SUDDIKSHANA KANNADA NEWS/ DAVANAGERE/ DATE:31-05-2024
ದಾವಣಗೆರೆ: ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸದ್ದು ಮಾಡಿದೆ. ಆದ್ರೆ, ನಡೆಸಿದ ಕಾಮಗಾರಿಯ ಬಾಕಿ ಬಿಲ್ ಪಾವತಿ ಮಾತ್ರ ಕಾರಣವಿತ್ತಾ? ಅಥವಾ ಬೇರೆ ಕಾರಣಗಳು ಇದ್ದವಾ ಎಂಬ ಕುರಿತಂತೆ ಕುತೂಹಲ ಗರಿಗೆದರಿದೆ. ಆಸ್ತಿ ಪಾಲು ವಿಚಾರ ಸಂಬಂಧ ಆದ ಅನ್ಯಾಯ, ಮಾನಸಿಕ ಕಿರಿಕಿರಿ ಹಾಗೂ ಕೆ ಆರ್ ಐ ಡಿ ಎಲ್ (ಲ್ಯಾಂಡ್ ಆರ್ಮಿ) ಕ್ರಮದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಸಂತೇಬೆನ್ನೂರಿನ ಹೊಸಪೇಟೆ ವಾಸಿ ಪಿ. ಎಸ್. ಗೌಡರ್ (50) ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಎಂದು ಗುರುತಿಸಲಾಗಿದೆ.
ಮೇ. 26ರಂದು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಮೃತರ ಪತ್ನಿ ವಸಂತ ಕುಮಾರಿ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಎಫ್ ಐ ಆರ್ ನಲ್ಲಿ ಏನಿದೆ…?
ಕಳೆದ ಮೇ 26ರಂದು ಸಂಜೆ 7 ಗಂಟೆ ಸಮಯದಲ್ಲಿ ವಸಂತಕುಮಾರಿ ಅವರು ಸಂತೇಬೆನ್ನೂರು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ನನ್ನ ತವರು ಮನೆ ಚನ್ನಗಿರಿ ತಾಲ್ಲೂಕು ದೊಡ್ಡೇರಿಕಟ್ಟೆ ಗ್ರಾಮ. ನನ್ನನ್ನು ಸುಮಾರು 18 ವರ್ಷಗಳ ಹಿಂದೆ ಸಂತೆಬೆನ್ನೂರು ಗ್ರಾಮದ ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯರಾದ ಸಿದ್ದಲಿಂಗಪ್ಪನವರ ಪುತ್ರ ಪಿ. ಎಸ್. ಗೌಡರ್ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದರು. ನಮಗೆ 13 ವರ್ಷದ ಕುಂಚ ಪಿ. ಗೌಡರ್ ಎಂಬ ಮಗಳಿದ್ದಾಳೆ.
ಗಂಡ ಹೆಂಡತಿ ಮಗಳೊಂದಿಗೆ ಸಂತೆಬೆನ್ನೂರಿನ ಸ್ವಂತ ಮನೆಯಲ್ಲಿ ವಾಸವಾಗಿರುತ್ತೇವೆ. ನನ್ನ ಗಂಡನ ಅಣ್ಣನಾದ ಜಿ. ಎಸ್. ನಾಗರಾಜ ಮತ್ತು ತಮ್ಮನಾದ ಗೌಡರ ಶ್ರೀನಿವಾಸ ಇವರೊಂದಿಗೆ ಆಸ್ತಿ ಹಂಚಿಕೆ ವಿಚಾರವಾಗಿ ಮನಸ್ತಾಪವಿತ್ತು. ಹಲವಾರು ಬಾರಿ ಪಂಚಾಯಿತಿಯೂ ಆಗಿತ್ತು. ಮೈದುನ ಗೌಡರ ಶ್ರೀನಿವಾಸ ರವರ ಹೆಂಡತಿ ಇಂದುಮತಿ ಮತ್ತು ಅವರ ತಂದೆ ಚಿತ್ರಶೇಖರಪ್ಪ ಅವರು ನಮಗೆ ಮಾನಸಿಕ ಹಿಂಸೆ ನೀಡಿದ್ದರು. ಒಮ್ಮೆ ದೈಹಿಕವಾಗಿ ಹಲ್ಲೆ ನಡೆಸಿದ್ದರು. ನಂತರ ನಾವು ರಾಜಿ ಮಾಡಿಕೊಂಡಿದ್ದೆವು. ನನ್ನ ಗಂಡ ಕೆ ಆರ್ ಐ ಡಿ ಎಲ್ (ಲ್ಯಾಂಡ್ ಆರ್ಮಿ) ಅಧೀನದಲ್ಲಿ ಸಂತೆಬೆನ್ನೂರಿನ ಕೃಷಿ ಇಲಾಖೆಯ ಆವರಣದಲ್ಲಿ ಕಾಮಗಾರಿ ನಡೆಸಿದ್ದರು.
ಇದರ ಬಾಬ್ತು ಹಣ ಬಂದಿರಲಿಲ್ಲ. ಈ ಬಗ್ಗೆ ನನ್ನ ಗಂಡ ಮಾನಸಿಕವಾಗಿ ನೊಂದಿದ್ದರು. ಮೇ 26ರಂದು ಬೆಳಿಗ್ಗೆ ನಾನು ಮತ್ತು ನನ್ನ ಮಗಳು ಚಿತ್ರದುರ್ಗಕ್ಕೆ ನಮ್ಮ ಸಂಬಂಧಿಕರ ಮನೆಯಲ್ಲಿ ಸೀಮಂತ ಕಾರ್ಯಕ್ರಮಕ್ಕೆ ಹೋಗಿದ್ದೆವು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಯಾರೋ ನನಗೆ ಪೋನ್ ಮಾಡಿ ನಿನ್ನ ಗಂಡ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿಸಿದರು. ತಕ್ಷಣ ನಾನು ಮನೆಗೆ ಬಂದು ನೋಡಿದೆ. ನನ್ನ ಗಂಡ ನಡುಮನೆಯ ಫ್ಯಾನಿಗೆ ಹಗ್ಗದಿಂದ
ನೇಣು ಹಾಕಿಕೊಂಡು ಮೃತಪಟ್ಟಿದ್ದರು.
ಪಕ್ಕದ ಟೇಬಲ್ ಮೇಲೆ 3 ಹಾಳೆಯನ್ನು ಪಿನ್ ಮಾಡಿ ಇಟ್ಟಿದ್ದು, ಓದಲಾಗಿ ನನ್ನ ಸಾವಿಗೆ ಕಾರಣರಾದವರ ಬಗ್ಗೆ ಸೂಕ್ತ ಕ್ರಮ ಆಗಬೇಕು. ಇದರಲ್ಲಿ ಜಿಎಸ್ ನಾಗರಾಜ, ಗೌಡರ್ ಶ್ರೀನಿವಾಸ, ಕೆ ಆರ್ ಐ ಡಿ ಎಲ್ (ಲ್ಯಾಂಡ್ ಆರ್ಮಿ), ಇಂದುಮತಿ, ಚಿತ್ರಶೇಖರಪ್ಪ ಇವರ ಹೆಸರುಗಳು ಇದ್ದು, ಜಿ. ಎಸ್. ನಾಗರಾಜನಿಂದ ಆರ್ಥಿಕ ಮಾನಸಿಕ ಹಿಂಸೆಗೆ ಒಳಪಟ್ಟಿದ್ದೇನೆ. ತಮ್ಮ ಶ್ರೀನಿವಾಸನಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ. ಈತನು ಮನೆಯ ಆಡಳಿತ ಮಾಡುವಾಗ ಸುಮಾರು 30 ರಿಂದ 40 ಲಕ್ಷ ರೂಪಾಯಿ ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡು ನನಗೆ ಮೋಸ ಮಾಡಿದ್ದಾನೆ.
ಇಂದುಮತಿ ಮತ್ತು ಚಿತ್ರಶೇಖರಪ್ಪ ಇವರಿಂದ ಆಸ್ತಿವಿಚಾರವಾಗಿ ನಮ್ಮ ಕುಟುಂಬವು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದೆ. ಕೆ ಆರ್ ಐ ಡಿ ಎಲ್ ಸಂಸ್ಥೆಯು ಕಾಮಗಾರಿಯ ಮೊತ್ತ ನೀಡಿದೇ ಮಾನಸಿಕ ಹಿಂಸೆ ನೀಡಿರುತ್ತದೆ. ಎಂದು ಬರೆದಿರುತ್ತಾರೆ ಎಂದು ದೂರಿನಲ್ಲಿ ವಸಂತಕುಮಾರಿ ತಿಳಿಸಿದ್ದಾರೆ.
ಈ ಅಕ್ಷರಗಳು ನನ್ನ ಗಂಡನದೇ ಆಗಿದ್ದು, ನಾನು ಗುರುತಿದ್ದೇನೆ. ನನ್ನ ಗಂಡನು ನೇಣುಹಾಕಿಕೊಂಡು ಸಾಯಲು ಕಾರಣರಾದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಕೇಸ್ ತನಿಖೆ ನಡೆಯುತ್ತಿದೆ: ಎಸ್ಪಿ ಉಮಾ ಪ್ರಶಾಂತ್
ಪಿ. ಎಸ್. ಗೌಡರ್ ಆತ್ಮಹತ್ಯೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು, ಪಿ. ಎಸ್. ಗೌಡರ್ ರ ಹೋದರ ಶ್ರೀನಿವಾಸ್ ಹಾಗೂ ನಾಗರಾಜ್ ಅವರ ಬಗ್ಗೆ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಜೊತೆಗೆ ಗುತ್ತಿಗೆದಾರರಾಗಿದ್ದ ಕಾರಣ ಕಾಮಗಾರಿ ನಡೆಸಿದ ಹಣ ಬರಬೇಕಿತ್ತು. ಸಹದೋರರ ತೊಂದರೆ ಹಾಗೂ 80 ಲಕ್ಷ ರೂಪಾಯಿ ಹಣ ಬರಬೇಕಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ. ಇದೇ ಕಾರಣಕ್ಕೆ ಸಂಬಂಧಿಸಿದಂತೆ ಪಿ. ಎಸ್. ಗೌಡರ ಸಹೋದರರಾದ ಶ್ರೀನಿವಾಸ್, ನಾಗರಾಜ್, ಕೆ ಆರ್ ಐ ಡಿಎಲ್ ಸಂಸ್ಥೆ ವಿರುದ್ಧ ಐಪಿಸಿ ಕಲಂ 306 ಅನ್ವಯ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.