SUDDIKSHANA KANNADA NEWS/ DAVANAGERE/ DATE:20-06-2023
ದಾವಣಗೆರೆ: ಮಾನ, ಮರ್ಯಾದೆ ಇದ್ದರೆ ದಾವಣಗೆರೆ ಸಂಸದ ಜಿ. ಎಂ. ಸಿದ್ದೇಶ್ವರ ಸೇರಿದಂತೆ ಎಲ್ಲಾ ಬಿಜೆಪಿ ಸದಸ್ಯರು ರಾಜೀನಾಮೆ ನೀಡಲಿ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಕ್ಕಿ ಕೊಡುತ್ತಿಲ್ಲ. ಈ ಬಗ್ಗೆ ಚಕಾರ ಎತ್ತದ ಸಂಸದರು ರಾಜೀನಾಮೆ ಕೊಟ್ಟು ಹೋಗಲಿ. ಬಡವರ ಹೊಟ್ಟೆ ತುಂಬಿಸುವ ಕೆಲಸ ಕಾಂಗ್ರೆಸ್ (Indian National Congress) ಮಾಡಿದರೆ ಅನ್ಯಾಯ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಕೇಂದ್ರದಲ್ಲಿರುವ ಬಿಜೆಪಿ ಕಿತ್ತೊಗೆಯಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಭವಿಷ್ಯ ನುಡಿದರು.
ರಾಜ್ಯ ಸರ್ಕಾರ ಬಡವರಿಗೆ ಉಚಿತವಾಗಿ 10 ಕೆ.ಜಿ ನೀಡಲು ಮಾಡಿರುವ ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಎಫ್‌ಸಿಐಗೆ ರಾಜ್ಯಕ್ಕೆ ಅಕ್ಕಿ ನೀಡದಂತೆ ತಡೆ ಹಿಡಿದಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸುದ್ದಿಯನ್ನೂ ಓದಿ:
Siddaramaiah : ಎಷ್ಟೇ ರಾಜಕೀಯ ಮಾಡಿದ್ರೂ ಅನ್ನಭಾಗ್ಯ ಯೋಜನೆ ಜಾರಿ, ಮೋದಿ ಒಕ್ಕೂಟ ಧರ್ಮ ಪಾಲನೆ ಮಾಡ್ಬೇಕು: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ (Congress) ನುಡಿದಂತೆ ನಡೆಯುತ್ತದೆ. ನಮ್ಮ ಸರ್ಕಾರವು ಹತ್ತು ಕೆಜಿ ಅಕ್ಕಿ ಕೊಟ್ಟೇ ಕೊಡುತ್ತದೆ. ಕೇಂದ್ರ ಸರ್ಕಾರ ಕೊಡುತ್ತೋ ಇಲ್ಲವೋ ಕಾದು ನೋಡೋಣ. ಬಡವರ ಪರ ಕಾಂಗ್ರೆಸ್ ಕೆಲಸ ಮಾಡಿದರೆ, ಬಿಜೆಪಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ನಾವೇನೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಕ್ಕಿ ಕೇಳಿಲ್ಲ. ಬಡವರಿಗೆ ಕೊಡುತ್ತಿದ್ದೇವೆ. ಅಕ್ಕಿ ಕೊಡದಿದ್ದರೆ ಹೋರಾಟ ಇಲ್ಲಿಗೆ ನಿಲ್ಲದು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಆದ್ರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರ್ಕಾರಕ್ಕೆ ಜನರ ಬದುಕು ಬೇಕಿಲ್ಲ. ಇಂಥವರಿಂದ ರಾಜ್ಯದ ಜನತೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಇನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಮಾತನಾಡಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ. ಬಿಜೆಪಿ ಸುಳ್ಳು ಹೇಳಿಕೊಂಡು ಕೇಂದ್ರದಲ್ಲಿ ಅಧಿಕಾರ ಮಾಡುತ್ತದೆ. ಲೋಕಸಭೆ ಚುನಾವಣೆಯಲ್ಲಿ ಬೇರು ಸಮೇತ ಬಿಜೆಪಿ ಕಿತ್ತುಹಾಕೋಣ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿಗಳಲ್ಲಿ ಒಂದೊಂದಾಗಿ ಜಾರಿಗೊಳಿಸುತ್ತಿದೆ. ಆದ್ರೆ ಕೇಂದ್ರ ಸರ್ಕಾರ ಅಕ್ಕಿ ಕೊಡದೇ ವಂಚನೆ, ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಜನರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತದೆ. ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.
ಹೊನ್ನಾಳಿ ಶಾಸಕ ಶಾಂತನಗೌಡ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಶಾಸಕ ಬಸವಂತಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಎ. ನಾಗರಾಜ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಕೆ. ಜಿ. ಶಿವಕುಮಾರ್, ಅನಿತಾ ಬಾಯಿ, ಶುಭಮಂಗಳಾ, ಮೊಹಮ್ಮದ್ ಜಿಕ್ರಿಯಾ, ನಂಜಾನಾಯ್ಕ್, ಮೊಯಿನುದ್ದೀನ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
Congress Protest In Davanagere, Davanagere News, Davanagere Suddi, Davanagere Congress Angry, Congress Mla Shivaganga Basavaraj Statement, ದಾವಣಗೆರೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ, ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಕಿಡಿ, ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಂದ ಧರಣಿ