SUDDIKSHANA KANNADA NEWS/ DAVANAGERE/ DATE:06-12-2023
ಸಾಣೇಹಳ್ಳಿ: ಭಾರತದಲ್ಲಿ ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ ಮುಂತಾದವರು ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಮಲಗಿದ ಜನರನ್ನು ಎಚ್ಚರಿಸಿದವರು. ಜಡತ್ವವನ್ನು ಹೋಗಲಾಡಿಸಿದವರು. ಜಂಗಮತ್ವ ಮೈಗೂಡಿಸಿಕೊಳ್ಳಲು ಬೇಕಾದ ಶಕ್ತಿಯನ್ನು ತುಂಬಿದವರು. ಭಾರತ ಸರ್ವಜನಾಂಗದ ಶಾಂತಿಯ ತೋಟ ಎಂದು ಕುವೆಂಪುರವರು ಹೇಳಿದರು. ಆದರೆ ಇನ್ನೂ ಸರ್ವಜನಾಂಗದ ಶಾಂತಿಯ ತೋಟ ಆಗಿಲ್ಲ. ಎಲ್ಲ ಕಡೆ ಏನೇನೋ ಕೋಲಾಹಲ, ಗಲಭೆ, ಜಾತಿಯ ಸಂಘರ್ಷ, ಬಡವ ಮತ್ತು ಶ್ರೀಮಂತರ ನಡುವಿನ ಹೋರಾಟ, ಸ್ತ್ರೀ-ಪುರುಷರ ಅಸಮಾನತೆ ಇವು ೨೧ನೆಯ ಶತಮಾನದಲ್ಲೂ ಹಾಗೆಯೇ ಉಳಿದುಕೊಂಡು ಬಂದಿರುವುದು ವಿಷಾದದ ಸಂಗತಿ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ತಮ್ಮ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.
ಅವರು ಇಂದು ಕಲಬುರ್ಗಿಯ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಯ ಸ್ಥಳದಲ್ಲಿ ಜರುಗಿದ 67ನೆಯ ಮಹಾಪರಿನಿರ್ವಾಣ ದಿನ ಮತ್ತು ಡಾ. ಅಂಬೇಡ್ಕರರ ಚಳವಳಿ ಕುರಿತ ಪುಸ್ತಕ ಬಿಡುಗಡೆ ಮಾಡಿ ವಿಶೇಷ ಉಪನ್ಯಾಸ ನೀಡಿದರು.
ಸ್ವಾತಂತ್ರ್ಯ ಯಾರಿಗೆ ಬಂದದೆ ಎನ್ನುವ ಪ್ರಶ್ನೆ ಹಾಕಿದರೆ ಕೆಲವರಿಗೆ ಮಾತ್ರ ಬಂದಿದೆ ಅಂತ ಬಹುತೇಕ ಜನರಲ್ಲಿ ಈಗಲೂ ಅನುಮಾನ ಮೂಡುತ್ತಾ ಇದೆ. ಬುದ್ಧ, ಬಸವ, ಅಂಬೇಡ್ಕರ್ರ ಹೋರಾಟವನ್ನು ನೆನಪಿಸಿಕೊಂಡು ಆ ದಾರಿಯಲ್ಲಿ ನಡೆಯುವಂಥ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಬುದ್ಧ ಶ್ರೀಮಂತರ ಮನೆಯಲ್ಲಿ ಹುಟ್ಟಿದರೂ ಬಡತನ, ದುಃಖ, ನೋವು, ಸಾವು, ರೋಗ, ಮುಪ್ಪುಗಳನ್ನು ಕಂಡಾಗ ಇವುಗಳಿಗೆ ಪರಿಹಾರ ಇಲ್ಲವೇ ಎಂದು ಯೋಚನೆ ಮಾಡಿದಂಥವರು. ಆ ಕಾರಣಕ್ಕಾಗಿ ಹುಟ್ಟಿದ ಮನೆಯನ್ನು, ಕಟ್ಟಿಕೊಂಡ ಹೆಂಡತಿಯನ್ನು, ಮುದ್ದಾದ ಮಗುವನ್ನು ಬಿಟ್ಟು ಜ್ಞಾನದ ಹುಡುಕಾಟವನ್ನು ಪ್ರಾರಂಭ ಮಾಡ್ತಾರೆ. ಅನೇಕ ಸಾಧು ಸಂತರನ್ನು ಕಾಣುತ್ತಾರೆ. ಆದರೆ ಇದಕ್ಕೆ ಸೂಕ್ತ ಪರಿಹಾರ ಸಿಗದೇ ಕೊನೆಗೆ ತಮಗೆ ತಾವೇ ಅದಕ್ಕೆ ಪರಿಹಾರ ಕಂಡುಕೊಂಡು ಬುದ್ಧ ಆಗ್ತಾರೆ. ಬುದ್ಧ ಎಂದರೆ ತನಗೆ ತಾನೇ ಅರಿವನ್ನು ಪಡೆದುಕೊಂಡವರು ಎಂದರು.
ಅರಿವನ್ನು ಪಡೆದುಕೊಂಡು ಸಮಾಜದಲ್ಲಿರುವ ಅಜ್ಞಾನವನ್ನು ಕಳೆಯಲಿಕ್ಕೆ ಹೋರಾಟ ಮಾಡಿದವರು. ಆದರೆ ಬುದ್ಧನ ಹೋರಾಟವನ್ನು ಭಾರತೀಯರು ಅರ್ಥ ಮಾಡಿಕೊಳ್ಳಲಿಲ್ಲ. ಪಟ್ಟಭದ್ರಹಿತಾಸಕ್ತರು ಬುದ್ಧದೇವನನ್ನು ಈ ನಾಡಿನಿಂದ
ಓಡಿಸಿದರು. ನಂತರ ಬಸವಣ್ಣನವರು ಬಂದರು. ಬಸವಣ್ಣನವರು ಯಾವ ಧರ್ಮದಲ್ಲಿ ಅಸಮಾನತೆ, ಅನ್ಯಾಯ, ಶೋಷಣೆ ಇದೆಯೋ ಅವುಗಳ ವಿರುದ್ಧ ಬಂಡೆದ್ದರು. ಧರ್ಮ ಎಂದರೆ ಭಯವಲ್ಲ; ದಯೆ ಎಂದು ಹೇಳಿದರು. ಈಗಲೂ ಧರ್ಮ ಎಂದರೆ ಕೋಣ, ಕುರಿ, ಕೋಳಿ ಕಡಿದು ದೇವರಿಗೆ ಅರ್ಪಿಸಬೇಕೆಂಬ ಕೆಟ್ಟ ಮೂಢಾಚರಣೆ ಇದೆ. ಇವೆಲ್ಲ ಪಟ್ಟಭದ್ರ ಹಿತಾಸಕ್ತರು ನಮ್ಮನ್ನು ತುಳಿಯಲಿಕ್ಕೆ ಮಾಡಿದಂತಹ ಸಂಚುಗಳು. ಇದನ್ನು ಬಹಳ ಜನ ಅರ್ಥ ಮಾಡಿಕೊಳ್ಳದೇ ಇರುವುದು ವಿಷಾದದ ಸಂಗತಿ ಎಂದು ಹೇಳಿದರು.
ಇದೊಂದು ಪದ್ಧತಿ ಎಂದು ಪುರಾಣ, ವೇದ, ಶಾಸ್ತ್ರ, ಮನುಸ್ಮೃತಿ, ಪಂಚಾಂಗದಲ್ಲಿ ಹೇಳಿದೆ ಎಂದು ಆಚರಣೆ ಮಾಡುತ್ತಲೇ ಬಂದಿದ್ದಾರೆ. ಹೀಗೆ ನಮ್ಮನ್ನು ಆಳವಾದ ತಗ್ಗಿಗೆ ತಳ್ಳುತ್ತಾ ಬಂದಿದ್ದಾರೆ. ಇದನ್ನು ಗಮನಿಸಿದ ಬಸವಣ್ಣನವರು ನಂಬಬೇಕಾಗಿರುವುದು ವೇದ, ಶಾಸ್ತ್ರ, ಪುರಾಣ ಇವುಗಳನ್ನಲ್ಲ; ನಮ್ಮಲ್ಲಿರುವ ಇನ್ನಷ್ಟು ಅರಿವನ್ನು ಜಾಗೃತಗೊಳಿಸಿ ಎಂದು ಹೇಳಿದರು.
ಬಸವಣ್ಣನವರು ಜ್ಞಾನದ ದೀವಿಗೆಯನ್ನು ಹಚ್ಚುವುದರ ಮೂಲಕ ಜನಾಂಗ ಜನಾಂಗದವರ ಮಧ್ಯೆ ಇದ್ದ ಜಾತಿಯ ದ್ವೇಷವನ್ನು ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರು. ಬಸವಣ್ಣ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದರು. ಅಲ್ಲಿರುವ ಅಸಮಾನತೆಯನ್ನು, ಮೌಢ್ಯಗಳನ್ನು ನಿವಾರಣೆ ಮಾಡಲಿಕ್ಕೆ ಹೊರ ಬಂದು ಎಲ್ಲರನ್ನು ನಮ್ಮವರು ಎಂದು ಅಪ್ಪಿ, ಒಪ್ಪಿಕೊಂಡರು. ನಾವ್ಯಾರು ಇಂತಹ ಜಾತಿಯಲ್ಲಿ ಹುಟ್ಟಿ ಬರಬೇಕೆಂದು ಅರ್ಜಿ ಹಾಕಿಕೊಂಡು ಬಂದಿಲ್ಲ. ಏನೋ ಹುಟ್ಟಿನ ಕಾರಣದಿಂದ ನಮಗೊಂದು ಜಾತಿ ಅಂಟಿದೆ. ಆದರೆ ಮನುಷ್ಯ ತನ್ನ ಸಾಧನೆಯ ಮೂಲಕ ಜಾತಿಯ ಭೂತವನ್ನು ಕಿತ್ತಾಕಿ ವಿಶ್ವಮಾನವನಾಗಲಿಕ್ಕೆ ಸಾಧ್ಯ ಇದೆ ಎಂದು ತೋರಿಸಿಕೊಟ್ಟವರು ಬಸವಣ್ಣನವರು ಎಂದು ವಿವರಿಸಿದರು.
ಮಹಾತ್ಮಗಾಂಧೀಜಿಯವರು ಅಸ್ಪೃಶ್ಯತೆಯನ್ನು ತೊಡೆದುಹಾಕಲಿಕ್ಕೆ ಏನೆಲ್ಲಾ ಹೋರಾಟ ಮಾಡಿದರು. ನನಗೇನಾದರೂ ಮುಂದಿನ ಜನ್ಮವೇನಾದರೂ ಇದ್ದರೆ ಅಸ್ಪೃಶ್ಯನಾಗಿಯೇ ಹುಟ್ಟುತ್ತೇನೆಂದು ಹೇಳಿದರು. ಇದಕ್ಕಿಂತ ವಿಭಿನ್ನವಾಗಿ ಆಲೋಚನೆ ಮಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ರವರು. ಮುಂದಿನ ಜನ್ಮದಲ್ಲಿ ಏಕೆ ಹುಟ್ಟಿ ಬರ್ತೀಾರಿ ಇದೇ ಜನ್ಮದಲ್ಲಿ ಅಸ್ಪೃಶ್ಯತೆಯನ್ನು ಯಾಕೆ ತೊಡೆದುಹಾಕಬಾರದೆಂದು ಗಾಂಧೀಜಿಯವರನ್ನು ಅಂಬೇಡ್ಕರ್ ಪ್ರಶ್ನೆ ಮಾಡ್ತಾರೆ. ಗಾಂಧೀ ಮತ್ತು ಅಂಬೇಡ್ಕರವರ ಆಲೋಚನೆ ಒಂದೇ ರೀತಿದ್ದರೂ ಅವರವರ ಹುಟ್ಟಿನ ಕಾರಣಕ್ಕೆ ಅವರು ಬೇರೆಬೇರೆಯಾಗಿರುತ್ತಾರೆ. ನಾವು ಗಮನಿಸಬೇಕಾಗಿರುವುದು ಗಾಂಧೀ ಶ್ರೀಮಂತ ಕುಟುಂಬದಲ್ಲಿ ಬಂದವರು. ಭಾರತದಲ್ಲಿ ಒಂದು ಹೊತ್ತಿನ ಊಟಕ್ಕೂ, ಬಟ್ಟೆಗೂ ಗತಿಯಿಲ್ಲ. ಇಂತಹ ಬಡತನ ಕಂಡು ನಾನು ಈ ರೀತಿ ಬಟ್ಟೆಗಳನ್ನು ಹಾಕುವುದು ಸರಿಯಲ್ಲ ಎಂದು ಪಕ್ಕೀರನ
ಹಾಗೆ ಗಾಂಧೀ ಬಟ್ಟೆಗಳನ್ನು ಧರಿಸಿದ್ದು ನೀವೆಲ್ಲಾ ನೋಡಿದ್ದೀರಿ. ಅತ್ಯಂತ ಶೋಷಣೆಗೆ ಬಲಿಯಾಗಿ, ಸಾಮಾಜಿಕವಾಗಿ ಸಾಕಷ್ಟು ನೋವುಗಳನ್ನು ಅನುಭವಿಸಿದ ಅಂಬೇಡ್ಕರ್ರವರು ಉದ್ದೇಶಪೂರ್ವಕವಾಗಿಯೇ ಬಟ್ಟೆಗಳನ್ನು ಬದಲಾಯಿಸುತ್ತಾರೆ ಎಂದು ಹೇಳಿದರು.
ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಆತನ ಸತ್ವದಿಂದ ಗುರುತಿಸುವುದಿಲ್ಲ. ಬಟ್ಟೆಗಳಿಂದ ಗುರುತಿಸುತ್ತಿರುವುದು ನೋವಿನ ಸಂಗತಿ. ಮನುಷ್ಯ ಒಳಗೆ ಇರೋದೇ ಬೇರೆ. ಹೊರಗೆ ಇರೋದೇ ಬೇರೆ. ಅಂಬೇಡ್ಕರವರು ಬಾಲ್ಯದಿಂದಲೂ ಶಾಲೆಯಲ್ಲಿ, ಸಮಾಜದಲ್ಲಿ, ಅಧಿಕಾರದ ಸಂದರ್ಭದಲ್ಲಿ ನೋವನ್ನು, ಯಾತನೆಯನ್ನು ಅನುಭವಿಸಿದರು. ಬಹುಶಃ ಅಂಬೇಡ್ಕರರಂತಹ ಪ್ರಗತಿಪರ ಚಿಂತಕರು ನಮ್ಮ ಭಾರತದಲ್ಲಿ ಮತ್ತೊಬ್ಬರು ಹುಟ್ಟಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ಅದ್ಭುತವಾದ ಓದುಗಾರರಾಗಿದ್ದರು. ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವ ತಾಕತ್ತು ಅವರಲ್ಲಿತ್ತು. ಅಂಬೇಡ್ಕರವರ ಮೂಲ ಉದ್ದೇಶ ನನ್ನ ಜನಾಂಗ ಮೇಲೆ ಬರಬೇಕು. ನಾವು ಅನುಭವಿಸಿದ ನೋವು, ಯಾತನೆ, ಸಂಕಷ್ಟ ಸಾಕು. ಅವುಗಳಿಂದ ಹೊರ ಬರಲಿಕ್ಕೆ ಕಾರಣ ಶಿಕ್ಷಣ ಒಂದೇ ಪರಿಹಾರ ಎಂದು ಹೇಳಿದರು.
ಶ್ವದಲ್ಲೇ ಇಲ್ಲದೇ ಇರುವ ಸಂವಿಧಾನವನ್ನು ರಚನೆ ಮಾಡಿದರು. ಅಂಬೇಡ್ಕರ್ರವರು ಸಂವಿಧಾನದಲ್ಲಿ ತುಂಬಿರುವ ಶಕ್ತಿ ಅದ್ಭುತವಾದುದು. ಅದಕ್ಕಾಗಿಯೇ ನಾವೆಲ್ಲರೂ ಹೇಳ್ತೀವಿ ಭಾರತೀಯರ ಪ್ರಥಮ ಧರ್ಮ ಗ್ರಂಥ ‘ಸಂವಿಧಾನ’ ಅಂತ. ವಿಷಾದದ ಸಂಗತಿ ಎಂದರೆ ನಮ್ಮ ಜನಪ್ರತಿನಿಧಿಗಳು ಎಷ್ಟು ಜನ ನಮ್ಮ ಸಂವಿಧಾನವನ್ನು ಓದಿದ್ದಾರೋ ಗೊತ್ತಿಲ್ಲ. ವಾಸ್ತವವಾಗಿ ಯಾರು ಜನಪ್ರತಿನಿಧಿಯಾದವರು ಸಂವಿಧಾನವನ್ನು ಅಧ್ಯಯನ ಮಾಡಬೇಕು. ಸಂವಿಧಾನದ ಅನುಗುಣವಾಗಿಯೇ ತನ್ನ ಆಡಳಿತ ನಿರ್ವಹಿಸಬೇಕು. ಸಮಾಜಮುಖಿಯಾದ ಕೆಲಸಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಸಂವಿಧಾನವನ್ನು ಕೊಟ್ಟ ಕಾರಣಕ್ಕಾಗಿಯೇ ಇಡೀ ವಿಶ್ವವೇ ಅಂಬೇಡ್ಕರವರನ್ನು ಗೌರವಿಸುತ್ತದೆ ಎಂದು ತಿಳಿಸಿದರು.
ಅಂಬೇಡ್ಕರವರಿಗೆ 12ನೆಯ ಶತಮಾನದ ವಚನ ಸಾಹಿತ್ಯ ಗೊತ್ತಾಗಿದ್ದರೆ ಇನ್ನಷ್ಟು ವಿಶಿಷ್ಟ ರೀತಿಯಲ್ಲಿ ಸಂವಿಧಾನವನ್ನು ರಚನೆ ಮಾಡುವಂಥ ಸಾಧ್ಯತೆ ಇತ್ತು. ಸಂವಿಧಾನದಲ್ಲಿ ಏನೇನು ಇದೆಯೋ ಅದೆಲ್ಲಾ ಶರಣ ಸಾಹಿತ್ಯ ಮತ್ತು ವಚನ ಸಾಹಿತ್ಯದಲ್ಲಿದೆ. ಇನ್ನಷ್ಟು ಶಕ್ತಿ, ತಾಕತ್ತು ವಚನ ಸಾಹಿತ್ಯಕ್ಕೆ ಇದೆ. ಆದರೆ ದುರ್ದೈವ ಸಂಗತಿ ಎಂದರೆ ವಚನ ಸಾಹಿತ್ಯವನ್ನು ಬೆಳೆಯಲಿಕ್ಕೆ ಬಿಡಲಿಲ್ಲ. 12ನೆಯ ಶತಮಾನದಲ್ಲಿ ದೊಡ್ಡ ಕ್ರಾಂತಿವುಂಟಾಯಿತು. ವಚನ ಸಾಹಿತ್ಯವನ್ನು ಸುಟ್ಟು ಹಾಕುವಂಥ ಪ್ರಯತ್ನವನ್ನು ಪಟ್ಟಭದ್ರರು ಮಾಡಿದರು. ಶರಣರನ್ನು ಕಲ್ಯಾಣದಿಂದ ಕಾಲ್ತೆಗೆಯುವಂತೆ ಮಾಡಿದರು. ಇಷ್ಟೆಲ್ಲಾ ಆದರೂ ಪೂರ್ಣಪ್ರಮಾಣದಲ್ಲಿ ಅವರು ವಚನ ಸಾಹಿತ್ಯವನ್ನು ಸಮಾಧಿ ಮಾಡಲಿಕ್ಕೆ ಸಾಧ್ಯ ಆಗಲಿಲ್ಲ. ಇವತ್ತು 22 ಸಾವಿರ ವಚನಗಳು ಉಳಿದಿವೆ ಎಂದರೆ ಅವುಗಳ ಶಕ್ತಿಯಿಂದ ಉಳಿದುಕೊಂಡಿವೆ ಎಂದು ವಿವರಿಸಿದರು.
ಹಾಗೆಯೇ ಅಂಬೇಡ್ಕರವರ ಸಾಹಿತ್ಯ ಉಳಿದಿದೆ ಎಂದರೆ ಅದು ತನ್ನ ಶಕ್ತಿಯಿಂದ. ಆದರೆ ನಾವು ನೀವೆಲ್ಲ ಮಾಡಬೇಕಾಗಿರುವುದು ಶರಣ ಸಾಹಿತ್ಯದ ಕಡೆ ಗಮನಹರಿಸಿ ಅವುಗಳನ್ನು ಅಧ್ಯಯನ ಮಾಡಬೇಕು ಎಂದರು.
ಬಿಕ್ಕುಣಿ ಸುಮಾನಾ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಪಂಚಶೀಲ ತತ್ವಗಳನ್ನು ಬೋಧಿಸಿದರು. ಕಲಬುರ್ಗಿ ಮಹಾನಗರ ಪಾಲಿಕೆ ಅಯುಕ್ತ ರಮೇಶ ಪಟ್ಟೆದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ಕೃತಿಯನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಸೂರ್ಯಕಾಂತ ಸುಜಾತ ಮತ್ತು ಉಪನ್ಯಾಸಕ ಶರಣ ಬಸಪ್ಪ ವಡ್ಡನಕೇರಿ ಅತಿಥಿಗಳಾಗಿ ಮಾತನಾಡಿದರು.
ರವೀಂದ್ರ ಶಾಬಾದಿ, ಪ್ರಬುದ್ದ ಹುಬಳಿ, ಮಲ್ಲಿಕಾರ್ಜುನ ಸುಬಾನೆ ಉಪಸ್ಥಿತರಿದ್ದರು. ಆರಂಭಕ್ಕೆ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.