ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭ್ರಷ್ಟಾಚಾರಿಗಳು ಮುಸುಕಿನ ಭಯೋತ್ಪಾದಕರು: ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ

On: April 23, 2025 1:32 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-23-04-2025

ದಾವಣಗೆರೆ: ಭಯೋತ್ಪಾದಕರು ಅಮಾಯಕ ನಾಗರಿಕರನ್ನು ಕೊಂದು ದೇಶದಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಆದರೆ ನಮ್ಮ ನಡುವೆ ಇರುವ ಭ್ರಷ್ಟಾಚಾರಿಗಳು ಸಹ ಮುಸುಕು ಧರಿಸಿರುವ ಭಯೋತ್ಪಾದಕರಾಗಿದ್ದು, ದೇಶದ ಅಭಿವೃದ್ಧಿಗೆ ಕಂಟಕವಾಗಿದ್ದಾರೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿನ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಸಾರ್ವಜನಿಕ ಆಡಳಿತ ಮತ್ತು ಲೋಕಾಯುಕ್ತ ಕಾಯ್ದೆ-1984 ಅಡಿ ವಕೀಲರ ಪಾತ್ರದ ಕುರಿತು ಉಪನ್ಯಾಸ ಮಾಲಿಕೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗದಲ್ಲೂ ಸಹ ಭ್ರಷ್ಟಾಚಾರ ಹೆಚ್ಚಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಪ್ರಜ್ಞಾವಂತರಾದ ವಕೀಲರು ಇವುಗಳ ವಿರುದ್ಧ ಧ್ವನಿ ಎತ್ತಬೇಕು. ವಕೀಲರ ಸಂಘದ ಮೂಲಕ ಪ್ರತಿ ಹಳ್ಳಿಗಳಿಗೆ ತೆರಳಿ, ಬಡವರು ಹಾಗೂ ಅಶಕ್ತರಿಗೆ ಕಾನೂನಿನ ನೆರವು ಒದಗಿಸಬೇಕು. ಸ್ಥಳೀಯ ಸಮಸ್ಯೆಗಳ ಬಗೆಹರಿಸಲು ವಕೀಲರು ಹಾಗೂ ಸಂಘ ಪ್ರಯತ್ನಿಸಿದರೆ, ಸಾಕಷ್ಟು ಬದಲಾವಣೆಯನ್ನು ಸಮಾಜದಲ್ಲಿ ಕಾಣಬಹುದು ಎಂದರು.

ಸಂವಿಧಾನ ರಾಷ್ಟ್ರೀಯ ಗ್ರಂಥವಾಗಿದೆ. ಇದರ ರಕ್ಷಣೆಗೆ ಪ್ರತಿಯೊಬ್ಬರು ಕಂಕಣ ಬದ್ದರಾಗಬೇಕು‌. ‘ಧರ್ಮೋ ರಕ್ಷಿತಿ ರಕ್ಷಿತಃ ‘ ಎಂಬ ಉಕ್ತಿಯಂತೆ ‘ಸಂವಿಧಾನ ರಕ್ಷಿತಿ ರಕ್ಷಿತಃ’ ಎಂಬುದನ್ನು ನಾನು ಪ್ರಸ್ತಾಪಿಸುತ್ತೇನೆ. ಸಂವಿಧಾನವನ್ನು ನಾವು ಕಾಪಾಡಿದರೆ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುತ್ತದೆ. ಸಂವಿಧಾನದ ಆಶಯ ಹಾಗೂ ತತ್ವಗಳಿಗೆ ಧಕ್ಕೆ ಬರದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ಸಂವಿಧಾನ ಕದಲಿದರೆ ದೇಶದಲ್ಲಿ ಕಂಪನ ಉಂಟಾಗುತ್ತದೆ. ಸಂವಿಧಾನ ಇಲ್ಲವಾದರೆ ಅರಾಜಕತೆ‌ ತಾಂಡವವಾಡುತ್ತದೆ. ನಮ್ಮ ಸಂವಿಧಾನ ಮಾನವ ಹಕ್ಕುಗಳನ್ನು ನೀಡುವುದರೊಂದಿಗೆ ಸ್ವಾತಂತ್ರ್ಯ, ನ್ಯಾಯ, ಸಮಾನತೆ ಹಾಗೂ ಸಹೋದರ ತತ್ವಗಳನ್ನು ಜಗತ್ತಿಗೆ ಸಾರಿದೆ. ಸಾಮಾಜಿಕ ನ್ಯಾಯ ಸಂವಿಧಾನ ಜೀವಾಳವಾಗಿದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.

ಮೊದಲಿನಿಂದಲೂ ದೇಶದಲ್ಲಿ ಸಂವಿಧಾನ ಆಧರಿಸಿ ಮೂರು ವರ್ಗಗಳು ಇವೆ. ಮೊದಲನೆಯ ವರ್ಗ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ವಿರೋಧಿಸುತ್ತಾ ಬಂದಿದೆ. ಇನ್ನೊಂದು ವರ್ಗ ಸಂವಿಧಾನ ಹೆಸರಿನಲ್ಲಿಯೇ ಆಡಳಿತ ನಡೆಸುತ್ತಾ 75 ವರ್ಷಗಳಾದರೂ ಸಂವಿಧಾನದ ಆಶಯಗಳನ್ನು ಈಡೇರಿಸಿಲ್ಲ. ಕೊನೆಯ ವರ್ಗ ಸಂವಿಧಾನದ ಆಶಯಗಳು ಎಂದು ಈಡೇರುತ್ತವೆ ಎಂದು ಆಸೆಗಣ್ಣಿನಿಂದ ಎದುರು ನೋಡುತ್ತಿದೆ ಎಂದರು.

ನ್ಯಾಯಾಂಗ ಕ್ಷೇತ್ರದಲ್ಲೂ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ವಕೀಲರ ವೈಫಲ್ಯವೇ ಮುಖ್ಯಕಾರಣವಾಗಿದೆ. ವಕೀಲರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದರೆ ನ್ಯಾಯಾಂಗ ಕ್ಷೇತ್ರ ಸುಧಾರಣೆ ಕಾಣಲಿದೆ. ಕಲುಷಿತ ಹಾಗೂ ತ್ಯಾಜ್ಯ ನೀರನ್ನು ನದಿಗಳು ಹಾಗೂ ಕೆರೆ ಮೂಲಗಳಿಗೆ ಹರಿಸಲಾಗುತ್ತದೆ. ಕೆರೆಗಳನ್ನು ಒತ್ತುವರಿ ಮಾಡಲಾಗುತ್ತಿದೆ. ಅರಣ್ಯ ನಾಶವಾಗುತ್ತಿದೆ. ಇವುಗಳನ್ನು ತಡೆಗಟ್ಟಲು ವಕೀಲರು ಪಣ ತೊಡಬೇಕು. ಅಧಿಕಾರಿಗಳನ್ನು ಪ್ರಶ್ನಿಸಬೇಕು ಎಂದು ತಿಳಿಸಿದರು.

ಸಮಾಜ ಹಾಗೂ ಉತ್ತಮ ಆಡಳಿತಕ್ಕೆ ವಕೀಲರ ಪಾತ್ರ ಅತೀ ಮುಖ್ಯವಾಗಿದೆ. ಸಮಾಜದಲ್ಲಿ ವಕೀಲರಿಗೆ ವಿಶೇಷವಾದ ಗೌರವ ಇದೆ. ಸಮಾಜ ಹಾಗೂ ಉತ್ತಮ ಆಡಳಿತಕ್ಕೆ ವಕೀಲರ ಪಾತ್ರ ಅನನ್ಯವಾದುದು. ಸಮಾಜದಲ್ಲಿ ಎಲ್ಲರೂ ಗೌರವಯುತವಾಗಿ ಜೀವನ ನಡೆಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಅನ್ಯಾಯಕ್ಕೊಳಗಾದವರಿಗೆ ಕಾನೂನು ರಕ್ಷಣೆ ನೀಡುವ ಮೂಲಕ ನ್ಯಾಯ ದೊರಕಿಸಲು ಮುಂದಾಗಬೇಕು ಎಂದು ವಕೀಲರಿಗೆ ನ್ಯಾಯಮೂರ್ತಿ ಬಿ.ವೀರಪ್ಪ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್ ‌ನಲ್ಲಿ ಜರುಗಿದ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ನಾಗರಿಕರ ಗೌರವಾರ್ಥ ಒಂದು ನಿಮಿಷದ ಮೌನಾಚರಣೆ ಆಚರಿಸಲಾಯಿತು. ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಡಾ.ಅನುಪಮಾ ಹಾಗೂ ಬಸು ಬರೆದಿರುವ ಭೀಮಯಾನ ಹಾಗೂ ಈದಿನ ಡಾಟ್‌ಕಾಂ ಹೊರತಂದಿರುವ ಅರಿವೇ ಅಂಬೇಡ್ಕರ್ ಕೃತಿಗಳನ್ನು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಬಿಡುಗಡೆ ಮಾಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ್ ಸ್ಬಾಗತಿಸಿದರು. ವಕೀಲ ಸಿ.ಪಿ.ಸಿದ್ದೇಶ್ ಪ್ರಾರ್ಥಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಅಧ್ಯಕ್ಷ ವೇಲಾ.ಡಿ.ಕೆ, ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಅರವಿಂದ.ಎನ್.ವಿ, ವಿ.ಎನ್.ಮಿಲನ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣಕುಮಾರ್, ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment