SUDDIKSHANA KANNADA NEWS/DAVANAGERE/DATE:03_10_2025
ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಹಾನಗರ ಪಾಲಿಕೆ ಮಾಜಿ ಸದಸ್ಯರೂ ಆದ ಕಾಂಗ್ರೆಸ್ ಮುಖಂಡ ಗಡಿಗುಡಾಳ್ ಮಂಜುನಾಥ್ ಅವರ ನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ದಸರಾ ಗಿಫ್ಟ್ ವಿತರಿಸಲಾಯಿತು. ಇದಕ್ಕೆ ಪ್ರತಿಯಾಗಿ ನಮ್ಮನ್ನು ಗೌರವಿಸಿ ಉಡುಗೊರೆ ನೀಡುವ ಮಂಜುನಾಥ್ ಅವರ ಮಾನವೀಯ ಕಾರ್ಯ ಶ್ಲಾಘನೀಯ ಎಂದು ಪೌರ ಕಾರ್ಮಿಕರು ಖುಷಿಯಿಂದಲೇ ಹೇಳಿದರು.
ಬಳಿಕ ಮಾತನಾಡಿದ ಗಡಿಗುಡಾಳ್ ಮಂಜುನಾಥ್ ಅವರು, ದಸರಾ ಹಬ್ಬವನ್ನು ಸೌಹಾರ್ದತಯುತವಾಗಿ, ಸಂಭ್ರಮದಿಂದ ಎಲ್ಲರೂ ಖುಷಿ ಖುಷಿಯಿಂದ ಆಚರಿಸೋಣ. ಕಿಡಿಗೇಡಿಗಳ ಮಾತಿಗೆ, ಕಿಡಿಗೇಡಿ ಕೃತ್ಯಗಳ ಬಗ್ಗೆ ಎಚ್ಚರ ವಹಿಸಬೇಕು. ಯಾವುದೇ ಹಬ್ಬವಿರಲಿ ಯಾವುದೇ ತೊಂದರೆ ಇಲ್ಲದಂತೆ ಆಚರಿಸುವಂತಾಗಬೇಕು. ಜನರ ನಡುವೆ ವೈಮನಸ್ಸು ಬರುವಂತೆ, ಸುಳ್ಳನ್ನೇ ಸತ್ಯವೆಂಬಂತೆ ಬಿಂಬಿಸಿ ಹಬ್ಬದ ವಾತಾವರಣ ಕೆಡಿಸುವ ಹುನ್ನಾರ ನಡೆಯುತ್ತಿರುತ್ತದೆ. ವಿಜಯದಶಮಿ ಎಲ್ಲರಿಗೂ ಒಳಿತು ತರಲಿ ಎಂದು ಹಾರೈಸಿದರು.
ಪೌರಕಾರ್ಮಿಕರಿಗೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಸ್ವಚ್ಛತೆಯಲ್ಲಿ ರಾಷ್ಟ್ರಮಟ್ಟದಲ್ಲಿ ದಾವಣಗೆರೆ ಉತ್ತಮ ಸಾಧನೆ ಮಾಡುವಂತಾಗಲು ಪೌರಕಾರ್ಮಿಕರ ಕೊಡುಗೆ ಅಪಾರ. ನಿಮ್ಮ ಸೇವೆ, ಅತ್ಯುತ್ತಮ ಕೆಲಸದಿಂದ ಸ್ವಚ್ಛತೆ ವಿಭಾಗದಲ್ಲಿ ದಾವಣಗೆರೆಗೆ ಪ್ರಶಸ್ತಿ ಬಂದಿದೆ. ಇದು ನಮ್ಮೆಲ್ಲರ ಹೆಮ್ಮೆ ಮತ್ತು ಖುಷಿಯ ವಿಚಾರ ಎಂದು ಹೇಳಿದರು.
ಪೌರಕಾರ್ಮಿಕರು ಬೆಳಿಗ್ಗೆಯೇ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ಎಂಸಿಸಿ ಬಿ ಬ್ಲಾಕ್ ಸ್ವಚ್ಛತೆಗೆ ಮಾದರಿ ವಾರ್ಡ್ ಎಂದೇ ಖ್ಯಾತಗೊಂಡಿದೆ. ಇದಕ್ಕೆ ನಿಮ್ಮೆಲ್ಲರ ಅತ್ಯುತ್ತಮ ಕೆಲಸ, ವಾರ್ಡ್ ಜನರ ಸಹಕಾರ, ಶಾಸಕರು. ಸಚಿವರು ಮತ್ತು ಸಂಸದರ ಮಾರ್ಗದರ್ಶನವೇ ಕಾರಣ. ಇದೇ ರೀತಿಯಲ್ಲಿ ಮುನ್ನಡೆಯೋಣ ಎಂದು ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಪೌರಕಾರ್ಮಿಕರನ್ನು ಸನ್ಮಾನಿಸಿ, ಉಡುಗೊರೆ ನೀಡಲಾಗಿದೆ. ಇದು ನಿಮ್ಮ ಸೇವೆಗೆ ಸಲ್ಲಿಸುವ ಗೌರವ. ಎಂಸಿಸಿ ಬಿ ಬ್ಲಾಕ ವಾರ್ಡ್ ಮಾತ್ರವಲ್ಲ, ಉಳಿದ ವಾರ್ಡ್ ಗಳಲ್ಲಿಯೂ ಸ್ವಚ್ಚತೆಗೆ ಹೆಚ್ಚಿನ ಗಮನ ನೀಡಲಾಗಿದೆ. ಮಳೆ ಇರಲಿ, ಚಳಿ ಇರಲಿ, ಬಿಸಿಲು ಇರಲಿ ನಿಮ್ಮ ಕೆಲಸವನ್ನು ಸರಿಯಾಗಿ ನಿಭಾಯಿಸಿ. ಜನರ ಜೊತೆ ಸೌಮ್ಯಯುತವಾಗಿ ವರ್ತಿಸಿ. ಯಾವುದೇ ರೀತಿಯ ತೊಂದರೆ ಆಗದಂತೆ ಸಮಸ್ಯೆ ಇಲ್ಲದಂತೆ ಸ್ವಚ್ಥತಾ ಕಾರ್ಯಗಳನ್ನು ಮುಂದುವರಿಸಿ ಎಂದು ಗಡಿಗುಡಾಳ್ ಮಂಜುನಾಥ್ ಅವರು ಸಲಹೆ ನೀಡಿದರು.
ಉಡುಗೊರೆ ಸ್ವೀಕರಿಸಿದ ಬಳಿಕ ಮಾತನಾಡಿದ ಪೌರಕಾರ್ಮಿಕರು, ಈ ವಾರ್ಡ್ ನಲ್ಲಿನ ಪೌರ ಕಾರ್ಮಿಕರಿಗೆ ಪ್ರತಿವರ್ಷವೂ ಗಡಿಗುಡಾಳ್ ಮಂಜುನಾಥ್ ಅವರು ಉಡುಗೊರೆ ನೀಡುತ್ತಲೇ ಬರುತ್ತಿದ್ದಾರೆ. ನಮ್ಮನ್ನು ಗುರುತಿಸಿ ಸನ್ಮಾನಿಸುತ್ತಾರೆ. ಇಂಥ ಅತ್ಯುತ್ತಮ ಮಾನವೀಯ ಮತ್ತು ಸ್ಪಂದಿಸುವ ಗುಣ ಹೊಂದಿರುವ ಮಂಜುನಾಥ್ ಅವರಿಗೆ ನಮಸ್ಕಾರಗಳನ್ನು ತಿಳಿಸುತ್ತೇವೆ. ರಾಜಕಾರಣದಲ್ಲಿ ಮತ್ತಷ್ಟು ಪ್ರಗತಿ ಅವರಿಗೆ ಸಿಗುವಂತಾಗಲಿ ಎಂದು ಹಾರೈಸಿದರು.
ಈ ವೇಳೆ ಎಂಸಿಸಿ ಬಿ ಬ್ಲಾಕ್ ವಾರ್ಡ್ ನ ಪ್ರಮುಖರು, ನಾಗರಿಕರು, ಹಿರಿಯರು ಹಾಜರಿದ್ದರು.