SUDDIKSHANA KANNADA NEWS/ DAVANAGERE/ DATE:04-06-2023
ದಾವಣಗೆರೆ (DAVANAGERE): ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಅಕ್ರಮಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಅಕ್ರಮ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ. ಸರ್ಕಾರಕ್ಕೆ ಬರಬೇಕಿರುವ ಆದಾಯದ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತದೆ ಎಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ (S.S MALLIKARJUN) ಖಡಕ್ ವಾರ್ನಿಂಗ್ ನೀಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸದ್ಯದಲ್ಲಿಯೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಭೆ (MEETING) ನಡೆಸಿ ಸಮಗ್ರ ಮಾಹಿತಿ ಕಲೆಹಾಕುತ್ತೇನೆ. ಅಕ್ರಮ ಮರಳುಗಾರಿಕೆ, ಗಣಿಗಾರಿಕೆ ಅಕ್ರಮ ತಡೆಯಲು ಎಲ್ಲಾ ರೀತಿಯಲ್ಲಿಯೂ ಕ್ರಮ ಜರುಗಿಸಲಾಗುವುದು. ಸಿಎಂ ಸಿದ್ದರಾಮಯ್ಯ (SIDDARAMAI) ಅವರು ಸಹ ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಜೂ. 5 ರ ನಾಳೆ ದಾವಣಗೆರೆ(DAVANAGERE)ಗೆ ಸಿಎಂ ಸಿದ್ದರಾಮಯ್ಯ (SIDDARAMAI) ಆಗಮಿಸಿ ಕೆಡಿಪಿ ಸಭೆ (KDP MEETING) ನಡೆಸುತ್ತಾರೆ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತಂತೆ ಮಾಹಿತಿ ಇಲ್ಲ. ಈ ಬಗ್ಗೆ ದೂರು ಬಂದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಖಚಿತ ಎಂದು ಹೇಳಿದರು.
ಶೆಟ್ಟರ್ ಕೈ ಬಿಡುವ ಪ್ರಶ್ನೆ ಇಲ್ಲ:
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ ಎಂದರು.
ಸಿದ್ದರಾಮಯ್ಯ ಎರಡೂವರೆ ವರ್ಷ ಸಿಎಂ ಆಗಿ, ಡಿ. ಕೆ. ಶಿವಕುಮಾರ್ ಅವರು ಎರಡು ವರ್ಷ ಸಿಎಂ ಆಗುತ್ತಾರೆ ಎಂಬ ಯಾವ ಒಡಂಬಡಿಕೆಯೂ ಇಲ್ಲ. ಎರಡೂವರೆ ವರ್ಷ ಮಾತ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುತ್ತಾರೆ
ಎಂದು ಯಾರೂ ಸಹ ಹೇಳಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಆಡಳಿತ ನಡೆಸುತ್ತಿದೆ. ರಾಜ್ಯದ ಜನರಿಗೆ ಒಳ್ಳೆಯ ಆಡಳಿತ ಕೂಡುತ್ತೇವೆ. ಕಾದು ನೋಡಿ ಎಂದು ತಿಳಿಸಿದರು.
ಮಳೆ ಹಾನಿ ಪರಿಹಾರಕ್ಕೆ ಕ್ರಮ:
ಮಳೆಯಿಂದ ಹಾನಿಯಾದ ಕುರಿತಂತೆ ಮಾಹಿತಿ ಸಂಗ್ರಹಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಕಷ್ಟದಲ್ಲಿರುವವರಿಗೆ ಪರಿಹಾರ ನೀಡಲಾಗುತ್ತದೆ. ವೀಳ್ಯೆದೆಲೆ, ಅಡಿಕೆ, ಭತ್ತ ಸೇರಿದಂತೆ ತೋಟಗಾರಿಕೆ ಬೆಳೆ ಹಾನಿ
ಆಗಿದೆ. ವರದಿ ತರಿಸಿಕೊಂಡು ಪರಿಹಾರ ನೀಡುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಜಾರಿ:
ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವುದಾಗಿ ಸಿದ್ದರಾಮಯ್ಯರು ಈಗಾಗಲೇ ಘೋಷಿಸಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಯೋಜನೆಗಳಿಗೆ ಹಣ ಹೊಂದಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿಸಿದ್ದರಾಮಯ್ಯ ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, 200 ಯೂನಿಟ್, ವಿದ್ಯಾನಿಧಿ ಜಾರಿಗೆ ಬರಲಿದೆ. ಜನರಿಗೆ ಖುಷಿ ತರಲಿದೆ. ಆಗಸ್ಟ್ 15ರೊಳಗೆ ಯೋಜನೆಗಳು ಜಾರಿಯಾಗಲಿವೆ ಎಂದು ವಿವರಿಸಿದರು.
ಗೋಹತ್ಯೆನಿಷೇಧದ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ:
ಗೋ ಹತ್ಯೆ ನಿಷೇಧದ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿಯೇ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ರಾಜ್ಯದ ಜನರಿಗೆ ಅನುಕೂಲವಾಗುವಂತೆ ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೇಳಿದರು.
ಬಿಜೆಪಿಯದ್ದು ಹಿಟ್ಲರ್ ಆಡಳಿತ, ನಮ್ಮದಲ್ಲ:
ಬಿಜೆಪಿಯವರು ಹಿಟ್ಲರ್ ರೀತಿ ಆಡಳಿತ ನಡೆಸಿದ್ದು ಎಲ್ಲರಿಗೂ ಗೊತ್ತಿದೆ. ನಮ್ಮದು ಹಿಟ್ಲರ್ ಆಡಳಿತ ಅಲ್ಲ, ಜನಪರವಾದ ಕೆಲಸ ಮಾಡುವ ಸರ್ಕಾರ. ಬಿಜೆಪಿಯವರು ಸೋತ ಬಳಿಕ ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೇಕ್ ಇನ್ ಇಂಡಿಯಾ ಏನಾಯ್ತು…?
ರೈಲ್ವೆ ದುರಂತ ನಡೆದಿದ್ದು ನಿಜಕ್ಕೂ ಬೇಸರದ ಸಂಗತಿ. ರೈಲ್ವೆ ದುರಂತದ ಬಗ್ಗೆ ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳುತ್ತಿದ್ದಾರೆ. 1964 ರಲ್ಲಿ ಜಪಾನ್ ದೇಶದಲ್ಲಿ ಬುಲೆಟ್ ಟ್ರೈನ್ ಶುರುವಾಯಿತು. ಇದುವರೆಗೂ ಒಂದೇ ಒಂದು ಅಪಘಾತ
ಆಗಿಲ್ಲ. ಬಿಜೆಪಿಯವರು ಮೇಕ್ ಇನ್ ಇಂಡಿಯಾ ಅಂತಾರೆ, ಒಳ್ಳೊಳ್ಳೆ ಟೆಕ್ನಾಲಜಿ ಅಳವಡಿಸಿಕೊಳ್ಳಬೇಕಿತ್ತು. ಇದು ಮಾಡದ ಕಾರಣ ಅಮಾಯಕರು ಬಲಿಯಾಗಿದ್ದಾರೆ ಎಂದು ಕಿಡಿಕಾರಿದರು.
ಉಸ್ತುವಾರಿ ಸಚಿವರ ಗೊಂದಲ ಪರಿಹರಿಸುತ್ತಾರೆ:
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಗೊಂದಲ ಇದ್ದೇ ಇರುತ್ತೆ. ಒಂದೊಂದು ಜಿಲ್ಲೆಗೆ ಇಬ್ಬರು ಮೂವರು ಆಕಾಂಕ್ಷಿಗಳು ಇರುವುದು ಸಹಜ. ಎಲ್ಲವನ್ನೂ ಪಕ್ಷದ ಹೈಕಮಾಂಡ್, ರಾಜ್ಯ ನಾಯಕರು ಪರಿಹರಿಸಲಿದ್ದಾರೆ ಎಂದು ತಿಳಿಸಿದರು.