ನವದೆಹಲಿ: 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ತಂದುಕೊಟ್ಟ ಟೀಂ ಇಂಡಿಯಾ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಸೇರಿದಂತೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ವಿಶ್ವಕಪ್ ಗೆದ್ದ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಅವರು, ಚಾಂಪಿಯನ್ಸ್! ನಮ್ಮ ತಂಡವು ಟಿ20 ವಿಶ್ವಕಪ್ ಅನ್ನು ಸ್ಟೈಲ್ನಲ್ಲಿ ಮನೆಗೆ ತಂದಿದೆ. ಭಾರತ ಕ್ರಿಕೆಟ್ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಅಭಿನಂದಿಸಿದ್ದಾರೆ. ಇದರೊಂದಿಗೆ ವಿಡಿಯೋ ಸಂದೇಶ ಕೂಡ ಹಂಚಿಕೊಂಡಿದ್ದಾರೆ.
ಜೊತೆಗೆ ಟೀಂ ಇಂಡಿಯಾ ವಿಶ್ವಕಪ್ ಅಷ್ಟೇ ಅಲ್ಲ, ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿದೆ. ಒಂದೇ ಒಂದು ಪಂದ್ಯವನ್ನು ಸೋಲದಿರುವುದು ಸಣ್ಣ ಸಾಧನೆಯಲ್ಲ. 140 ಕೋಟಿ ಭಾರತೀಯರು ನಿಮ್ಮ ಅದ್ಭುತ ಪ್ರದರ್ಶನದ ಬಗ್ಗೆ ಹೆಮ್ಮೆಪಡುತ್ತಾರೆ. ನೀವು ವಿಶ್ವಕಪ್ ಜೊತೆಗೆ ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿದ್ದೀರಿ. ಈ ಅದ್ಭುತ ಗೆಲುವಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಎಂದಿಗೂ ಬತ್ತದ ಉತ್ಸಾಹದಿಂದ, ತಂಡವು ಕಠಿಣ ಪರಿಸ್ಥಿತಿಗಳಲ್ಲಿ ಸಾಗಿತು. ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಕೌಶಲ್ಯವನ್ನು ಪ್ರದರ್ಶಿಸಿತು. ಫೈನಲ್ ಪಂದ್ಯದಲ್ಲಿ ಅಸಾಧಾರಣ ಗೆಲುವು. ಟೀಮ್ ಇಂಡಿಯಾ! ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೂಡ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಅದ್ಭುತ ವಿಶ್ವಕಪ್ ವಿಜಯ ಮತ್ತು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾಗೆ ಅಭಿನಂದನೆಗಳು! ಸೂರ್ಯ, ಎಂತಹ ಅದ್ಭುತ ಕ್ಯಾಚ್! ರೋಹಿತ್, ಈ ಗೆಲುವು ನಿಮ್ಮ ನಾಯಕತ್ವಕ್ಕೆ ಸಾಕ್ಷಿ. ರಾಹುಲ್, ಟೀಂ ಇಂಡಿಯಾ ನಿಮ್ಮ ಮಾರ್ಗದರ್ಶನವನ್ನು ಕಳೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ನಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಬಣ್ಣಿಸಿದ್ದಾರೆ.