ದಾವಣಗೆರೆ: ಇತ್ತೀಚಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದು, ಅವನ ಭಾಷೆ ಅವನ ಗೂಂಡಾ ವ್ಯಕ್ತಿತ್ವ ತೋರಿಸುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನದಲ್ಲಿ ನೆಡೆದಿರುವ ಶಾಶ್ವತ ಅಭಿವೃದ್ಧಿ ಯೋಜನೆಗಳೇ ಸಾಕ್ಷಿ ಎಂದು ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು ಹೆಚ್. ಬಿ. ಮಂಜಪ್ಪರಿಗೆ ತಿರುಗೇಟು ನೀಡಿದ್ದಾರೆ.
ಹರಕಲು ಬಾಯಿಯ ಜಿಲ್ಲಾಧ್ಯಕ್ಷನ ರಾಜಕೀಯ ಇತಿಹಾಸ ನೋಡಿದವರಿಗೆ ಚನ್ನಾಗಿ ಗೊತ್ತಿರುತ್ತದೆ ಇವನ ಬಂಡವಾಳ, ಸ್ವಂತ ಸಮಾಜದ ಮಾಜಿ ಶಾಸಕ ಶ್ರೀ ಕೃಷ್ಣಮೂರ್ತಿ ಅವರ ಬಗ್ಗೆ ತೇಜೋವಧೆ ಮಾಡಿದ್ದು ಸೇರಿದಂತೆ ಇತ್ತೀಚೆಗೆ ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷರೂ, ಹಿರಿಯರಾದ ಎಂ.ಎಸ್ ಪಾಲಾಕ್ಷಪ್ಪನವರ ಮೇಲೆ ಹಲ್ಲೆ ಮಾಡಿರುವುದು ಸೇರಿದಂತೆ, ಸ್ವಂತ ಪಕ್ಷದ ವೀರಶೈವ ಲಿಂಗಾಯತ ಸಮಾಜದ ಯುವಕನಿಗೆ ಸಮಾಜದ ಹೆಸರಲ್ಲಿ ಹಿಗ್ಗಾಮುಗ್ಗಾ ಬೈದಿರುವುದು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
2028ಕ್ಕೆ ಚುನಾವಣೆ ಗೆಲ್ಲಲು ನನಗೆ ಸವಾಲು ಹಾಕಿದ್ದು, ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಜನತೆ ಜಾತ್ಯಾತೀತವಾಗಿ ನನ್ನನ್ನು ಮನೆ ಮಗನಂತೆ ಮೂರು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದು, ಬೇರೆ ಬೇರೆ ಕಾರಣಗಳಿಗೆ ಎರಡು ಚುನಾವಣೆಗಳಲ್ಲಿ ಅಲ್ಪ ಹಿನ್ನೆಡೆ ಆಗಿದೆ. 2028ಕ್ಕೆ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಮತದಾರ ಪ್ರಭುಗಳ ಆಶೀರ್ವಾದದಿಂದ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಶತಸಿದ್ಧ! ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ನನ್ನ ಬಗ್ಗೆ ಅಥವಾ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರುಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ಅವನ ಭಾಷೆಯಲ್ಲೇ ಉತ್ತರ ನೀಡುತ್ತೇನೆ ಎಂದು ಏಕವಚನದಲ್ಲಿಯೇ ಹೆಚ್. ಬಿ. ಮಂಜಪ್ಪರಿಗೆ ರೇಣುಕಾಚಾರ್ಯ ಎಚ್ಚರಿಕೆ ಕೊಟ್ಟಿದ್ದಾರೆ.





Leave a comment