ದಾವಣಗೆರೆ: ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ವೈಭವದ ಗಣೇಶೋತ್ಸವ ಆಚರಣೆಗೆ ದಾವಣಗೆರೆ ಜಿಲ್ಲಾಡಳಿತ ಪೂರ್ಣ ಸಹಕಾರ ನೀಡಲಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಡಿಜೆ ಸೌಂಡ್ ಸಿಸ್ಟಮ್‌ಗಳನ್ನು ತರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಭಾಭವನದಲ್ಲಿ ಕರೆಯಲಾಗಿದ್ದ ಗಣೇಶೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾಧಿಕಾರಿಗಳು, ಹಬ್ಬವನ್ನು ಶಾಂತಿಯುತ ಹಾಗೂ ಭಕ್ತಿಭಾವದಿಂದ ಆಚರಿಸಲು ಸಾರ್ವಜನಿಕರಿಗೆ ಕರೆ ನೀಡಿದರು.
ಹೊರಜಿಲ್ಲೆಯ ಡಿಜೆ ಬ್ಯಾನ್, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ
“ಮುಂಬೈ, ಬೆಂಗಳೂರು ಸೇರಿದಂತೆ ಯಾವುದೇ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಭಾರೀ ಪ್ರಮಾಣದ ಡಿಜೆ ಸೌಂಡ್ ಸಿಸ್ಟಮ್ ತರಿಸುವಂತಿಲ್ಲ. ಕಳೆದ ಬಾರಿ ತರಿಸಲಾಗಿದ್ದ ಅತ್ಯುಗ್ರ ಶಬ್ದದ ಡಿಜೆಗಳಿಂದಾಗಿ ನೀರು ಇಟ್ಟರೂ ಚೆಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರೈಲ್ವೆ ಎಂಜಿನ್ ಸೌಂಡ್‌ನಂತೆ ತೀವ್ರ ಆಘಾತ ಉಂಟುಮಾಡುವ ಪ್ರೆಷರ್ ಮಿಟ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ,” ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು. ಸರ್ಕಾರ ಹಾಗೂ ನ್ಯಾಯಾಲಯದ ಆದೇಶದಂತೆ ಶಬ್ದ ಮಾಲಿನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದರು.
ಸಂಘಟಕರಿಗೆ ಜಿಲ್ಲಾಡಳಿತ ನೀಡಿದ ಪ್ರಮುಖ ಆಫರ್‌ಗಳು:
ಉಚಿತ ವಿಸರ್ಜನೆ ವಾಹನ ವ್ಯವಸ್ಥೆ: ಗಣೇಶ ವಿಸರ್ಜನೆಯ ಹಿಂದಿನ ದಿನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ವಿಸರ್ಜನೆಗಾಗಿ ಅಗತ್ಯವಿರುವ ವಾಹನಗಳನ್ನು ಕಳುಹಿಸಿಕೊಡಲಾಗುವುದು.
ಸಾಂಸ್ಕೃತಿಕ ತಂಡಗಳ ಪ್ರೋತ್ಸಾಹ: ಹಬ್ಬದ ಮೆರವಣಿಗೆಗೆ ಕಲಾತ್ಮಕ ಮೆರುಗು ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಾನಪದ ಹಾಗೂ ಸಾಂಸ್ಕೃತಿಕ ಕಲಾತಂಡಗಳನ್ನು ಉಚಿತವಾಗಿ ನೀಡಲಾಗುವುದು.
ಸಾರಿಗೆ ಸೌಲಭ್ಯ ವಿಸ್ತರಣೆ: ಸಾರ್ವಜನಿಕರ ಮತ್ತು ಭಕ್ತಾದಿಗಳ ಅನುಕೂಲಕ್ಕಾಗಿ ಹಬ್ಬದ ಸಂದರ್ಭದಲ್ಲಿ ಜಿಲ್ಲಾದ್ಯಂತ ಸಾರಿಗೆ ವ್ಯವಸ್ಥೆಯನ್ನು (ಬಸ್ ಸೇವೆ) ವಿಸ್ತರಿಸಲಾಗುವುದು.
ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಶಾಂತಿ, ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.





Leave a comment