SUDDIKSHANA KANNADA NEWS/ DAVANAGERE/ DATE:24-09-2023
ದಾವಣಗೆರೆ (Davanagere): ಭದ್ರಾ ಡ್ಯಾಂನಿಂದ ನಾಲೆಗಳಿಗೆ ನಿರಂತರ 100 ದಿನ ನೀರು ಹರಿಸುವುದಾಗಿ ಆದೇಶ ಹೊರಡಿಸಿದ್ದ ಸರ್ಕಾರ ಈಗ ಇದ್ದಕಿದ್ದಂತೆ ಏಕಾಏಕಿ ನೀರು ಹರಿಸುವುದನ್ನು ನಿಲುಗಡೆ ಮಾಡಿರುವುದನ್ನು ಖಂಡಿಸಿ ಕಳೆದ ಒಂದು ವಾರದಿಂದ ಪ್ರತಿಭಟಿಸುತ್ತಾ ಬಂದಿದ್ದು, ಸರ್ಕಾರದ ಇದಕ್ಕೆ ಮಣಿಯದ ಕಾರಣ ಭಾರತೀಯ ರೈತ ಒಕ್ಕೂಟದ ವತಿಯಿಂದ ಸೆ. 25ರಂದು ದಾವಣಗೆರೆ (Davanagere) ಬಂದ್ ಗೆ ಕರೆಕೊಟ್ಟಿದ್ದು ಇದರ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ಈ ಸುದ್ದಿಯನ್ನೂ ಓದಿ:
ಭಾರತದಲ್ಲಿ ಯಾವಾಗ ರಿಯಲ್ ಎಸ್ಟೇಟ್ (Real estate)ನಲ್ಲಿ ಹೂಡಿಕೆ ಮಾಡಬಹುದು…? ಈ ಸಮಯದಲ್ಲಿ ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ…!
ನಗರದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರೆಲ್ಲರೂ ಸೇರಿಕೊಂಡು ಬಂದ್ ಕುರಿತ ರೂಪುರೇಷೆ ಬಗ್ಗೆ ಚರ್ಚೆ ನಡೆಸಿದರು. ಈಗಾಗಲೇ ನೀರು ಹರಿಸುವಂತೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತಕ್ಕೂ ಮಾಹಿತಿ ಕೊಟ್ಟಿದ್ದೇವೆ. ನೀರು ಹರಿಸುವ ಕುರಿತಂತೆ ಇದುವರೆಗೆ ಯಾವುದೇ ಲಿಖಿತ ಆದೇಶ ಬಂದಿಲ್ಲ. ಒಂದು ವೇಳೆ ಆದೇಶ ಬಂದರೂ ಸಹ ಸೋಮವಾರ ಬೆಳಿಗ್ಗೆ 7.30ಕ್ಕೆ ಜಯದೇವ ವೃತ್ತದಲ್ಲಿ ಸಭೆ ಸೇರುತ್ತೇವೆ. ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಆನ್ ಅಂಡ್ ಆಫ್ ವ್ಯವಸ್ಥೆ ಜಾರಿಗೆ ಮುಂದಾದರೆ ನಾವು ಒಪ್ಪುವುದಿಲ್ಲ. ಈಗಾಗಲೇ 40 ದಿನಗಳ ಕಾಲ ನೀರು ಹರಿಸಲಾಗಿತ್ತು. ಆದ್ರೆ, ಒಂದು ವಾರದಿಂದ ನೀರು ಸ್ಥಗಿತಗೊಳಿಸಲಾಗಿದೆ. ಮುಂದೆಯೂ ಈ ರೀತಿ ಮಾಡುವ ಸಾಧ್ಯತೆ ಇದ್ದು, ಇದನ್ನು ನಾವು ಒಪ್ಪುವುದಿಲ್ಲ ಎಂದು ಶಾಮನೂರು ಲಿಂಗರಾಜ್ ಹೇಳಿದ್ದಾರೆ.
ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು, ರಾಜ್ಯ ಸರ್ಕಾರವು ನೀರು ಹರಿಸುವುದಾಗಿ ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕು. ಮಾತೆತ್ತಿದ್ದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ನುಡಿದಂತೆ ನಡೆಯುತ್ತೇವೆ ಎನ್ನುತ್ತಾರೆ. ಆದ್ರೆ, ಭದ್ರಾ ಡ್ಯಾಂ ನೀರು ಹರಿಸುವ ವಿಚಾರದಲ್ಲಿ ಇದು ಅನ್ವಯಿಸುವುದಿಲ್ಲವೇ. ಕೊಟ್ಟ ಭರವಸೆಯಂತೆ ನೀರು ಹರಿಸಲೇಬೇಕು. ಯಾವುದೇ ಕಾರಣಕ್ಕೂ ಆನ್ ಅಂಡ್ ಆಫ್ ವ್ಯವಸ್ಥೆ ಜಾರಿಗೆ ಮುಂದಾದರೆ ಆಗದು. ಒಂದು ಎಕರೆಗೆ 30 ರಿಂದ 40 ಸಾವಿರ ರೂಪಾಯಿ ಖರ್ಚು ಮಾಡಿರುವ ಭತ್ತ ಬೆಳೆಗಾರರ ಪರಿಸ್ಥಿತಿ ಏನು ಎಂಬುದು ಊಹಿಸಲು ಸಾಧ್ಯವಿಲ್ಲ. ರೈತರನ್ನು ಎದುರು ಹಾಕಿಕೊಂಡಿರುವ ಯಾವ ಸರ್ಕಾರವೂ ಉಳಿದಿಲ್ಲ. ರೈತರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು. ಈಗ ಲಭ್ಯವಿರುವ ನೀರಿನಲ್ಲಿ ದಾವಣಗೆರೆಗೆ ನೀರು ಕೊಟ್ಟರೆ ಸಮಸ್ಯೆಯಾಗದು ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಈ ಹಿಂದೆ ಭದ್ರಾಡ್ಯಾಂ 156 ಅಡಿ ಇದ್ದಾಗಲೂ ನೀರು ಕೊಟ್ಟ ಉದಾಹರಣೆ ಇದೆ. ಆದ್ದರಿಂದ ಕೂಡಲೇ ನೀರು ಹರಿಸಬೇಕು. ಇನ್ನೂ ಮಳೆಗಾಲ ಮುಗಿದಿಲ್ಲ. ಹವಾಮಾನ ಇಲಾಖೆಯು ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಕಾರಣಕ್ಕೆ ಸದ್ಯಕ್ಕೆ ರೈತರ ಹಿತ ಹಾಗೂ ಭತ್ತ ಬೆಳೆ ಹಾಳಾಗಿದರಬೇಕಾದರೆ ಉಳಿದಿರವುದು ನೀರು ಹರಿಸುವುದು ಮಾತ್ರ. ಈ ಕಾರಣಕ್ಕೆ ನಾವೆಲ್ಲರೂ ಬಂದ್ ಗೆ ಕರೆ ಕೊಟ್ಟಿದ್ದೇವೆ. ನಾವು ಯಾರ ವಿರುದ್ಧವೂ ಇಲ್ಲ. ರೈತರ ಪರವಿದ್ದೇವೆ. ಅಕ್ಕಿ ಬೆಲೆಯು ದಿನ ಕಳೆದಂತೆ ಏರಿಕೆಯಾಗುತ್ತಿದೆ. ಈಗ ನಷ್ಟವಾಗುವ ಭತ್ತಕ್ಕೆ ಸರ್ಕಾರದಿಂದ ಪರಿಹಾರ ಕೊಡಲು ಸಾಧ್ಯವೇ ಇಲ್ಲ. ಈ ಎಲ್ಲಾ ವಿತಂಡ ವಾದ ಕೈ ಬಿಟ್ಟು ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಭದ್ರಾ ಅಚ್ಚುಕಟ್ಟುದಾರ ಪ್ರದೇಶದಲ್ಲಿ 1 ಲಕ್ಷದ 40 ಸಾವಿರ ಎಕರೆ ಬರುತ್ತದೆ. 4 ಲಕ್ಷ ಮೆಟ್ರಿಕ್ ಟನ್ ಭತ್ತ ಬೆಳೆಯಲಾಗುತ್ತದೆ. 2 ಲಕ್ಷದ 55 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬರುತ್ತದೆ. ಒಂದು ಕೆಜಿಗೆ 40 ರೂಪಾಯಿ ಅಂತಾದರೂ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟಾಗುತ್ತದೆ. ಇದನ್ನು ಸರ್ಕಾರ ಭರಿಸುವುದು ಅಸಾಧ್ಯ. ಕೊಡುವ ಸ್ವಲ್ಪ ಪ್ರಮಾಣದ ಪರಿಹಾರವೂ ಬೇಡ. ನಮಗೆ ಮೊದಲೇ ಹೇಳಿದಂತೆ ನೂರು ದಿನಗಳ ಕಾಲ ನೀರು ಹರಿಸಲೇಬೇಕು. ಇಲ್ಲದಿದ್ದರೆ ರೈತರ ಬದುಕು ಮೂರಾಬಟ್ಟೆಯಾಗುತ್ತಿದೆ. ಈಗಾಗಲೇ ಭತ್ತ ನಾಟಿ ಮಾಡಿದ್ದು, ಈಗಲೇ ನೀರು ಬೇಕಾಗಿದೆ. ಮಳೆ ಬಾರದಿದ್ದರೆ, ನಾಲೆಯಿಂದ
ನೀರು ಹರಿಸದಿದ್ದರೆ ಹಾಕಿರುವ ಭತ್ತ ಸಂಪೂರ್ಣ ನಾಶವಾಗುತ್ತದೆ. ಈಗಾಗಲೇ ಸುಮಾರು 40 ಸಾವಿರ ರೂಪಾಯಿಯನ್ನು ಎಕರೆಗೆ ಖರ್ಚು ಮಾಡಿರುವ ಭತ್ತ ಬೆಳೆಗಾರರ ಸ್ಥಿತಿಯಂತೂ ಹೇಳತೀರದ್ದಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ರೈತ ಮುಖಂಡರಾದ ಬೆಳವನೂರು ಬಿ. ನಾಗೇಶ್ವರ ರಾವ್ ರವರು, ಎಚ್. ಆರ್. ಲಿಂಗರಾಜ್, ಬಿಜೆಪಿ ಮುಖಂಡರಾದ ಯಶವಂತ ರಾವ್ ಜಾಧವ್, ಅಣಬೇರು ಜೀವನ್ ಮೂರ್ತಿ, ಕೊಂಡಜ್ಜಿ ಜಯಪ್ರಕಾಶ್, ಎಲ್.ಎನ್. ಕಲ್ಲೇಶ್, ಅಜಯ್ ಕುಮಾರ್ ಬಿ. ಜೆ., ರಾಜನಹಳ್ಳಿ ಶಿವಕುಮಾರ್, ಕೊಳೇನಹಳ್ಳಿ ಸತೀಶ್ ರವರು, ಶಿವಪ್ರಕಾಶ್, ಕಡ್ಲೆಬಾಳು ಧನಂಜಯ್ ಹಾಗೂ ಹಿರಿಯ ಮುಖಂಡರು ಭಾಗವಹಿಸಿದ್ದರು.
ದಾವಣಗೆರೆ (Davanagere) ಬಂದ್‌ಗೆ ಬೆಂಬಲ:
ಭದ್ರಾ ನಾಲೆಗಳಿಗೆ ನಿರಂತರ 100 ದಿನ ನೀರು ಹರಿಸುವುದಾಗಿ ಆದೇಶ ಹೊರಡಿಸಿದ್ದ ಸರ್ಕಾರ ಈಗ ಇದ್ದಕ್ಕಿದ್ದಂತೆ, ಏಕಾಏಕಿ ನೀರು ಹರಿಸುವುದನ್ನು ನಿಲುಗಡೆ ಮಾಡಿರುವುದನ್ನು ಖಂಡಿಸಿ ಸೆ. 25ರಂದು ಭಾರತೀಯ ರೈತ ಒಕ್ಕೂಟ ಕರೆ ನೀಡಿರುವ ದಾವಣಗೆರೆ ಬಂದ್‌ಗೆ ದಾವಣಗೆರೆ ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರ ಸಂಘ ಬೆಂಬಲ
ಸೂಚಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಎಂ. ಉಮಾಪತಯ್ಯ ತಿಳಿಸಿದ್ದಾರೆ.