SUDDIKSHANA KANNADA NEWS/ DAVANAGERE/ DATE:25-09-2023
ದಾವಣಗೆರೆ: ಭದ್ರಾ ಜಲಾಶಯ(Bhadra Dam)ದ ಬಲದಂಡೆ ನಾಲೆಯಲ್ಲಿ ನೀರು ಬಂದ್ ಮಾಡಿರುವುದರ ವಿರುದ್ಧ ಭಾರತೀಯ ರೈತ ಒಕ್ಕೂಟ ಕರೆ ನೀಡಿದ್ದ ದಾವಣಗೆರೆ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿನಸಿ ಅಂಗಡಿ ಸೇರಿದಂತೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಖಾಸಗಿ, ಆಟೋ ಸೇರಿದಂತೆ ಇತರೆ ವಾಹನಗಳ ಓಡಾಟ ವಿರಳವಾಗಿತ್ತು. ಖಾಸಗಿ, ಸರ್ಕಾರಿ ಶಾಲೆಗಳು ಎಂದಿನಂತೆ ನಡೆದವು. ಶೇಕಡಾ 65ರಷ್ಟು ಬಂದ್ ಆಗುವ ಮೂಲಕ ಬಂದ್ ಗೆ ಜನರು ಸಹಕರಿಸಿದರು. ಬಂದ್ ಬಹುತೇಕ ಶಾಂತಿಯುತವಾಗಿ ನಡೆಯಿತು.
ಈ ಸುದ್ದಿಯನ್ನೂ ಓದಿ:
ದಾವಣಗೆರೆ (Davanagere)ಬಂದ್ ನಡೆಸಲು ನಾಲೆ ನೀರು ಹರಿಸುವಿಕೆ ಸೇರಿದಂತೆ ಇತರೆ ಪ್ರಮುಖ ಬೇಡಿಕೆಗಳೇನು…ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ಯಾಕೆ…? ಪೊಲೀಸ್ ಬಂದೋಬಸ್ತ್ ಹೇಗಿದೆ ಗೊತ್ತಾ…?
ಬೆಳಿಗ್ಗೆ ಏಳು ಗಂಟೆಗೆ ಜಯದೇವ ವೃತ್ತದಲ್ಲಿ ಜಮಾಯಿಸಿದ ಭಾರತೀಯ ರೈತ ಒಕ್ಕೂಟದ ಮುಖಂಡರು ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು. ಬೆಳಿಗ್ಗೆ 9 ಗಂಟೆಯ ಬಳಿಕ ಪಿ. ಬಿ. ರಸ್ತೆ, ಪಿ. ಜೆ. ಬಡಾವಣೆ, ಎಸ್. ಎಸ್. ಲೇಔಟ್,
ಹಳೇ ದಾವಣಗೆರೆ ಭಾಗದಲ್ಲಿ ಸಂಚರಿಸಿ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು. ಅಂಗಡಿ ಮುಂಗಟ್ಟುಗಳ ಮಾಲೀಕರು ಬಂದ್ ಬೆಂಬಲಿಸಿ ಅಂಗಡಿ ತೆರೆಯಲಿಲ್ಲ.
ಬಂದ್ ಗೆ ಚೇಂಬರ್ ಆಫ್ ಕಾಮರ್ಸ್, ದಲ್ಲಾಳಿ ಮಾಲೀಕರ ಸಂಘ, ಕೂಲಿ ಕಾರ್ಮಿಕರ ಸಂಘ, ಖಾಸಗಿ ಬಸ್ ಗಳ ಮಾಲೀಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳು, ಆಟೋ ಮಾಲೀಕರ ಸಂಘ, ಕ್ರಿಮಿನಾಶಕ, ರಸಗೊಬ್ಬರ ಜಿಲ್ಲಾ ಸಂಘ, ಆಮ್ ಆದ್ಮಿ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ದಲ್ಲಾಳರು, ಕಾರ್ಮಿಕರ ಸಂಘವು ಬೆಂಬಲಿಸಿದ್ದು, ಎಪಿಎಂಸಿ ಬಣ ಬಣ ಎನ್ನುತಿತ್ತು. ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.
ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶಾಮನೂರು ಲಿಂಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಎಂ. ಬಿ. ಸತೀಶ್, ನಾಗೇಶ್ವರ ರಾವ್, ಕಲ್ಲಿಂಗಪ್ಪ ಸೇರಿದಂತೆ ರೈತ ಮುಖಂಡರು ಪ್ರತಿಭಟನಾ ಸಭೆ ನಡೆಸಿದರು. ಜಿಲ್ಲೆಯ ಜನರಲ್ಲಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದರು. ಬೆಳ್ಳಂಬೆಳಿಗ್ಗೆ ಜಿಟಿಜಿಟಿ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ನಾಗೇಶ್ವರ ರಾವ್ ತೀವ್ರ ಅಸ್ವಸ್ಥಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಆಟೋ ಸಂಚಾರ, ಖಾಸಗಿ ಬಸ್ ಗಳ ಓಡಾಟ ವಿರಳವಾಗಿದ್ದರಿಂದ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಯಿತು. ನಗರದ ಗಾಂಧಿ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆ ಬಂದ್ ಗೆ ಬಿಜೆಪಿ ಪಕ್ಷವು ಬೆಂಬಲ ಸೂಚಿಸಿದ್ದರಿಂದ ನಾಯಕರು ಬೀದಿಗಿಳಿದು ಬಂದ್ ಗೆ ಸಹಕರಿಸಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶಾಸಕ ಬಿ. ಪಿ. ಹರೀಶ್ ಸೇರಿದಂತೆ ಬಿಜೆಪಿ ನಾಯಕರು ಬಂದ್ ನಲ್ಲಿ ಭಾಗವಹಿಸಿದ್ದರು.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದು, ಭದ್ರಾ ಡ್ಯಾಂ(Bhadra Dam)ನ ಬಲದಂಡೆ ನಾಲೆಯಲ್ಲಿ ನೀರು ಹರಿಸುವುದಾಗಿ ಭರವಸೆ ಕೊಟ್ಟಿದ್ದ ಸರ್ಕಾರವು ಉಲ್ಟಾ ಹೊಡೆದಿದೆ. ಇದರಿಂದಾಗಿ ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತರ ಹಿತ ಕಾಪಾಡುವ ಬದಲು ರಾಜಕೀಯ ಮಾಡಲು ಹೊರಟಿದೆ. ಇದು ಖಂಡನೀಯ. ನಾಲೆಯಲ್ಲಿ ನೀರು ಹರಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಬಿ. ಎಂ. ಸತೀಶ್, ಕುಂದುವಾಡದ ಅಣ್ಣಪ್ಪ, ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶಾಮನೂರು ಲಿಂಗರಾಜ್, ಕಲ್ಲಿಂಗಪ್ಪ, ಬಸವರಾಜ್, ಮೋಹನ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡು ಪ್ರತಿಭಟನೆ ನಡೆಸಿದರು. ಬೆಳಿಗ್ಗೆಯಿಂದಲೇ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳು ಮುಚ್ಚಿದ್ದವು. ರೈತರ ಹಿತಕ್ಕಾಗಿ ನಡೆಸುತ್ತಿರುವ ಹೋರಾಟ ಬೆಂಬಲಿಸಿ. ದಾವಣಗೆರೆ ಭದ್ರಾ ಅಚ್ಚುಕಟ್ಟುದಾರರ ಪರವಾಗಿ ನಾವು ನಡೆಸುತ್ತಿರುವ ಹೋರಾಟ ಬೆಂಬಲಿಸಿ. ಈ ಮೂಲಕ ಸರ್ಕಾರಕ್ಕೆ ಒತ್ತಡ ಹೇರುವ ಕೆಲಸ ಮಾಡೋಣ ಎಂದು ಮನವಿ ಮಾಡಿದರು.
ಜಯದೇವ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಲು ರೈತರು, ಬಿಜೆಪಿ ನಾಯಕರು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು. ಬಂದ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಸಹ ರೌಂಡ್ಸ್ ಬಂದರು. ಈ ವೇಳೆ ಕಾನೂನು ಕೈಗೆತ್ತಿಕೊಂಡರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಬಂದ್ ನ ಶಾಂತಿಯುತವಾಗಿ ನಡೆಸಬೇಕು
ಎಂದು ಸೂಚನೆ ನೀಡಿದರು.
ದಾವಣಗೆರೆ ಬಂದ್ ನಲ್ಲಿ ಹರಿಹರ ಶಾಸಕ ಬಿ ಪಿ ಹರೀಶ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಶಾಮನೂರು ಲಿಂಗರಾಜು, ಬೆಳವನೂರು ನಾಗೇಶ್ವರರಾವ್, ಲೋಕಿಕೆರೆ ನಾಗರಾಜ್, ಬಿ ಜಿ ಅಜಯಕುಮಾರ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಅಣಬೇರು ಜೀವನಮೂರ್ತಿ, ಎಸ್ ಎನ್ ಕಲ್ಲೇಶ್, ಪ್ರಸನ್ನಕುಮಾರ್, ಎಸ್ ಟಿ ವೀರೇಶ್, ವೀರೇಶ್ ಪೈಲ್ವಾನ್, ಉಪ ಮೇಯರ್ ಯಶೋದಹೆಗ್ಗಪ್ಪ, ವೀಣಾನಂಜಪ್ಪ, ಭಾಗ್ಯಪಿಸಾಳೆ, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಆರನೇಕಲ್ಲು ವಿಜಯಕುಮಾರ, ಮಳಲಕೆರೆ ಸದಾನಂದ, ಶಾಗಲೆ ಕ್ಯಾಂಪ್ ಬೋಗೇಶ್ವರರಾವ್, ಕುಂದುವಾಡದ ಜಿಮ್ಮಿ ಹನುಮಂತಪ್ಪ, ಎ ಪ್ರಕಾಶ್, ಮಹೇಶಪ್ಪ, ಕಲ್ಲುಬಂಡೆ ಪ್ರಸಾದ್, ಕಲ್ಪನಹಳ್ಳಿ ಉಜ್ಜಣ್ಣ, ಕಲ್ಪನಹಳ್ಳಿ ಸತೀಶ್, ಕೋಲ್ಕುಂಟೆ ಬಸಪ್ಪ, ಶಾಮನೂರು ಕಲೇಶಪ್ಪ, ಸತ್ಯನಾರಾಯಣ ಕ್ಯಾಂಪ್ ನಾಗೇಶ್ವರರಾವ್, ಮತ್ತಿ ಜಯಣ್ಣ, ಗೋಣಿವಾಡ ನಾಗರಾಜ, ಕಡ್ಲೆಬಾಳ್ ಧನಂಜಯ, ಕುಂದುವಾಡದ ಪುನೀತ್ ಮತ್ತಿತರರು ಪಾಲ್ಗೊಂಡಿದ್ದರು.
ಬಂದ್ ಬೆಂಬಲಿಸಿ ಬಿಜೆಪಿ ಬೈಕ್ ರ್ಯಾಲಿ
ಭದ್ರಾ ನಾಲೆಯಲ್ಲಿ ನೂರು ದಿನಗಳ ಕಾಲ ನೀರು ಹರಿಸಬೇಕು ಎಂದು ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ಬೆಂಬಲಿಸಿ ನಗರದ ಪಿಬಿ ರಸ್ತೆಯಲ್ಲಿ ಶಾಸಕ ಬಿ.ಪಿ ಹರೀಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು.
ಭದ್ರಾ ನಾಲೆಗಳಲ್ಲಿ ನೂರು ದಿನ ಹರಿಸಬೇಕಿದ್ದ ನೀರನ್ನು ನಿಲ್ಲಿಸಿರುವುದನ್ನು ವಿರೋಧಿಸಿ ಮತ್ತು ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿ, ಭಾರತೀಯ ರೈತ ಒಕ್ಕೂಟದಿಂದ ಕರೆ ನೀಡಲಾಗಿದ್ದ ಬಂದ್ ಗೆ ಬೆಂಬಲಿಸಿ ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಗಮನ ಸೆಳೆದರು.
ಬೈಕ್ ರ‍್ಯಾಲಿಯಲ್ಲಿ ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್,ಮಾಜಿ ಮೇಯರ್ ಬಿ. ಜಿ. ಅಜಯ್ ಕುಮಾರ್, ಮುಖಂಡರಾದ ಲೋಕಿಕೆರೆ ನಾಗರಾಜ್, ಶ್ರೀನಿವಾಸ್ ದಾಸಕರಿಯಪ್ಪ, ಮುಖಂಡರಾದ ಎಸ್ .ಟಿ.ವೀರೇಶ್, ಕನ್ನಡಪರ ಹೋರಾಟಗಾರ ಹಾಲೇಶ್ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ನೀಡಿದರು.
ಬೈಕ್ ರ‍್ಯಾಲಿ ಮುಖಾಂತರ ನಗರದ ವಿವಿಧ ರಸ್ತೆಗಳಿಗೆ ತೆರೆಳಿ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಮಧು ಬಂಗಾರಪ್ಪ ವಿರುದ್ಧ ಆಕ್ರೋಶ:
ಭದ್ರಾ ಡ್ಯಾಂ ನೀರು ನಿಲುಗಡೆ ವಿರೋಧಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತಗೊಂಡಿತ್ತು. ಬಂದ್ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ಬೀಗ ಹಾಕಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ವಿರುದ್ಧ ಆಕ್ರೋಶ ವ್ಯಕ್ತವಾದರೆ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ವಿರುದ್ಧ ಧಿಕ್ಕಾರ ಕೂಗಲಾಯಿತು.
ಭಾರತೀಯ ರೈತ ಒಕ್ಕೂಟ ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ. ಸಂಘಟನೆಗಳು, ಪಕ್ಷಗಳು, ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಸಹಕಾರ, ಬೆಂಬಲ ಸಿಕ್ಕಿದೆ. ನಮ್ಮ ಹೋರಾಟಕ್ಕೆ ಸ್ಫೂರ್ತಿ ಬಂದಿದೆ. ನೀರು ಹರಿಸದಿದ್ದರೆ
ಮತ್ತಷ್ಟು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಯಿತು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಆದೇಶದ ಮೇರೆಗೆ ನೀರು ಸ್ಥಗಿತಗೊಳಿಸಲಾಗಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ದಾವಣಗೆರೆ ಹಾಗೂ ಭದ್ರಾವತಿ ರೈತರ ನಡುವೆ ಕಂದಕ ನಿರ್ಮಾಣ ಮಾಡಲು
ಹೊರಟಿದ್ದಾರೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಾಗ ಯಾರಿಗೂ ಕೇಳಲಿಲ್ಲ. ಈಗ ಸುಪ್ರೀಂಕೋರ್ಟ್ ಆದೇಶ ನೀಡಿದ ಕಾರಣ ನೀರು ಬಿಡಲಾಗುತ್ತಿದೆ. ತಮಿಳುನಾಡು ಕೇಳದಿದ್ದರೂ ನೀರು ಹರಿಸಿದ್ದ ಇದೇ ಸರ್ಕಾರ ಭದ್ರಾ ಅಚ್ಚುಕಟ್ಟುದಾರರ ಪ್ರದೇಶ ಶೇಕಡಾ 75 ರಷ್ಟು ದಾವಣಗೆರೆ ಜಿಲ್ಲೆಯೊಳಗೆ ಬರುತ್ತದೆ. ಆದರೂ ನೀರು ಹರಿಸುತ್ತಿಲ್ಲ ಎಂದು ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶಾಮನೂರು ಲಿಂಗರಾಜ್ ಆಕ್ರೋಶ ವ್ಯಕ್ತಪಡಿಸಿದರು,
ದಾವಣಗೆರೆಯಲ್ಲಿ ಕಾಡಾ ಸಮಿತಿ ಕಚೇರಿ ಆಗಬೇಕು. ಇಲ್ಲಿನವರೇ ಕಾಡಾ ಅಧ್ಯಕ್ಷರಾಗಬೇಕು. ಶಾಸಕ ಬಿ. ಪಿ. ಹರೀಶ್ ಅವರು ಒಮ್ಮೆ ಮಾತ್ರ ಕಾಡಾ ಅಧ್ಯಕ್ಷರಾಗಿದ್ದರು. ಆಗ ಯಾವುದೇ ಸಮಸ್ಯೆ ಜಿಲ್ಲೆಯ ರೈತರಿಗೆ ಆಗಿರಲಿಲ್ಲ. ಹೆಚ್ಚು ಭದ್ರಾ ಅಚ್ಚುಕಟ್ಟುದಾರರ ಪ್ರದೇಶ ಇಲ್ಲಿಯೇ ಆಗಿರುವುದರಿಂದ ದಾವಣಗೆರೆಯಲ್ಲಿಯೇ ನೀರಾವರಿ ಸಲಹಾ ಸಮಿತಿ ಸಭೆಯೂ ನಡೆಯಬೇಕು. ಆಗ ಮಾತ್ರ ಇಲ್ಲಿನ ರೈತರಿಗೆ ನ್ಯಾಯ ಸಿಗಲು ಸಾಧ್ಯ. ಇಲ್ಲದಿದ್ದರೆ ಮೊದಲಿನಿಂದಲೂ ಅನ್ಯಾಯ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಅದೇ ಆಗಿದೆ ಎಂದು ಆರೋಪಿಸಿದರು.
ನೀರಾವರಿ ಸಲಹಾ ಸಮಿತಿಯ ಆದೇಶದಂತೆ ನೂರು ದಿನಗಳ ಕಾಲ ನೀರು ಹರಿಸಲೇಬೇಕು. ಈಗಾಗಲೇ ಸಾಲ ಮಾಡಿ ಭತ್ತ ನಾಟಿ ಮಾಡಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ನೀರು ಹರಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಇದೇ ರೀತಿಯ ಹೋರಾಟ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ರೈತರು ಹಾಗೂ ಜನರ ಸಹಕಾರ ಬೇಕು ಎಂದು ಹೇಳಿದರು.