Home ಕ್ರೈಂ ನ್ಯೂಸ್ ಖಾಸಗಿ ವಿಡಿಯೋ, ಬ್ಲ್ಯಾಕ್‌ಮೇಲ್‌ಗೆ ಹೆದರದಿರಿ: ಆನ್‌ಲೈನ್ ವಂಚನೆ ತಡೆಯಲು ವಿದ್ಯಾರ್ಥಿನಿಯರಿಗೆ ಡಾ. ನಾಗಲಕ್ಷ್ಮಿ ಚೌಧರಿ ಮಹತ್ವದ ಟಿಪ್ಸ್
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಖಾಸಗಿ ವಿಡಿಯೋ, ಬ್ಲ್ಯಾಕ್‌ಮೇಲ್‌ಗೆ ಹೆದರದಿರಿ: ಆನ್‌ಲೈನ್ ವಂಚನೆ ತಡೆಯಲು ವಿದ್ಯಾರ್ಥಿನಿಯರಿಗೆ ಡಾ. ನಾಗಲಕ್ಷ್ಮಿ ಚೌಧರಿ ಮಹತ್ವದ ಟಿಪ್ಸ್

Share
ನಾಗಲಕ್ಷ್ಮಿ ಚೌಧರಿ
Share

ದಾವಣಗೆರೆ: ಪ್ರತಿಯೊಬ್ಬರ ಜೀವನದಲ್ಲೂ ಏಳು-ಬೀಳುಗಳು ಸಹಜ. ಯಾವುದೇ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳದೆ, ಆರ್ಥಿಕ ಸ್ವಾವಲಂಬನೆ ಸಾಧಿಸಿ ಗೌರವಯುತ ಜೀವನ ಮಹಿಳೆಯರು ನಡೆಸಬೇಕು. ಸೈಬರ್ ಅಪರಾಧಗಳು, ಸಾಮಾಜಿಕ ಜಾಲತಾಣಗಳ ನಕಲಿ ಪ್ರೇಮ ಜಾಲ ಮತ್ತು ಬ್ಲ್ಯಾಕ್‌ಮೇಲ್ ವಿರುದ್ಧ ಯುವತಿಯರು ಮತ್ತು ವಿದ್ಯಾರ್ಥಿನಿಯರು ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಕರೆ ನೀಡಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾಡಳಿತ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಅರಿವು ಕಾರ್ಯಕ್ರಮವನ್ನು ಉದ್ಪಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಮಹಿಳೆಯೂ ಈ ನಾಡಿನ ಶಕ್ತಿ ಮತ್ತು ಗೌರವದ ಸಂಕೇತವಾಗಿದ್ದಾರೆ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ದೇವತೆಯ ಸ್ಥಾನ ನೀಡಲಾಗಿದೆ. ಆದರೆ, ವಾಸ್ತವದಲ್ಲಿ ಮಹಿಳೆಯರಿಗೆ ಹಕ್ಕುಗಳು ಮತ್ತು ಗೌರವ ಸಿಗದಿದ್ದಲ್ಲಿ, ಅದನ್ನು ಧೈರ್ಯವಾಗಿ ಹೋರಾಡಿ ಪಡೆದುಕೊಳ್ಳುವ ಶಕ್ತಿಯನ್ನು ಹೆಣ್ಣುಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ಇತರ ಆಪ್‌ಗಳ ಮೂಲಕ ಅಪರಿಚಿತರ ಜೊತೆ ಸ್ನೇಹ ಬೆಳೆಸುವಾಗ ವಿದ್ಯಾರ್ಥಿನಿಯರು ಜಾಗರೂಕರಾಗಿರಬೇಕು. ಆನ್‌ಲೈನ್‌ನಲ್ಲಿ ಅಪರಿಚಿತರ ಪ್ರೇಮ ಬಲೆಗೆ ಬಿದ್ದು ವಂಚನೆ, ಮಾನವ ಕಳ್ಳಸಾಗಾಣಿಕೆ ಹಾಗೂ ಶೋಷಣೆಗೆ ಒಳಗಾದ ಅನೇಕ ನೈಜ ಘಟನೆಗಳನ್ನು ವಿದ್ಯಾರ್ಥಿನಿಯರ ಗಮನಕ್ಕೆ ತಂದರು.

ಖಾಸಗಿ ವಿಡಿಯೋಗಳು ಮತ್ತು ಆನ್‌ಲೈನ್ ಬೆದರಿಕೆಗಳಿಗೆ ಹೆದರಿ ಯಾರೂ ಮೌನವಾಗಿ ಕಿರುಕುಳ ಸಹಿಸಬಾರದು ಮತ್ತು ಆತ್ಮಹತ್ಯೆ ಮಾಡಿಕೊಳ್ಳಬಾರದು ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಪೋಲಿಸ್ ಇಲಾಖೆ ಅಥವಾ ಮಹಿಳಾ ಆಯೋಗಕ್ಕೆ ದೂರು ನೀಡಬೇಕು. ಅಪರಾಧಿಗಳ ವಿರುದ್ಧ ಆಯೋಗವು ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಬಡತನ ಮತ್ತು ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದು ಕಷ್ಟಪಟ್ಟು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು, ಪೋಷಕರ ತ್ಯಾಗವನ್ನು ಸ್ಮರಿಸಿ ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಸ್ವಾವಲಂಬನೆ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ ಮಾಡಲಾಗುತ್ತಿತ್ತು, ಆರೋಗ್ಯ ಸೌಲಭ್ಯಗಳಿಲ್ಲದೆ ಪ್ರಸವ ಸಮಯದಲ್ಲಿ ತಾಯಂದಿರು ಕಷ್ಟಪಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಹಾಗೂ ಯುವತಿಯರು ಪ್ರೇಮಪಾಶಕ್ಕೆ ಬಿದ್ದು, ಪೋಷಕರ ಮಾತು ಕೇಳದೆ ಓಡಿಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಶೇ. 75ಕ್ಕೂ ಹೆಚ್ಚು ಪೋಕ್ಸೋ ಹಾಗೂ ಪ್ರೇಮ ಪ್ರಕರಣಗಳಲ್ಲಿ ಯುವತಿಯರು ತಮ್ಮ ಶಿಕ್ಷಣ ಮತ್ತು ಭವಿಷ್ಯವನ್ನು ಅರ್ಧಕ್ಕೇ ಮೊಟಕುಗೊಳಿಸಿಕೊಳ್ಳುತ್ತಿದ್ದಾರೆ. ಪ್ರೀತಿಯ ನೆಪದಲ್ಲಿ ವಂಚನೆಗೊಳಗಾಗಿ, ಕೊನೆಗೆ ‘ಜಾತಿ ಬೇರೆ’ ಎಂಬ ಕಾರಣಕ್ಕೆ ತಿರಸ್ಕೃತರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಹೆಣ್ಣುಮಗಳು ತನಗಾಗಿ ಮತ್ತು ತನ್ನ ಭವಿಷ್ಯಕ್ಕಾಗಿ ಬದುಕಬೇಕೇ ವಿನಃ ಯಾರೋ ಒಬ್ಬರಿಗಾಗಿ ಜೀವ ಕಳೆದುಕೊಳ್ಳುವುದಲ್ಲ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿ ದೆಸೆಯಲ್ಲಿ ಪ್ರೀತಿ, ಮದುವೆಗೆ ಅವಕಾಶ ನೀಡದೆ, ಮೊದಲು ಶಿಕ್ಷಣ ಪಡೆದು ತಮ್ಮ ಗುರಿಯನ್ನು ಸಾಧಿಸಬೇಕು. ಪ್ರಜಾಪ್ರಭುತ್ವದಲ್ಲಿ ದೊರೆತಿರುವ ಮತದಾನದ ಹಕ್ಕನ್ನು ಸರಿಯಾಗಿ ಚಲಾಯಿಸಿ, ಸಮಾಜದಲ್ಲಿನ ಭ್ರಷ್ಟಾಚಾರ ಹಾಗೂ ಅಸಮಾನತೆಯ ವಿರುದ್ಧ ಧ್ವನಿ ಎತ್ತಬೇಕು” ಎಂದು ಯುವಜನತೆಗೆ ಆಹ್ವಾನ ನೀಡಿದರು.

ವಿದ್ಯಾರ್ಥಿನಿ ಪ್ರೀತಿ ಅವರು ಮಾತನಾಡಿ, ಅಂಬೇಡ್ಕರ್ ವಸತಿ ನಿಲಯದಲ್ಲಿ ಕುಡಿಯುವ ನೀರು, ಬಿಸಿನೀರು, ನೈರ್ಮಲ್ಯ ಹಾಗೂ ಊಟದ ಗುಣಮಟ್ಟದ ಕುರಿತು ಸುಧಾರಣೆಯಾಗಬೇಕಿದೆ ಎಂದು ಹಾಸ್ಟೆಲ್‌ಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮುಕ್ತವಾಗಿ ಅಧಿಕಾರಿಗಳ ಗಮನಕ್ಕೆ ತಂದರು.

ಜೆ.ಎಚ್. ಪಟೇಲ್ ಬಡಾವಣೆಯ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕಾಲೇಜು ಸಮಯಕ್ಕೆ ಅನುಕೂಲವಾಗುವಂತೆ ಬೆಳಿಗ್ಗೆ 7.30 ಮತ್ತು 8.30 ಬಸ್‌ ಸೌಲಭ್ಯವಿದ್ದು, ಬಸ್ಸಿನಲ್ಲಿ ಓಡಾಡಲು ಆಗುವುದಿಲ್ಲ, ಎಲ್ಲಾ ವಿದ್ಯಾರ್ಥಿಗಳು ಅದೇ ಸಮಯಕ್ಕೆ ಕಾಲೇಜಿಗೆ ತೆರಳಬೇಕಾಗಿರುವುದರಿಂದ 8.00 ಮತ್ತು 8.30 ಗಂಟೆಗೆ ಹೆಚ್ಚುವರಿಯಾಗಿ ಕೆಎಸ್‌ಆರ್‌ಟಿಸಿ (KSRTC) ಬಸ್ ಸೌಕರ್ಯ ಕಲ್ಪಿಸುವಂತೆ ಸಭೆಯಲ್ಲಿ ಮನವಿ
ಮಾಡಿದರು.

ಆಪತ್ಕಾಲದಲ್ಲಿ ಮತ್ತು ತಕ್ಷಣದ ಪೋಲಿಸ್ ರಕ್ಷಣೆಗಾಗಿ 112 ಉಚಿತ ಸಹಾಯವಾಣಿಗೆ ಕರೆ ಮಾಡಬೇಕು, ಮಕ್ಕಳ ನೆರವಿಗಾಗಿ 1098 ಹಾಗೂ ಮಹಿಳೆಯರ ಸುರಕ್ಷತೆಗಾಗಿ 181 ಸಹಾಯವಾಣಿಗಳು ಲಭ್ಯವಿದ್ದು, ಸೈಬರ್‌ ಕ್ರೈಂ ಗೆ ಸಂಬಂಧಿಸಿದ ವಿಷಯಕ್ಕೆ 1930 ಗೆ ಕರೆಮಾಡಿ ಇವುಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ 16 ಹೊಸ ಹಾಸ್ಟೆಲ್‌ಗಳು ಮಂಜೂರಾಗಿದ್ದು, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಜತೆಗೆ ಬಾಡಿಗೆ ಕಟ್ಟಡಗಳಲ್ಲಿರುವ ಹಾಸ್ಟೆಲ್‌ಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಸರಿಪಡಿಸುವ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು ತಿಳಿಸಿದರು.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ, , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್‌ ಹೆಚ್.ಟಿ, ಎಎಸ್ಪಿ ಪರಮೇಶ್ವರ ಹೆಗಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ್‌ , ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್‌, ಬಿಸಿಎಂ ಅಧಿಕಾರಿ ರೇಣುಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles