ದಾವಣಗೆರೆ: ತಣ್ಣಗಾಗಿದ್ದ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದ ಭಿನ್ನಮತ ಸ್ಫೋಟಗೊಳ್ಳುವಂತೆ ಮಾಡಿದ್ದೇ ನೂತನ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಬಿಡುಗಡೆ. ಈಗ ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರ ಬಣವಂತೂ ಪಟ್ಟಿ ಬಿಡುಗಡೆ ಆದ ಮೇಲೆ ರೊಚ್ಚಿಗೆದ್ದಿದೆ. ಯಾರನ್ನೂ ಹೇಳದೇ ಕೇಳದೇ, ಕಾರ್ಯಕರ್ತರು. ಮುಖಂಡರ ಅಭಿಪ್ರಾಯ ಸಂಗ್ರಹಿಸದೇ ಏಕಾಏಕಿಯಾಗಿ ನೂತನ ಪದಾಧಿಕಾರಿಗಳ ಘೋಷಣೆ ಮಾಡಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವೇಳೆ ದಾವಣಗೆರೆ ಜಿಲ್ಲಾ ಘಟಕಕ್ಕೆ ಮೂವರು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿತ್ತು. ದೂಡಾ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಹಿರಿಯ ಮುಖಂಡ ರಾಜನಹಳ್ಳಿ ಶಿವಕುಮಾರ್, ಬಾತಿ ವೀರೇಶ್, ಶಿವಪ್ರಕಾಶ್ ಅವರನ್ನು ನಿಯುಕ್ತಿಗೊಳಿಸಿ ಆದೇಶಿಸಲಾಗಿತ್ತು. ರಾಜಶೇಖರ್ ನಾಗಪ್ಪ ಅವರು ಅಧ್ಯಕ್ಷರಾಗಿದ್ದರು. ಜಿಲ್ಲಾಧ್ಯಕ್ಷರು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯರ ಬಣದ ಜೊತೆ ಸಕ್ರಿಯವಾಗಿದ್ದ ಕಾರಣ ಈ ಮೂವರನ್ನು ನೇಮಿಸಿ ಬಿಜೆಪಿ ಒಗ್ಗಟ್ಟು ಪ್ರದರ್ಶಿಸಿತ್ತು.
ಸಂಧಾನ ಸಕ್ಸಸ್ ಆಗಿತ್ತು:
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ದಕ್ಷಿಣ ಭಾಗದ ಪ್ರಮುಖರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರ ವಿಶ್ವಾಸಕ್ಕೆ ಪಡೆಯಲಾಗಿತ್ತು. ಸಂಸದ ಗೋವಿಂದ ಕಾರಜೋಳ, ಪ್ರಹ್ಲಾದ್ ಜೋಷಿ, ಮುರುಗೇಶ್ ನಿರಾಣಿ ಸೇರಿದಂತೆ ಹಿರಿಯ ನಾಯಕರ ಸಂಧಾನ ಸಕ್ಸಸ್ ಆಗಿತ್ತು. ಪಕ್ಷಕ್ಕೋಸ್ಕರ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರು.
ದಕ್ಷಿಣ ಸೋಲಿಗೆ ಕಾರಣಗಳಿವು:
ಚುನಾವಣೆಯಲ್ಲಿ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಿದ್ದರು. ಇದರ ಫಲ ಎಂಬಂತೆ 2023ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಹೆಚ್ಚಿನ ಮತಗಳು ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀನಿವಾಸ್ ದಾಸಕರಿಯಪ್ಪರಿಗೆ ಬಂದಿದ್ದವು. ಕೇವಲ 5700 ಮತಗಳ ಅಂತರದಿಂದ ಪರಾಭವಗೊಂಡಿದ್ದರೂ ಕಾಂಗ್ರೆಸ್ ಎದೆಯಲ್ಲಿ ನಡುಕ ಹುಟ್ಟಿಸಿತ್ತು. ಮತ ಎಣಿಕೆ ಆರಂಭವಾದ ಏಳು ಸುತ್ತುಗಳವರೆಗೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ಬರೋಬ್ಬರಿ 8500ಕ್ಕೂ ಹೆಚ್ಚು ಮತಗಳ ಅಂತರ ಪಡೆದಿತ್ತು. ಗ್ರಾಮೀಣ ಭಾಗ ಮತ್ತು ಎಸ್ ಡಿಪಿಐ ಸೇರಿದಂತೆ ಮುಸ್ಲಿಂ ಅಭ್ಯರ್ಥಿಗಳು ನಿರೀಕ್ಷಿಸಿದಷ್ಟು ಮತ ಪಡೆಯದ ಕಾರಣ ಬಿಜೆಪಿ ಲೆಕ್ಕಾಚಾರ ಉಲ್ಟಾ ಪಲ್ಟಾ ಆಯಿತು.
ಅಂದಿನಿಂದ ನಾಯಕರೆಲ್ಲರೂ ಒಟ್ಟಾಗಿ ಕಾಣಿಸಿಕೊಳ್ಳದಿದ್ದರೂ ಒಗ್ಗಟ್ಟಿನ ಮಂತ್ರ ಜಪಿಸಲಾಗಿತ್ತು. ಅದರಲ್ಲಿಯೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ದಾವಣಗೆರೆಗೆ ಬಂದು ಹೋದ ಮೇಲೆ ಎಲ್ಲವೂ ಸರಿಯಾಯ್ತು ಎಂದುಕೊಂಡಿದ್ದರೂ
ತಣ್ಣಗಾಗಿತ್ತು. ಎಚ್ಚರಿಕೆಯನ್ನೂ ಕೊಟ್ಟು ಹೋಗಿದ್ದರು. ಆಗ ಎರಡೂ ಬಣಗಳ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿರಲಿಲ್ಲ. ಅಲ್ಲಿಗೆ ಎಲ್ಲವೂ ಸರಿ ಹೋಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಯಡವಟ್ಟು ಬಿಜೆಪಿ ಭಿನ್ನಮತಕ್ಕೆ
ಕಾರಣವಾಗಿದೆ.
ಮೂವರು ಕೊಕ್: ಸಿದ್ದೇಶ್ವರ ಬಣ ರಾಂಗ್!
ರಾಜಶೇಖರ್ ನಾಗಪ್ಪ ಸೇರಿದಂತೆ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ವಿಸರ್ಜಿಸಿ ನಾಗರಾಜ್ ಮೆಳ್ಳಿಕಟ್ಟಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ಈ ಹಿಂದೆ ಅಂದರೆ ಕೇವಲ ಮೂರು ತಿಂಗಳ ಹಿಂದೆ ನೇಮಕ ಮಾಡಿದ್ದ ಮೂವರು
ಪ್ರಧಾನ ಕಾರ್ಯದರ್ಶಿಗಳಿಗೆ ಕೊಕ್ ಕೊಟ್ಟು ನೂತನವಾಗಿ ಆಯ್ಕೆ ಮಾಡಿರುವುದು ಸಹಜವಾಗಿಯೇ ಜಿ. ಎಂ. ಸಿದ್ದೇಶ್ವರರ ಕಣ್ಣು ಕೆಂಪಾಗಿಸಿದೆ.
ರಾಜನಹಳ್ಳಿ ಶಿವಕುಮಾರ್:
ರಾಜನಹಳ್ಳಿ ಶಿವಕುಮಾರ್ ಅವರು ಬರೋಬ್ಬರಿ 30 ವರ್ಷಕ್ಕೂ ಹೆಚ್ಚು ವರ್ಷಗಳಿಂದ ಬಿಜೆಪಿ ಕಟ್ಟಾಳು ಎನಿಸಿಕೊಂಡಿದ್ದಾರೆ. ಮಾತ್ರವಲ್ಲ, ಬಿಜೆಪಿ ಯುವ ಮೋರ್ಚಾ, ಹಿಂದುತ್ವದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರಲ್ಲದೇ, ದಾವಣಗೆರೆ ದಕ್ಷಿಣ ಭಾಗದಲ್ಲಿ ಯಶವಂತರಾವ್ ಜಾಧವ್, ಕೃಷ್ಣಮೂರ್ತಿ ಪವಾರ್ ಸೇರಿದಂತೆ ಹಿರಿಯ ನಾಯಕರ ಜೊತೆ ಹಗಲಿರುಳು ಶ್ರಮಿಸಿದ್ದಾರೆ. ಏನೇ ಸಮಸ್ಯೆ ಬಂದರೂ ಕಾರ್ಯಕರ್ತರ ಜೊತೆ ನಿಲ್ಲುವ ಕೆಲಸ ಮಾಡಿದ್ದಾರೆ. ಮಾತ್ರವಲ್ಲ, ಜಿಲ್ಲಾಧ್ಯಕ್ಷ ಹುದ್ದೆ ನೀಡಿದರೂ ನಿಭಾಯಿಸುವ ಛಾತಿ, ಸಾಮರ್ಥ್ಯ, ಯುಕ್ತಿ ಎಲ್ಲವೂ ಇದೆ. ಇದೆಲ್ಲದರ ಫಲ ಎಂಬಂತೆ ದೂಡಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ಕ್ರಾಂತಿಕಾರಕ ಬದಲಾವಣೆ ತರಲು ಶ್ರಮಿಸಿದ್ದರು. ಈ ವೇಳೆ ಕಾರ್ಯವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇನ್ನು ಬಾತಿ ವೀರೇಶ್, ಶಿವಪ್ರಕಾಶ್ ಅವರೇನೂ ಕಡಿಮೆ ಇಲ್ಲ. ಪಕ್ಷಕ್ಕಾಗಿ ದುಡಿದಿದ್ದಾರೆ. ಇವರನ್ನು ಕೈಬಿಡಲಾಗಿದೆ. ಕೇವಲ ಮೂರು ತಿಂಗಳು ಅಂದರೆ ಚುನಾವಣೆಗೋಸ್ಕರ ನಾವೆಲ್ಲರೂ ಬೇಕಾಗಿದ್ದೆವು, ಈಗ ಬೇಡವಾದ್ವಾ ಎಂಬ ಅಸಮಾಧಾನ ಇದ್ದರೂ
ಒಳಗೊಳಗೆ ಪಕ್ಷಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ.
ಚುನಾವಣೆ ವೇಳೆ ಒಗ್ಗಟ್ಟು ಮಂತ್ರಕ್ಕೆ ಮಾಡಿದ್ದೇನು?
ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದೇಶ್ವರರ ಬಣದಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ್ ದಾಸಕರಿಯಪ್ಪರಿಗೆ ಟಿಕೆಟ್ ಘೋಷಿಸಲಾಗಿತ್ತು. ರಾಜನಹಳ್ಳಿ ಶಿವಕುಮಾರ್, ಬಾತಿ ಸುರೇಶ್, ಶಿವಪ್ರಕಾಶ್ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಾಡಿ ಸಿದ್ದೇಶ್ವರರ ಬಣ ತಣ್ಣಗಾಗುವಂತೆ ಮಾಡಿದ್ದಲ್ಲದೇ, ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆಯೂ, ಮಾಡಲಾಗಿತ್ತು. ಆದರೆ ಇದೀಗ ದಿಢೀರ್ ಆಗಿ ಅಧ್ಯಕ್ಷರ ಜೊತೆ ಪದಾಧಿಕಾರಿಗಳ ಬದಲಾವಣೆ ಮಾಡಿರುವುದು ಆಕ್ರೋಶ ಭುಗಿಲೇಳುವಂತೆ ಮಾಡಿದೆ.
ಜಿಎಂಐಟಿಯಲ್ಲಿ ಸಭೆ, ಆಕ್ರೋಶ:
ಜಿಎಂಐಟಿಯಲ್ಲಿ ಡಾ. ಜಿ. ಎಂ. ಸಿದ್ದೇಶ್ವರ ಅವರ ನೇತೃತ್ವದಲ್ಲಿ ಸಿಟ್ಟಿಗೆದ್ದ ಕಾರ್ಯಕರ್ತರು, ಮುಖಂಡರು ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಬಹುತೇಕರು ಜಿಲ್ಲೆಯ ಕೇಂದ್ರ ಸ್ಥಾನ ದಾವಣಗೆರೆಯವರು ಅಲ್ಲದಿದ್ದರೂ ಇಲ್ಲಿ ಮೂಗು ತೂರಿಸುತ್ತಾರೆ. ಬೇಡದ ವಿಚಾರಕ್ಕೆ ಮಾತನಾಡುತ್ತಾರೆ. ಪಕ್ಷ ಹಾಳಾಗಲು ಅವರೇ ಕಾರಣ. ರಾಜ್ಯಾಧ್ಯಕ್ಷರು ಅವರ ತಾಳಕ್ಕೆ ತಕ್ಕಂತೆ ಕುಣಿಯುವುದರಿಂದ ಈ ಸಮಸ್ಯೆ ತಲೆದೋರಿದೆ. ಮೊದಲು ಅವರನ್ನು ಸರಿಪಡಿಸಿದರೆ ಸಮಸ್ಯೆಗಳೇ ಇರುವುದಿಲ್ಲ. ಏಕಾಏಕಿಯಾಗಿ ಯಾರದ್ದೋ ಶಿಫಾರಸಿಗೆ ಮಣಿದಂತೆ ಆಯ್ಕೆ ಮಾಡಿದಂತೆ ಕಾಣುತ್ತದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಕೂಡಲೇ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರರ ಗಮನಕ್ಕೆ ತಂದು ಪದಾಧಿಕಾರಿಗಳ ಪಟ್ಟಿ ರದ್ದುಗೊಳಿಸಿ ಹೊಸದಾಗಿ ನಿಯೋಜಿಸಬೇಕು ಎಂಬ ಒಕ್ಕೊರಲ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರೊಬ್ಬರು ಸುದ್ದಿಕ್ಷಣ ಮೀಡಿಯಾಕ್ಕೆ ಮಾಹಿತಿ ನೀಡಿದ್ದಾರೆ.
ಡಾ. ಜಿ. ಎಂ. ಸಿದ್ದೇಶ್ವರ ಮಾತನಾಡಿ ಕೆಲವರು ಮೊಬೈಲ್ ನಲ್ಲಿ ಮೆಸೇಜ್ ಮಾಡಿದ್ದರು. ನಾನು ಕೆಲವರಷ್ಟೇ ಬರಬಹುದು ಎಂದುಕೊಂಡಿದ್ದೆ. ಆದರೆ 200ಕ್ಕೂ ಹೆಚ್ಚು ಮಂದಿ ಬಂದಿದ್ದಾರೆ. ಚುನಾವಣೆಗೆ ಮುನ್ನ ಮೂವರು ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಲಾಗಿತ್ತು. ಅವರನ್ನು ಬದಲಾಯಿಸಿ ಬೇರೆಯವರನ್ನು ಯಾರು ಕೇಳಿ ನೇಮಿಸಿದರು ಎಂಬುದೇ ಗೊತ್ತಿಲ್ಲ. ಸೌಜನ್ಯಕ್ಕಾದರೂ ಕರೆ ಮಾಡಿ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳನ್ನು ಕೇವಲ ಮೂರು ತಿಂಗಳಿಗೆ ಬದಲಾವಣೆ ಮಾಡಿದರೆ ಕಾರ್ಯಕರ್ತರಿಗೆ ಯಾವ ಸಂದೇಶ ಹೋಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುವುದಿಲ್ಲವೇ? ನಮ್ಮ ಅಭಿಪ್ರಾಯಕ್ಕೆ ಅಪಮಾನ ಮಾಡಿದಂತಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ಒಟ್ಟಿನಲ್ಲಿ ಬಿಜೆಪಿಯ ಬಿಕ್ಕಟ್ಟು ಸದ್ಯಕ್ಕೆ ಶಮನವಾಗುವ ಲಕ್ಷಣ ಗೋಚರಿಸುತ್ತಿಲ್ಲ. ಬಿ. ವೈ. ವಿಜಯೇಂದ್ರ ಅವರಿಗೆ ದಾವಣಗೆರೆ ಗದ್ದಲ ಚೆಂಡು ಹೋಗಿದ್ದು, ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
- BJP new committee list
- BY Vijayendra
- Davanagere BJP rift
- Davanagere Politics
- Davanagere South Byelection
- GM Siddeshwara
- Nagaraj Mellikatti
- Rajanahalli Shivakumar
- ಜಿ. ಎಂ. ಸಿದ್ದೇಶ್ವರ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ಬಿಜೆಪಿ ಭಿನ್ನಮತ
- ದಾವಣಗೆರೆ ರಾಜಕೀಯ
- ನಾಗರಾಜ್ ಮೆಳ್ಳಿಕಟ್ಟಿ
- ಬಿ. ವೈ. ವಿಜಯೇಂದ್ರ
- ಬಿಜೆಪಿ ಪದಾಧಿಕಾರಿಗಳ ಪಟ್ಟಿ
- ರಾಜನಹಳ್ಳಿ ಶಿವಕುಮಾರ್













Leave a comment