣೆಯೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಹಾಲುಮತ ಸಮಾಜಕ್ಕೆ ಎಸ್ ಟಿ ಘೋಷಣೆ ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಸರ್ಕಾರದ ಮೇಲೆ ಒತ್ತಡ ಹೇರಲು ಪೂರ್ವಭಾವಿ ಸಭೆ ನಡೆಸಲಾಗಿದೆ. ಸರ್ಕಾರದ ಗಮನ ಸೆಳೆಯಲು ಇಷ್ಟಲಿಂಗ ಪೂಜೆಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆರವೇರಿಸುವ ಮೂಲಕ ಹೋರಾಟ ಆರಂಭಿಸುತ್ತೇವೆ. ನ್ಯಾಯ ಸಿಗದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಬಜೆಟ್ ಅಧಿವೇಶನದ ಬಳಿಕ ಮಾತುಕತೆ ನಡೆಸುತ್ತೇವೆ ಎಂದು ಸಿಎಂ ಹೇಳಿದ್ದರು. ಆದ್ರೆ, ಇದುವರೆಗೆ ಆಗಿಲ್ಲ. ಹೋರಾಟ ಮಾಡಿದರೆ ಅವರೇ ಕರೆದು ಮಾತನಾಡುತ್ತಾರೆ. 2 ಡಿಯಿಂದ ಪ್ರಯೋಜನ ಇಲ್ಲ. 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಮೂರು ವರ್ಷ ಹೋರಾಟ ಮಾಡಿದರೆ ಸ್ವಲ್ಪ ಮಟ್ಟಿಗೆ ಫಲ ಆಯಿತು. ಆದ್ರೆ, ಹೋರಾಟಕ್ಕೆ ಸರ್ಕಾರ ಸ್ಪಂದಿಸಿತು. ಕಳೆದ ಸರ್ಕಾರ ನಿಧಾನ ಮಾಡಿತು. ಈ ಬಾರಿ ಕಾಂಗ್ರೆಸ್ ಗೆ ಪಂಚಮಸಾಲಿ ಸಮಾಜ ಮತ ಹಾಕಿದ್ದಾರೆ. ಶಾಸಕರೆಲ್ಲರೂ ಸೇರಿ
ಭೇಟಿ ಮಾಡಿದ್ದೇವೆ. ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಕಾರಣಕ್ಕೆ ಮತ್ತೆ ಹೋರಾಟ ಶುರು ಮಾಡುತ್ತಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಪಾದಯಾತ್ರೆ ಮಾಡಿದ್ದೆವು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಭರವಸೆ ನೀಡಿತ್ತು. ಆದ್ರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ್ ಬೊಮ್ಮಾಯಿ ಅವರು
ಕೊಟ್ಟ ಭರವಸೆ ಈಡೇರಲಿಲ್ಲ. ಸರ್ಕಾರದ ಮಟ್ಟದಲ್ಲಿ ನಮ್ಮವರೂ ಇಅದ್ದರೂ ಕಾರ್ಯರೂಪಕ್ಕೆ ಬರಲಿಲ್ಲ. ಕೊನೆ ಗಳಿಗೆಯಲ್ಲಿ ಮೀಸಲಾತಿ ಘೋಷಿಸಿದರೂ ಉಪಯೋಗಕ್ಕೆ ಬರಲಿಲ್ಲ. ವಿಧಾನಸಭೆ ಚುನಾವಣೆ ಬಂದ ಕಾರಣ ಬೇಡಿಕೆ ಈಡೇರಲಿಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ನಮ್ಮ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಹೇಳಿದರು.
ನಾವು ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ನಮ್ಮ ಹಕ್ಕು ಪಡೆಯಬಹುದು. ರಾಜ್ಯದ ಮೂಲೆ ಮೂಲೆಗಳಿಂದಲೂ ನಮ್ಮ ಹೋರಾಟಕ್ಕೆ ಬೆಂಬಲ ದೊರಕಿತ್ತು. ರಾಜ್ಯ ಸರ್ಕಾರವು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ
ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಲೇಬೇಕಾಗುತ್ತದೆ. ಈ ಹಿಂದೆ ನೀಡಿದಂತೆ ಈ ಬಾರಿಯೂ ಬೆಂಬಲಿಸಿ. ನಾವೆಲ್ಲರೂ ಒಟ್ಟಾದರೆ ನಮ್ಮ ಹಕ್ಕು ಪಡೆಯುವುದು ಕಷ್ಟಸಾಧ್ಯವಾಗದು ಎಂದು ಜಯಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟರು.
2 ಎ ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲದು. ಕೃಷಿಯನ್ನೇ ಹೆಚ್ಚಾಗಿ ಅವಲಂಬಿಸಿರುವ ಸಮಾಜ ನಮ್ಮದು. ಸಮಾಜಕ್ಕೆ ನ್ಯಾಯ ಸಿಗಲೇಬೇಕು. ಇದಕ್ಕಾಗಿ ಎಂಥ ಹೋರಾಟಕ್ಕಾದರೂ ನಾನು ಸಿದ್ಧನಿದ್ದೇನೆ. ಸಮಾಜಕ್ಕೆ 2 ಎ ಮೀಸಲಾತಿ ದೊರೆತರೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಬಲ ಸಿಗುತ್ತದೆ. ನಮ್ಮ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ನಾವೆಲ್ಲರೂ ಒಟ್ಟಾಗೋಣ, ಮೀಸಲಾತಿ ಪಡೆದೇ ತೀರುತ್ತೇವೆ ಎಂಬ ಶಪಥ ಮಾಡೋಣ ಎಂದು ಶ್ರೀಗಳು ಕರೆ ನೀಡಿದರು.
ದಾವಣಗೆರೆ ಜಿಲ್ಲಾ ಪಂಚಮಸಾಲಿ ಸಮಾಜ ಬಾಂಧವರ ಸಭೆಯಲ್ಲಿ ಸಮಾಜಕ್ಕೆ ಸಿಗಬೇಕಿರುವ ಸೌಲಭ್ಯ, ಮೀಸಲಾತಿ ಸೇರಿದಂತೆ ವಿವಿಧ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಾಯಿತು. ಸಮಾಜದ ಸಂಘಟನೆ ಮತ್ತು ಆಗಬೇಕಾದ ಕೆಲಸ ಕಾರ್ಯಗಳ ಕುರಿತು ಸಲಹೆ ಸೂಚನೆಗಳನ್ನು ಇದೇ ವೇಳೆ ಪಡೆಯಲಾಯಿತು.
ಸಭೆಯಲ್ಲಿ ಹರಿಹರದ ಮಾಜಿ ಶಾಸಕ ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಹೆಚ್. ಎಸ್. ಶಿವಶಂಕರ್, ಕೂಡಲ ಸಂಗಮ ಪೀಠದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಬಿ. ಜೆ. ಅಜಯ್ ಕುಮಾರ್ ಮತ್ತು ಗೌರವಾಧ್ಯಕ್ಷ ಪರಮೇಶಪ್ಪ ಗೌಡ್ರು ಹೊಳೆಸಿರಿಗೇರೆ, ಜಿಲ್ಲಾಧ್ಯಕ್ಷ ಆರ್. ವಿ. ಅಶೋಕ್ ಗೋಪನಾಳು ಮತ್ತಿತರರು ಪಾಲ್ಗೊಂಡಿದ್ದರು.