SUDDIKSHANA KANNADA NEWS/ DAVANAGERE/ DATE: 05-09-2023
ದಾವಣಗೆರೆ(Davanagere): ರಾಜ್ಯ ಸರ್ಕಾರ ಈ ಹಿಂದೆ ತೀರ್ಮಾನಿಸಿದಂತೆ 100 ದಿನಗಳವರೆಗೆ ನಿರಂತರ ಭದ್ರಾ ನೀರು ಹರಿಸಬೇಕು ಎಂದು ಭಾರತ ರೈತ ಒಕ್ಕೂಟ ಪಟ್ಟು ಹಿಡಿದಿದ್ದು, ಶೇಕಡಾ 70ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶ ದಾವಣಗೆರೆ (Davanagere) ಜಿಲ್ಲೆಯಲ್ಲಿ ಬರುವುದರಿಂದ ಜಿಲ್ಲೆಯ ಜನಪ್ರತಿನಿಧಿಯೊಬ್ಬರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಿ, ಇಲ್ಲಿಯೇ ಐಸಿಸಿ ಸಭೆ ನಡೆಸಬೇಕು ಎಂದು ಆಗ್ರಹಿಸಿದೆ.

ಇಂದು ಭಾರತೀಯ ರೈತ ಒಕ್ಕೂಟದಡಿಯಲ್ಲಿ ನಗರದ ಶ್ರೀ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ರೈತರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸಭೆ ಬಳಿಕ ದಾವಣಗೆರೆ (Davanagere) ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರ ಜೊತೆ ಮಾತಿನ ಚಕಮಕಿಯೂ ನಡೆಯಿತು. ನಂತರ ಎಸಿ ದುರ್ಗಾಶ್ರೀಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸುದ್ದಿಯನ್ನೂ ಓದಿ:
Bhadra Dam:ಸೆ. 6ಕ್ಕೆ ಕಾಡಾ ಸಭೆ: ಕುಸಿಯುತ್ತಿರುವ ಭದ್ರಾ ಡ್ಯಾಂ ನೀರಿನ ಮಟ್ಟ, ನೀರು ಹರಿಸುವಿಕೆ ನಿಲ್ಲುತ್ತೋ, ಮುಂದುವರಿಯುತ್ತೋ…?
ಸಭೆಯಲ್ಲಿ ಮಾತನಾಡಿದ ಹರಿಹರ ಶಾಸಕ ಬಿ. ಪಿ. ಹರೀಶ್, ಅಕ್ರಮ ಪಂಪ್ ಸೆಟ್ ಅಳವಡಿಸಿಕೊಂಡು ಅಡಿಕೆ ತೋಟ ಮಾಡಿರುವ ಕೆಲವು ರೈತರು ಭದ್ರಾ ನಾಲೆಗಳಲ್ಲಿ ನಿರಂತರ ನೀರು ಹರಿಸಿದರೆ ಮುಂದಿನ ಬೇಸಿಗೆಯಲ್ಲಿ ತೋಟ ನಿರ್ವಹಣೆಗೆ ಅನಾನುಕೂಲವಾಗುತ್ತದೆ ಎಂಬ ಕಾರಣಕ್ಕೆ ನೀರು ಹರಿಸುವ ವೇಳಾಪಟ್ಟಿಯನ್ನು ಪರಿಷ್ಕರಿಸಲು ಒತ್ತಾಯಿಸುತ್ತಿದ್ದಾರೆ. ಇವರ ಒತ್ತಡಕ್ಕೆ ಮಣಿದ ಸರ್ಕಾರ ನಾಳೆ ಸಭೆ ಕರೆಯಲಾಗಿದೆ. ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿಗಳು ಈ ಸಭೆಗೆ ಹೋಗಬಾರದು ಎಂದು ಹೇಳಿದರು.
ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಹಾರ ಬೆಳೆ ಬೆಳೆಯಲು ಭದ್ರಾ ಜಲಾಶಯ ನಿರ್ಮಾಣ ಮಾಡಲಾಗಿದೆ. ಆದರೆ ಭತ್ತದ ಬೆಳೆಗಿಂತ ಅಡಿಕೆ ಬೆಳೆಗೆ ನೀರು ಬೇಕು ಎಂದು ಒತ್ತಾಯಿಸುವುದು ಸರಿಯಲ್ಲ. ಸರ್ಕಾರ ತರಾತುರಿಯಲ್ಲಿ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನವರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಭೆ ಕರೆದಿರುವುದು ಭತ್ತದ ಬೆಳೆಗಾರರಿಗೆ ಮರಣ ಶಾಸನವಾಗಿದೆ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬೆಳವನೂರು ನಾಗೇಶ್ವರರಾವ್ ರವರು ಮಾತನಾಡಿ, ಸರ್ಕಾರ 100 ದಿನ ನಿರಂತರವಾಗಿ ನೀರು ಹರಿಸುವುದಾಗಿ ಅಧಿಸೂಚನೆ ಹೊರಡಿಸಿದ್ದರಿಂದ ರೈತರು ಭತ್ತದ ನಾಟಿ ಮಾಡಿದ್ದಾರೆ. ಈಗಾಗಲೇ 2 ಬಾರಿ ಗೊಬ್ಬರ ಹಾಕಿದ್ದು, ಒಂದು ಎಕ್ರೆಗೆ ಸುಮಾರು 35 ಸಾವಿರದಷ್ಟು ಸಾಲ ಸೋಲ ಮಾಡಿ ಬಂಡವಾಳ ಸುರಿದಿದ್ದಾರೆ. ಈಗ ನೀರು ಹರಿಸುವ ವೇಳಾಪಟ್ಟಿಯನ್ನು ಪರಿಷ್ಕರಿಸುತ್ತೇವೆ ಎನ್ನುವುದು ಮಕ್ಕಳಾಟವಾಗಿದೆ ಎಂದು
ಖಂಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಮನೂರು ಲಿಂಗರಾಜುರವರು ಮಾತನಾಡಿ ಈಗಾಗಲೇ ನೀರು ಹರಿಸಲು ಪ್ರಾರಂಭಿಸಿ 25 ದಿನಗಳಾಗಿವೆ. ಇನ್ನು 75 ದಿನ ನೀರು ಹರಿಸಲು 23 ಟಿ ಎಂ ಸಿ ನೀರು ಬೇಕು. ಜಲಾಶಯದಲ್ಲಿ ಕುಡಿಯುವ ನೀರಿಗೆ 7 ಟಿಎಂಸಿ ನೀರು ಮೀಸಲಿಟ್ಟರೂ 33 ಟಿಎಂಸಿ ನೀರಿನ ಸಂಗ್ರಹ ಇದೆ. ಆದ್ದರಿಂದ ಸರ್ಕಾರ ರೈತರೊಂದಿಗೆ ಹುಡುಗಾಟಿಕೆ ಮಾಡಬಾರದು ಎಂದು ಎಚ್ಚರಿಸಿದರು.
ಬಲ್ಲೂರು ರವಿಕುಮಾರ್, ಕುಂದುವಾಡದ ಹೆಚ್ ಎನ್ ಗುರುನಾಥ್, ಕೊಂಡಜ್ಜಿ ಶಾನುಭೋಗರ ನಾಗರಾಜರಾವ್, ಕುಂದುವಾಡದ ಮಹೇಶ್, ಜಿಮ್ಮಿ ಹನುಮಂತಪ್ಪ ಮುಂತಾದವರು ಮಾತನಾಡಿದರು. ಗೋಪನಾಳ ಕರಿಬಸಪ್ಪ, ಕುಂದುವಾಡದ ಗಣೇಶಪ್ಪ, ಕಕ್ಕರಗೊಳ್ಳ ಕಲ್ಲಿಂಗಪ್ಪ, ಬಾತಿ ವೀರೇಶ್ ದೊಗ್ಗಳ್ಳಿ, ಶಿರಮನಹಳ್ಳಿ ಎ ಎಂ ಮಂಜುನಾಥ, ಕಕ್ಕರಗೊಳ್ಳ ಸಿದ್ದಲಿಂಗಪ್ಪ, ಕಲ್ಪನಳ್ಳಿ ರೇವಣಸಿದ್ದಪ್ಪ ಮುಂತಾದವರು ಉಪಸ್ಥಿತರಿದ್ದರು.