ಸದ್ಯ ಬೆಳಗಾವಿಯಲ್ಲಿ ಕಾಂಗ್ರೆಸ್ನದ್ದೆ ಕಲರವ ನಡೆಯತ್ತಿದೆ. 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿಜೀ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂಭ್ರಮದಲ್ಲಿದೆ. ಇದೇ ಸಂಭ್ರಮ ಈಗ ಕಾಂಗ್ರೆಸ್ಗೆ ಸಂಕಟವಾಗಿ ಕಾಡಲಿದೆಯಾ. ವಿಪಕ್ಷಗಳ ಕೈಗೆ ಹೊಸ ಅಸ್ತ್ರ ಸಿಕ್ಕಿತಾ ಅನ್ನೋ ಅನುಮಾನಗಳು ಸದ್ಯ ವ್ಯಕ್ತವಾಗುತ್ತಿವೆ.
ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಬ್ಯಾನರ್ಗಳಲ್ಲಿ ಭಾರತ ದೇಶದ ನಕ್ಷೆ ವಿರೂಪಗೊಳಿಸಿ ಅವಮಾನ ಮಾಡಲಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಶಾಸಕರು, ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಭಾರತ ನಕ್ಷೆ ಕೇವಲ ಪಾಕಿಸ್ತಾನ ಮತ್ತು ಚೀನಾದಲ್ಲಿ ಮಾತ್ರ ಸಿಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬ್ಯಾನರ್ನಲ್ಲಿ ಗಾಂಧಿ ಭಾರತ ಎಂದು ಉಲ್ಲೇಖಿಸಿ ಭಾರತದ ನಕಾಶೆಯನ್ನು ಹಾಕಲಾಗಿದ್ದು. ಆ ನಕಾಶೆಯಲ್ಲಿ ಕಾಶ್ಮೀರವೇ ಕಾಣುತ್ತಿಲ್ಲ. ಈ ನಕಾಶೆಯ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಹಲವರಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಬ್ಯಾನರ್ ಫೋಟೋ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಬ್ಯಾನರ್ನಲ್ಲಾಗಿರು ಪ್ರಮಾದದ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ. ಇದು ವ್ಯವಸ್ಥಿತವಾದ ಷಡ್ಯಂತ್ರ ಹಾಗೂ ಪಿತೂರಿ, ಭಾರತದ ಮುಕುಟವನ್ನೇ ತೆಗೆದು ಹಾಕುವ ಕೆಲಸ ಮಾಡಿದೆ ಕಾಂಗ್ರೆಸ್, ಸಿಯಾಚಿನ್ ಎಲ್ಒಸಿ, ಪಿಒಸಿ ಇವರೇ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಂತೆ ಕಾಣುತ್ತಿದೆ. ಈ ದೇಶದ ಒಂದಿಂಚೂ ಜಾಗವನ್ನು ಪಾಕಿಸ್ತಾನಕ್ಕೆ, ಚೀನಾಗೆ ಬಿಟ್ಟುಕೊಡಲ್ಲ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ದುಷ್ಟ ಕಾಂಗ್ರೆಸ್ನವರು ನಕ್ಷೆ ಬದಲಾವಣೆ ಮಾಡಿ ದೇಶಕ್ಕೆ ಅನ್ಯಾಯ ಮಾಡಿದ್ದಾರೆ. ಇದ್ರಲ್ಲೆ ಗೊತ್ತಾಗುತ್ತೆ ದೇಶದ ಬಗ್ಗೆ ಯಾವ ಬದ್ದತೆ ಇಟ್ಟುಕೊಂಡಿದ್ದಾರೆ ಎಂದು ಗುಡುಗಿದ್ದಾರೆ.