ಮಂಗಳೂರು : ಉಗ್ರ ಸಂಘಟನೆ ಐಸಿಸ್ ಜೊತೆ ನಂಟು ಇದೆ ಎಂಬ ಆರೋಪದಡಿ ಎನ್ ಐಎ ಯಿಂದ ಅರೆಸ್ಟ್ ಆಗಿರುವ ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬರವರ ಮೊಮ್ಮಗ ಅಮ್ಮರ್ ಅಬ್ದುಲ್ ರೆಹಮಾನ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ಆಗಸ್ಟ್ 21, 2021ರಂದು ಐಸಿಸ್ ನಂಟಿನ ಆರೋಪದಡಿ ಅಮ್ಮರ್ ಅಬ್ದುಲ್ ರೆಹಮಾನ್ ಬಂಧನವಾಗಿತ್ತು. ಯುಎಪಿಎ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ದಳ ಬಂಧಿಸಿದ್ದರು. ಆದರೆ ಬಂಧನ ಪ್ರಶ್ನಿಸಿ ವಿಚಾರಣಾಧೀನ ಕೋರ್ಟ್ನಲ್ಲಿ ಜಾಮೀನಿಗೆ ರೆಹಮಾನ್ ಅರ್ಜಿ ಸಲ್ಲಿಸಿದ್ದ. ಆದರೆ ಜಾಮೀನು ನಿರಾಕರಿಸಿದ ಹಿನ್ನೆಲೆ ದೆಹಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸದ್ಯ ಸುದೀರ್ಘ ವಿಚಾರಣೆ ಬಳಿಕ ಪೂರಕ ಸಾಕ್ಷ್ಯ ಸಿಗದ ಹಿನ್ನೆಲೆ ದೆಹಲಿ ಹೈ ಕೋರ್ಟ್ ಜಾಮೀನು ನೀಡಿದೆ.
ಜಾಮೀನು ಆದೇಶದಲ್ಲಿ ಹಲವು ಅಂಶಗಳನ್ನು ದೆಹಲಿ ಹೈಕೋರ್ಟ್ ಉಲ್ಲೇಖಿಸಿದ್ದು, ಉಗ್ರ ಸಂಘಟನೆ ಜೊತೆಗಿನ ಆಕರ್ಷಣೆಯನ್ನು ಉಗ್ರ ನಂಟು ಎನ್ನಲು ಆಗಲ್ಲ. ಐಸಿಸ್ ಬಾವುಟ, ಕರಪತ್ರ ಮೊಬೈಲ್ ನಲ್ಲಿದ್ದರೆ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ. ಇವುಗಳೆಲ್ಲ ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್ ನಲ್ಲಿ ಸಿಗುತ್ತದೆ. ಕುತೂಹಲ ಇರೋ ಯಾರು ಬೇಕಾದರೂ ಮೊಬೈಲ್, ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಬಹುದು. ಹಾಗಾಗಿ ಇದನ್ನ ಇಟ್ಟು ಕೊಂಡವರನ್ನ ಐಸಿಸ್ ನಂಟನ್ನ ಸಾಬೀತುಪಡಿಸಲು ಆಗಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ