ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸುತ್ತಿರುವ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ.
ದರ್ಶನ್ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೇಳಿದ ಹಿನ್ನೆಲೆ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ. ಈ ಹಿಂದೆ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಪರ ವಕೀಲರು, ಎಸ್‌ಪಿಪಿ ಪ್ರಸನ್ನ ಅವರು ಆಕ್ಷೇಪಣೆ ಸಲ್ಲಿಸಲು ತಡ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದರೀಗ ಎಸ್‌ಪಿಪಿ ಆಕ್ಷೇಪಣೆ ಸಲ್ಲಿಸಿದ ಬಳಿಕ ತಾವೇ ಇದೀಗ ವಾದ ಮಂಡನೆಗೆ ಕಾಲಾವಕಾಶ ಕೇಳಿ ವಿಚಾರಣೆಯನ್ನು ಮುಂದಕ್ಕೆ ಹಾಕಿಸಿಕೊಂಡಿದ್ದಾರೆ.
ದರ್ಶನ್ ಪರ ಹಿರಿಯ ವಕೀಲರಾದ ಸಿವಿ ನಾಗೇಶ್ ಅವರು ನ್ಯಾಯಾಲಯಕ್ಕೆ ಖುದ್ದು ಬರಬೇಕಾಗಿತ್ತು. ಆದರೆ ಅವರು ಬಾರದೇ ಇರುವ ಕಾರಣಕ್ಕಾಗಿ ಅವರ ಸಹಾಯಕ ವಕೀಲರು ಪ್ರಕರಣದ ವಾದ ಮಂಡನೆಗಾಗಿ ಇನ್ನಷ್ಟು ದಿನ ಕಾಲಾವಕಾಶ ಕೇಳಿದ್ದಾರೆ. ಇನ್ನು ದರ್ಶನ್ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೇಳಿದ್ದರಿಂದ ಸೆಪ್ಟೆಂಬರ್ 30ಕ್ಕೆ ವಿಚಾರಣೆ ಮುಂಡೂಡಿಕೆಯಾಗಿದೆ.
ದರ್ಶನ್ ಅವರು ಬಂಧನವಾದಾಗಿನಿಂದ ಇದೇ ಮೊದಲ ಬಾರಿಗೆ ಅಂದರೆ ಸೆಪ್ಟೆಂಬರ್ 21ರಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಗೆ ತಕರಾರು ಸಲ್ಲಿಸಲು ಎಸ್‌ಪಿಪಿ ಅವರು ತಡ ಮಾಡಿದ್ದ ಕಾರಣ 2 ಬಾರಿ ವಿಚಾರಣೆ ಮುಂದೂಡಿ ಇಂದು ವಿಚಾರಣೆ ನಿಗದಿಯಾಗಿತ್ತು. ಆದರೆ ಇಂದು ದರ್ಶನ್ ಪರ ವಕೀಲರೇ ವಿಚಾರಣೆಗೆ ಕಾಲಾವಕಾಶ ಕೋರಿದ ಹಿನ್ನಲೆ ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ಸೆ. 30ಕ್ಕೆ ಮುಂದೂಡಿದ್ದಾರೆ.