ಬೀದರ್: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ಬಳಿ ಗುತ್ತಿಗೆದಾರರ ಪರವಾನಿಗೆಯೇ ಇರಲಿಲ್ಲ ಎಂಬ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಹೇಳಿಕೆ ನೀಡಿದ್ದು, ಮತ್ತೊಂದೆಡೆ ಸಚಿನ್ ಸಹೋದರಿ ಪ್ರತಿಕ್ರಿಯಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಗುರುವಾರ (ಜನವರಿ 02) ಆರೋಪಿಸಿದ್ದಾರೆ
ಸಚಿನ್ ಪ್ರಕರಣದ ವಿಚಾರದಲ್ಲಿ ರಾಜ್ಯ ಸರ್ಕಾರದ ನಮಗೆ ಉಳಿದಿಲ್ಲ. ಸಿಬಿಐ ತನಿಖೆ ನಡೆಸಿದರೆ ಮಾತ್ರ ನ್ಯಾಯ ಸಿಗಬಹುದು ಎಂಬ ವಿಶ್ವಾಸ ಇರುವುದಾಗಿ ಸಚಿನ್ ಸಹೋದರಿ ಸುರೇಖ್ ಆಗ್ರಹಿಸಿದ್ದಾರೆ.
ತನಿಖಾಧಿಕಾರಿಗಳು ನಮ್ಮನ್ನು ಮಾತ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್ ಎಸ್ ಎಲ್ ವರದಿ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ಸುರೇಖಾ ದೂರಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿಂದ ಕೈ ಬಿಡುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೆ ಧೈರ್ಯವೇ ಇಲ್ಲ. ಹೀಗಾಗಿ ದಾಖಲೆ ಇಲ್ಲ ಎಂಬ ಕಾರಣ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸಚಿನ್ ಬರೆದಿಟ್ಟ 7 ಪುಟಗಳ ಡೆತ್ ನೋಟಿನಲ್ಲಿ 2-3 ಬಾರಿ ಪ್ರಿಯಾಂಕ್ ಖರ್ಗೆ ಹೆಸರು ಪ್ರಸ್ತಾಪವಾಗಿದೆ. ಎಫ್ಎಸ್‌ಎಲ್ ವರದಿಯಲ್ಲಿ ಡೆತ್‌ನೋಟ್ ಅಸಲಿ ಎಂದು ದೃಢಪಟ್ಟಿದೆ. ಇನ್ನೇನು ದಾಖಲೆ ಬೇಕು? ರಾಜೀನಾಮೆ ಕೇಳಿದರೆ ಅವರು ನಿಮ್ಮ ಬುಡಕ್ಕೆ ಕೈ ಹಾಕುತ್ತಾರೆಂಬ ಭಯ ಕಾಡುತ್ತಿದೆ ಎಂದರು.
ಈಗಾಗಲೇ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕಾಗಿತ್ತು. ಬೇರೆ ಸರ್ಕಾರವಿದ್ದಾಗ ಸ್ವಲ್ಪ ಆರೋಪ ಬಂದರೂ ಬೀದಿಗಿಳಿದು ಬೆಂಕಿ ಹಚ್ಚುತ್ತಿರಲಿಲ್ಲವೇ? ಈಗ ನಿಮ್ಮನ್ನು ತಡೆದವರು ಯಾರು ಎಂದು ಛಲವಾದಿ ಪ್ರಶ್ನಿಸಿದ್ದಾರೆ.