SUDDIKSHANA KANNADA NEWS/ DAVANAGERE/ 13-05-2023
ದಾವಣಗೆರೆ (DAVANAGERE) : ದಾವಣಗೆರೆ ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಿತ್ತು. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಹರಪನಹಳ್ಳಿಯೂ ಸೇರಿದಂತೆ ಒಟ್ಟು ಆರು ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಆದ್ರೆ, ಈ ಬಾರಿ ಏಳು ಕ್ಷೇತ್ರಗಳಲ್ಲಿ ಆರು ಕಡೆಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದರೆ, ಬಿಜೆಪಿಯು ಕೇವಲ ಹರಿಹರ ಕ್ಷೇತ್ರದಲ್ಲಿ ಮಾತ್ರ ಜಯಭೇರಿ ಬಾರಿಸಿದೆ. ಅದೂ ಸಹ ಪ್ರಯಾಸದ ಗೆಲುವು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಭರ್ಜರಿ ಜಯಭೇರಿ ಬಾರಿಸಿದರೆ, ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪರು ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಶಾಸಕರೆಂದರೆ ಶಾಮನೂರು ಶಿವಶಂಕರಪ್ಪ. ಅವರಿಗೆ ಈಗ 93 ವರ್ಷ ವಯಸ್ಸು. ಇಳಿವಯಸ್ಸಿನಲ್ಲಿಯೂ ಚಿರಯುವಕನಂತೆ ಕ್ಷೇತ್ರಾದ್ಯಂತ ಸಂಚಾರ ಮಾಡಿದ್ದ ಎಸ್. ಎಸ್. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಾಣದ ರಾಜಕಾರಣಿ ಎಂಬ ಕೀರ್ತಿಗೂ ಭಾಜನರಾದರು.
ಚನ್ನಗಿರಿ ಕ್ಷೇತ್ರವೂ ತೀವ್ರ ಕುತೂಹಲ ಕೆರಳಿಸಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿಗೆ ಸೆಡ್ಡು ಹೊಡೆದಿದ್ದ ಮಾಡಾಳ್ ಮಲ್ಲಿಕಾರ್ಜುನ್ ಅವರ ವಿರುದ್ಧ ಕಾಂಗ್ರೆಸ್ ನ ಶಿವಗಂಗಾ ವಿ. ಬಸವರಾಜ್ ಗೆದ್ದು ವಿಜಯದ ನಗೆ ಬೀರಿದ್ದಾರೆ. ಬಿಜೆಪಿ ಸೇರಿದಂತೆ ಉಳಿದ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು ವಿಪರ್ಯಾಸ. ಮಾಡಾಳ್ ವಿರೂಪಾಕ್ಷಪ್ಪ ಬಿಜೆಪಿಯನ್ನು ಭದ್ರವಾಗಿ ನೆಲೆಯೂರುವಂತೆ ಮಾಡಿದ್ದರು. ಪುತ್ರನ ಲಂಚ ಪ್ರಕರಣದಲ್ಲಿ ಜೈಲು ಸೇರಿದ್ದ ಕಾರಣ ಈ ಕುಟುಂಬಕ್ಕೆ ಕೇಸರಿಪಡೆ ಟಿಕೆಟ್ ಕೊಟ್ಟಿರಲಿಲ್ಲ. ಶಿವಗಂಗಾ ಬಸವರಾಜ್ ಸಹ ಕ್ಷೇತ್ರಾದ್ಯಂತ ಸಂಚರಿಸಿ ಗೆದ್ದಿದ್ದಾರೆ.
ಹೊನ್ನಾಳಿ ಕ್ಷೇತ್ರ ಯಾವಾಗಲೂ ರಂಗುರಂಗಿನ ಕದನ ಕಣ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಅತ್ಯಾಪ್ತರಲ್ಲಿ ಒಬ್ಬರಾದ ಎಂ. ಪಿ. ರೇಣುಕಾಚಾರ್ಯ ಸಹ ಹೀನಾಯ ಸೋಲು ಅನುಭವಿಸಿದ್ದಾರೆ. ಕೊರೊನಾ ಸಂಕಷ್ಟದ ವೇಳೆಯಲ್ಲಿ
ಜನರ ಪರವಾಗಿ ಇದ್ದೇನೆ, ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ರೇಣುಕಾಚಾರ್ಯರ ಹೆಚ್ಚಿನ ಪ್ರಚಾರವೇ ಮುಳುವಾಗಿದೆ. ಕಾಂಗ್ರೆಸ್ ನಲ್ಲಿ ಎರಡು ಬಾರಿ ಶಾಸಕರಾಗಿ ಈ ಹಿಂದೆ ಆಯ್ಕೆಯಾಗಿದ್ದ ಡಿ. ಜಿ. ಶಾಂತನಗೌಡ ಅವರು,
ರೇಣುಕಾಚಾರ್ಯರಿಗೆ ಸೋಲಿನ ರುಚಿ ತೋರಿಸುವ ಮೂಲಕ ಮಣ್ಣು ಮುಕ್ಕಿಸಿದ್ದಾರೆ.
ಜಗಳೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಹಾವು – ಏಣಿಯ ಆಟ ಕೊನೆ ಕ್ಷಣದವರೆಗೂ ಇತ್ತು. ಒಮ್ಮೆ ಬಿಜೆಪಿ ಮುನ್ನಡೆ ಕಾಯ್ದುಕೊಂಡರೆ, ಮತ್ತೊಂದೆಡೆ ಕಾಂಗ್ರೆಸ್ ಬರುತ್ತಿತ್ತು. ಒಂದೊಂದು ಸುತ್ತಿನ ಮತಎಣಿಕೆಯೂ ರೋಚಕ
ರಣರೋಚಕ. ಬಿಜೆಪಿಯಿಂದ ಗೆದ್ದು ಬಂದಿದ್ದ ಎಸ್. ವಿ. ರಾಮಚಂದ್ರಪ್ಪರಿಗೆ ತೀವ್ರ ಪೈಪೋಟಿ ನೀಡಿದ ಕಾಂಗ್ರೆಸ್ ನ ದೇವೇಂದ್ರಪ್ಪ ಗೆಲುವಿನ ನಗೆ ಬೀರಿದರೆ, ಪಕ್ಷೇತರ ಅಭ್ಯರ್ಥಿ ಹೆಚ್. ಪಿ. ರಾಜೇಶ್ ಕೊನೆ ಕ್ಷಣದವರೆಗೂ ಹೋರಾಟ ಕೊಟ್ಟಿದ್ದು ಈ ಕ್ಷೇತ್ರದ ವಿಶೇಷ.
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಬಿಜೆಪಿಯ ಸ್ಥಳೀಯ ನಾಯಕರ ವಿರೋಧದ ನಡುವೆಯೂ ಬಸವರಾಜ್ ನಾಯ್ಕ್ ಅವರಿಗೆ ಕೇಸರಿ ಪಡೆ ಟಿಕೆಟ್ ಕೊಟ್ಟಿತ್ತು. ಮಾಜಿ ಶಾಸಕ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರೂ ಪೈಪೋಟಿ ನೀಡಲೇ ಇಲ್ಲ. ಕಾಂಗ್ರೆಸ್ ನ ಬಸವಂತಪ್ಪ ಭರ್ಜರಿ ಜಯ ಗಳಿಸುವ ಮೂಲಕ ಪೆಟ್ಟು ನೀಡಿದರು. ಇನ್ನು ವಾಗೀಶ್ ಸ್ವಾಮಿ ಪತ್ನಿ ಪುಷ್ಪಾ ವಾಗೀಶ್ ಸ್ವಾಮಿ ಎರಡನೇ ಸ್ಥಾನ ಪಡೆದದ್ದಷ್ಟೇ ಸಾಧನೆ.
ಹರಿಹರ ಕ್ಷೇತ್ರದಲ್ಲಿ ಮತ ಎಣಿಕೆಯ ಆರಂಭದಲ್ಲಿಯೂ ಪೈಪೋಟಿ ಜೋರಾಗಿತ್ತು. ಜೆಡಿಎಸ್ ಹೆಚ್. ಎಸ್. ಶಿವಶಂಕರ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಕಾಂಗ್ರೆಸ್ ನ ನಂದಿಗಾವಿ ಶ್ರೀನಿವಾಸ್ ಅವರು ಬಿಜೆಪಿಯ ಬಿ. ಪಿ. ಹರೀಶ್ ಗೆ ತೀವ್ರ ಪೈಪೋಟಿ ನೀಡಿದರು. ಅಂತಿಮವಾಗಿ ಕಮಲ ಅರಳಿತು. ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸ್ಥಿತಿಗೆ ನಾಯಕರೇ ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ. ಮಾತ್ರವಲ್ಲ, ಮೊದಲಿನಿಂದಲೂ ಬಿ. ಎಸ್. ಯಡಿಯೂರಪ್ಪರೆಂದರೆ ಜಿಲ್ಲೆಯ ಜನರಿಗೆ ತುಂಬಾನೇ ಅಚ್ಚುಮೆಚ್ಚು. ಈ ಬಾರಿ ಹೆಚ್ಚು ಪ್ರಚಾರಕ್ಕೆ ಬಾರದ ಕಾರಣ ಬಿಜೆಪಿ ಅಭ್ಯರ್ಥಿಗಳು ಸೋಲಬೇಕಾಯಿತು ಎಂಬುದು ಬಿಜೆಪಿ ನಾಯಕರ ಮಾತಾಗಿದೆ.