SUDDIKSHANA KANNADA NEWS/ DAVANAGERE/ DATE:25-09-2023
ದಾವಣಗೆರೆ: ಭದ್ರಾ ಡ್ಯಾಂನ ಬಲದಂಡೆ ನಾಲೆಯಲ್ಲಿ ನೂರು ದಿನಗಳ ಕಾಲ ನೀರು ಹರಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ರೈತ ಒಕ್ಕೂಟ ದಾವಣಗೆರೆ (Davanagere) ಬಂದ್ ಗೆ ಕರೆ ಕೊಟ್ಟಿದ್ದು, ಬೆಳಿಗ್ಗೆಯಿಂದಲೇ ಪ್ರಮುಖ ವಾಣಿಜ್ಯ ಕೇಂದ್ರಗಳಿರುವ ರಸ್ತೆಗಳಲ್ಲಿ ತೆರಳಿ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ:
ಭಾರತದಲ್ಲಿ ಯಾವಾಗ ರಿಯಲ್ ಎಸ್ಟೇಟ್ (Real estate)ನಲ್ಲಿ ಹೂಡಿಕೆ ಮಾಡಬಹುದು…? ಈ ಸಮಯದಲ್ಲಿ ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ…!
ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಸರ್ಕಾರ ಮಾತು ಕೊಟ್ಟಂತೆ ಭದ್ರ ಡ್ಯಾಂ ನಿಂದ 100 ದಿನ ನೀರು ಹರಿಸಿ ಭತ್ತದ ಬೆಳೆಗಾರರನ್ನು ರಕ್ಷಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಪ್ರಮುಖ ಬೇಡಿಕೆಗಳು ಯಾವುವು…?
- ಕೃಷಿ ಉತ್ಪನ್ನ ಮಾರಾಕಟ್ಟೆ ರೈತ ಭವನದ ಕಾಂಪೌಂಡ್ ಅನ್ನು ಈ ಹಿಂದಿನ ಎಪಿಎಂಸಿ ಕಾರ್ಯದರ್ಶಿ ಆಕ್ರಮವಾಗಿ ಕೆಡವಿದ್ದು ಖಂಡನೀಯ . ಕೂಡಲೇ ಕಾಂಪೌಂಡ್ ಅನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು.
- ಸರ್ಕಾರ ದಾವಣಗೆರೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು, ರೈತರಿಗೆ ಬೆಳೆ ಪರಿಹಾರಾರ್ಥವಾಗಿ ಎಕರೆಗೆ 25,000 -ರೂಪಾಯಿಗಳನ್ನು ಘೋಷಿಸಿ, ಜನ – ಜಾನುವಾರುಗಳಿಗೆ ಅಗತ್ಯ ಸೌಲಭ್ಯಗಳನ್ನು
ಕಲ್ಪಿಸಿಕೊಡಬೇಕು. - ನೀರಾವರಿ ಪಂಪ್ಸೆಟ್ಗಳಿಗೆ ಹಗಲಿನಲ್ಲಿ ತಡೆರಹಿತ ಗುಣಮಟ್ಟದ 7 ಗಂಟೆ ವಿದ್ಯುತ್ ಅನ್ನು ಪೂರೈಸಬೇಕು.
- ಅಕ್ರಮ – ಸಕ್ರಮ ಅಡಿಯಲ್ಲಿ ಹಣ ಕಟ್ಟಿರುವ ಪಂಪ್ಸೆಟ್ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸುಟ್ಟುಹೋದ T.C ಗಳನ್ನು ಬದಲಿಸಿ ತಕ್ಷಣವೇ ಹೊಸ T.C ಗಳನ್ನು ಹಾಕಿಸಿಕೊಡಬೇಕು.
- ರೈತರ ಬ್ಯಾಂಕ್, ಸಹಕಾರಿ ಸಂಸ್ಥೆ, ಕೃಷಿ ಭೂ ಅಭಿವೃದ್ಧಿ ಬ್ಯಾಂಕ್ , ಖಾಸಗಿ ಫೈನಾನ್ಸ್ ಗಳ ಎಲ್ಲಾ ಸಾಲ ವಸೂಲಾತಿ ತಡೆಹಿಡಿಯಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು.
ಇನ್ನು ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಸಶಸ್ತ್ರ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ತಿಳಿಸಿದ್ದಾರೆ.