SUDDIKSHANA KANNADA NEWS/ DAVANAGERE/ DATE:14-01-2025
ದಾವಣಗೆರೆ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆಕಳ ಕೆಚ್ಚಲು ಕೊಯ್ದ ದುಷ್ಕೃತ್ಯ ವಿರೋಧಿಸಿ ದಾವಣಗೆರೆ ಬಿಜೆಪಿ ರೈತ ಮೋರ್ಚಾ ವತಿಯಿಂದ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ನಗರದ ಗುಂಡಿ ಮಹಾದೇವಪ್ಪ ವೃತ್ತದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಮೋರ್ಚಾ ಪದಾಧಿಕಾರಿಗಳು ಗೋವುಗಳಿಗೆ ಪೂಜೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಭಾರತ ದೇಶದಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನ ಇದೆ. ಗೋವುಗಳಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿದ್ದಾರೆ ಎಂದು ಹಿಂದೂಗಳ ನಂಬಿಕೆ. ಗೋವಿನ ಪೂಜೆ ಮಾಡಿ, ಕಿಚ್ಚು ಹಾಯಿಸಿ ಸಂಭ್ರಮಿಸುವ ಸಂಕ್ರಾಂತಿ ಹಬ್ಬದ ಎರಡು ದಿನ ಮುನ್ನವೇ ಕಿಡಿಗೇಡಿಗಳು ಮೂರು ರಾಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಿನ ಹೃದಯ ಭಾಗ ಎನ್ನಿಸಿಕೊಂಡಿರುವ ಚಾಮರಾಜಪೇಟೆಯ ಕೆ.ಆರ್ ಮಾರ್ಕೆಟ್ ಸನ್ನಿಹದಲ್ಲಿರುವ ವಿನಾಯಕ ಚಿತ್ರಮಂದಿರದ ಹಿಂಭಾಗದ ಓಲ್ಡ್ ಪೆನ್ಷನ್ ಮೊಹಲ್ಲಾ ರಸ್ತೆಯಲ್ಲಿ ಕರ್ಣ ಎಂಬುವರು ಸಾಕಿದ ಹಸುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದು ಪೈಶಾಚಿಕ ಕೃತ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ದೇಶದ ರೈತರು ಗೋವುಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಹಸುವಿನ ಹಾಲು, ಹಾಲಿನಿಂದ ಮೊಸರು, ಮಜ್ಜಿಗೆ, ಬೆಣ್ಣೆ, ಬೆಣ್ಣೆಯಿಂದ ತುಪ್ಪ ಉತ್ಪಾದನೆ ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ. ಈ ಹೈನುಗಾರಿಕೆಯಿಂದ ಲಕ್ಷಾಂತರ
ಜನರು ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿಯೇ ರೈತರು ಗೋಮಾತೆಯನ್ನು ದೇವರೆಂದು ಪೂಜಿಸುತ್ತಾರೆ. ಕಸವನ್ನೇ ತಿಂದರೂ ಕೊನೆಗೆ ಹಾಲಿನಂತಹ ಅಮೃತವನ್ನೇ ನೀಡುವೆ ನಮಗೆ ಎಂದು ವರನಟ ಡಾ.ರಾಜಕುಮಾರ್ ಹಾಡುವ ಹಾಡಿಗೆ ತಲೆದೂಗುವ ಜನರು ಅಮೃತ ನೀಡುವ ಕೆಚ್ಚಲನ್ನು ಕೊಯ್ದಿರುವ ಪೈಶಾಚಿಕ ಕೃತ್ಯವನ್ನು ಕ್ಷಮಿಸುವುದಿಲ್ಲ. ಇಂತಹ ರೈತ ಸ್ನೇಹಿ ಸಾಕು ಪ್ರಾಣಿ ಹಸುವಿನ ಹಾಲು ಕೊಡುವ ಕೆಚ್ಚಲನ್ನು ಕೊಯ್ದಿರುವುದು ಸಹಜವಾಗಿ ಜನರ ಮನಸ್ಸಿಗೆ ಬಹಳ ನೋವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಅತಿಯಾದ ಮುಸ್ಲಿಂರ ತುಷ್ಟೀಕರಣದಿಂದ ರಾಜ್ಯದಲ್ಲಿ ಇಂತಹ ಅವಮಾನವೀಯ ದುಷ್ಕೃತ್ಯಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ. ಸರ್ಕಾರ ಮತ್ತು ಪೊಲೀಸ್ ಇಲಾಖೆಗಳು ಸತ್ತು ಹೋಗಿವೆ. ಈ ಕನ್ನಡ ನಾಡು ಪುಂಡ ಪೋಕರಿಗಳ ನೆಲೆ ನಾಡಗಿದೆ. ಇಂತಹ ದುಷ್ಕೃತ್ಯಗಳನ್ನು ಎಸಗಿರುವ ಕ್ರೂರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಕೊಳೇನಹಳ್ಳಿ ಬಿ ಎಂ ಸತೀಶ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಎನ್. ಎ. ಮುರುಗೇಶ್, ಶಿವನಳ್ಳಿ ರಮೇಶ್, ರಘುನಂದನ್ ಅಂಬರಕರ್, ಅನಿಲ ಕುಮಾರ್ ನಾಯ್ಕ್, ಎನ್. ಎಚ್. ಹಾಲೇಶ್, ಎಚ್. ಎನ್. ಶಿವಕುಮಾರ್, ಹೆಚ್. ಎನ್. ಗುರುನಾಥ್, ಜಿ. ಎಸ್. ಶ್ಯಾಮ್, ಮಳಲಕೆರೆ ಸದಾನಂದ, ಚನ್ನಗಿರಿ ಲೋಹಿತ್ ಕುಮಾರ್, ಜಿಲ್ಲಾ ಮಾಧ್ಯಮ ಸಂಚಾಲಕ ಹೆಚ್.ಪಿ.ವಿಶ್ವಾಸ್, ಶ್ರೀನಿವಾಸ ಭಟ್, ದುರ್ಗೇಶ್, ಶಾಮನೂರು ರಾಜು, ವಾಟರ್ ಮಂಜುನಾಥ, ಚುಕ್ಕಿ ಮಂಜುನಾಥ, ಮಹಾನಗರ
ಪಾಲಿಕೆ ಸದಸ್ಯರಾದ ಜಯಪ್ರಕಾಶ್, ಸುರೇಶ್ ಗಂಡುಗಲಿ, ಯೋಗೇಶ್, ಪ್ರವೀಣ್ ಜಾಧವ್, ಪಂಜು ಮಂಜು, ಜಯಣ್ಣ, ಶ್ರೀನಿವಾಸ್ ದಾಸಕರಿಯಪ್ಪ, ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.